Advertisement

ನೀರಿನ ಸಂಪರ್ಕ ಕಲ್ಪಿಸಲು ವಿಶೇಷ ಆದ್ಯತೆ

02:49 PM Apr 06, 2022 | Team Udayavani |

ಬಳ್ಳಾರಿ: ಜಲಜೀವನ್‌ ಮಿಷನ್‌ ಅಡಿ ಜಿಲ್ಲೆಯಲ್ಲಿರುವ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದಕ್ಕೆ ವಿಶೇಷ ಆದ್ಯತೆ ನೀಡುವಂತೆ ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಲಜೀವನ್‌ ಮಿಷನ್‌ ಅಡಿ ಮೊದಲ ಹಂತದಲ್ಲಿ 20613 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿತ್ತು. ಇದುವರೆಗೆ 15719 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಉಳಿದವುಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ವಿವರಿಸಿದರು.

ಇದನ್ನು ಆಲಿಸಿದ ಸಚಿವ ಶ್ರೀರಾಮುಲು, ಏ.30ರೊಳಗೆ ಜೆಜೆಎಂ ಅಡಿ ಕೈಗೆತ್ತಿಕೊಂಡ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜೆಜೆಎಂ ಮೊದಲ ಹಂತದಡಿ ಒಟ್ಟು 92 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಡಿ 15 ಕಾಮಗಾರಿಗಳು ರೇಟ್ರೋ ಫಿಲ್ಲಿಂಗ್‌ ವರ್ಕ್‌ ತೆಗೆದುಕೊಳ್ಳಲಾಗಿದ್ದು, ಅದರಡಿ ಕೆರೆ ಸಾಮರ್ಥ್ಯ ಕಡಿಮೆ ಇರುವುದನ್ನು ಹೆಚ್ಚಿಸುವುದು, ಹೂಳು ತೆಗೆಸುವುದು, ಹೊಸ ಕೆರೆ ನಿರ್ಮಿಸುವ ಹಾಗೂ ಇನ್ನಿತರ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ಸಭೆಗೆ ವಿವರಿಸಿದರು.

ಜೆಜೆಎಂ ಎರಡನೇ ಹಾಗೂ ಮೂರನೇ ಹಂತದ ಕಾಮಗಾರಿಗಳು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಸಚಿವ ಶ್ರೀರಾಮುಲು ಅವರು ಸೂಚನೆ ನೀಡಿದರು. ಮೂರು ಹಂತದಡಿ ತೆಗೆದುಕೊಳ್ಳದ ಕಾಮಗಾರಿಗಳನ್ನು ನಾಲ್ಕನೇ ಹಂತದಡಿ ಕೈಗೆತ್ತಿಕೊಂಡು ಜಿಲ್ಲೆಯಲ್ಲಿರುವ ಎಲ್ಲ ಮನೆಗಳಿಗೂ ನಳದ ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸ ಮಾಡಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಾಯ-ಸಹಕಾರಗಳನ್ನು ಒದಗಿಸುವುದಾಗಿ ಅವರು ತಿಳಿಸಿದರು.

Advertisement

ಜಿಲ್ಲೆಯಲ್ಲಿ 192628 ಮನೆಗಳಿದ್ದು, ಅವುಗಳಲ್ಲಿ ಜೆಜೆಎಂ ಮೂರು ಹಂತದಲ್ಲಿ 124282 ಮನೆಗಳಿಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಮೂರು ಹಂತಗಳಲ್ಲಿ ಸೇರದ 68 ಸಾವಿರ ಮನೆಗಳಿಗೆ ನಾಲ್ಕನೇ ಹಂತದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸಂಪರ್ಕ ಕಲ್ಪಿಸಲಾಗುವುದು ಎಂದರು. ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಡಿ ಜಿಲ್ಲೆಯಲ್ಲಿ 10505 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 104 ಕೋಟಿ ರೂ. ಖರ್ಚು ಮಾಡಲಾಗಿದೆ. ನರೇಗಾ ಮಾನವ ದಿನಗಳ ಸೃಜನೆಯಲ್ಲಿ ಶೇ.103ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಪಂ ಉಪಕಾರ್ಯದರ್ಶಿಯೊಬ್ಬರು ಸಚಿವರಿಗೆ ವಿವರಿಸಿದರು.

ಹಾಸ್ಟೆಲ್‌ಗ‌ಳು ಒದಗಿಸಲು ಕ್ರಮ

ಜಿಲ್ಲೆಯಲ್ಲಿ ಸಮಾಜಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಬಿಸಿಎಂ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚುವರಿ ವಸತಿ ನಿಲಯಗಳ ಅಗತ್ಯವಿರುವುದು ಗಮನಕ್ಕಿದ್ದು, ಎಷ್ಟೆಷ್ಟು ಅಗತ್ಯ ಎನ್ನುವುದರ ಪಟ್ಟಿ ಒದಗಿಸಿ ವಸತಿ ನಿಲಯಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ಸಚಿವ ಶ್ರೀರಾಮುಲು ಭರವಸೆ ನೀಡಿದರು. ಡಾ| ಬಾಬು ಜಗಜೀವನರಾಂ ಭವನ ನಿರ್ಮಾಣದ ಉಳಿದ ಕಾಮಗಾರಿ ಪೂರ್ಣಗೊಳ್ಳಲು 50 ಲಕ್ಷ ರೂ. ಅಗತ್ಯವಿದ್ದು, ಅದನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದ ಸಚಿವ ಶ್ರೀರಾಮುಲು ಅವರು ಬಳ್ಳಾರಿಯಲ್ಲಿರುವ ಬೃಹತ್‌ ವಾಲ್ಮೀಕಿ ಭವನದಲ್ಲಿ ಆಸನಗಳ ಅಳವಡಿಸುವಿಕೆ, ಧ್ವನಿವರ್ಧಕಗಳ ಸೌಲಭ್ಯ ಸೇರಿದಂತೆ ಇನ್ನಿತರೆ ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಇಲಾಖೆಯು 4 ಕೋಟಿ ರೂ. ಬಿಡುಗಡೆ ಮಾಡಿದ್ದು, ಅತ್ಯಂತ ಗುಣಮಟ್ಟದಿಂದ ಕೆಲಸ ಮಾಡುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿರುವ ಪ್ರಮುಖ ರಸ್ತೆಗಳ ದುರಸ್ತಿಗೆ ಸಂಬಂಧಿಸಿದಂತೆ ಅಂದಾಜು ಪಟ್ಟಿ ಸಿದ್ಧಪಡಿಸಿ ಒದಗಿಸಲು ಲೋಕೋಪಯೋಗಿ ಇಲಾಖೆಗೆ ಕಾರ್ಯನಿರ್ವಾಹಕ ಎಂಜನಿಯರ್‌ ಪೂಜಾರ್‌ಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಜೆ.ಲಿಂಗಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next