Advertisement
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಸವಣೂರಿನ ಕಲ್ಮಠದಲ್ಲೊಂದು ವಿಶಿಷ್ಟವಾದ ಹುಣಸೆ ಮರವಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಗಾತ್ರದ ಹುಣಸೆ ಮರವೆಂದು ಹೆಸರು ಪಡೆದಿದೆ. ಇಲ್ಲಿರುವ ಮೂರು ಬೃಹತ್ ಗಾತ್ರದ ಹುಣಸೆ ಮರಗಳು ಇತಿಹಾಸದ ಕೊಂಡಿಯಾಗಿವೆ. ಪ್ರಕೃತಿಯ ವೈಚಿತ್ರ್ಯಕ್ಕೆ ಹಾಗೂ ವಿಶೇಷತೆಗೆ ಸಾಕ್ಷಿಯಾಗಿ ನಿಂತಿವೆ. ಇದರ ಮುಂದೆ ನಿಂತರೆ ನಾವು ಬಹಳ ಸಣ್ಣವರಾಗಿಬಿಡುತ್ತೇವೆ. ದೂರದಿಂದ ನೋಡಿದಾಗ ದೊಡ್ಡ ಆನೆಗಳು ನಿಂತಿರುವಂತೆ ಭಾಸವಾಗುತ್ತದೆ.
ಗೋರಖನಾಥ ವೃಕ್ಷಗಳು
ಈ ವೃಕ್ಷಗಳು ಆಯುರ್ವೇದೀಯ ಹಾಗೂ ಔಷಧೀಯ ಗುಣವನ್ನು ಹೊಂದಿದ್ದು, ಇವುಗಳ ಬುಡದಲ್ಲಿ ಯಾವುದೇ ಪದಾರ್ಥಗಳು ಅಥವಾ ಮೃತದೇಹವನ್ನು ಇಟ್ಟರೂ ಅವುಗಳು ಕೊಳೆಯದಿರುವಂಥ ವಿಶೇಷ ಶಕ್ತಿಯನ್ನು ಈ ಮರಗಳು ಹೊಂದಿರುವುದು ವಿವಿಧ ವೈಜ್ಞಾನಿಕ ಸಂಶೋಧನೆಯಿಂದಲೂ ದೃಢಪಟ್ಟಿದೆಯಂತೆ. ಇನ್ನೊಂದು ಮೂಲದ ಪ್ರಕಾರ, ಈ ಮರಗಳನ್ನು ಹಠಯೋಗಿ ಗೋರಖನಾಥರು ಪ್ರಪಂಚ ಪರ್ಯಟನೆಯ ವೇಳೆ ದಕ್ಷಿಣ ಆಫ್ರಿಕಾಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿಂದ ಈ ಹುಣಸೆ ಸಸಿಯನ್ನು ತಂದು ಕಲ್ಮಠದಲ್ಲಿ ಕಠಿಣ ತಪಸ್ಸನ್ನಾಚರಿಸುತ್ತಿದ್ದ ಸಂದರ್ಭದಲ್ಲಿ ನೆಟ್ಟಿರುವ ಕಾರಣದಿಂದ ಈ ಮರಕ್ಕೆ ಗೋರಖನಾಥ ವೃಕ್ಷಗಳೆಂಬ ಹೆಸರೂ ಬಂದಿದೆ ಎನ್ನುತ್ತಾರೆ.
Related Articles
ಭಾರೀಗಾತ್ರದ ಹಣ್ಣುಗಳು
ಇವುಗಳು ತೆಂಗಿನಕಾಯಿಯ ಗಾತ್ರದ 8-20 ಇಂಚಿನ ಕಾಯಿಗಳನ್ನು ಬಿಡುತ್ತಿದ್ದು ಕಾಯಿಯ ಮೇಲ್ಭಾಗದಲ್ಲಿ ಬಟ್ಟೆಯಂಥ ಮೆತ್ತನೆಯ ಪದರದಂತಹ ಹೊದಿಕೆಯನ್ನು ಹೊಂದಿವೆ. ಕಾಯಿಯನ್ನು ಒಡೆದರೆ ಒಳಗಡೆ ದಪ್ಪನೆಯ ಜೇಡರ ಬಲೆಯಂತೆ ಕಾಣಿಸುವ ಬೆಳ್ಳನೆಯ ಹುಣಸೆ ಹಣ್ಣುಗಳನ್ನು ಕಾಣಬಹುದು. ಈ ಹಣ್ಣುಗಳು ಸ್ವಲ್ಪ ಹುಳಿ ಮತ್ತು ಸಿಹಿಯಾದ ರುಚಿಯನ್ನು ಹೊಂದಿವೆ. ಗಾತ್ರದಲ್ಲಿ ದೊಡ್ಡದಾದ ಗಾತ್ರದ ಹಣ್ಣುಗಳನ್ನು ಬಿಡುವುದರಿಂದ ಈ ವೃಕ್ಷಗಳಿಗೆ ದೊಡ್ಡ ಹುಣಸೇ ಮರ ಎಂಬ ಹೆಸರು ಬಂದಿದೆ. ಇಲ್ಲಿ ಒಟ್ಟು ಮೂರು ಮರಗಳಿವೆ.
Advertisement
ಮೊದಲನೇ ವೃಕ್ಷದ ಕಾಂಡದ ಸುತ್ತಳತೆಯು 15.70 ಮೀ. ಮತ್ತು ಎತ್ತರ 19.00 ಮೀ. ಎರಡನೇ ಮರದ ಕಾಂಡದ ಸುತ್ತಳತೆಯು 13.25 ಮೀ ಮತ್ತು ಎತ್ತರ 17.00 ಮೀ. ಮೂರನೆಯದರ ಸುತ್ತಳತೆ 12.63 ಮೀ. ಎತ್ತರ 18 ಮೀ ಇದೆ ಎಂದಾಗ ಇದರ ಗಾತ್ರದ ಅಗಾಧತೆಯ ಅರಿವಾಗುತ್ತದೆ. ಈ ಮರದಲ್ಲಿ ಬೃಹತ್ ಗಾತ್ರದ ಬಾವಲಿಗಳು ವಾಸವಿದ್ದು, ಅವುಗಳ ಚೀತ್ಕಾರ ಇಲ್ಲಿ ಸಾಮಾನ್ಯವಾಗಿದೆ.
ರಾತ್ರಿಯ ಹೊತ್ತು ಈ ಬಾವಲಿಗಳು ಆಹಾರಕ್ಕಾಗಿ ಬೇರೆಡೆ ತೆರಳುತ್ತವೆ. ಈ ಮರದ ತುಂಬಾ ಅಲ್ಲಲ್ಲಿ ಜೇನು ಮತ್ತು ಹೆಜ್ಜೇನು ಗೂಡುಗಳೂ ಯಥೇಚ್ಛವಾಗಿ ಕಾಣಸಿಗುತ್ತದೆ.ದೊಡ್ಡಹುಣಸೆ, ಆನೆಹುಣಸೆ, ಮುಗಿಮಾವು ಮತ್ತು ಬ್ರಹ್ಮಾಮ್ಲಿಕ್ ವೃಕ್ಷಗಳೆಂಬ ವೈವಿಧ್ಯಮಯ ಹೆಸರುಗಳಿಂದ ಈ ವೃಕ್ಷಗಳನ್ನು ಕರೆಯಲಾಗುತ್ತದೆ. ಈ ಅಪರೂಪದ ವೃಕ್ಷದ ವೈಜ್ಞಾನಿಕ ಹೆಸರು ಆಡೆನ್ಸೋನಿಯಾ ಡಿಟಾಟಾ ಎಂದು. ಈ ಮರಗಳು ಬೂರುಗದ ಹತ್ತಿಯ ಕುಟುಂಬಕ್ಕೆ ಸೇರಿರುವುದರಿಂದ ಇವುಗಳನ್ನು ಆಂಗ್ಲ ಭಾಷೆಯಲ್ಲಿ ಬೊಬಾಟ್ ಟ್ರೀ, ಮಂಕಿ ಬ್ರೆಡ್ ಟ್ರೀ, ಆಫ್ರಿಕನ್ ಕಲಬಾಷ್ ಟ್ರೀ, ಸೋರ್ ಗೋಡರ ಟ್ರೀ ಎಂಬ ವಿಭಿನ್ನ ಹೆಸರುಗಳಿಂದಲೂ ಕರೆಯುತ್ತಾರೆ. ದಾರಿ ಯಾವುದು?: ಸವಣೂರು, ಹುಬ್ಬಳ್ಳಿಯಿಂದ 65 ಕಿ.ಮೀ ಹಾಗೂ ಹಾವೇರಿಯಿಂದ 32 ಕಿ.ಮೀ ದೂರವಿದೆ. ಇಲ್ಲಿಗೆ ರೈಲು ಸೌಲಭ್ಯವೂ ಇದ್ದು, ಹುಬ್ಬಳ್ಳಿಗೆ ವಿಮಾನ ಸೌಲಭ್ಯವೂ ಇದೆ. ಸವಣೂರಿನಲ್ಲಿ ಉಳಿದುಕೊಳ್ಳಲು ಹೋಟೆಲ್ ಸೌಲಭ್ಯವೂ ಇದೆ. 6000 ವರ್ಷ ಬದುಕಬಲ್ಲವಂತೆ!
ಈ ಮರಗಳು ಆಫ್ರಿಕಾಖಂಡಕ್ಕೆ ಸೇರಿರುವುದರಿಂದ ಫ್ರೆಂಚ್ ಸಸ್ಯ ವಿಜ್ಞಾನಿ ಅಡೆನ್ಸನ್ ಸ್ಮರಣಾರ್ಥವಾಗಿ ಈ ಮರಗಳಿಗೆ ಅಡೆನ್ಸೋನಿಯಾ ಎಂಬ ಹೆಸರಿಡಲಾಗಿದೆ. ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಅಳಿವಿನಂಚಿನಲ್ಲಿರುವ ವೃಕ್ಷಗಳ ಸಾಲಿಗೆ ಈ ಮರಗಳು ಸೇರಿದ್ದು, ಇವುಗಳು ಸುಮಾರು 6000 ವರ್ಷಗಳವರೆಗೂ ಬದುಕಬಲ್ಲವು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಅಪರೂಪದ ವೃಕ್ಷಗಳನ್ನು ನೋಡಲೆಂದೇ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿ ಕಲ್ಮಠವನ್ನೂ ವೀಕ್ಷಿಸುತ್ತಾರೆ. — ಸಂತೋಷ್ ರಾವ್ ಪೆರ್ಮುಡ