Advertisement

ಗ್ರಾಮೀಣಾಭಿವೃದ್ಧಿಗೆ ಸುವರ್ಣ ಸೌಧದಲ್ಲಿ ವಿಶೇಷ ಕಚೇರಿ: ಸಚಿವ ಈಶ್ವರಪ್ಪ

11:57 AM Sep 10, 2019 | sudhir |

ಬೆಳಗಾವಿ: ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಅನುಕೂಲ ಆಗುವ ರೀತಿಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷ ಕಚೇರಿಯನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಸೋಮವಾರ ನಡೆದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಚಿಂತನ-ಮಂಥನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರ ನೀರು, ರಸ್ತೆ, ನೈರ್ಮಲ್ಯ, ಉದ್ಯೋಗ ಖಾತ್ರಿ ಸೇರಿದಂತೆ ಒಟ್ಟಾರೆ ಗ್ರಾಮೀಣಾಭಿವೃದ್ಧಿಗಾಗಿ ವಿಶೇಷ ಕಚೇರಿ ಸ್ಥಾಪಿಸಲಾಗುವುದು.
ಈ ಕಚೇರಿಗೆ ಸಂಪೂರ್ಣ ಅಧಿಕಾರವನ್ನು ನೀಡಿ ಹಿರಿಯ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ.

ವಿಶೇಷ ಕಚೇರಿ ಆರಂಭಿಸಲು ಅಗತ್ಯವಿರುವ ವ್ಯವಸ್ಥೆಗಳನ್ನು ರೂಪಿಸಿಕೊಂಡು ಆದಷ್ಟು ಬೇಗನೆ ನಿರ್ಧಾರ ಕೈಗೊಳ್ಳಲಾಗುವುದು.
ಉ.ಕ.ಅಭಿವೃದ್ಧಿಯನ್ನು ಒಂದು ಸವಾಲಾಗಿ ಸ್ವೀಕರಿಸಿ ಅದನ್ನು ಸಾಧಿಸಲು ನಾವು ಪ್ರಯತ್ನಿಸೋಣ ಎಂದರು.

ಸರ್ಕಾರ ನಡೆಸುವ ದೈನಂದಿನ ಮಾದರಿಯ ಸಭೆ ಇದಲ್ಲ. ಗ್ರಾಮೀಣಾಭಿವೃದ್ಧಿ ಕುರಿತು ನಿಮ್ಮೆಲ್ಲರ ಚಿಂತನೆ ಹಾಗೂ ಅನುಭವಗಳನ್ನು ತಿಳಿದುಕೊಳ್ಳುವ ವಿಶೇಷ ಅವಕಾಶ ಇದು ಎಂದು ಸಚಿವ ಈಶ್ವರಪ್ಪ ತಿಳಿಸಿದರು.

Advertisement

ವಿದೇಶಕ್ಕೆ ಹೋಲಿಸಿದರೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಡಿಮೆ. ಸಂಸ್ಕೃತಿಯಲ್ಲಿ ಶ್ರೀಮಂತವಾಗಿದೆ. ಆದರೆ ಮೂಲ ಸೌಕರ್ಯಗಳು ಕಡಿಮೆಯಾಗಿವೆ.

ರಾಜ್ಯದ ಅಭಿವೃದ್ಧಿಗೆ ಈ ಚಿಂತನ-ಮಂಥನ ಸಭೆ ಮಾದರಿಯಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಸಂತ್ರಸ್ತರಿಗೆ ಮೊದಲ ಹಂತದಲ್ಲಿ ಹತ್ತು ಸಾವಿರ ಪರಿಹಾರ ನೀಡಲಾಗಿದೆ.
ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೂಡ ಪ್ರವಾಹ ಬಾಧಿತ ಸಂತ್ರಸ್ತರಿಗೆ ಉದಾರ ನೆರವು ನೀಡಿರುವುದು ಶ್ಲಾಘನೀಯ.

ಮನೆಗಳ ಹಾನಿ ಸಮೀಕ್ಷೆ ಬಳಿಕ ಕೇಂದ್ರ ಸರ್ಕಾರದ ನೆರವು ಪಡೆದುಕೊಂಡು ಶಾಶ್ವತ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ 609 ಕೆರೆಗಳು ಸೇರಿದಂತೆ 5612 ಗ್ರಾಮೀಣ ರಸ್ತೆಗಳು ಪ್ರವಾಹದಿಂದ ಹಾನಿಯಾಗಿವೆ. ಸಮೀಕ್ಷೆ ಕೈಗೊಂಡಿದ್ದು, ಕೇಂದ್ರ ಸರ್ಕಾರದ ನೆರವಿನೊಂದಿಗೆ ರಸ್ತೆ ಮತ್ತು ಸಂಪರ್ಕ ಕಲ್ಪಿಸುವ ಕೆಲಸ ಶೀಘ್ರವಾಗಿ ಆರಂಭಿಸಲಾಗುವುದು ಎಂದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಜಿಲ್ಲಾ ಪಂಚಾಯತ್ ಆದ್ಯತೆಯಾಗಿದೆ. ಪ್ರತಿ ಗ್ರಾಮಕ್ಕೆ ನೈರ್ಮಲ್ಯ ಕಾಪಾಡಲು ಪ್ರತಿ ಗ್ರಾಮಕ್ಕೆ ತಲಾ ಒಂದು ಲಕ್ಷ ರೂಪಾಯಿ ನೀಡಲಾಗಿದೆ. ಮೂರು ಹಂತದ ವ್ಯವಸ್ಥೆ ಪಂಚಾಯತ್ ಬಲಪಡಿಸಲು ಸರ್ಕಾರ ಬದ್ಧವಾಗಿದೆ. ಪಂಚಾಯತ್ ವ್ಯವಸ್ಥೆ ಇನ್ನಷ್ಟು ಬಲಪಡಿಸಲು ಜನಪ್ರತಿನಿಧಿಗಳು ನೀಡುವ ಸಲಹೆಗಳನ್ನು ಸರ್ಕಾರ ಸಕಾರಾತ್ಮಕವಾಗಿ ಸ್ವೀಕರಿಸಲಿದೆ ಎಂದರು.

ಶೌಚಾಲಯ ನಿರ್ಮಿಸುವುದು ಸಾಧ್ಯವಾಗದಿದ್ದರೆ ನಾವೆಂತಹ ಜನಪ್ರತಿನಿಧಿಗಳು ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಕೇಂದ್ರ-ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಅನುದಾನದ ಸದ್ಬಳಕೆಗೆ ನಾವು ಇದುವರೆಗೆ ಯಶಸ್ವಿಯಾಗಿಲ್ಲ ಎಂದು ಸಚಿವ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ಅಧಿಕಾರ ಅಥವಾ ಅನುದಾನ ಕಡಿಮೆ ಎಂದು ಕೈಕಟ್ಟಿ ಕುಳಿತುಕೊಳ್ಳದೇ ಶಾಸಕರು ಮತ್ತಿತರ ಜನಪ್ರತಿನಿಧಿಗಳ ಜತೆ ಸಮನ್ವಯದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಬೇಕಿದೆ.

ರಸ್ತೆಬದಿ ಮಹಿಳೆಯರು ಶೌಚಕ್ಕೆ ಹೋಗುವ ವ್ಯವಸ್ಥೆ ಇನ್ನೆಷ್ಟು ದಿನ ಇರಬೇಕು, ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ ಕಲ್ಪಿಸಲು ಪ್ರತಿ ಹಳ್ಳಿಗಳಿಗೆ ವಿಶೇಷ ಪ್ಯಾಕೇಜ್ ಕಲ್ಪಿಸಲು ಸಾಧ್ಯವೇ ಎಂಬುದರ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ನಮ್ಮ ಗ್ರಾಮದ ಅಭಿವೃದ್ಧಿ ನಮ್ಮೆಲ್ಲರ ಕನಸು ಮತ್ತು ಆದ್ಯತೆಯಾಗಬೇಕು. ಉತ್ತರ ಕರ್ನಾಟಕ ಅಭಿವೃದ್ಧಿ ಮತ್ತು ಮಾದರಿ ರಾಜ್ಯ ನಿರ್ಮಾಣಕ್ಕೆ ಶ್ರಮಿಸೋಣ ಎಂದರು.

ರೈಲ್ವೆ ಅಭಿವೃದ್ಧಿಗೆ 50 ಲಕ್ಷ ಕೋಟಿ ರೂಪಾಯಿ :
6021 ಗ್ರಾಮ ಪಂಚಾಯತ್ ಗೆ ನೀಡುವ ಅನುದಾನದ ಹಂಚಿಕೆ ಕುರಿತ ಮಾಹಿತಿಯನ್ನು ಒಳಗೊಂಡ ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಮುಂಬರುವ ಹತ್ತು ವರ್ಷಗಳಲ್ಲಿ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಐವತ್ತು ಲಕ್ಷ ಕೋಟಿ ರೂಪಾಯಿ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಅನುದಾನ ಹಂಚಿಕೆ ವ್ಯವಸ್ಥೆಗಳು ಕೂಡ ವಿಕೇಂದ್ರೀಕರಣಗೊಂಡು ದೆಹಲಿಯಿಂದ ಹಳ್ಳಿಗಳಿಗೆ ನೇರವಾಗಿ ಅನುದಾನ ಬಿಡುಗಡೆಗೊಳ್ಳಲಿದೆ.

ಭವ್ಯ ಭಾರತ ಮತ್ತು ಗ್ರಾಮೀಣಾಭಿವೃದ್ಧಿ ಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸ್ವಾಗತಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ನರೇಗಾ ಆಯುಕ್ತ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ಡಾ.ಆರ್.ವಿಶಾಲ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರು ಸೇರಿದಂತೆ ಪ್ರತಿ ಜಿಲ್ಲೆಯಿಂದ ಐವರು ಜನಪ್ರತಿನಿಧಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next