ಶ್ರೀನಗರ: ಉಗ್ರರ ಗುಂಡೇಟಿಗೆ ಬಲಿಯಾದವರ ರಕ್ತದ ಮಡುವಾಗಿ ಹರಿಯುತ್ತಿದ್ದ ಕಣಿವೆಯ ಹೃದಯಭಾಗದ ನದಿ ಝೇಲಂ, ಈಗ ತಣ್ಣಗೆ, ಪ್ರಶಾಂತವಾಗಿ ಮಕ್ಕಳ ನಗುವಿನ ಬಿಂಬವಾಗಿ ಹರಿಯುತ್ತಿದೆ. ಜಮ್ಮು-ಕಾಶ್ಮೀರದ ಪ್ರತಿ ಮುಂಜಾವು ಹಿರಿಯರ ನೆಮ್ಮದಿಯ ಉಸಿರ ಗಾಳಿಯನ್ನು ಬೆರಸಿಕೊಂಡು, ಯುವಕರ ಉತ್ಸಾಹಕ್ಕೆ ಸಾಕ್ಷಿಯಾಗುತ್ತಿದೆ.. ಈ ಮಾತುಗಳು ಕಳೆದ 4 ವರ್ಷದಲ್ಲಿ ಜಮ್ಮು-ಕಾಶ್ಮೀರದ ಬದಲಾವಣೆಗೆ ತೆರೆದುಕೊಂಡು, ಅಭಿವೃಧಿœಯ ಪಥಕ್ಕೆ ಕಾಲಿಟ್ಟಿರುವ ಕಾಶ್ಮೀರಿಗಳದ್ದು!
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರದ್ದುಗೊಳಿಸಿ ಆ.5ಕ್ಕೆ 4 ವರ್ಷ ಪೂರ್ಣಗೊಳ್ಳಲಿದೆ. ಈ ವೇಳೆ ವಿಧಿ ರದ್ದು ಬಳಿಕದ ಹೊಸ ಬದಲಾವಣೆಗಳ ಬಗ್ಗೆ ಮಾಧ್ಯಮಗಳ ಜತೆಗೆ ಕಣಿವೆ ಜನರು ಮಾತನಾಡಿದ್ದು, ವಿಶೇಷ ಸ್ಥಾನಮಾನವೆಂಬುದು ವರವಲ್ಲ, ಶಾಪವೆಂಬುದು ಈಗ ಅರ್ಥವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಜಮ್ಮುವಿನ ಜವಾಹರ್ ನಗರದ ನಿವಾಸಿ ಬಶೀರ್ ಅಹ್ಮದ್(73) ತಮ್ಮ ಅನುಭವವನ್ನು ಹಂಚಿಕೊಂಡಿದ್ದು, “ಕೆಲವರ್ಷಗಳ ಹಿಂದೆ ಇಂಥದ್ದೊಂದು ದಿನವನ್ನು ನಾನು ಕಳೆಯಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಇದೇ ಝೇಲಂ ನದಿ ದಂಡೆಯ ಮೂಲಕ ಸೂರ್ಯಾಸ್ತದ ನಂತರ ಹಾದುಹೋಗಲು ಭಯವಾಗುತ್ತಿತ್ತು. ಆದರೀಗ ರಾತ್ರಿ 10 ಗಂಟೆಯಾದರೂ ಮೊಮ್ಮಕ್ಕಳೊಂದಿಗೆ ನದಿ ದಡದಲ್ಲಿ ವಿಹರಿಸುತ್ತೇನೆ. ಶಾಂತ ಜಲಮಾರ್ಗವಾಗಿದ್ದ ಝೇಲಂ, ಇಂದು ಚಟುವಟಿಕೆಯಿಂದ ಕೂಡಿದೆ. ಇಲ್ಲೇ ಪಕ್ಕದಲ್ಲಿರುವ ಪೋಲೋ ವ್ಯೂಗೆ ಬರಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದರು. ಆದರೀಗ ಆ ತಾಣ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ನಾನೂ ಅಲ್ಲಿಯ ವ್ಯಾಪಾರಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಇದೆಲ್ಲ ಸಾಧ್ಯವಾಗಿದ್ದು ವಿಶೇಷ ಸ್ಥಾನಮಾನವೆಂಬ ಪಟ್ಟ ಕೆಳಗಿಳಿದ ನಂತರ’ ಎಂದಿದ್ದಾರೆ.
ರಾಷ್ಟ್ರಪ್ರೇಮದ ಧ್ವಜ ಹಾರಿದೆ: ಬರೀ ಪ್ರವಾಸೋದ್ಯಮ, ವ್ಯಾಪಾರ ವ್ಯವಹಾರದ ಅಭಿವೃದ್ಧಿ ಅಷ್ಟೇ ಅಲ್ಲ, ಭಾರತ ವಿರೋಧಿ ಘೋಷಬರಹಗಳಿಂದ ತುಂಬಿರುತ್ತಿದ್ದ ಬೀದಿಗಳಲ್ಲಿ ಇಂದು ತ್ರಿವರ್ಣ ಪ್ರೀತಿಯಿಂದ ರಾರಾಜಿಸುತ್ತಿದೆ. ಶಾಂತಿ, ಪ್ರೀತಿ ಕಣಿವೆಯಲ್ಲಿ ಮತ್ತೆ ನೆಲೆಸಿದ್ದು, ಕಾಶ್ಮೀರ ಭೂಮಿ ಮೇಲಿನ ಸ್ವರ್ಗ ಎನ್ನುವ ವಾಕ್ಯ ವಾಸ್ತವದಲ್ಲೂ ಹೊಂದಿಕೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.