ವೇಗದ ದಿನಗಳಲ್ಲಿ ಮಕ್ಕಳ ಆಟ ಪಾಠಗಳಿಗೆ ಪೋಷಕರು ಸಮಯ ನೀಡಲೇಬೇಕು. ಪುಟ್ಟ ಮಕ್ಕಳಿಗೆ ಕಲಿಸಬೇಕಾದ ಸಾಮಾನ್ಯ ಜ್ಞಾನ ಅಂದರೆ ಆಟದಲ್ಲೇ ಪಾಠ. ಅದನ್ನು ಕಲಿಸುವ ಚಾನೆಲ್ ಒಂದಿದೆ. ಅದೇ, “ವಂದನಾ ರೈ ಕಾರ್ಕಳ’ ಯುಟ್ಯೂಬ್ ಚಾನೆಲ್ ಮಾದರಿ ಶಿಕ್ಷಕಿ ಎಂದೇ ಹೆಸರಾಗಿರುವ ವಂದನಾ ರೈ, ಕಾರ್ಕಳದ ಬಳಿ ಒಂದು ಸಣ್ಣ ಹಳ್ಳಿಯ ನಿವಾಸಿ. ವೃತ್ತಿಯಲ್ಲಿ ಕನ್ನಡ ಶಿಕ್ಷಕಿ. 2020ರಲ್ಲಿ ಈ ಚಾನೆಲ್ ಆರಂಭಿಸಿದರು.
ಸದ್ಯ 3 ಲಕ್ಷಕ್ಕೂ ಅಧಿಕ ಸಬ್‌ಸೆð„ಬರ್ ಅನ್ನು ಹೊಂದಿದ್ದಾರೆ. ಇವರ ಚಾನೆಲ್‌ನಲ್ಲಿ ಅಭಿನಯ ಗೀತೆಗಳು ಸೇರಿದಂತೆ ಮಕ್ಕಳ ಪಾಠ ಕುರಿತು 417 ವಿಡಿಯೋ ಅಪ್‌ಲೋಡ್ ಆಗಿವೆ.
ಮೊದಲ ಸಲ ಶಾಲೆಗೆ ಬಂದ ಮಕ್ಕಳನ್ನು ಸುಧಾರಿಸುವುದು ಹೇಗೆ? ಅವರು ಕಲಿಯಬೇಕಾದ ವಾಕ್ಯಗಳೇನು ಎನ್ನುವುದನ್ನು ಇವರ ಚಾನೆಲ್‌ನಲ್ಲಿ ನೋಡಬಹುದು. ಪುಟ್ಟ ಪುಟ್ಟ ಮಕ್ಕಳಿಗೆ ಇವರ ಚಾನೆಲ್ ಒಂದು ಎನ್‌ಸೈಕ್ಲೋಪಿಡಿಯ ರೀತಿ ಆಗಿದೆ. ಮಕ್ಕಳು ಕಲಿಯಬೇಕಾದ ಹಾಡು, ನೃತ್ಯಗಳನ್ನು ಅದ್ಭುತವಾದ ಅಭಿನಯ ಗೀತೆಗಳಿಂದ ಕಲಿಸುವುದು ಇವರ ವಿಶೇಷತೆ.
ಮಕ್ಕಳಿಗೆ ಶಿಶು ಗೀತೆ ಕಲಿಸುವುದು ಹೇಗೆ? ಕನ್ನಡ ವರ್ಣಮಾಲೆಯನ್ನು ಎರಡು ಗೆರೆಯಲ್ಲಿ ಬರೆಯುವುದು ಹೇಗೆ? ಜ್ಞಾನೇಂದ್ರಿಯಗಳನ್ನು ಕುರಿತ ಹಾಡು, ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ ಅಕ್ಷರ ಮಾಲೆ, ರಜೆಯಲ್ಲಿ ಕಲಿಯಬೇಕಾದ ಹಾಡುಗಳು, ತರಕಾರಿಗಳ ಹಾಡು, ಹೂಗಳ ಹಾಡು, ಪ್ರಾರ್ಥನೆಗಳು, ಪರಿಸರ ಗೀತೆ, ಕಾಗುಣಿತದ ಹಾಡು, ಶಾಲೆಯಲ್ಲಿ ಆಚರಿಸುವ ದಿನಾಚರಣೆಗಳಿಗೆ ಹೊಂದುವ ದೇಶಭಕ್ತಿ ಗೀತೆಗಳು… ಹೀಗೆ ಮುದ್ದು ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸುವ ಸಾಕಷ್ಟು ವಿಡಿಯೋಗಳನ್ನು ಈ ಚಾನೆಲ್‌ನಲ್ಲಿ ಕಾಣಬಹುದು. ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸಿ ಪಾಠ ಕಲಿಸಿದಾಗ ಅವರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತದೆ ಎನ್ನುವುದು ವಂದನಾ ರೈ ಅವರ ಮಾತು.
ಈ ಚಾನೆಲ್ ಕುರಿತು ಇನ್ನಷ್ಟು ತಿಳಿಯಲು
https://youtube.com/VandanaRaiKarkala
– ಪೂಜಾ ಭದ್ರಾವತಿ