Advertisement

Special Olympics: ಭಾರತೀಯರ ದಾಖಲೆ ಸಾಧನೆ

12:13 AM Jun 23, 2023 | Team Udayavani |

ಬರ್ಲಿನ್‌: ಜರ್ಮನಿಯ ಬರ್ಲಿನ್‌ನಲ್ಲಿ ಸಾಗುತ್ತಿರುವ ಸ್ಪೆಶಲ್‌ ಒಲಿಂಪಿಕ್ಸ್‌ನಲ್ಲಿ 50ಕ್ಕಿಂತ ಹೆಚ್ಚಿನ ಪದಕ ಗೆದ್ದಿರುವ ಭಾರತೀಯ ಆ್ಯತ್ಲೀಟ್‌ಗಳು ಅಮೋಘ ನಿರ್ವಹಣೆಯನ್ನು ಮುಂದುವರಿಸಿದ್ದಾರೆ.

Advertisement

ದಿನದ ಸ್ಪರ್ಧೆಗಳು ಮುಗಿದಾಗ ಭಾರತವು 15 ಚಿನ್ನ, 27 ಬೆಳ್ಳಿ ಮತ್ತು 13 ಕಂಚು ಸಹಿತ 55 ಪದಕ ಗೆದ್ದ ಸಾಧನೆ ಮಾಡಿದೆ. ಆ್ಯತ್ಲೆಟಿಕ್ಸ್‌, ಸೈಕ್ಲಿಂಗ್‌, ಪವರ್‌ಲಿಫ್ಟಿಂಗ್‌, ರೋಲರ್‌ ಸ್ಕೇಟಿಂಗ್‌ ಮತ್ತು ಈಜು ಸ್ಪರ್ಧೆಯಲ್ಲಿ ಭಾರತೀಯರು ಗರಿಷ್ಠ ಪದಕ ಗೆದ್ದು ಸಂಭ್ರಮಿಸಿದ್ದಾರೆ.

ಬುಧವಾರದ ಸ್ಪರ್ಧೆಯ ವೇಳೆ ಈಜಿನಲ್ಲಿ ಭಾರತ 3 ಚಿನ್ನ ಸಹಿತ ಐದು ಪದಕ ಜಯಿಸಿದ್ದರೆ ಸೈಕ್ಲಿಂಗ್‌ನಲ್ಲಿ 3 ಚಿನ್ನ ಸೇರಿದಂತೆ ಆರು ಪದಕ ಗೆದ್ದುಕೊಂಡಿದೆ. ಸೈಕ್ಲಿಂಗ್‌ ತಂಡದ ಎಲ್ಲ ಸದಸ್ಯರು ಪದಕ ಗೆದ್ದ ಸಾಧನೆ ಮಾಡಿದ್ದಾರೆ. 5 ಕಿ.ಮೀ. ರಸ್ತೆ ರೇಸ್‌ನಲ್ಲಿ ನೀಲ್‌ ಯಾದವ್‌ ಮೊದಲ ಪದಕ ಜಯಿಸಿದ್ದರು. ಆಬಳಿಕ ಯಾದವ್‌, ಶಿವಾನಿ ಮತ್ತು ಇಂದು ಪ್ರಕಾಶ್‌ 1ಕಿ.ಮೀ. ಟೈಮ್‌ ಟ್ರಯಲ್‌ನಲ್ಲಿ ಚಿನ್ನ ಗೆದ್ದರೆ ಕಲ್ಪನಾ ಜೆನ ಮತ್ತು ಜಯಶೀಲಾ ಅಬುತರಾಜ್‌ ಬೆಳ್ಳಿ ಗೆದ್ದರು.

ಈಜು ಸ್ಪರ್ಧೆಯಲ್ಲಿ ಭಾರತ ಹಲವು ಪದಕಗಳನ್ನು ಗೆದ್ದಿದೆ. ಫ್ರೀಸ್ಟೈಲ್‌ ಈಜುಪಟುಗಳಾದ ದೀಕ್ಷಾ ಜಿತೇಂದ್ರ ಶಿರ್‌ಗಾಂನ್ಕರ್‌, ಪೂಜಾ ಗಿರಿಧರ್‌ ರಾವ್‌, ಗಾಯಕ್ವಾಡ್‌ ಮತ್ತು ಪ್ರಶದ್ಧಿ ಕಾಂಬ್ಳೆ ಮತ್ತು ಮಾಧವ ಮದನ್‌ ಚಿನ್ನ ಗೆದ್ದಿದ್ದಾರೆ. ಸಿದ್ದಾಂತ್‌ ಮುರಳಿ ಕುಮಾರ್‌ 25ಮೀ. ಫ್ರೀಸ್ಟೈಲ್‌ನಲ್ಲಿ ಕಂಚು ಪಡೆದಿದ್ದಾರೆ.

ಲೆವೆಲ್‌ ಬಿ ಮಿನಿ ಜಾವೆಲಿನ್‌ನಲ್ಲಿ ಸೋನೆಪಟ್‌ನ ಸಾಕೇತ್‌ ಕಂದು ಬೆಳ್ಳಿ ಗೆದ್ದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅವರು ಟೇಬಲ್‌ ಟೆನಿಸ್‌, ಫಿಗರ್‌ ಸ್ಕೇಟಿಂಗ್‌ ಮತ್ತು ಆ್ಯತ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು.

Advertisement

ಮಂಗಳೂರು “ಸಾನಿಧ್ಯ”ದ ಹರೀಶ್‌ಗೆ 3 ಚಿನ್ನ , 1 ಬೆಳ್ಳಿ

ಮಂಗಳೂರು: ಜರ್ಮನಿಯ ಬರ್ಲಿನ್‌ನಲ್ಲಿ ನಡೆಯುತ್ತಿರುವ ಸ್ಪೆಷಲ್‌ ಒಲಿಂಪಿಕ್ಸ್‌ನ ಪವರ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ ನಗರದ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿಯುತ ವಿಶೇಷ ಮಕ್ಕಳ ಶಾಲೆಯ ಕ್ರೀಡಾಪಟು ಹರೀಶ್‌ ವಿ. ಅವರು 3 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪವರ್‌ ಲಿಫ್ಟಿಂಗ್‌ ವಿಭಾಗದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ಹರೀಶ್‌ ಮೂಲತಃ ಬೆಂಗಳೂರಿನವರು. 2018ಕ್ಕೆ ಸಾನಿಧ್ಯಕ್ಕೆ ಸೇರ್ಪಡೆಗೊಂಡ ಇವರನ್ನು ಪ್ರೇಮ್‌ನಾಥ್‌ ಉಳ್ಳಾಲ್‌, ಸರಸ್ವತಿ ಪುತ್ರನ್‌ ಹಾಗೂ ವಿಶಾಲ್‌ ಅವರು ಪವರ್‌ ಲಿಫ್ಟಿಂಗ್‌ ಕ್ರೀಡೆಗೆ ತರಬೇತುಗೊಳಿಸಿದ್ದರು.

ಬುಧವಾರ ನಡೆದ ಸ್ಪರ್ಧೆಯಲ್ಲಿ ಹರೀಶ್‌ ಸ್ಕ್ವಾಟ್‌ನಲ್ಲಿ 140 ಕೆ.ಜಿ., ಬೆಂಚ್‌ಪ್ರಸ್‌ನಲ್ಲಿ 82.5 ಕೆ.ಜಿ. ಎತ್ತಿ ಚಿನ್ನ ಗೆದ್ದರೆ ಡೆಡ್‌ಲಿಫ್ಟ್ನಲ್ಲಿ 145 ಕೆ.ಜಿ. ಎತ್ತಿ ಬೆಳ್ಳಿ ಪಡೆದರು. ಒಟ್ಟು 367.5 ಕೆ.ಜಿ. ಎತ್ತುವ ಮೂಲಕ ಇನ್ನೊಂದು ಚಿನ್ನ ತನ್ನದಾಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next