ಬೆಳಗಾವಿ : ಉತ್ತರ ಕರ್ನಾಟಕ ದೇವಸ್ಥಾನಗಳ ಅಭಿವೃದ್ದಿಗೆ ವಿಶೇಷ ಕಾರ್ಯಸೂಚಿ ರಚಿಸುವಂತೆ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರಾದ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.
ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ 3 ನೇ ರಾಜ್ಯ ಧಾರ್ಮಿಕ ಪರಿಷತ್ತಿನ 15 ನೇ ಸಭೆಯಲ್ಲಿ ಮಾತನಾಡಿದ ಅವರು,
ಬೆಳಗಾವಿ ಜಿಲ್ಲೆಯಲ್ಲಿರುವ ಪ್ರಮುಖ ಎ ದರ್ಜೆಯ ದೇವಸ್ಥಾನ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಪ್ರತಿವರ್ಷ ಆಗಮಿಸುತ್ತಾರೆ. ಭಕ್ತರುಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ದಿಯ ಕುರಿತು ಚರ್ಚೆ ನಡೆಸಿದರು. ಈಗಾಗಲೇ 3.58 ಕೋಟಿ ವೆಚ್ಚದಲ್ಲಿ ಬಳಿಗಾರ ಕಟ್ಟೆ ರಸ್ತೆಯ ಅಭಿವೃದ್ದಿ ಕಾರ್ಯದ ಬಗ್ಗೆ ಅಂದಾಜುಪಟ್ಟಿಯನ್ನು ತಯಾರಿಸಲಾಗಿದೆ. ಇದಕ್ಕೆ ಅಗತ್ಯವಿರುವ ಅನುದಾನದ ಬಿಡುಗಡೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು. ದೇವಾಲಯದ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುವಂತೆ ಸೂಚಿಸಿದ ಸಚಿವರು, ಘನತ್ಯಾಜ್ಯ ಮತ್ತು ದ್ರವತ್ಯಾಜ್ಯ ಸಂಸ್ಕರಣಾ ಯೋಜನೆಯ ಡಿಪಿಆರ್ ನ್ನು ಶೀಘ್ರವಾಗಿ ಸಿದ್ದಗೊಳಿಸಿ ಅನುಷ್ಠಾನಗೊಳಿಸಲು ಆದೇಶಿದರು.
ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲೊಂದಾಗಿರುವ ಮಹದೇಶ್ವರ ಬೆಟ್ಟದ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕಡಿಮೆ ಆದಾಯವಿರುವ ದೇವಸ್ಥಾನಗಳನ್ನು ದತ್ತು ತಗೆದುಕೊಳ್ಳುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಇದರಿಂದ ಕಡಿಮೆ ಆದಾಯವಿರುವ ದೇವಸ್ಥಾನಗಳ ಸೂಕ್ತ ನಿರ್ವಹಣೆ ಸಾಧ್ಯವಾಗಲಿದ್ದು, ಈ ಬಗ್ಗೆ ದತ್ತು ತಗೆದುಕೊಳ್ಳಬೇಕಾದ ಸಿ ದರ್ಜೆಯ ದೇವಸ್ಥಾನಗಳ ಪಟ್ಟಿಯನ್ನು ತಯಾರಿಸಿ ಪ್ರಾಧಿಕಾರಕ್ಕೆ ಕಳುಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳಿಂದ ಸಾಮಾನ್ಯ ಸಂಗ್ರಹಣ ನಿಧಿಗೆ ಪ್ರತಿವರ್ಷ ಶೇಕಡಾ 10 ರಷ್ಟು ವಂತಿಗೆಯನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಕಡಿಮೆ ಆದಾಯವಿರುವ ದೇವಸ್ಥಾನಗಳ ಅಭಿವೃದ್ದಿಗೆ ಬಳಸಲಾಗುತ್ತದೆ. ಈ ನಿಧಿಗೆ ವಂತಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕಾಗಿದೆ. ಪ್ರತಿವರ್ಷ ದೇವಸ್ಥಾನದ ಲೆಕ್ಕಪತ್ರ ಪರಿಶೀಲನೆಯಾಗಿ ಜೂನ್ ತಿಂಗಳ ಒಳಗಾಗಿ ಆಯುಕ್ತರಿಗೆ ಆಡಿಟ್ ವರದಿ ನೀಡದಿದ್ದಲ್ಲಿ ಆಯಾ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದರು.
ರಾಮದುರ್ಗದ ಗೊಡಚಿ ವೀರಭದ್ರ ದೇವಸ್ಥಾನ, ಬೆಳಗಾವಿಯ ಪಂಥಬಾಳೇಕುಂದ್ರಿ ಶ್ರೀ ದತ್ತ ದೇವಸ್ಥಾನ, ಶ್ರೀ ಪರಮಾರ್ಥನಿಕೇತನ ಹರಿಮಂದಿರ, ರಾಯಭಾಗದ ಮಹಾಕಾಳಿ (ಮಾಯಕ್ಕ) ದೇವಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳ ಅಭಿವೃದ್ದಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಸರಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಜರಾಯಿ ಆಯುಕ್ತರಾದ ರೋಹಿಣಿ ಸಿಂಧೂರಿ ಉಪಸ್ಥಿತರಿದ್ದರು.