Advertisement

ಮಸ್ತಕಾಭಿಷೇಕ ವೇಳೆ ವಿಶೇಷ ವರ್ಣಚಿತ್ರ ಪ್ರದರ್ಶನ

01:07 PM Nov 30, 2017 | |

ಧಾರವಾಡ: ಸುಮಾರು ನಾಲ್ಕು ದಶಕಗಳ ಹಿಂದೆಯೇ ಶ್ರವಣಬೆಳಗೊಳದ ಬಸದಿಗಳ ಗೋಡೆಗಳ ಮೇಲಿದ್ದ ಚಿತ್ರಗಳನ್ನು ಬಿಡಿಸಿ ಸಂಗ್ರಹಿಸಿಡಲಾಗಿದ್ದು, ಮಸ್ತಕಾಭಿಷೇಕ ಸಂದರ್ಭದಲ್ಲಿ ಈ ಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗುವುದು ಎಂದು ಲಲಿತ ಕಲಾ ಅಕಾಡೆಮಿ ನೂತನ ಅಧ್ಯಕ್ಷೆ ಎಂ.ಜೆ. ಕಮಲಾಕ್ಷಿ ಹೇಳಿದರು. 

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಕಲಾಮಂಡಳ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಶ್ರವಣಬೆಳಗೊಳದ ಬಸದಿಗಳ ಗೋಡೆಗಳ ಮೇಲಿದ್ದ ಜೈನ ಸಮುದಾಯದ ಇತಿಹಾಸ ಸೇರಿದಂತೆ ಜೈನರ ವಿಶೇಷತೆ ತಿಳಿಸುವ 100ಕ್ಕೂ ಹೆಚ್ಚು ಚಿತ್ರಗಳನ್ನು ವರ್ಣಚಿತ್ರಗಳಲ್ಲಿ ಸೆರೆಹಿಡಿಯಲಾಗಿದೆ. 

ಮಸ್ತಾಕಾಭಿಷೇಕದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಈ ಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲು ಯೋಜನೆ ಇದೆ ಎಂದರು. ಅಕಾಡೆಮಿಯಿಂದ ತಿಂಗಳ ಚಿತ್ರವೆಂಬ ಕಾರ್ಯಕ್ರಮ ವರ್ಷದ 12 ತಿಂಗಳು ನಡೆಯಲಿದೆ. ಐತಿಹಾಸಿಕ ಮಹತ್ವದ ಸ್ಥಳಗಳ ಚಿತ್ರಗಳನ್ನು ಸಂಗ್ರಹಿಸುವುದು ಹಾಗೂ ಅವುಗಳನ್ನು ಡಿಜಿಟಲೀಕರಣ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ.

ಪಾಶ್ಚಾತ್ಯ ಶೈಲಿ ಚಿತ್ರಗಳ ಬದಲು ಇತಿಹಾಸ ಸಾರುವ ಸಾಕಷ್ಟು ಸ್ಥಳೀಯ ಅಂಶಗಳು ನಮ್ಮಲ್ಲಿವೆ. ಈ ಬಗ್ಗೆ ಚಿತ್ರಕಲಾವಿದರು ಗಮನ ಹರಿಸಬೇಕಿದೆ ಎಂದರು. ಚಿತ್ರಕಲಾ ಪರಿಷತ್‌ ಹುಟ್ಟುವ ಮೊದಲೇ ಶತಮಾನದ ಅಂಚಿನಲ್ಲಿರುವ ಕಲಾಮಂದಿರ ಅಸ್ತಿತ್ವದಲ್ಲಿದ್ದು, ನಿರೀಕ್ಷೆಯಂತೆ ಬೆಳೆಯಲಿಲ್ಲ.

ಸದ್ಯ ರಾಜ್ಯದಲ್ಲಿ 400ಕ್ಕೂ ಹೆಚ್ಚು ಚಿತ್ರಕಲಾ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿದ್ದು, ಅದ್ಭುತ ಕಲಾವಿದರು ಬೆಳೆಯುತ್ತಿದ್ದಾರೆ. ತಂತ್ರಜ್ಞಾನ ಹಾಗೂ ಆಧುನಿಕತೆ ಬೆಳೆದರೂ ಕೈ ಕೌಶಲಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ ಎಂದು ಹೇಳಿದರು. 

Advertisement

ಶಾಲೆಯಲ್ಲಿ ಇರಲಿ ಚಿತ್ರಕಲೆ: ಹಿರಿಯ ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ನಾವು ಶಾಲೆ ಕಲಿಯುವ ಸಂದರ್ಭದಲ್ಲಿ ಚಿತ್ರಕಲೆ, ತೋಟಗಾರಿಕೆ, ಸಂಗೀತದ ತರಗತಿಗಳು ಇದ್ದವು. ಆದರೆ, ಇದೀಗ ಈ ವಿಷಯಗಳಿಗೆ ತಕ್ಕ ಮಹತ್ವ ನೀಡುತ್ತಿಲ್ಲ.

ರಾಜ್ಯ ಸರ್ಕಾರ ಚಿತ್ರಕಲಾ ಶಿಕ್ಷಕರನ್ನು ನೇಮಿಸಿಕೊಂಡು ಕಡ್ಡಾಯವಾಗಿ ಮಕ್ಕಳಿಗೆ ಚಿತ್ರಕಲಾ ಶಿಕ್ಷಣ ನೀಡಬೇಕು. ಅಕಾಡೆಮಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು. ಕಲಾಮಂಡಳದ ವತಿಯಿಂದ ಎಂ.ಜೆ. ಕಮಲಾಕ್ಷಿ ಅವರನ್ನು ಡಾ| ಮದನಮೋಹನ ತಾವರಗೇರಿ, ಗಾಯಿತ್ರಿ ದೇಸಾಯಿ,

-ಡಾ|ಮಾಲತಿ ಪಟ್ಟಣಶೆಟ್ಟಿ ಸನ್ಮಾನಿಸಿದರು. ಕುಮುದ್‌ ತಾವರಗೇರಿ, ಕಲಾಮಂಡಳ ಕಾರ್ಯದರ್ಶಿ ಮಧು ದೇಸಾಯಿ, ಕಲಾವಿದರಾದ ಎಂ.ಜೆ. ಬಂಗಲೆವಾಲೆ, ಎಸ್‌.ಎಂ. ಲೋಹಾರ, ಎಸ್‌.ಕೆ. ಪತ್ತಾರ, ಅಭಿಷೇಕ ದೇಸಾಯಿ, ಚಿಕ್ಕಮಠ, ಬಿ.ಎಚ್‌. ಕುರಿಯವರ, ಬಿ.ಎನ್‌. ಕುಂಬಾರ, ಶಶಿಧರ ನರೇಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next