ಅದು 1980ರ ದಶಕದ ಆರಂಭದ ದಿನಗಳು. ದೇಶಾದ್ಯಂತ ಇಂದಿರಾ ಗಾಂಧಿಯವರ ವರ್ಚಸ್ಸು, ಪ್ರಭಾವ ಗಾಢವಾಗಿದ್ದ ಸಂದರ್ಭ. ಯಾವುದೇ ಚುನಾವಣೆ ಇರಲಿ ಇಂದಿರಾ ಕಾಂಗ್ರೆಸ್‌ನದೇ ಅಧಿಪತ್ಯ. ಕಾಂಗ್ರೆಸ್ ಚಿಹ್ನೆಯಡಿ ಯಾರೇ ಸ್ಪರ್ಧಿ ಸಿದರೂ ಸುಲಭವಾಗಿ ಗೆಲ್ಲುತ್ತಾರೆ ಎಂಬ ಮಾತು ಜನಮಾನಸದಲ್ಲೂ ಹರಿದಾಡುತ್ತಿದ್ದ ಸಮಯ. ಇಂಥ ಪರಿಸ್ಥಿತಿಯಲ್ಲಿ ಶಿಕ್ಷಕರು, ಕಾರ್ಮಿಕರು, ಶ್ರಮಿಕ ವರ್ಗ ಸಹಿತ ಕಾರ್ಮಿಕ ಮುಖಂಡರ ಬೆಂಬಲದೊಂದಿಗೆ ಜನತಾ ಪಕ್ಷದಿಂದ ಸ್ಪರ್ಧಿಸಿ ಜಯ ಸಾಧಿಸಿದ್ದು, ಆ ಕಾಲಕ್ಕೆ ವಿಶೇಷ ಸಾಧನೆಯಾಗಿತ್ತು ಎನ್ನುತ್ತಾರೆ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ.
ಕಾಂಗ್ರೆಸ್ ಪಕ್ಷದಿಂದ ಬೈಂದೂರು ಕ್ಷೇತ್ರದಲ್ಲಿ ಎ.ಜಿ. ಕೊಡ್ಗಿ, ಅನಂತರದಲ್ಲಿ ಜಿ.ಎಸ್. ಆಚಾರ್ ಅವರು ಎರಡು ಬಾರಿ ಶಾಸಕರಾಗಿದ್ದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ 1983ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಪ್ರಭಾವಿ ನಾಯಕ ಜಿ.ಎಸ್. ಆಚಾರ್ ಅವರ ವಿರುದ್ಧ ಕೇವಲ 24 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಆಗೆಲ್ಲ ಕಾಂಗ್ರೆಸ್‌ಗೆ ಚುನಾವಣ ಪ್ರಚಾರಕ್ಕೆ ಇಂದಿರಾ ಗಾಂಧಿಯವರ ಹೆಸರು ಸಾಕಾಗುತ್ತಿತ್ತು ಹಾಗೂ ಅವರ ಪ್ರಭಾವವೂ ಅಷ್ಟಿತ್ತು. ಇಂತಹ ಸಂದರ್ಭದಲ್ಲಿ ಜನತಾ ಪಕ್ಷದಿಂದ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಕಮ್ಯೂನಿಸ್ಟ್ ಪಕ್ಷಗಳ ಮುಖಂಡರು ಎಲ್ಲ ರೀತಿಯಲ್ಲೂ ಸಹಕಾರ ನೀಡಿದ್ದರು. ಕಾರ್ಮಿಕರು, ಶ್ರಮಿಕ ವರ್ಗವನ್ನು ಮುಖ್ಯವಾಗಿಟ್ಟುಕೊಂಡು ಚುನಾವಣ ಪ್ರಚಾರ ನಡೆಸಿದ್ದೆವು. ಇದುವೇ ನನ್ನನ್ನು ಗೆಲುವಿನ ದಡ ಸೇರಿಸಿತ್ತು.
ಶಿಕ್ಷಕರೇ ಹಣ ಹೊಂದಿಸಿದ್ದರು: ಚುನಾವಣೆ ಸ್ಪರ್ಧಿಸಲು ಎಲ್ಲ ಸಿದ್ಧತೆಯೂ ಆಗಿತ್ತು. ಇಡೀ ಕ್ಷೇತ್ರದ ಶಿಕ್ಷಕರು ಬೆಂಬಲಕ್ಕೆ ನಿಂತಿದ್ದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಇಡಬೇಕಾದ ಠೇವಣಿ ಹಣವನ್ನು ಶಿಕ್ಷಕರೇ ಹೊಂದಿಸಿ, ತಂದಿದ್ದರು. ಕಾಂಗ್ರೆಸ್ ವಿರುದ್ಧ ನಿಂತರೆ ಠೇವಣಿ ಕಳೆದುಕೊಳ್ಳುವ ಸನ್ನಿವೇಶದ ನಡುವೆ ಇಡೀ ಕ್ಷೇತ್ರದ ಜನರ ಸಹಕಾರದೊಂದಿಗೆ ಜಯ ಸಾಧಿಸಿ ವಿಧಾನಸೌಧ ಪ್ರವೇಶಿಸಲು ಸಾಧ್ಯವಾಗಿತ್ತು.
ನಾಯಕರ ಸಂಪರ್ಕ: ಗ್ರಾಮ ಪಂಚಾಯತ್ ಸದಸ್ಯನಾಗಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಅನುಭವ ಇದ್ದುದರಿಂದ ಕ್ಷೇತ್ರದಲ್ಲಿನ ಕುಡಿಯುವ ನೀರಿನ ಅಭಾವ ಸಹಿತ ಸ್ಥಳೀಯ ಸಮಸ್ಯೆಗಳನ್ನು ಹೊತ್ತು ಆಗಾಗ್ಗೆ ವಿಧಾನಸೌಧಕ್ಕೆ ಹೋಗುತ್ತಿದ್ದೆ. ಹಾಗೆಯೇ ಕೊಲ್ಲೂರು ದೇವಸ್ಥಾನದ ಟ್ರಸ್ಟಿಯಾಗಿದ್ದರಿಂದ ಕೊಲ್ಲೂ ರಿಗೆ ಬರುವ ಪ್ರಮುಖ ನಾಯಕರ ಪರಿಚ ¿ ುವೂ ಸುಲಭದಲ್ಲಿ ಆಗುತ್ತಿತ್ತು. ಹೀಗೆ ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಸ್.ಆರ್. ಬೊಮ್ಮಾಯಿ, ವೀರೇಂದ್ರ ಪಾಟೀಲ್ ಸಹಿತವಾಗಿ ಹಲವು ನಾಯಕರ ಪರಿಚಯವಾಗಿ ಬಾಂಧವ್ಯವೂ ವೃದ್ಧಿಯಾಯಿತು. ಇದು ಮುಂದೆ ಚುನಾವಣೆ ಯಲ್ಲಿ ಸ್ಪರ್ಧಿಸಲು ಸಹಕಾರಿಯಾಯಿತು.
ಸುಷ್ಮಾ ಸ್ವರಾಜ್ ಬಂದಿದ್ದರು: ಆಗೆಲ್ಲ ಚುನಾವಣೆ ಪ್ರಚಾರ ಎಂದರೆ ಮನೆ ಮನೆ ಭೇಟಿ, ಮೈಕ್‌ಗಳಲ್ಲಿ ಅನೌನ್ಸ್‌ಮೆಂಟ್, ಕರಪತ್ರ ಹಂಚುವುದು ಮತ್ತು ಮೈದಾನಗಳಲ್ಲಿ ಬಹಿರಂಗ ಸಭೆ ಇಷ್ಟಕ್ಕೆ ಸೀಮಿತವಾಗಿತ್ತು. ಕಾರ್ಯಕರ್ತರು ಕೂಡ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟದ ಹೊರತಾಗಿ ಬೇರೇನೂ ನಿರೀಕ್ಷೆ ಮಾಡುತ್ತಿರಲಿಲ್ಲ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರಾಷ್ಟ್ರಮಟ್ಟದ ನಾಯಕರಾಗಿದ್ದ ಸುಷ್ಮಾ ಸ್ವರಾಜ್, ಮಧು ದಂಡವತೆ ಮೊದಲಾದವರು ಬಂದಿದ್ದರು.
ರಾಜಕೀಯ ದ್ವೇಷ ಇರಲೇ ಇಲ್ಲ: ಚುನಾವಣೆ ಸಂದರ್ಭ ಅಥವಾ ಚುನಾವಣೆ ಅನಂತರದಲ್ಲಿ ರಾಜಕೀಯ ದ್ವೇಷ ಎನ್ನುವುದು ಇರಲಿಲ್ಲ. ಪಕ್ಷ-ಪಕ್ಷಗಳ ನಡುವೆ ಅಥವಾ ಕಾರ್ಯಕರ್ತರ ನಡುವೆ ವೈರತ್ವವೂ ಇರಲಿಲ್ಲ. ಈಗ ಕೌಟುಂಬಿಕ ಸಮಸ್ಯೆಯೂ ರಾಜಕೀಯ ನಾಯಕರ ಅಸ್ತ್ರವಾಗುವ ಮಟ್ಟಿಗೆ ವ್ಯವಸ್ಥೆ ಹಳಸಿಹೋಗಿದೆ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಭಿನ್ನ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆದರೂ ಚುನಾವಣೆ ಮುಗಿದ ಕೂಡಲೇ ಒಂದಾಗುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ಖರ್ಚು ಕೂಡ ತೀರಾ ಕಡಿಮೆಯಾಗಿತ್ತು. ಈಗ ಅದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಅಪ್ಪಣ್ಣ ಹೆಗ್ಡೆ.
83ರ ಇಳಿ ವಯಸ್ಸಿನಲ್ಲೂ ಅಪ್ಪಣ್ಣ ಹೆಗ್ಡೆ ಅವರು ಧಾರ್ಮಿಕ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
– ಬಸ್ರೂರು ಅಪ್ಪಣ್ಣ ಹೆಗ್ಡೆ, ಮಾಜಿ ಶಾಸಕರು