Advertisement

ವಿಶೇಷ ವರದಿ: ಫಲ್ಗುಣಿ ನದಿ ತೀರದಲ್ಲಿ ಸೈಕಲ್‌ಪಾತ್‌ ನಿರ್ಮಾಣಕ್ಕೆ ನಿರ್ಧಾರ

09:49 PM Sep 03, 2020 | mahesh |

ಮಹಾನಗರ: ನದಿ ಉತ್ಸವದ ಮೂಲಕ ಕರಾವಳಿಯಲ್ಲಿ ಜನಪ್ರೀತಿ ಗಳಿಸಿದ್ದ ಬಂಗ್ರಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಒಂದು ಕಿ.ಮೀ. ಉದ್ದದಲ್ಲಿ ಸೈಕಲ್‌ ಪಾತ್‌ ನಿರ್ಮಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಕರ್ನಾಟಕ ಟೂರಿಸಂ ವಿಷನ್‌ ಗ್ರೂಪ್‌ನಡಿ ಪ್ರವಾಸೋದ್ಯಮ ಕ್ಷೇತ್ರ ಬೆಳವಣಿಗೆಗೆ ರಾಜ್ಯ ಸರಕಾರ ಪ್ರೋತ್ಸಾಹ ನೀಡುತ್ತಿದ್ದು, ಅದರಂತೆಯೇ ಮಂಗಳೂರಿನಲ್ಲಿ ಸೈಕಲ್‌ ಪಾತ್‌ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತ ಡಿಪಿಆರ್‌ (ವಿಸ್ತೃತ ಯೋಜನ ವರದಿ)ಸದ್ಯದಲ್ಲೇ ಸಿದ್ಧವಾಗ ಲಿದ್ದು, ಪ್ರವಾಸೋದ್ಯಮ ಇಲಾಖೆಯು ರಾಜ್ಯ ಸರಕಾರಕ್ಕೆ ಸಲ್ಲಿಸಲಿದೆ. ಈ ಪ್ರದೇಶದಲ್ಲಿ ಸೈಕಲ್‌ ಪಾತ್‌ ನಿರ್ಮಾಣವಾದರೆ ಪರಿಸರ ಸ್ನೇಹಿ ಯೋಜನೆಗೆ ಉತ್ತೇಜನ ನೀಡಿದಂತಾಗುತ್ತದೆ.

Advertisement

1 ಕೋಟಿ ರೂ. ವೆಚ್ಚ
ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಬಂಗ್ರಕೂಳೂರು ಬಳಿ ಒಟ್ಟು 18 ಎಕ್ರೆ ಮೀಸಲಿರಿಸಲಾಗಿದೆ. ಅದರಲ್ಲಿ ಸುಮಾರು 16 ಎಕೆರೆ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆಗೆ ಈಗಾಗಲೇ ಹಸ್ತಾಂತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಟೂರಿಸಂ ಹಬ್‌ ಮಾಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಆ ಪ್ರದೇಶದಲ್ಲಿ ಸಮಗ್ರ ಪ್ರವಾಸೋದ್ಯಮ ಚಟುವಟಿಕೆಗಳು ನಡೆಯಲಿವೆ. ಅದರಂತೆ ಇದೀಗ ಮೊದಲ ಹಂತದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಸೈಕಲ್‌ ಪಾತ್‌ ನಿರ್ಮಾಣ ಯೋಜನೆ ರೂಪುಗೊಳ್ಳಲಿದೆ.

ವಾಕಿಂಗ್‌ ಜೋನ್‌ ನಿರ್ಮಾಣಕ್ಕೆ ಚಿಂತನೆ
ಬೀಚ್‌ ಪ್ರದೇಶ ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ತಣ್ಣೀರುಬಾವಿ ಕಡಲ ತೀರದಿಂದ ಬೆಂಗ್ರೆವರೆಗೆ ವಾಕಿಂಗ್‌ ಜೋನ್‌ ನಿರ್ಮಾಣಕ್ಕೂ ಚಿಂತನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆ ಸಭೆಯಲ್ಲಿ ಈ ಪ್ರಸ್ತಾವ ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯ ಸರಕಾರಕ್ಕೆ ಡಿಪಿಆರ್‌ ಸಲ್ಲಿಕೆ ಅದೇ ರೀತಿ, ಕೋಸ್ಟಲ್‌ ಸರ್ಕ್ನೂಟ್‌ ಯೋಜನೆ ಮುಖೇನ ಕರಾವಳಿ ಭಾಗದಲ್ಲಿ ಟೂರಿಸಂ ಕ್ಷೇತ್ರದ ಬೆಳವಣಿಗೆ ಮಾಡುವ ಉದ್ದೇಶ ರಾಜ್ಯ ಸರಕಾರಕ್ಕಿದೆ. ಈ ಯೋಜನೆಗೆ ತಣ್ಣೀರುಬಾವಿ ಮತ್ತು ಸಸಿಹಿತ್ಲು ಬೀಚ್‌ಗಳು ಈಗಾಗಲೇ ಆಯ್ಕೆಯಾಗಿದೆ. ಅದರಂತೆ ಪ್ರವಾಸೋದ್ಯಮ ಇಲಾಖೆಯು ಈಗಾಗಲೇ ಡಿಪಿಆರ್‌ಅನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಿದೆ. 10 ಕೋಟಿ ರೂ. ವೆಚ್ಚದಲ್ಲಿ ಸಸಿಹಿತ್ಲು ಬೀಚ್‌ ಮತ್ತು 5 ಕೋಟಿ ರೂ. ವೆಚ್ಚದಲ್ಲಿ ತಣ್ಣೀರುಬಾವಿ ಬೀಚ್‌ ಅಭಿವೃದ್ಧಿಯಾಗಲಿದೆ.

1 ಕಿ.ಮೀ. ವ್ಯಾಪ್ತಿ
ಕರ್ನಾಟಕ ಟೂರಿಸಂ ವಿಷನ್‌ ಗ್ರೂಪ್‌ನಡಿ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಯಾಗುತ್ತಿದೆ. ರಾಜ್ಯ ಸರಕಾರ ಕೂಡ ಉತ್ತೇಜನ ನೀಡುತ್ತಿದೆ. ಬಂಗ್ರಕೂಳೂರು ರಸ್ತೆಯಲ್ಲಿ ಸುಮಾರು 1 ಕಿ.ಮೀ.ವರೆಗೆ ಸೈಕ್ಲಿಂಗ್‌ ಪಾತ್‌ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ವಿಸ್ತೃತ ಯೋಜನ ವರದಿ ತಯಾರಾಗುತ್ತಿದೆ.
 - ಡಾ| ಭರತ್‌ ಶೆಟ್ಟಿ ವೈ., ಶಾಸಕರು

Advertisement

ಪ್ರವಾಸೋದ್ಯಮಕ್ಕೆ ಒತ್ತು
ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಾ ಗಿದೆ. “ಕೋಸ್ಟಲ್‌ ಸರ್ಕ್ನೂಟ್‌’ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕುರಿತು ಮರು ಡಿಪಿಆರ್‌ ಸಲ್ಲಿಸಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಕಾಸರಗೋಡು ಗಡಿ ಭಾಗದಿಂದ ಉತ್ತರ ಕನ್ನಡ ಜಿಲ್ಲೆಯವರೆಗೆ ಬೀಚ್‌ಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಗೊಳಿಸಲಾಗುವುದು.
 - ಸಿ.ಟಿ. ರವಿ,ಪ್ರವಾಸೋದ್ಯಮ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next