Advertisement

ಪೇಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ವಿಶೇಷ ಘಟನೆ

04:40 AM May 28, 2018 | Karthik A |

ಕಟಪಾಡಿ: ಕೋಟೆ ರಸ್ತೆಯ ಪೇಟೆಬೆಟ್ಟು ಭಗವಾನ್‌ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕೊರಗಜ್ಜನ ಸನ್ನಿಧಿಯಲ್ಲಿ ಅನ್ಯಮತೀಯ ಬಾಲಕನೊಬ್ಬ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಆತನ ತಂದೆ-ತಾಯಿ ದರ್ಶನ ಸೇವೆ ನಡೆಸಿ ಪರಿಹಾರ ಕಾಣುತ್ತಿರುವ ವಿಶೇಷ ಘಟನೆ ನಡೆದಿದೆ. ಬಾಲಕ ತನ್ನ ಸ್ನೇಹಿತರ ಜತೆ ಸೇರಿಕೊಂಡು ಸನ್ನಿಧಿಯನ್ನು ಅಪವಿತ್ರಗೊಳಿಸಿದ್ದು, ಆ ಬಳಿಕ ಮಾನಸಿಕ ಆಸ್ವಸ್ಥನಂತಾಗಿದ್ದುದಲ್ಲದೆ, ಸೊಂಟದಿಂದ ದೇಹದ ಕೆಳಭಾಗ ನಿಯಂತ್ರಣ ಕಳಕೊಂಡಿದ್ದ ಎನ್ನಲಾಗಿದೆ.

Advertisement

ಘಟನೆಯ ಹಿನ್ನೆಲೆ
ಬಡತನದಲ್ಲಿ ಜೀವನ ಸಾಗಿಸುತ್ತಿರುವ ಇಂದಿರಾ ನಗರ ನಿವಾಸಿ ಅನ್ಯಮತೀಯ ದಂಪತಿ ತಮ್ಮ ಪುತ್ರ ಮಾರ್ಚ್‌ ತಿಂಗಳಾರಂಭದಿಂದ ಮಾನಸಿಕ ಅಸ್ವಾಸ್ಥ್ಯದ ಲಕ್ಷಣಗಳನ್ನು ತೋರ್ಪಡಿಸಲು ಆರಂಭಿಸಿದ್ದರಿಂದ ಚಿಂತೆಗೀಡಾಗಿದ್ದರು. ಪರಿಹಾರ ಕಾಣಲು ಉಡುಪಿಯ ಜೋತಿಷಿಯೋರ್ವರ ಮೊರೆ ಹೊಕ್ಕಿದ್ದರು. ಕೊರಗಜ್ಜನ ಸನ್ನಿಧಾನದಲ್ಲಿ ಗೈದ ಅಕೃತ್ಯದಿಂದಾಗಿ ಯುವಕನಿಗೆ ಈ ಸ್ಥಿತಿ ಒದಗಿದೆ ಎಂದು ತಿಳಿದು ಬಂದಿತ್ತು.

ಪ್ರಸ್ತುತ ಕ್ಷೇತ್ರದ ಆರಾಧಕರೇ ಆಗಿರುವ ಈ ಕುಟುಂಬ ಕೆಲವು ದಿನಗಳ ಹಿಂದೆ ಭಕ್ತರೊಬ್ಬರು ನಡೆಸಿದ ಕೊರಗಜ್ಜನ ದರ್ಶನ ಸೇವೆಯ ಸಂದರ್ಭ ತಮ್ಮ ಕಷ್ಟದ ಬಗ್ಗೆ ಕೇಳಿಕೊಂಡಾಗ ಪ್ರತ್ಯೇಕವಾಗಿ ದರ್ಶನ ಸೇವೆ ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ನುಡಿಯಾಗಿತ್ತು. ಅದರಂತೆ ಮೇ 25ರಂದು ದರ್ಶನ ಸೇವೆ ನೀಡಿದ್ದು, ಕೊರಗಜ್ಜ ದೈವವು ನೀಡಿದ ಅಭಯದಂತೆ ಹಂತಹಂತವಾಗಿ ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ಮುಖ್ಯವಾಗಿ ಬಾಲಕನ ಎದೆ ಭಾಗದಲ್ಲಿ ಕಾಣಿಸುತ್ತಿದ್ದ ನೋವು ಮಾಸಿದೆ ಎಂದು ದೈವಸ್ಥಾನದ ಪ್ರಮುಖರು ಮಾಹಿತಿ ನೀಡಿದ್ದಾರೆ.

ಏನಾಗಿತ್ತು?
ಪ್ರತೀ ತಿಂಗಳಿಗೊಮ್ಮೆ ಶ್ರೀ ಕ್ಷೇತ್ರದ ಕಾಣಿಕೆ ಹುಂಡಿಯನ್ನು ತೆರೆಯಲಾಗುತ್ತಿದ್ದು, ಜನವರಿ ತಿಂಗಳಲ್ಲಿ ನಡೆದ ನೇಮದ ಬಳಿಕ ಫೆಬ್ರವರಿಯಲ್ಲಿ ಹುಂಡಿಯನ್ನು ತೆರೆದಾಗ ಅಶುದ್ಧ ವಸ್ತುಗಳು ಕಂಡುಬಂದು ಆಡಳಿತ ಮಂಡಳಿಯವರು ಬೇಸರಗೊಂಡಿದ್ದರು.

ಆಡಳಿತ ಮಂಡಳಿ ಪ್ರಾರ್ಥನೆ
ಅಶುದ್ಧ ವಸ್ತುಗಳು ಸಿಕ್ಕಿದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿದ್ದ ಆಡಳಿತ ಮಂಡಳಿಯವರು, ಮಾನಸಿಕ ಅಸ್ವಸ್ಥರು ಇದನ್ನು ಮಾಡಿದ್ದಾದರೆ ಅವರನ್ನು ಸರಿಪಡಿಸು, ದುರುದ್ದೇಶಪೂರ್ವಕವಾಗಿದ್ದಲ್ಲಿ ಕಾರಣಿಕ ತೋರಿಸುವಂತೆ ಕೇಳಿಕೊಂಡಿದ್ದರು ಎಂದು ಕ್ಷೇತ್ರದ ಪ್ರಧಾನ ಅರ್ಚಕ ಜಯಕರ ಕಲ್ಮಾಡಿ ‘ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಈ ಕುಟುಂಬ ಹಿಂದಿನಿಂದಲೂ ಶ್ರೀ ಕ್ಷೇತ್ರದ ಭಕ್ತರು. ಕ್ಷೇತ್ರಕ್ಕೆ ಬಂದು ಪ್ರಾರ್ಥಿಸಲು ಕೇಳಿಕೊಂಡಾಗ ನಮ್ಮಿಂದ ಪರಿಹಾರ ಅಸಾಧ್ಯ, ದೈವವೇ ತೀರ್ಮಾನಿಸಬೇಕಾಗಿದೆ ಎಂದು ತಿಳಿಸಿದ್ದೆವು. ಅನಂತರ ದರ್ಶನ ಸೇವೆ ಸಲ್ಲಿಸಿ ಕ್ಷಮೆ ಕೋರಿದ್ದರು. ಶಾಲೆಗೆ ಹೋಗುವ ಮಕ್ಕಳು ಮಾಡಿದ ತಪ್ಪನ್ನು ಕ್ಷಮಿಸುವಂತೆ ನಾವೂ ಪ್ರಾರ್ಥಿಸಿದ ಮೇರೆಗೆ ದೈವ ನೀಡಿದ ವಾಗ್ಧಾನದಂತೆ ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಇನ್ನೋರ್ವ ಬಾಲಕ ಕಿಡ್ನಿ ವೈಫಲ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ಲಭಿಸಿದೆ. ಸುಮಾರು 8-10 ಮಕ್ಕಳ ತಂಡದಿಂದ ಈ ಅಕೃತ್ಯ ನಡೆದ ಬಗ್ಗೆ ಮಾಹಿತಿ ಇದೆ. 
– ತುಕಾರಾಮ್‌, ಆಡಳಿತ ಮಂಡಳಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next