Advertisement

ವಿಶೇಷ ವರದಿ: “ಕ್ಯಾಮ್‌ ಸ್ಕ್ಯಾನರ್‌’ಬದಲು “ಗ್ರಂಥ ಸ್ಕ್ಯಾನರ್‌’

10:20 PM Aug 12, 2020 | mahesh |

ಮಹಾನಗರ: ಕೇಂದ್ರ ಸರಕಾರ ನಿಷೇಧಿಸಿದ ಚೀನದ “ಕ್ಯಾಮ್‌ ಸ್ಕ್ಯಾನರ್‌’ ಆ್ಯಪ್‌ಗೆ ಪರ್ಯಾಯವಾಗಿ ಮಂಗಳೂರಿನ ವಿದ್ಯಾರ್ಥಿಯೋರ್ವ ಆ್ಯಪ್‌ ಅಭಿವೃದ್ಧಿಪಡಿಸಿ ಗಮನಸೆಳೆಯುತ್ತಿದ್ದಾನೆ. ಮಂಗಳೂರಿನ ಶ್ರೀದೇವಿ ಕಾಲೇಜ್‌ ಆಫ್ ಟೆಕ್ನಾಲಜಿಯಲ್ಲಿ ದ್ವಿತೀಯ ವರ್ಷದ ಕಂಪ್ಯೂಟರ್‌ ಸಯನ್ಸ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ ಶಿರಸಿ ಗುರುನಗರದ ಅಭಯ ಚಂದಾವರ “ಗ್ರಂಥ ಸ್ಕ್ಯಾನರ್‌’ ಎಂಬ ಆ್ಯಪ್‌ನ್ನು ರೂಪಿಸಿದ್ದು, ಇದು ಚೀನದ “ಸ್ಕ್ಯಾಮ್‌ ಸ್ಕ್ಯಾನರ್‌’ನಂತೆಯೇ ಕೆಲಸ ನಿರ್ವಹಿಸುತ್ತದೆ.

Advertisement

ಒಂದು ತಿಂಗಳ ಶ್ರಮ
“ಒಂದು ತಿಂಗಳಿನಿಂದ ಆ್ಯಪ್‌ ರೂಪಿಸುವ ಕಾರ್ಯದಲ್ಲಿ ತೊಡಗಿದ್ದೆ. ಸಾಮಾನ್ಯವಾಗಿ ಆ್ಯಪ್‌ನ್ನು ಒಂದು ತಂಡದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ನಾನು ಒಬ್ಬನೇ ಮಾಡಿದೆ. ಹಾಗಾಗಿ 1 ತಿಂಗಳು ಬೇಕಾಯಿತು. ಈಗಾಗಲೇ ಅಧ್ಯಯನದ ಜತೆಯಲ್ಲಿ ಹಲವು ಆ್ಯಪ್‌ಗ್ಳನ್ನು ಮಾಡಿದ್ದೆ. ಚೀನದಲ್ಲಿ ಕೊರೊನಾ ಆರಂಭವಾಗಿ ಅದು ಬೇರೆ ದೇಶಗಳಿಗೆ ಹರಡುವ ಆರಂಭಿಕ ಹಂತದಲ್ಲಿ ವಿವಿಧ ರಾಷ್ಟ್ರಗಳಲ್ಲಿನ ಕೊರೊನಾ ಅಪ್‌ಡೇಟ್‌ ತಿಳಿಯಲು ಆ್ಯಪ್‌ ಮಾಡಿದ್ದೆ. ಅದನ್ನು ನನ್ನ ಕುಟುಂಬದೊಳಗೆ ಹಂಚಿಕೊಂಡಿದ್ದೆ. ಆದರೆ ಅದನ್ನು ಪ್ಲೇ ಸ್ಟೋರ್‌ಗೆ ಅಪ್‌ಲೋಡ್‌ ಮಾಡಿರಲಿಲ್ಲ. ಗ್ರಂಥ ಸ್ಕ್ಯಾನರ್‌ನ್ನು ಮಾತ್ರ ಅಪ್‌ಲೋಡ್‌ ಮಾಡಿದ್ದೇನೆ. ನನ್ನ ಆ್ಯಪ್‌ ಅಭಿವೃದ್ಧಿ ಸಂದರ್ಭದಲ್ಲಿಯೇ ಪ್ರಾಧನಿ ಮೋದಿಯವರು “ಸ್ವಾವಲಂಬಿ ಭಾರತ’ ಘೋಷಣೆ ಮಾಡಿರುವುದು, ಭಾರತದಲ್ಲಿ ಚೀನದ ಆ್ಯಪ್‌ ನಿಷೇಧಿಸಿರುವುದು ಕಾಕತಾಳೀಯ’ ಎಂದು ಅಭಯ ಹೇಳಿದ್ದಾರೆ.

“ಕ್ಯಾಮ್‌ ಸ್ಕ್ಯಾನರ್‌’ಗೆ ಸಮಾನ
ಕ್ಯಾಮ್‌ಸ್ಕ್ಯಾನರ್‌ನಲ್ಲಿ ಇರುವಂತಹ ಫೀಚರ್‌ಗಳು “ಗ್ರಂಥ ಸ್ಕ್ಯಾನರ್‌’ನಲ್ಲಿವೆ. ಇದರ ಜತೆಗೆ ಮತ್ತಷ್ಟು ಅಪ್‌ಡೇಟ್‌ಗಳನ್ನು ಮಾಡುತ್ತಿದ್ದೇನೆ. ಇದರಿಂದಾಗಿ ಯಾವುದೇ ಡಾಕ್ಯುಮೆಂಟ್‌ನ್ನು ಹೆಚ್ಚು ಸ್ಪುಟವಾಗಿ ಸ್ಕ್ಯಾನ್‌ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಪೇಪರ್‌ಸೈಜ್‌ಗೆ ಕ್ರಾಪ್‌ ಮಾಡಲು ಅನುಕೂಲವಾಗಲಿದೆ. ಇದಕ್ಕೆಂದೇ ಇಮೇಜ್‌ ಫಿಲ್ಟರ್‌ ತಂತ್ರಾಂಶ ಕೂಡ ಅಳವಡಿಸಿದ್ದೇನೆ. ಇದು ಆ್ಯಂಡ್ರಾಯ್ಡ ಫ್ರೀ ಆ್ಯಪ್‌ ಆಗಿದ್ದು, ಡಾಕ್ಯುಮೆಂಟ್‌ ಸ್ಕ್ಯಾನರ್‌, ಪಿಡಿಎಫ್ ಜನರೇಟರ್‌ ಆಗಿರುತ್ತದೆ ಎಂದಿದ್ದಾರೆ.

ಅಭಯ ಯಲ್ಲಾಪುರದ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ಲೆಕ್ಕಪತ್ರ ವಿಭಾಗದ ಶಿರಸ್ತೇದಾರ್‌ ದಿನಕರ ಚಂದಾವರ, ದಿವ್ಯಾ ಚಂದಾವರ ದಂಪತಿಯ ಪುತ್ರ. ಅಭಯ ಸಾಧನೆಗೆ ಕಾಲೇಜು ಪ್ರಾಂಶುಪಾಲ ಡಾ| ದಿಲೀಪ್‌ ಕುಮಾರ್‌ ಕೆ., ನಿರ್ದೇಶಕ ಡಾ| ಕೆ.ಇ.ಪ್ರಕಾಶ್‌, ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

ಉತ್ತಮ ಸ್ಪಂದನೆ
ಆ್ಯಪ್‌ ಪ್ಲೇ ಸ್ಟೋರ್‌ನಲ್ಲಿ ಅಪ್‌ಲೋಡ್‌ ಆದ ಅನಂತರ ನನ್ನ ನಿರೀಕ್ಷೆಗಿಂತಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ. 11 ದಿನಗಳಲ್ಲಿ 600ಕ್ಕೂ ಅಧಿಕ ಡೌನ್‌ಲೋಡ್‌ಗಳಾಗಿವೆ. ಆ್ಯಪ್‌ ಉಚಿತವಾಗಿರುತ್ತದೆ. ಅದರಲ್ಲಿ ಜಾಹೀರಾತು ಕೂಡ ಇರುವುದಿಲ್ಲ. ಕ್ಯಾಮ್‌ ಸ್ಕ್ಯಾನರ್‌ಗೆ ಪರ್ಯಾಯವಾಗಿ ಬೇರೆ ಆ್ಯಪ್‌ನಿರೀಕ್ಷಿಸುತ್ತಿದ್ದವರಿಗೆ ಅನುಕೂಲವಾಗುತ್ತಿದೆ ಎಂಬ ತೃಪ್ತಿ ಇದೆ.
 - ಅಭಯ ಚಂದಾವರ, ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next