ತೆಕ್ಕಟ್ಟೆ: ತೆಕ್ಕಟ್ಟೆ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ ಜನಮನ ಸೂರೆಗೊಂಡಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಶಿಷ್ಟ ಕಸರತ್ತು, ನೃತ್ಯಗಳು ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟವು. ಬೆಂಕಿಯಲ್ಲಿ ಸೆಣಸಾಟ, ಅಕ್ಕಿ ಮುಡಿಯನ್ನು ಹಲ್ಲಿನಿಂದ ಕಚ್ಚಿ ಹಿಂಭಾಗಕ್ಕೆ ಎಸೆಯುವುದು. ಪುರಾತನ ಕಲೆ ತಾಲೀಮು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೈಕ್ ಸವಾರಿ, ಕರಾಟೆಯ ಕರಾಮತ್ತು, ಜಿಮ್ನಾಸ್ಟಿಕ್ ಇತ್ಯಾದಿಗಳು ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದವು. ಸುಮಾರು 45 ನಿಮಿಷಗಳ ಕಾಲ ವಿದ್ಯಾರ್ಥಿಗಳಿಂದ ಪ್ರದರ್ಶನ ನಡೆಯಿತು. ಈ ಮೂಲಕ ವಿದ್ಯಾರ್ಥಿಗಳ ಶಿಸ್ತು, ಪರಿಶ್ರಮಗಳನ್ನು ತೆರೆದಿಟ್ಟಿತು.
ಸುಪ್ತ ಪ್ರತಿಭೆಗಳ ಅನಾವರಣ
ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸುವ ಜತೆಗೆ ಕ್ರೀಡಾ ಚಟುವಟಿಕೆಗೂ ಆದ್ಯತೆ ನೀಡಿದಾಗ ಸುಪ್ತ ಪ್ರತಿಭೆಗಳ ಅನಾವರಣಗೊಳ್ಳಲು ಸಾಧ್ಯವಿದೆ.
– ಪುರುಷೋತ್ತಮ್ ಕಾಮತ್, ದೈಹಿಕ ಶಿಕ್ಷಣ ಶಿಕ್ಷಕರು