Advertisement
ಸರಕಾರಿ ನೌಕರರು ಕರ್ತವ್ಯಕ್ಕೆ ಅಥವಾ ಕಚೇರಿಗೆ ಹಾಜರಾದ ಅನಂತರ ಎಲ್ಲಿಗೆ ತೆರಳುತ್ತಾರೆ ಎಂಬುದರ ಬಗ್ಗೆ ನಿಗಾ ಇರಿಸಲು ತೀರ್ಮಾನಿಸಲಾಗಿದೆ. ಫೀಲ್ಡ್‌ವರ್ಕ್ ಹಾಗೂ ಇತರ ಕರ್ತವ್ಯಕ್ಕೆ ತೆರಳುವುದಾಗಿ ತಿಳಿಸಿ ಅಥವಾ ಮೊಬೈಲ್‌ನಲ್ಲೇ ಗಂಟೆಗಟ್ಟಲೆ ಮಾತನಾಡುತ್ತಾ ಹೊರಗೆ ಬಂದು ಬಳಿಕ ಹಿಂದಿರುಗದೆ ನೌಕರರು ನಾಪತ್ತೆಯಾಗುತ್ತಾರೆ. ಅವರನ್ನು ನಿಯಂತ್ರಿಸುವ ಸಲುವಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಜಾರಿಗೆ ತರುವುದು ಅನಿವಾರ್ಯ ಎಂಬುದು ಜಿಲ್ಲಾಧಿಕಾರಿಗಳ ಅಭಿಮತವಾಗಿದೆ.
ಜಿಲ್ಲಾಧಿಕಾರಿ ಅಧೀನದಲ್ಲಿ ಕೆಲಸ ಮಾಡುವ ಸರಕಾರಿ ನೌಕರರು ಜಿಲ್ಲಾಧಿಕಾರಿಗಳ ನಿಯಂತ್ರಣದಲ್ಲಿರುತ್ತಾರೆ. ಪ್ರತಿಯೊಬ್ಬರ ಮೇಲೂ ನಿಗಾ ವಹಿಸಲು ಇದರಿಂದ ಸಾಧ್ಯವಾಗಲಿದೆ. ಆದರೆ ಜಿಲ್ಲೆಯ ಇತರ ಸರಕಾರಿ ಕಚೇರಿಯಲ್ಲಿ ಹಾಜರಾದ ಅನಂತರ ನಾಪತ್ತೆಯಾಗುವ ನೌಕರರ ಬಗ್ಗೆ ವ್ಯಾಪಕ ದೂರುಗಳು ಹಾಗೂ ನಿರಂತರ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಲೈವ್ ಆಗಿ ನಿಗಾ ವಹಿಸಲು ಮೊಬೈಲ್ ಆ್ಯಪ್ ಜಾರಿಗೊಳಿಸಲಾಗುವುದು.
ಹೊಸ ಮೊಬೈಲ್ ಸಾಫ್ಟ್‌ವೇರ್‌ನಿಂದಾಗಿ ಫೀಲ್ಡ್ ವರ್ಕ್‌ಗೆ ತೆರಳುವವರ ಕುರಿತು ಸಂಶಯ ಉಂಟಾದರೆ ಕೂಡಲೇ ಅವರನ್ನು ಸಂಪರ್ಕಿಸಿ ಅವರು ಎಲ್ಲಿ ಏನು ಮಾಡುತ್ತಾರೆ ಎಂಬುದನ್ನು ತಿಳಿಯಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಧ್ಯವಾಗುತ್ತದೆ. ಅದೇ ರೀತಿಯಲ್ಲಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಅಗತ್ಯವಿದ್ದರೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಉಚಿತವಾಗಿ ವ್ಯವಸ್ಥೆ ರೂಪಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ತಿಳಿಸಿದ್ದಾರೆ. ಈ ಯೋಜನೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯಗತಗೊಳಿಸುವ ಮೂಲಕ ಕೇರಳ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸರಕಾರಿ ನೌಕರರನ್ನು ಗಮನಿಸುವ ವ್ಯವಸ್ಥೆ ಹೊಂದುವ ಜಿಲ್ಲೆಯಾಗಲಿದೆ. ಸರಕಾರಿ ನೌಕರರನ್ನು ಗಮನಿಸುವ ಸಾಫ್ಟ್‌ವೇರ್‌ನಂತೆಯೇ ನಗರ ಸಹಿತ ವಿವಿಧ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವವರ ಮಾಹಿತಿಗಳನ್ನು ವಾಟ್ಸ್‌ಆ್ಯಪ್ ಮೂಲಕ ಲಭಿಸುವುದನ್ನು ಆಯಾ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹಸ್ತಾಂತರಿಸಿ ಕ್ರಮ ಕೈಗೊಳ್ಳುವುದನ್ನು ಖಾತರಿ ಪಡಿಸಲಾಗುವುದು. ಈಗಾಗಲೇ ಕಾಸರಗೋಡು ನಗರಸಭೆಯ ಆರೋಗ್ಯ ವಿಭಾಗದ ನೇತೃತ್ವದಲ್ಲಿ ಇದೇ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಲಿನ್ಯ ಎಸೆಯುವವರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಲಾಗುತ್ತಿದೆ. ಈ ವ್ಯವಸ್ಥೆ ಕೂಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಏರ್ಪಡಿಸಿದ ನೂತನ ಯೋಜನೆಗಳಲ್ಲಿ ಒಂದಾಗಿದೆ.
Related Articles
ಸಾರ್ವಜನಿಕ ಸ್ಥಳಗಳಲ್ಲಿ ಮಾಲಿನ್ಯ ಎಸೆಯುವವರ ಕುರಿತು ಚಿತ್ರ ಸಹಿತ ಜಿಲ್ಲಾಧಿಕಾರಿ ಒದಗಿಸಿದ ವಾಟ್ಸ್‌ಆ್ಯಪ್ ನಂಬರ್‌ಗೆ ದೂರು ನೀಡುವ ವ್ಯವಸ್ಥೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಸರಕಾರಿ ನೌಕರರ ಮೇಲೆ ನಿಗಾವಹಿಸುವ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಮೂಲಕ ವಿನೂತನ ಯೋಜನೆಗಳನ್ನು ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದೆ. ಈ ಮಧ್ಯೆ ಕೇವಲ ನಿಗಾ ಮಾತ್ರವಲ್ಲದೆ ತಪ್ಪಿತಸ್ಥ ನೌಕರರ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನೂ ಇದರೊಂದಿಗೆ ಜಾರಿಗೊಳಿಸಲು ಜಿಲ್ಲಾಧಿಕಾರಿ ಯೋಜನೆ ರೂಪಿಸಿದ್ದಾರೆ.
Advertisement