Advertisement

Theerthahalli: ಭೀಮನ ಅಮವಾಸ್ಯೆ ಪ್ರಯುಕ್ತ ಭೀಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

03:01 PM Jul 17, 2023 | Kavyashree |

ತೀರ್ಥಹಳ್ಳಿ: ಆಷಾಢ ಮಾಸದ ಕೊನೆಯ ದಿನವೇ ಭೀಮನ ಅಮಾವಾಸ್ಯೆ. ಇದಕ್ಕೆ ಜ್ಯೋತಿರ್ಭೀಮೇಶ್ವರ ವ್ರತವೆಂದು, ಕೊಡೆ ಅಮಾವಾಸ್ಯೆ ಎಂದೂ ಹಲವು ಕಡೆ ಕರೆಯುತ್ತಾರೆ.

Advertisement

ಆಷಾಢ ಮಾಸದಲ್ಲಿ ಯಾವುದೇ ಹಬ್ಬವಿರುವುದಿಲ್ಲ ಮತ್ತು ಯಾವುದೇ ಶುಭ ಕಾರ್ಯಗಳನ್ನು, ಮದುವೆ ಸಮಾರಂಭಗಳನ್ನು ನಡೆಸುವುದಿಲ್ಲ. ದೇವರ ಪ್ರತಿಷ್ಠೆ, ಉತ್ಸವ ಇತ್ಯಾದಿ ಕೆಲವು ಕಾರ್ಯಕ್ರಮಗಳನ್ನು ನಡೆಸುತ್ತಾರಷ್ಟೆ. ಭೀಮನ ಅಮಾವಸ್ಯೆಯಂದು ಶಿವ-ಪಾರ್ವತಿಯರನ್ನು ಭಕ್ತಿಯಿಂದ ಆರಾಧಿಸಿ ಕೃಪೆ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಮುಖ್ಯವಾಗಿ ಅಂದು ವಿವಾಹಿತ ಮಹಿಳೆಯರು ಪತಿಯ ಪಾದಗಳನ್ನು ತೊಳೆದು ಪೂಜೆ ಮಾಡುತ್ತಾರೆ. ಪತಿಗೆ ದೀರ್ಘಾಯುಷ್ಯ, ಆರೋಗ್ಯ, ಅಭಿವೃದ್ಧಿ, ಯಶಸ್ಸನ್ನು ಕರುಣಿಸಲೆಂದು ಶಿವ-ಪಾರ್ವತಿಯರಲ್ಲಿ ಬೇಡಿಕೊಳ್ಳುತ್ತಾರೆ.

ಈ ಭೀಮನ ಅಮವಾಸ್ಯೆಯಂದು ಪ್ರತಿ ವರ್ಷವೂ ಎಲ್ಲೆಡೆಯಂತೆ ತೀರ್ಥಹಳ್ಳಿಯಲ್ಲಿ ರಂಜದಕಟ್ಟೆಯ ಸಮೀಪದಲ್ಲಿರುವ ಭೀಮೇಶ್ವರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ.

ಹಿಂದಿನ ಒಂದು ವರ್ಷದಲ್ಲಿ ಮದುವೆಯಾದ ನವಜೋಡಿಗಳು ಬಂದು ದೇವರ ದರ್ಶನ ಪಡೆಯುವುದು ವಾಡಿಕೆಯಾಗಿದ್ದು, ಈ ಭೀಮೇಶ್ವರ ಲಿಂಗವನ್ನು

ದ್ವಾಪರಾ ಯುಗದಲ್ಲಿ ಭೀಮಸೇನರು ಪ್ರತಿಷ್ಟಾಪಿಸಿದ್ದರಿಂದ ಈ ದೇವರಿಗೆ ಭೀಮೇಶ್ವರ ಎಂಬ ಹೆಸರು ಬಂದಿರುತ್ತದೆ.

Advertisement

ಅದರ ಇತಿಹಾಸ ಗಮನಿಸಿದಾಗ ಸ್ಕಾಂದ ಮಹಾಪುರಾಣದ ಸಹ್ಯಾದ್ರಿ ಖಂಡದಲ್ಲಿ ಹಾಗೂ ತುಂಗಾತೀರ ಮಹಾತ್ಮೆಯ ಭಾಗದಲ್ಲಿ ಭೀಮಸೇತು ಅಥವಾ ಭೀಮನಕಟ್ಟೆಯ ಬಗ್ಗೆ ಉಲ್ಲೇಖಿಸಿದ್ದು, ಅದರ ಪ್ರಕಾರ ಪುರಾತನ ದೇವಾಲಯವು ಪುರಾಣ ಪ್ರಸಿದ್ಧ ದೇವಾಲಯವೂ ಆಗಿದೆ‌.

ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡದ ತುಂಗಾ ಮಹಾತ್ಮೆಯಲ್ಲಿ ಉಲ್ಲೇಖಿಸಿರುವಂತೆ ಭೀಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾಣುವ ನದಿ ತುಂಗಾ ಹಾಗೂ ಮಾಲತಿ ನದಿಗಳ ಸಂಗಮವಾಗಿ ಇದೆ. ಇಲ್ಲಿಯೇ ಭೀಮ ತುಂಗಾ ನದಿಗೆ ಕಟ್ಟೆ ನಿರ್ಮಿಸಿ ನದಿಯ ನೀರು ಮುಂದೆ ಹೋಗದಂತೆ ತಡೆದಿದ್ದು ಹಾಗೂ ಅದರ ಇತಿಹಾಸ ಹೀಗೆ ಇದೆ.

ಪಾಂಡವರು ತಮ್ಮ ವನವಾಸ ಕಾಲದಲ್ಲಿ ಈ ತುಂಗಾ ನದಿಯ ಎಡಭಾಗ ಪ್ರದೇಶವಾದ ಭುವನಗಿರಿ ಕವಲೇದುರ್ಗ ಎಂದು ಹೇಳಲಾಗುವ ಪ್ರದೇಶದಲ್ಲಿ ಬೀಡು ಬಿಟ್ಟಿರುತ್ತಾರೆ. ತುಂಗಾ ನದಿ ಹತ್ತಿರದಲ್ಲೇ ಹರಿಯುತ್ತಿದ್ದರೂ ಈ ಪ್ರದೇಶದ ಜನರಿಗೆ ನೀರಿನ ಬರವಾಗಿರುತ್ತದೆ.

ಆ ಸಮಯದಲ್ಲಿ ತಾವು ಪಟ್ಟ ನೀರಿನ ತೊಂದರೆಯನ್ನು ಗಮನಿಸಿದ ದ್ರೌಪದಿ ಭೀಮನನ್ನು ಕುರಿತು ಈ ನಮ್ಮ ವನವಾಸ ಕಾಲದಲ್ಲಿ ಇಲ್ಲಿ ಬೀಡು ಬಿಟ್ಟಿದ್ದ ಕುರುಹಾಗಿ ಸಮೀಪದಲ್ಲಿ ಹರಿಯುತ್ತಿರುವ ನದಿಗೆ ಅಡ್ಡಕಟ್ಟೆ ಹಾಕಿ ನೀರು ಇತ್ತ ಬರುವಂತೆ ಮಾಡು ಎಂದು ತಿಳಿಸುತ್ತಾಳೆ.

ಬೆಳಗಾಗುವುದರೊಳಗಾಗಿ ಕವಲೇದುರ್ಗಕ್ಕೆ ನೀರು ಹರಿಯುವಂತೆ ಮಾಡುತ್ತೇನೆ ಎಂದು ಭೀಮ ಪ್ರತಿಜ್ಞೆ ಮಾಡಿ ತುಂಗಾ ನದಿಗೆ ಕಟ್ಟೆ ಹಾಕಲು ಪ್ರಾರಂಭಿಸಿ ನೀರು ಮುಂದೆ ಹೋಗದಂತೆ ತಡೆ ಒಡ್ಡುತ್ತಾನೆ. ಇದನ್ನರಿತ ಪಾಂಡವ ಪ್ರಿಯನಾದ ಶ್ರೀಕೃಷ್ಣನು ಆ ಅಣೆಕಟ್ಟನ್ನು ನಿರ್ಮಿಸುವುದರಿಂದ ಆಗುವ ಅಪಾಯವನ್ನರಿತನು.

ಇದರಿಂದ ಅನತಿ ದೂರದಲ್ಲಿಯೇ ದೂರ್ವಾಸಮುನಿಗಳು ತುಂಗಾನದಿಯ ಮಧ್ಯದ ಗುಡ್ಡದಲ್ಲಿ ತಪಸ್ಸನ್ನು ಆಚರಿಸುತ್ತಿದ್ದರು. ತಪಸ್ಸಿನ ಜಾಗದಲ್ಲಿ ನೀರು ಹರಿಯುವುದಿಲ್ಲ. ಇದರಿಂದ ದೂರ್ವಾಸಮುನಿಗಳ ಸ್ನಾನ ಹಾಗೂ ಇತರ ಅಹ್ನಿತ ಕೆಲಸಗಳಿಗೆ ತೊಂದರೆಯುಂಟಾಗಿ ದೂರ್ವಾಸರು ಕೋಪಿತಗೊಂಡು ಭೀಮಸೇನರಿಗೆ ಶಾಪ ಕೊಡಬದುದೆಂದು ಗ್ರಹಿಸಿ ಹಾಗೂ ನದಿಯ ತಿರುವಿನಿಂದ ಅನೇಕ ರೀತಿಯ ವೈಪರೀತ್ಯಗಳುಂಟಾಗಿ ನದಿಯನ್ನಾಶ್ರಿಸಿ ಇರುವ ಜೀವ ಸಂಕುಲಗಳಿಗೆ ತೊಂದರೆ ಉಂಟಾಗುವುದನ್ನು ಅರಿತ ಶ್ರೀ ಕೃಷ್ಣನು ಆ ರಾತ್ರಿಯೇ ಕೋಳಿಯ ಸ್ವರದಲ್ಲಿ ಗಟ್ಟಿಯಾಗಿ ಕೂಗ ತೊಡಗಿದನು.

ಶ್ರೀ ಕೃಷ್ಣ ಪರಮಾತ್ಮ ಕೋಳಿಯ ಸ್ವರದಲ್ಲಿ ಕೂಗಿದ ಸ್ಥಳವನ್ನು ಕೋಳಿ ಕಾಲು ಗುಡ್ಡ ಎಂದು ಕರೆಯುತ್ತಾರೆ. ಅದು ಈಗಲೂ ಪಟ್ಟಣದಲ್ಲಿಯೇ ಇದ್ದು ಈಗಲೂ ಅದನ್ನು ನೋಡಬಹುದಾಗಿದೆ.

ಹೀಗೆ ಕೋಳಿ ಕೂಗನ್ನು ಕೇಳಿದಾಕ್ಷಣ ಭೀಮ ಸೇನರು ಸೂರ್ಯೋದಯ ಸಮೀಪಿಸಿತೆಂದು ತಿಳಿದು ಕಟ್ಟೆಯನ್ನು ಕಟ್ಟುವ ಕಾರ್ಯವನ್ನು ನಿಲ್ಲಿಸಿಬಿಟ್ಟರು. ಇದೆಲ್ಲಾ ಇಷ್ಟು ಬೇಗನೆ ಹೇಗೆಂದು ವಿಚಾರ ಮಾಡಿದ ಭೀಮಸೇನರು ಮನಸಾ ಯೋಚಿಸಿ ಈ ನನ್ನ ಕಾರ್ಯವನ್ನು ಭಂಗ ಮಾಡಲೆಂದೇ ಯಾರೋ ಮಾಡಿದ ಕುತಂತ್ರ ಇದು ಎಂದು ಸುತ್ತಲೂ ನೋಡುತ್ತಿದ್ದಂತೆ ಶ್ರೀ ಕೃಷ್ಣನು ಭೀಮನ ಎದುರಲ್ಲಿ ಪ್ರತ್ಯಕ್ಷವಾಗಿ, ಭೀಮ ಈ ನಿನ್ನ ಸಾಹಸ ಬಿಡು ಇದು ಬ್ರಹ್ಮಸೃಷ್ಠಿ. ಜೀವ ನದಿಯಾಗಿರುವ ಈ ನದಿ ನೀರನ್ನು ಅನೇಕರು ಅವಲಂಬಿಸಿದ್ದಾರೆ. ತೊಂದರೆ ಕೊಡುವುದು ಮಹಾಪಾಪ ಎನ್ನಲು ನಾವು ಉಳಿದುಕೊಂಡಿರುವ ಸ್ಥಳಕ್ಕೆ ನೀರು ಬರುವುದಾದರೂ ಹೇಗೆ ಕೃಷ್ಣ ಎಂದು ಭೀಮಸೇನರು ಪ್ರಶ್ನಿಸಿದರು.

ಆಗ ಶ್ರೀ ಕೃಷ್ಣನು ನೀನಿರುವ ಸ್ಥಳದಲ್ಲಿ ನಿನ್ನ ಗದೆಯಿಂದ ಭೂಮಿಗೆ ಹೊಡಿ ಅಲ್ಲಿ ನೀರು ಚಿಮ್ಮುತ್ತದೆ ಎಂದನು. ಭೀಮ ಸೇನರಿಗೆ ವಾಸ್ತವದ ಸತ್ಯ ತಿಳಿಯಿತು. ನಿರ್ಮಾಣ ಕಾರ್ಯವನ್ನು ಮುಂದುವರಿಸಲಿಲ್ಲ. ಅಲ್ಲಿಯವರೆಗೆ ನಿರ್ಮಿಸಿದ ಕಟ್ಟೆಯ ಮೂರು ಸ್ಥಳಗಳಲ್ಲಿ ಶ್ರೀ ಕೃಷ್ಣನು ತನ್ನ ಕರಸ್ಪರ್ಷದಿಂದ ಪ್ರವಾಹ ಮುಂದೆ ಪ್ರವಹಿಸಲು ಅನುವು ಮಾಡಿ ಕೊಟ್ಟನು. ಇದನ್ನು ಈಗಲೂ ನೋಡಬಹುದಾಗಿದೆ.

ಆ ಮೂರು ಪ್ರವಾಹದ ಹರಿವುಗಳು ಕಟ್ಟೆಯಿಂದ ಕೆಳಗೆ ಹರಿಯುತ್ತಿದ್ದು, ಇದನ್ನು ಗಂಗಾ, ಯಮುನಾ, ಸರಸ್ವತಿ, ನದಿಗಳ ಸಂಗಮದಲ್ಲಿ ಸ್ನಾನ ಮಾಡಿದಷ್ಟೇ ಪುಣ್ಯ ಲಭಿಸುವುದೆಂದು ತುಂಗಾ ಮಹಾತ್ಮೆಯಲ್ಲಿ ತಿಳಿಸಲಾಗಿದೆ.

ಆ ನಂತರ ಈ ಜಾಗ ತುಂಗಾ, ಮಾಲತಿ ಸಂಗಮ ಸನ್ನಿಧಿಯಾದ್ದರಿಂದ ನದಿಯ ಎಡದಡದಲ್ಲಿ ಶ್ರೀ ಕೃಷ್ಣನ ಪೌರೋಹಿತ್ಯದಲ್ಲಿ ಈಶ್ವರ ಲಿಂಗವನ್ನು ಸ್ಥಾಪಿಸಿದನು. ಈ ಸ್ಥಾನವೇ  ಭೀಮೇಶ್ವರ ಸ್ವಾಮಿ ದೇವಸ್ಥಾನವಾಗಿದ್ದು, ಸಾಕ್ಷಾತ್ ಭೀಮನೇ ಈ ಲಿಂಗವನ್ನು ಸ್ಥಾಪಿಸಿದ್ದರಿಂದ ಭೀಮೇಶ್ವರ ಎಂಬ ಹೆಸರು ಬಂದಿತು.

ಅಲ್ಲದೇ ಶ್ರೀ ಕೃಷ್ಣನೇ ಯಾರು ಈ ತುಂಗಾ ತೀರ್ಥದಲ್ಲಿ ಭಕ್ತಿ ಭಾವದಿಂದ ಸ್ನಾನವನ್ನು ಮಾಡುತ್ತಾರೋ ಮತ್ತು ಭೀಮೇಶ್ವರನನ್ನು ಭಕ್ತಿಯಿಂದ ಪೂಜಿಸುತ್ತಾರೆಯೋ ಮತ್ತು ದರ್ಶನ ಪಡೆಯುತ್ತಾರೆಯೋ ಅವರು ಸರ್ವ ಪಾಪಗಳಿಂದ ಬಿಡುಗಡೆ ಹೊಂದುತ್ತಾರೆ ಎಂದು ಸಾರಿರುವನು.

ಇನ್ನು ಶ್ರೀ ಕೃಷ್ಣ ತೀಳಿಸಿದಂತೆ ಭೀಮನು ತಾವು ನೆಲೆಸಿದ್ದ ಸ್ಥಳಕ್ಕೆ ಹೋಗಿ ಗದೆಯಿಂದ ಹೊಡೆದಿದ್ದು, ಆ ಸ್ಥಳದಲ್ಲಿ ನೀರು ಉಕ್ಕಿ ಹರಿಯಿತು. ಇದನ್ನು ಭೀಮನ ಕುಂಡ ಎಂದು ಕರೆಯುವರು. ಹಾಗೆಯೇ ಗದೆಯಿಂದ ಹೊಡೆದಾಗ ಬಂದ ಜಲವಾದ್ದರಿಂದ ಗದಾತೀರ್ಥ ಎಂದೂ ಕರೆಯುತ್ತಾರೆ.

ಈ ಸ್ಥಳ ಭೀಮನ ಕಟ್ಟೆಯಿಂದ ಸುಮಾರು ಒಂಭತ್ತು ಕಿಲೋಮೀಟರ್ ದೂರದ ಕವಲೇದುರ್ಗ ಗುಡ್ಡದ ಮೇಲೆ ಇಂದಿಗೂ ಕಾಣಬಹುದು. ಹಾಗೆಯೇ ದುರ್ವಾಸ ಮುನಿಗಳ ತುಂಗಾ ನದಿಯ ಉತ್ತರ ಭಾಗದಲ್ಲಿ ಅಂದರೆ ಭೀಮನಕಟ್ಟೆಯಿಂದ ಸ್ವಲ್ಪ ಕೆಳ ಭಾಗದಲ್ಲಿ ವಾಸಿಸುತ್ತಿದ್ದರು. ಈ ಸ್ಥಳವನ್ನು ದುರ್ವಾಸಮುನಿ ಗುಡ್ಡ ಎಂದೇ ಕರೆಯಲಾಗುತ್ತದೆ ಹಾಗೂ ಗುಡ್ಡದ ಪಕ್ಕದಲ್ಲಿರುವ ಊರನ್ನು ದುರ್ವಾಸಪುರ ಎಂದು ಕರೆಯುತ್ತಾರೆ.

ದೂರ್ವಾಸರು ಇದ್ದ ಸ್ಥಳದಲ್ಲಿರುವ ವೃಕ್ಷಗಳ ಬೇರುಗಳು ಜಡೆಯಂತೆ ಹೆಣೆದುಕೊಂಡಿದ್ದು ಇದನ್ನು ದೂರ್ವಾಸರ ಜಡೆ ಎನ್ನುತ್ತಾರೆ. ಈ ಸ್ಥಳದಲ್ಲಿ ಬಿದಿರಿನ ಮೊಳೆಗಳಿದ್ದು ಈ ಬಿದಿರನ್ನು ಸನ್ಯಾಸಿಗಳ ದಂಡವಾಗಿ ಉಪಯೋಗಿಸುತ್ತಾರೆ. ಈ ದುರ್ವಾಸಮುನಿಗಳ ಗುಡ್ಡವು ನದಿಯ ಮಧ್ಯಭಾಗದಲ್ಲಿದ್ದು ಮಳೆಗಾಲದ ಐದು ತಿಂಗಳು ದ್ವೀಪವಾಗಿರುತ್ತದೆ.

ಸಾವಿರಾರು ವರ್ಷಗಳಿಂದಲೂ ನದಿಯ ಪ್ರವಾಹದ ರಭಸಕ್ಕೆ ಈ ಗುಡ್ಡವು ಕೊಚ್ಚಿಕೊಂಡು ಹೋಗದೇ ಇರುವುದು ಒಂದು ವಿಶೇಷ. ಭೀಮನಕಟ್ಟೆಯಲ್ಲಿರುವ ಶ್ರೀ ಭೀಮೇಶ್ವರ ಲಿಂಗವನ್ನು ದ್ವಾಪರ ಯುಗದಲ್ಲಿ ಭೀಮ ಪ್ರತಿಷ್ಠಾಪಿಸಿದ ಸ್ವಲ್ಪ ಸಮಯದ ನಂತರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಸಮರ್ಪಕವಾಗಿ ನಡೆಯುತ್ತಿರಲಿಲ್ಲ.

ಆ ಸಮಯದಲ್ಲಿ ಅಲ್ಲಿಗೆ ಒಬ್ಬ ಬ್ರಹ್ಮಚಾರಿ ಬಂದು ನೆಲೆಸಿ ಭೀಮೇಶ್ವರನ ಆರಾಧನೆಯನ್ನು ಮಾಡುತ್ತಾ ಬರುತ್ತಾನೆ‌. ಯಾರಾದರೂ ಆಹಾರವನ್ನು ತಂದು ಕೊಟ್ಟರೆ ಸೇವಿಸುತ್ತಾ ಕಾಲ ಕಳೆಯುತ್ತಿರುವಾಗ ಇಲ್ಲಿನ ಗ್ರಾಮಸ್ಥರೆಲ್ಲರೂ ಸೇರಿ ಈಶ್ವರ ಪೂಜೆಯನ್ನು ಗೃಹಸ್ಥರಾದವರೇ ಮಾಡಬೇಕು. ಬ್ರಹ್ಮಚಾರಿಯಾಗಿ ಪೂಜೆ ಮಾಡುವುದು ಶಾಸ್ತ್ರ ನಿಷಿದ್ಧ ಕಾರ್ಯವೆಂದು ತಿಳಿಸುತ್ತಾರೆ.

ಆಗ ಬ್ರಹ್ಮಚಾರಿಯು ವಿವಾಹವಾಗಿ ಹೆಂಡತಿ ಮಕ್ಕಳನ್ನು ಸಾಕಲು ನಾನು ಆರ್ಥಿಕವಾಗಿ ಸಶಕ್ತನಲ್ಲದಿದ್ದರಿಂದ ವಿವಾಹ ಸಾಧ್ಯವಿಲ್ಲವೆಂದು ತಿಳಿಸುತ್ತಾನೆ. ಆಗ ಆ ಊರಿನ ಗ್ರಾಮಸ್ಥರು ಒಂದಿಷ್ಟು ಜಾಗವನ್ನು ಕೊಟ್ಟು ಮನೆಯನ್ನು ಕಟ್ಟಿಕೊಡುತ್ತೇವೆ ಎಂದು ಹೇಳಿದರು. ಆಗ ಬ್ರಹ್ಮಾಚಾರಿ ಒಪ್ಪಿ ವಿವಾಹವಾಗುತ್ತಾರೆ. ಕಾಲಾನಂತರದಲ್ಲಿ ಮಕ್ಕಳಾಗಿ, ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ನಂತರ ಸನ್ಯಾಸ ಸ್ವೀಕಾರವನ್ನು ಮಾಡುತ್ತಾರೆ.

ಆ ಕಾಲದಲ್ಲಿ ಕೆಳದಿ ಮತ್ತು ಕವಲೇದುರ್ಗದ ನಾಯಕರುಗಳು ಭೀಮನಕಟ್ಟೆಯ ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಿರುವುದನ್ನು ಗಮನಿಸಿಬಹುದು.

ಈ ಸಂದರ್ಭದಲ್ಲಿ ಇಲ್ಲಿನ ಅರ್ಚಕರು ಅರಸರಲ್ಲಿ ಭೀಮೇಶ್ವರನಿಗೆ ಒಂದು ಶಿಲಾಮಯ ದೇವಸ್ಥಾನವನ್ನು ಕಟ್ಟಬೇಕೆಂದು. ಇದರಿಂದ ನಾಡಿಗೆ ಭೀಮೇಶ್ವರನ ಅನುಗ್ರಹವಾಗುತ್ತದೆ ಎಂದು ಹೇಳಿದಾಗ ಅದಕ್ಕೆ ಒಪ್ಪಿದ ಅರಸರು ಸುಮಾರು ಹದಿನಾರು ಹದಿನೇಳನೆಯ ಶತಮಾನದಲ್ಲಿ ಭೀಮೇಶ್ವರನಿಗೆ ಶಿಲಾಮಯ ದೇವಸ್ಥಾನವನ್ನು ಕಟ್ಟಿಸುತ್ತಾರೆ.

ಅದರಂತೆ ಒಂದಿಷ್ಟು ಕೃಷಿ ಭೂಮಿಯನ್ನು ಉಂಬಳೆಯಾಗಿ ನೀಡುತ್ತಾರೆ‌‌. ತದನಂತರ ಆ ಬ್ರಹ್ಮಚಾರಿಯಾಗಿ ಬಂದಂತಹ ಅರ್ಚಕರು ಗೃಹಸ್ಥರಾಗಿ ನಂತರ ಸನ್ಯಾಸಿಯಾಗಿ ಕಾಲವನ್ನು ಹೊಂದುತ್ತಾರೆ.

ಅವರು ಸನ್ಯಾಸಿಯಾಗಿದ್ದರಿಂದ ಭೀಮೇಶ್ವರ ದೇವಸ್ಥಾನದ ಎಡಭಾಗದಲ್ಲಿ ಸಮಾಧಿಯನ್ನು ಮಾಡಿ ವೃಂದಾವನವನ್ನು ಕಟ್ಟುತ್ತಾರೆ‌ ಈಗಲೂ ಇಪ್ಪತ್ತೊಂದನೆಯ ಶತಮಾನದಲ್ಲೂ ಇವರ ವಂಶಜರೇ ತಲೆತಲಾಂತರಗಳಿಂದ ದೇವರ ಅರ್ಚನೆಯನ್ನು ಮಾಡುತ್ತಾ ಬಂದಿರುವುದು ದಾಖಲೆಗಳಲ್ಲಿ ನೋಡಬಹುದಾಗಿದೆ.

ರಂಜದಕಟ್ಟೆ ಮುಳುಬಾಗಿಲು ಮುಖಾಂತರ ಭೀಮನಕಟ್ಟೆ ರಸ್ತೆಯಲ್ಲಿ ಸುಂದರವಾದ ನದಿ ಪಕ್ಕದಲ್ಲಿ ಐದು ಈಶ್ವರ ದೇವಸ್ಥಾನಗಳನ್ನು ನೋಡಬಹುದಾಗಿದೆ. ಅವುಗಳೆಂದರೆ ಗಂಗಾ ವಿಶ್ವೇಶ್ವರ, ಉಮಾ ಮಹೇಶ್ವರ, ಗಂಗಾಧರೇಶ್ವರ, ಭೀಮೇಶ್ವರ, ಶಂಕರನಾರಾಯಣ ಹೀಗೆ ಪಂಚಲಿಂಗೇಶ್ವರನ ದರ್ಶನ ಪಡೆಯಬಹುದಾಗಿದ್ದು ಇವುಗಳಲ್ಲಿ ಭೀಮನಿಂದ ಪ್ರತಿಷ್ಠಾಪನೆಗೊಂಡ ಭೀಮೇಶ್ವರ ದೇವಾಲಯವು ಪ್ರಸಿದ್ಧಿಯಾಗಿದೆ.

ಭೀಮನಕಟ್ಟೆ ಗ್ರಾಮವು ಬಹಳ ಪುರಾತನವಾಗಿದ್ದು ಬಹಳ ಪ್ರಾಚೀನವಾದ ಮಾಧ್ವ ಪರಂಪರೆಯ ಭೀಮಸೇತು ಮಠವೃಂದವಿದೆ. ಈ ಮಠವು ಪಾಂಡವ ಜೇಷ್ಠ ಯುಧಿಷ್ಟಿರನ ಮರಿಮಗ ಜನಮೇಜರಾಯನು ದುರ್ವಾಸಮುನಿಗಳ ಪರಂಪರೆಯಲ್ಲಿ ಬಂದ ಕೈವಲ್ಯನಾಥ ತೀರ್ಥರಿಗೆ ಲೋಕಕಲ್ಯಾಣಕ್ಕಾಗಿ ಜಪತಪಾದಿಗಳಲ್ಲಿ ನಿರತರಾಗಿರಲು ಭೂದಾನವನ್ನು ಕೊಟ್ಟಿರುವುದು ಕಂಡು ಬರುತ್ತದೆ. ಈ ಪ್ರದೇಶವು ಮುನಿವೃಂದ‌ ಭೀಮನಕಟ್ಟೆಯಾಗಿದೆ.

ಈ ಮಠದಲ್ಲಿ ಕೈವಲ್ಯ ತೀರ್ಥ ಪರಂಪರೆಯ ಯತಿಗಳು ಇದ್ದು ಧರ್ಮ ಪ್ರಹಾರದಲ್ಲಿ ತೊಡಗಿರುತ್ತಾರೆ. ಭೀಮನಕಟ್ಟೆಯ ಪ್ರಾರಂಭದಲ್ಲಿಯೇ ದ್ವಾರಕ ಸಂಸ್ಥಾನದ ಮುಳುಬಾಗಿಲು ಮಠವು ಇದ್ದು ಇಲ್ಲೂ ಕೂಡ ಯತಿಗಳು ಇದ್ದು ಗೋಪಾಲಕೃಷ್ಣ ದೇವರ ಅರ್ಚಿಸುತ್ತಾ ಧರ್ಮ ಪ್ರಚಾರದಲ್ಲಿ ತೊಡಗಿದ್ದರು. ಪರಮಪೂಜ್ಯ ಶ್ರೀ ಶ್ರೀ ರಘುವೇಂದ್ರತೀರ್ಥಶ್ರೀಪಾದರು ಇಂದಿನ ಭೀಮನ ಕಟ್ಟೆ ಮಠದ ಪೀಠಾಧಿಪತಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next