ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ಶಂಕರಾಚಾರ್ಯರ ಪುತ್ಥಳಿಗೆ ಅನ್ಯ ಧರ್ಮದ ಬಾವುಟ ಎಸೆದ ಪ್ರಕರಣದ ತನಿಖೆಗೆ ವಿಶೇಷ ತಂಡದ ರಚನೆ ಮಾಡಲಾಗಿದೆ.
ಚಿಕ್ಕಮಗಳೂರು ಹಾಗೂ ಕೊಪ್ಪ ಡಿವೈಎಸ್ಪಿ ನೇತೃತ್ವದಲ್ಲಿ 10 ಜನರ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ವ್ಯಕ್ತಿಗಳನ್ನು ಶೃಂಗೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಸಂಬಂಧ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮಠದ ಭಕ್ತರು, ಶಾಸಕರು ಹಾಗೂ ಮಾಜಿ ಶಾಸಕರ ಒತ್ತಡ ಹೆಚ್ಚಾಗುತ್ತಿದ್ದಂತೆ ವಿಶೇಷ ತಂಡ ರಚಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಪ್ಪು ಮಾಡಿದ್ದವರಿಗೆ ಶಿಕ್ಷೆಯಾಗಬೇಕು: ರಾಜೇಗೌಡ
ಶೃಂಗೇರಿ ಪೀಠಕ್ಕೆ ಸಾಕಷ್ಟು ಇತಿಹಾಸವಿದೆ. ಶೃಂಗೇರಿ ಮಠ ರಾಜಕೀಯೇತರ ಮಠ, ಘಟನೆಯನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ. ಬಾವುಟ ಹಾಕಿದವರ ಮೇಲೆ ನಿರ್ದಾಕ್ಷಣ್ಯ ಕ್ರಮವಾಗಲಿ. ಆರೋಪಿ ಯಾವುದೇ ಪಕ್ಷದ ಕಾರ್ಯಕರ್ತವಾಗಿದ್ದರೂ ಸೂಕ್ತ ಕ್ರಮವಾಗಬೇಕು ಎಂದು ಶೃಂಗೇರಿ ಶಾಸಕ ರಾಜೇಗೌಡ ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಶಿಕ್ಷೆ ಆದಾಗ ಮಾತ್ರ ಮುಂದೆ ಈ ರೀತಿಯ ಪ್ರಕರಣಗಳು ತಪ್ಪುತ್ತವೆ. ಧರ್ಮದ ವಿಚಾರದಲ್ಲಿ ಯಾರು ರಾಜಕಾರಣ ಮಾಡಬಾರದು. ಅದರಿಂದ ಅಶಾಂತಿ ಮೂಡುತ್ತದೆ ಎಂದರು.