ಕೋವಿಡ್ 19 ಸೋಂಕಿನ ವಿರುದ್ಧ ಹೋರಾಟ ನಡೆಸಲು ವಿಶ್ವದ ರಾಷ್ಟ್ರಗಳು ಸಜ್ಜಾಗಿವೆ. ವಿಶೇಷವಾಗಿ ಅಮೆರಿಕ, ಬ್ರಿಟನ್ ಬಹುಕೋಟಿ ಮೊತ್ತ ಬಿಡುಗಡೆ ಮಾಡಿವೆ.ಅಮೆರಿಕ ಸರಕಾರ ಬಹು ಕೋಟಿ ಡಾಲರ್ ಮೊತ್ತವನ್ನು ವೈರಸ್ ವಿರುದ್ಧ ಹೋರಾಟಕ್ಕೆ ಬಳಕೆ ಮಾಡಲಿದೆ. ಆದರೆ ಅವರು ಖಚಿತ ಮೊತ್ತದ ವಿವರ ನೀಡಿಲ್ಲ. ಆದರೆ “ದ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿರುವ ಪ್ರಕಾರ 850 ಬಿಲಿಯ ಅಮೆರಿಕನ್ ಡಾಲರ್ ಮೊತ್ತದ ನೆರವು ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದೆ. ಇದರ ಜತೆಗೆ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ತಮ್ಮ ತಮ್ಮ ಗಡಿ ಮುಚ್ಚಿವೆ.
330 ಬಿಲಿಯನ್ ಪೌಂಡ್
ಸೋಂಕಿನ ವಿರುದ್ಧ ಹೋರಾಟ ನಡೆಸಲು ಬ್ರಿಟನ್ ಸರಕಾರ 330 ಬಿಲಿಯನ್ ಪೌಂಡ್ ಮೊತ್ತವನ್ನು ಘೋಷಿಸಿದೆ. ಹಣಕಾಸು ಸಚಿವ ರಿಷಿ ಸುನಕ್ ಈ ಅಂಶ ಪ್ರಕಟಿಸಿದ್ದಾರೆ. ಫ್ರಾನ್ಸ್ ಕೂಡ 45 ಬಿಲಿಯನ್ ಯೂರೋಗಳನ್ನು ಪ್ರಕಟಿಸಿದೆ.
ಎಡಿಬಿ ನೆರವು: ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ತನ್ನ ಅಭಿವೃದ್ಧಿಶೀಲ ಸದಸ್ಯ ರಾಷ್ಟ್ರಗಳಿಗೆ ನೆರವಾಗಲು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ), 6.5 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಿದೆ. ಕೊರೊನಾ ಸಾಂಕ್ರಾಮಿಕ ಸೋಂಕು ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ.
ಹೀಗಾಗಿ ನಮ್ಮ ಅಭಿವೃದ್ಧಿಶೀಲ ಸದಸ್ಯ ರಾಷ್ಟ್ರಗಳು ಸೋಂಕು ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಅನುಕೂಲ ವಾಗುವಂತೆ ಹಣಕಾಸು ನೆರವಿನ ಆರಂಭಿಕ ಪ್ಯಾಕೇಜ್ ನ್ನು ಘೋಷಿಸಿರುವುದಾಗಿ ಎಡಿಬಿ ಅಧ್ಯಕ್ಷ ಮಸಾತ್ಸುಂಗು ಆಸಕವಾ ತಿಳಿಸಿದ್ದಾರೆ.
ಗೆಲ್ಲಲಿದ್ದೇವೆ
ಕೊರೊನಾ ವಿರುದ್ಧ ವಿಶ್ವವೇ ಯುದ್ಧ ಸಾರಿದೆ. ಅದರ ವಿರುದ್ಧ ಗೆಲ್ಲಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ ಮಾತನಾಡಿದ ಅವರು ಇದರಿಂದ ಹೇಗಾದರೂ ಮಾಡಿ ಹೊರಬರಬೇಕಾಗಿದೆ ಎಂದಿದ್ದಾರೆ. ಸಂಕಷ್ಟದಲ್ಲಿರುವ ವೈಮಾನಿಕ ಸಂಸ್ಥೆಗಳಿಗೆ ನೆರವು ನೀಡಬೇಕಾದದ್ದು ಸರಕಾರದ ಕರ್ತವ್ಯ. ಏಕೆಂದರೆ ಸದ್ಯದ ಬಿಕ್ಕಟ್ಟು ಅವರು ಸೃಷ್ಟಿಸಿಕೊಂಡದ್ದಲ್ಲ ಎಂದಿದ್ದಾರೆ.