Advertisement
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೊಂಡಿರುವಂತೆ ಅವರವರ ಪಕ್ಷದ ಪರವಾಗಿ ಅಲೆ ಎದ್ದಿಲ್ಲ, ಸದ್ಯಕ್ಕಂತೂ ಯಾವ ಕಡೆಗೂ ಯಾವುದೇ ಗಾಳಿ ಬೀಸುತ್ತಿಲ್ಲ. ಎಲ್ಲ ನಾಯಕರು ತಮ್ಮ ಪಕ್ಷದ ಪರವಾಗಿ ಅಲೆ ಎದ್ದಿದೆ ಎಂದು ಬಿಂಬಿಸಿಕೊಂಡು ಜನಾಭಿಪ್ರಾಯ ರೂಪಿಸಿಕೊಳ್ಳುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ.
Related Articles
Advertisement
ರಾಜ್ಯದ ಪ್ರಜ್ಞಾವಂತ ಮತದಾರರು ಈ ಹಿಂದಿನ ಚುನಾವಣೆಗಳಲ್ಲಿ ಮತದಾನ ನಡೆಯುವ ಕೊನೆ ದಿನದ ತನಕವೂ ತನ್ನ ನಾಡಿಮಿಡಿತ ಏನೆಂಬುದನ್ನು ಬಿಟ್ಟು ಕೊಟ್ಟಿಲ್ಲ. ಅದೇ ಸ್ಥಿತಿ ರಾಜ್ಯದಲ್ಲಿ ಈಗಲೂ ಇದೆ. ಆಡಳಿತರೂಢ ಬಿಜೆಪಿ ಬಗ್ಗೆ ಪೂರ್ಣ ಸಮಾಧಾನವೂ ಇಲ್ಲ, ಕಾಂಗ್ರೆಸ್ ಬಗ್ಗೆ ಪರಿಪೂರ್ಣ ಒಲವೂ ಇಲ್ಲ. ಇನ್ನು ಜೆಡಿಎಸ್ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಯಾವ ಪಕ್ಷದ ಕಡೆಗೂ ವಾಲದ ಮತದಾರನ ಮನಮಿಡಿಯುವಿಕೆ ತಿಳಿಯಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಉರಿ ಬಿಸಿಲಿನಲ್ಲೂ ಕ್ಷೇತ್ರವಾರು ಪ್ರವಾಸಕೊಂಡು ಧೂಳೆಬ್ಬಿಸುತ್ತಿವೆ.ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಚುನಾವಣ ಕಾವು ಈಗಷ್ಟೇ ಶುರುವಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ವಲಯದಲ್ಲಿ ಒಂದಷ್ಟು ಹುರುಪು, ಉತ್ಸಾಹ ಕಾಣುತ್ತಿದೆ. ಅಲ್ಲದೆ ಹಲವು ಕಡೆ ಅಸಮಾಧಾನವೂ ಇದೆ. ಅಧಿಕಾರ ಇದ್ದಾಗ ಸರಿಯಾಗಿ ನಡೆಸಿಕೊಂಡಿಲ್ಲ, ಅಧಿಕಾರ ನೀಡಿಲ್ಲ ಎಂಬ ಕೊರಗು ಇದೆ. ಹೀಗಾಗಿ ಕಾರ್ಯಕರ್ತರನ್ನು ಸರಿಪಡಿಸಿಕೊಂಡು ಮುನ್ನುಗ್ಗುವ ಪ್ರಯತ್ನಗಳು ನಡೆದಿವೆ. ಟ್ರೆಂಡ್ ಸೆಟ್‌ಗೆ ಸಿದ್ಧ ವಾ ಗದ ಭೂಮಿಕೆ
ಜನ ಸೇರುವುದು ಬೇರೆ, ಜನ ಬರುವುದು ಬೇರೆ. ಈಗ ನಡೆಯುತ್ತಿರುವ ರಾಜಕೀಯ ಪಕ್ಷಗಳ ಸಮಾವೇಶದಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಜನಜಂಗುಳಿ ಎಲ್ಲ ಪಕ್ಷಗಳ ಸಮಾವೇಶಗಳಲ್ಲೂ ಕಂಡುಬರುತ್ತದೆ. ಟಿಕೆಟ್ ಆಕಾಂಕ್ಷಿಗಳು ಸ್ಥಳೀಯವಾಗಿ ತಮ್ಮ ಶಕ್ತಿಪ್ರದರ್ಶನ ಮಾಡಲು ಜನರನ್ನು ಸೇರಿಸುತ್ತಿದ್ದಾರೆ. ಅವು ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆ ಆಗುತ್ತವೆ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಆದರೆ ಕಾರ್ಯಕರ್ತರಿಗೆ ಮಾತ್ರ ಇದು ಸುಗ್ಗಿಕಾಲ. ಚುನಾವಣ ಕಾವು ಮತದಾರ ಸಮುದಾಯಕ್ಕೆ ಬಿಸಿ ತಟ್ಟಿಲ್ಲ. ಹೀಗಾಗಿ “ಟ್ರೆಂಡ್ ಸೆಟ್’ ಆಗಿಲ್ಲ. ಬಜೆಟ್ ಮಂಡನೆ ಅಥವಾ ಅಧಿವೇಶನ ಮುಗಿದ ಬಳಿಕ ಎಲ್ಲರೂ ಕ್ಷೇತ್ರಗಳಿಗೆ ದೌಡಾಯಿಸುವುದರಿಂದ ಚುನಾವಣ ಕಾವು ಏರತೊಡಗುವ ಸಾಧ್ಯತೆಗಳಿದ್ದು ಅಲ್ಲಿಂದ “ಟ್ರೆಂಡ್ ಸೆಟ್’ಗೆ ಭೂಮಿಕೆ ಸಿದ್ಧವಾಗಲಿದೆ. – ಎಂ.ಎನ್.ಗುರುಮೂರ್ತಿ