ಬೀದರ: ಸತತ ಬರಕ್ಕೆ ತುತ್ತಾಗುತ್ತಿರುವ ಬೀದರ ಜಿಲ್ಲೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರೆ ಎಂಬ ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿದೆ. ಸದ್ಯ ಘೋಷಣೆ ಮಾಡಿದ ಯೋಜನೆಗಳಾದರು ಪ್ರಸಕ್ತ ವರ್ಷದಲ್ಲಿ ಜಾರಿಗೆ ಬರುತ್ತವೆಯೇ ಎಂಬ ಚರ್ಚೆಗಳು ಎಲ್ಲಡೆ ಕೇಳಿ ಬರುತ್ತಿವೆ.
ನೀರಾವರಿ: ಜಿಲ್ಲೆಯಲ್ಲಿ ಸೂಕ್ತ ನೀರಾವರಿ ಯೋಜನೆಗಳು ಇಲ್ಲದ ಕಾರಣ ಇಲ್ಲಿನ ರೈತರು ಪ್ರತಿ ವರ್ಷ ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕೂಡ ಈ ಬಗ್ಗೆ ಚರ್ಚೆ ನಡೆದಿದ್ದು, ಜಿಲ್ಲೆಗೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಜಿಲ್ಲೆಯ ಇಬ್ಬರು ಸಚಿವರು ಕೂಡ ಸಭೆಯಲ್ಲಿ ನೀರಾವರಿ ಯೋಜನೆಗಳ ಅಗತ್ಯತೆ ಕುರಿತು ಕೂಡ ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಇಬ್ಬರು ಸಚಿವರು ಸರ್ಕಾರದ ಗಮನ ಸೆಳೆದು ಜಿಲ್ಲೆಯ ರೈತರಿಗೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.
ನೀರಿನ ಕೊರತೆ: ಕಾರಂಜಾ ಜಲಾಶಯ ಸ್ಥಾಪನೆಯಾಗಿದ್ದೇ ರೈತರಿಗಾಗಿ. ಆದರೆ, ಇಂದಿಗೂ ಅದರ ಉದ್ದೇಶ ಮಾತ್ರ ಈಡೇರಿಲ್ಲ. ಜಲಾಶಯದಲ್ಲಿ ಸಂಗ್ರಹ ಆಗುವ ನೀರು ಬೀದರ ನಗರ ಸೇರಿದಂತೆ ಎರಡು ತಾಲೂಕುಗಳು ಹಾಗೂ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕೆಲಸ ನಿರ್ವಹಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಕಾರಂಜಾ ಜಲಾಶಯಕ್ಕೆ ನೀರು ಹರಿದು ಬಂದಿಲ್ಲ. ಇರುವ ಮೂರು ಟಿಎಂಸಿ ಅಡಿ ನೀರಿನಲ್ಲಿ ಈಗಾಗಲೇ ವಿವಿಧಡೆ ಬೇಡಿಕೆ ಅನುಸಾರ ಹರಿಬಿಡಲಾಗಿದೆ. ಸದ್ಯ ಜಿಲ್ಲೆಯಲ್ಲಿನ ರೈತರು ನೀರಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಕೊಳವೆ ಬಾವಿಗಳು ಬತ್ತುತ್ತಿದ್ದು, ತೆರೆದ ಬಾವಿಗಳಲ್ಲಿ ನೀರು ಖಾಲಿ ಆಗುತ್ತಿವೆ. ಹೊಸ ಕೊಳವೆ ಬಾವಿ ತೋಡಿಸುತ್ತಿರುವ ಜನರಿಗೆ 600 ಅಡಿ ಆಳದಲ್ಲಿ ಕೂಡ ನೀರು ಲಭ್ಯ ಆಗುತ್ತಿಲ್ಲ ಎಂಬ ಮಾಹಿತಿ ಜನರನ್ನು ದಿಗಿಲು ಬಡೆದಂತೆ ಮಾಡಿದೆ.
ಸಚಿವರು-ಶಾಸಕರು ಶ್ರಮಿಸಲಿ: ಸದ್ಯ ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರು ಇದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರು ಸೇರಿದಂತೆ ಪ್ರಭಾವಿ ಶಾಸಕರು ಇದ್ದಾರೆ. ಪ್ರತಿ ವರ್ಷ ಬರ ಅನುಭವಿಸುತ್ತಿರುವ ಜಿಲ್ಲೆಗೆ ಮುಕ್ತಿ ದೊರಕಿಸುವ ಕೆಲಸ ಇವರು ಮಾಡಬೇಕಾಗಿದೆ. ಜಿಲ್ಲೆಯ ಬಹುತೇಕ ಜನರು ಕೃಷಿ ಅವಲಂಬಿತರಾಗಿದ್ದಾರೆ. ಜಿಲ್ಲೆಯಲ್ಲಿ ಹೇಳಿಕೊಳ್ಳುವಂತ ಕಾರ್ಖಾನೆಗಳು ಇಲ್ಲ.ಯುವಕ ಕೈಗೆ ಉದ್ಯೋಗ ಇಲ್ಲದೆ ಖಾಲಿ ಇರುವ ಯುವಕರ ಸಂಖ್ಯೆ ಹೆಚ್ಚಿದೆ. ಹೊಲದಲ್ಲಿ ಕೃಷಿ ಮಾಡಲು ನೀರು ಇಲ್ಲ. ಇತ್ತ ಕೈಗೆ ಕೆಲಸ ಇಲ್ಲದ ಕಾರಣ ಯುವ ಜನತೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದು ಜಿಲ್ಲೆಗೆ ವಿಶೇಷ ಪ್ಯಾಕ್ ತರುವ ಮೂಲಕ ಜಿಲ್ಲೆಯ ಎಲ್ಲ ಭಾಗದಲ್ಲಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಂದಾಬೇಕು ಎಂಬ ಆಗ್ರಹ ಜಿಲ್ಲೆಯ ಜನರು ಮಾಡುತ್ತಿದ್ದಾರೆ.
ನಾಲ್ಕು ದಿನಕ್ಕೆ ಕುಡಿಯುವ ನೀರು: ಸದ್ಯ ಕಾರಂಜಾ ಜಲಾಶಯದಿಂದ ಹುಮನಾಬಾದ, ಚಿಟಗುಪ್ಪ ಪಟ್ಟಣ ಸೇರಿದಂತೆ ವಿವಿಧಡೆ ನೀರು ಹರಿಸಲಾಗುತ್ತಿದ್ದು, ನಾಲ್ಕು ದಿನಕ್ಕೆ ಒಂದು ಬಾರಿ ನೀರು ಪೂರೈಸಲಾಗುತ್ತಿದೆ. ಸದ್ಯ ನಾಲ್ಕು ದಿನಕ್ಕೆ ನೀಡು ಬಿಡುತ್ತಿರುವ ಪುರಸಭೆ ಮುಂದಿನ ಬೇಸಿಗೆಯಲ್ಲಿ ಎಷ್ಟು ದಿನಕ್ಕೆ ಒಮ್ಮೆ ನೀರು ಸರಬರಾಜು ಮಾಡುತ್ತಾರೊ ಎಂದು ಆತಂತಕ್ಕೆ ಒಳಗಾಗಿದ್ದಾರೆ.
ಗೋದಾವರಿ ಹರಿದು ಹೋಗುವ ನೀರಿನಲ್ಲಿ ಜಿಲ್ಲೆಗೆ ದೊರೆಯಬೇಕಾದ ಪ್ರಮಾಣ ಬಳಸಿಕೊಂಡರೆ ರೈತರು ನಿರಾವರಿ ಕೃಷಿ ಮಾಡಬಹುದಾಗಿದೆ. ಅಲ್ಲದೆ, ನೀರಿಗೂ ಸಮಸ್ಯೆ ಉದ್ಬವವಾಗುವುದಿಲ್ಲ. ಎಂಬುದು ಅನೇಕರ ಅಭಿಪ್ರಾಯ.