Advertisement

Special Story: ಅಗ್ನಿ ಅನಾಹುತ ಪ್ರಕರಣಗಳು ಇಳಿಕೆ

09:45 AM Jun 19, 2024 | Team Udayavani |

ದಶಕದ ಅವಧಿಯಲ್ಲಿ ದೇಶದಲ್ಲಿ ಒಟ್ಟಾರೆಯಾಗಿ ಸಂಭವಿಸಿರುವ ಅಗ್ನಿ ದುರಂತಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಮಾನವ ನಿರ್ಲಕ್ಷ್ಯದ ಪರಿಣಾಮದಿಂದಾಗಿ ನಗರ ಪ್ರದೇಶಗಳಲ್ಲಿ ಇನ್ನೂ ಅಗ್ನಿ ಆಕಸ್ಮಿಕಗಳು ಸಂಭವಿಸುತ್ತಲೇ ಇದೆ. ನ್ಯಾಶನಲ್‌ ಕ್ರೈಮ್‌ ರೆಕಾರ್ಡ್‌ ಬ್ಯೂರೋ ಪ್ರಕಾರ, ದೇಶದಲ್ಲಿ ಪ್ರತೀ ದಿನ 60 ಮಂದಿ ಮತ್ತು ಪ್ರತೀ ವರ್ಷ 25,000 ಮಂದಿ ಬೆಂಕಿ ಅವಘಡದಿಂದ ಸಾವನ್ನಪ್ಪುತ್ತಾರೆ. ಯಾವ ವರ್ಷದಲ್ಲಿ ಅತೀ ಹೆಚ್ಚು ಬೆಂಕಿ ಅನಾಹುತಗಳು ಸಂಭವಿಸಿವೆ, ಯಾವ ರಾಜ್ಯದಲ್ಲಿ ಅಧಿಕ ಮತ್ತು ಈ ಅಗ್ನಿ ದುರಂತಗಳಿಗೆ ಕಾರಣವೇನು ಎನ್ನುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisement

2024ರ ಎರಡು ದುರಂತಗಳು

2024ರಲ್ಲಿ ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಖಲೆಯ ಉಷ್ಣಾಂಶ ವರದಿಯಾಗಿದ್ದು, ಇದು 2024ರಲ್ಲಿ ಹೆಚ್ಚು ಬೆಂಕಿ ಅವಘಡಗಳು ಸಂಭವಿಸಲು ಪ್ರಮುಖ ಕಾರಣವಾಗಿದೆ. ಈ ವರ್ಷ ಜೂನ್‌ವರೆಗೆ ದಿಲ್ಲಿಯಲ್ಲಿ 399 ಅಗ್ನಿ ಅವಘಡ ಪ್ರಕರಣಗಳು ವರದಿಯಾಗಿದೆ. 2023ರಲ್ಲಿ 553 ಪ್ರಕರಣಗಳು ದಾಖಲಾಗಿದ್ದವು.

ಮೇ 29ರಂದು ದಿಲ್ಲಿ ಅಗ್ನಿಶಾಮಕ ದಳದ ಸಹಾಯವಾಣಿ ಸಂಖ್ಯೆಗೆ 200 ಕರೆಗಳು ಬಂದಿದ್ದು, ಅದರಲ್ಲಿ 183 ಕರೆಗಳು ಅಗ್ನಿ ಅವಘಡಕ್ಕೆ ಸಂಬಂಧಿ ಸಿದ್ದಾಗಿತ್ತು. ಮೇ ತಿಂಗಳಿನಲ್ಲಿ ಗುಜರಾತ್‌ನ ರಾಜ್‌ಕೋಟ್‌ನ ಗೇಮಿಂಗ್‌ ಸೆಂಟರ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ 27 ಮಂದಿ ಸಾವನ್ನಪ್ಪಿದರೆ, ಕೆಲವೇ ತಾಸುಗಳ ಅನಂತರ ಪೂರ್ವ ದಿಲ್ಲಿಯ ವಿವೇಕ್‌ ವಿಹಾರದ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ 7 ನವಜಾತ ಶಿಶುಗಳು ಸಾವನ್ನಪಿದ್ದವು.

2022ರಲ್ಲಿ ಅತೀ ಕಡಿಮೆ ಬೆಂಕಿ ಅವಘಡ

Advertisement

ನ್ಯಾಶನಲ್‌ ಕ್ರೈಮ್‌ ರೆಕಾರ್ಡ್‌ ಬ್ಯೂರೋ( ಎನ್‌ಸಿಆರ್‌ಬಿ) ಪ್ರತೀ ವರ್ಷ ಆಕಸ್ಮಿಕ ಸಾವು ಮತ್ತು ಆತ್ಮಹತ್ಯೆ ವರದಿ ಯನ್ನು ಬಿಡುಗಡೆ ಮಾಡುತ್ತದೆ. ಇದರ ಪ್ರಕಾರ 25 ವರ್ಷಗಳಲ್ಲಿ 2022ರಲ್ಲಿ ದೇಶದಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. 1996ರಲ್ಲಿ 22,788, 1999ರಲ್ಲಿ ಅತೀ ಹೆಚ್ಚು ಅಂದರೆ 27,976 ಅವಘಡಗಳು ಸಂಭವಿಸಿವೆ. 1999 ರಿಂದ 2014 ರ ವರೆಗೆ ಪ್ರತೀ ವರ್ಷ ಸರಾಸರಿ 23,000 ಬೆಂಕಿ ಅನಾಹುತಗಳು ಘಟಿಸಿವೆ. 2014ರ ಬಳಿಕ ಈ ಸಂಖ್ಯೆಯು ಕಡಿಮೆಯಾಗಿದ್ದು, 2022ರಲ್ಲಿ 7,566 ಪ್ರಕರಣಗಳ ದಾಖಲಾಗಿವೆ.

ಶಾರ್ಟ್‌ ಸರ್ಕ್ಯೂಟ್‌ ಪ್ರಮುಖ ಕಾರಣ

ಎನ್‌ಸಿಆರ್‌ಬಿ ತನ್ನ ವರದಿಯಲ್ಲಿ ಬೆಂಕಿ ಅವಘಡಗಳು ಸಂಭವಿಸಲು ಕಾರಣವಾಗುತ್ತಿರುವ ಪ್ರಮುಖ ಅಂಶಗಳತ್ತ ಬೆಳಕು ಚೆಲ್ಲಿದೆ. ಶಾರ್ಟ್‌ಸರ್ಕ್ನೂಟ್‌, ಗ್ಯಾಸ್‌ ಸಿಲಿಂಡರ್‌ಗಳ ಸ್ಫೋಟ, ಪಟಾಕಿ ಮೊದಲಾದವುಗಳು ಅಗ್ನಿ ದುರಂತಗಳಿಗೆ ಪ್ರಮುಖ ಕಾರಣಗಳಾಗಿವೆ. ದೇಶದಲ್ಲಿ ಸಂಭವಿಸುವ ಬೆಂಕಿ ಅನಾಹುತಗಳಲ್ಲಿ ಸರಾಸರಿ ಐದನೇ ಒಂದು ಭಾಗದಷ್ಟು ದುರಂತಗಳು ಗ್ಯಾಸ್‌ ಸಿಲಿಂಡರ್‌ ಸ್ಫೋಟದಿಂದಲೇ ಸಂಭವಿಸುತ್ತದೆ.

2022ರಲ್ಲಿ ಸಂಭವಿಸಿದ 7,566 ಪ್ರಕಣಗಳಲ್ಲಿ 1,567 ಪ್ರಕರಣಗಳು ಶಾರ್ಟ್‌ ಸರ್ಕ್ನೂಟ್‌ನಿಂದ ಸಂಭವಿಸಿದರೆ, 1,551 ಪ್ರಕರಣಗಳು ಗ್ಯಾಸ್‌ ಸಿಲಿಂಡರ್‌ ಸ್ಫೋಟದಿಂದಾಗಿ ಸಂಭವಿಸಿದೆ. 1996ರಲ್ಲಿ ಶೇ. 3ರಷ್ಟು ಪ್ರಕರಣಗಳು ಶಾರ್ಟ್‌ ಸರ್ಕ್ನೂಟ್‌ನಿಂದ ಸಂಭವಿಸಿದರೆ 2022ರ ವೇಳೆಗೆ ಇದು ಶೇ. 21ಕ್ಕೆ ಏರಿಕೆಯಾಗಿದೆ. ಆದರೆ ಗ್ಯಾಸ್‌ ಸಿಲಿಂಡರ್‌ನಿಂದ ಉಂಟಾಗುವ ಬೆಂಕಿ ಆಕಸ್ಮಿಕವು ಶೇ. 27ರಿಂದ ಶೇ. 20ಕ್ಕೆ ಇಳಿಕೆಯಾಗಿದೆ. ಪಟಾಕಿಗಳಿಂದ ಸಂಭವಿಸುವ ಬೆಂಕಿ ಅನಾಹುತಗಳು ಕಳೆದ 25 ವರ್ಷಗಳಿಂದ ಶೇ. 2ರಷ್ಟೇ ಇದೆ.

ವಸತಿ ಪ್ರದೇಶಗಳಲ್ಲೇ ಹೆಚ್ಚು ಅಗ್ನಿ ದುರಂತ!

ಎನ್‌ಸಿಆರ್‌ಬಿಯ ಅಂಕಿಅಂಶದ ಪ್ರಕಾರ ಸುಮಾರು ಶೇ. 50ರಷ್ಟು ಅಗ್ನಿ ಅನಾಹುತಗಳು ವಸತಿ ಪ್ರದೇಶಗಳಲ್ಲೇ ಸಂಭವಿಸಿದೆ. 2022ರಲ್ಲಿ ಸಂಭವಿಸಿದ 7,566 ಬೆಂಕಿ ಅವಘಡಗಳಲ್ಲಿ 4,028 ಪ್ರಕರಣಗಳು ವಸತಿ ಪ್ರದೇಶದಲ್ಲೇ ದಾಖಲಾಗಿದ್ದು, 241 ಪ್ರಕರಣಗಳು ವಾಣಿಜ್ಯ ಕಟ್ಟಡಗಳಲ್ಲಿ ಸಂಭವಿಸಿವೆ.

ಮಧ್ಯಪ್ರದೇಶದಲ್ಲೇ ಅಧಿಕ

ಅಗ್ನಿ ಆಕಸ್ಮಿಕಗಳ ರಾಜ್ಯವಾರು ಅಂಕಿಅಂಶಗಳನ್ನು ಗಮನಿಸಿದರೆ 2014ರಿಂದ 2022ರ ವರೆಗೆ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಒಟ್ಟಾಗಿ ಶೇ. 75ರಷ್ಟು ಬೆಂಕಿ ಅವಘಡಗಳು ಸಂಭವಿಸಿವೆ.

ಮಧ್ಯಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಅಂದರೆ ಸರಾಸರಿ ಶೇ. 23ರಷ್ಟು ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಶೇ.19, ಗುಜರಾತ್‌ನಲ್ಲಿ ಶೇ.13, ಕರ್ನಾಟಕದಲ್ಲಿ ಶೇ.12 ಮತ್ತು ತಮಿಳುನಾಡಿನಲ್ಲಿ ಶೇ. 10ರಷ್ಟು ಪ್ರಕರಣಗಳು ದಾಖಲಾಗಿ ಅನಂತರದ ಸ್ಥಾನಗಳಲ್ಲಿವೆ.

ಇತ್ತೀಚೆಗೆ ದೇಶದಲ್ಲಿ ಸಂಭವಿಸುತ್ತಿರುವ ಮತ್ತು ಈ ಹಿಂದೆ ಘಟಿಸಿದ ಅಗ್ನಿ ದುರಂತಗಳ ಕಾರಣಗಳು, ಹಿನ್ನೆಲೆ, ಸಾವು-ನೋವು, ನಷ್ಟದ ಪ್ರಮಾಣ ಇವೆಲ್ಲದರತ್ತ ದೃಷ್ಟಿ ಹರಿಸಿದಾಗ ಅಗ್ನಿಶಾಮಕ ಇಲಾಖೆಯಲ್ಲಿನ ನ್ಯೂನತೆಗಳನ್ನು ಎತ್ತಿತೋರಿಸುತ್ತವೆ. ದೇಶದಲ್ಲಿ ಒಟ್ಟಾರೆಯಾಗಿ ಅಗ್ನಿಶಾಮಕ ಘಟಕಗಳ ಭಾರೀ ಕೊರತೆ ಇದ್ದರೆ, ಆರ್ಥಿಕ ಸಮಸ್ಯೆಯು ದೇಶದ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ ಘಟಕಗಳಿಗೆ ಸವಾಲಾಗಿದೆ.

2012ರ “ಅಗ್ನಿಶಾಮಕ ಸೇವೆಗಳ ಪುನರುಜ್ಜೀವನಕ್ಕಾಗಿ ಅಗ್ನಿ ಅವಘಡ ಮತ್ತು ಅವುಗಳ ಅಪಾಯದ ವಿಶ್ಲೇಷಣೆ’ ಎಂಬ ವರದಿಯು ನಗರ ಮತ್ತು ಗ್ರಾಮೀಣ ಹೊಸ ಅಗ್ನಿ ಶಾಮಕ ದಳಗಳನ್ನು ಆರಂಭಿಸಲು ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳಲ್ಲಿರುವ ಅಂತರವನ್ನು ಸರಿಪಡಿಸಲು 3.8 ಲ. ಕೋ. ರೂ. ಅಗತ್ಯವಿದೆ ಎಂದಿದೆ. ಇದಕ್ಕೆ ಪೂರಕವಾಗಿ ಸರಕಾರವು 2023ರ ಜುಲೈಯಲ್ಲಿ “ರಾಜ್ಯಗಳಲ್ಲಿ ಅಗ್ನಿಶಾಮಕ ದಳದ ಸೇವೆ ವಿಸ್ತರಣೆ ಮತ್ತು ಆಧುನಿಕತೆ’ ಎಂಬ ಯೋಜನೆಯನ್ನು ಆರಂಭಿಸಿದ್ದು, ಇದಕ್ಕಾಗಿ 2025-26ರ ಅವಧಿ ವರೆಗೆ 5,000 ಕೋಟಿ ರೂ. ಇರಿಸಿದೆ.

-ರಂಜಿನಿ, ಮಿತ್ತಡ್ಕ

 

Advertisement

Udayavani is now on Telegram. Click here to join our channel and stay updated with the latest news.

Next