Advertisement

ಹಸಿರು ವನಸಿರಿಯ ನಡುವೆ ಸಂಗೀತ ನಿನಾದ

05:35 AM May 24, 2018 | Team Udayavani |

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ನಿಡ್ಲೆ ಸಮೀಪದಲ್ಲಿ ಹಸಿರು ವನಸಿರಿಯ ನಡುವೆ ಇರುವ ಕರುಂಬಿತ್ತಿಲ್‌ ಮನೆ ಪರಿಸರವು ಸಂಗೀತ ನಿನಾದದೊಂದಿಗೆ ಸಂಗೀತಪ್ರೇಮಿಗಳ ಮನಸೂರೆಗೊಳ್ಳುತ್ತಿದೆ. ಇದು ಇಂದು ನಿನ್ನೆಯದಲ್ಲ, 17 ವರ್ಷಗಳಿಂದ ಸಂಗೀತ ನಾದಸುಧೆಯಿಂದ ಕರುಂಬಿತ್ತಿಲ್‌ ಮನೆ ಬೆಳಗುತ್ತಿದೆ. ಬೆಳ್ತಂಗಡಿ ತಾಲೂಕಿನ ತೀರಾ ಗ್ರಾಮೀಣ ಪ್ರದೇಶವಾದರೂ ಕರುಂಬಿತ್ತಿಲ್‌ ಮನೆಯ ಸಂಗೀತ ಶಿಬಿರವು ಸಂಗೀತ ಕ್ಷೇತ್ರದಲ್ಲಿ ದೇಶವಿದೇಶಗಳಲ್ಲಿ ಪ್ರಸಿದ್ಧರಾದ ಕರ್ನಾಟಕ ಸಂಗೀತದ ಮೇರು ದಿಗ್ಗಜರನ್ನು ವರ್ಷದಲ್ಲೊಮ್ಮೆ ನಡೆಯುವ ಶಿಬಿರಗಳಲ್ಲಿ ಕಾಣುವ ಅವಕಾಶ ಒದಗಿಸುತ್ತಿರುವವರು ಕೃಷ್ಣಗಾನ ಸುಧಾ ಗ್ಲೋಬಲ್‌ ಆರ್ಟ್ಸ್ ಅಕಾಡೆಮಿಯ ವಿಶ್ವವಿಖ್ಯಾತ ವಯಲಿನ್‌ ಪ್ರತಿಭೆ ಕರುಂಬಿತ್ತಿಲ್‌ನ ವಿದ್ವಾನ್‌ ವಿಠ್ಠಲ ರಾಮಮೂರ್ತಿಯವರು, ಅದೂ ಅವರ ಮನೆಯಂಗಳದಲ್ಲೇ.

Advertisement


ಚೆನ್ನೈಯಿಂದ ಆಗಮನ

ಹದಿನೇಳು ವರ್ಷಗಳಿಂದ ನಿಡ್ಲೆ ಎಂಬ ಕುಗ್ರಾಮದಲ್ಲಿ ‘ಕರುಂಬಿತ್ತಿಲ್‌ ಶಿಬಿರ’ ಹೆಸರಿನಲ್ಲಿ ಪ್ರತೀ ವರ್ಷವೂ ಸಂಗೀತ ಶಿಬಿರ ನಡೆಯುತ್ತಿದೆ. ಕರುಂಬಿತ್ತಿಲ್‌ ಕುಟುಂಬವೂ ಸಂಗೀತಮಯ. ಪ್ರಖ್ಯಾತ ಪಿಟೀಲು ವಿದ್ವಾಂಸರಾದ ವಿಠ್ಠಲ ರಾಮಮೂರ್ತಿ ಚೆನ್ನೈ ಹಾಗೂ ಅವರ ಸಹೋದರಿಯರು ಸೇರಿ ಕುಟುಂಬ ಸಮಾರಂಭದಂತೆ ಆರಂಭಿಸಿದ ಈ ಸಂಗೀತ ಶಿಬಿರವು ಸಂಗೀತ ವಿದ್ಯಾರ್ಥಿಗಳು ಕಾತರದಿಂದ ಕಾಯುವಂತೆ ಮಾಡಿದೆ. ಕೇವಲ ಕೆಲವೇ ವಿದ್ಯಾರ್ಥಿಗಳಿಂದ ಆರಂಭಗೊಂಡ ಕರುಂಬಿತ್ತಿಲ್‌ ಶಿಬಿರವು ಇದೀಗ 200ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನೊಳಗೊಂಡ ಬೃಹತ್‌ ಶಿಬಿರವಾಗಿ ಮಾರ್ಪಟ್ಟಿದೆ.

ಈ ಬಾರಿಯ ಕರುಂಬಿತ್ತಿಲ್‌ ಸಂಗೀತ ಶಿಬಿರವು ಮೇ 23ರಿಂದ ಪ್ರಾರಂಭಗೊಂಡಿದ್ದು, 27ರವರೆಗೆ ನಡೆಯಲಿದೆ. ಈ ಬಾರಿಯ ಸಂಗೀತ ಶಿಬಿರದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರಾದ ವಯಲಿನ್‌ ವಿದ್ವಾನ್‌ ವಿ.ವಿ. ಸುಬ್ರಹ್ಮಣ್ಯಮ್‌, ವಿದ್ವಾನ್‌ ನೆಯ್ಯಾಲಿ ಸಂತಾನ ಗೋಪಾಲನ್‌, ವಿದ್ವಾನ್‌ ಉಡುಪಿ ಗೋಪಾಲಕೃಷ್ಣನ್‌, ವಿದ್ವಾನ್‌ ಶ್ರೀಮುಷ್ಣಮ್‌ ವಿ. ರಾಜ ರಾವ್‌, ನೆಯ್ನಾಲಿ ಆರ್‌. ನಾರಾಯಣನ್‌, ವಿ.ವಿ.ಎಸ್‌. ಮುರಾರಿ, ವಿಶಾಲ್‌ ಸಾಪೂರಮ್‌ ಭಾಗವಹಿಸಲಿದ್ದಾರೆ ಎಂದು ಶಿಬಿರದ ಸಂಯೋಜಕ ವಿದ್ವಾನ್‌ ವಿಠ್ಠಲ್‌ ರಾಮಮೂರ್ತಿ ತಿಳಿಸಿದ್ದಾರೆ.

ವಿಶ್ವ ವಿಖ್ಯಾತ ಕಲಾವಿದರಾದ ಲಾಲ್ಗುಡಿ ಜಿ. ಜಯರಾಮನ್‌, ಡಾ| ಎಂ. ಬಾಲಮುರಳೀಕೃಷ್ಣ , ಉಮ ಯಾಳಪುರಂ ಕೆ. ಶಿವರಾಮನ್‌, ಬಾಂಬೆ ಜಯಶ್ರೀ, ಟಿ.ಎಂ. ಕೃಷ್ಣ, ಅಭಿಷೇಕ್‌ ರಘುರಾಮ್‌ ಈ ಶಿಬಿರಕ್ಕೆ ಭೇಟಿ ನೀಡಿ, ತಮ್ಮ ಸಂಗೀತದ ಅನುಭವವನ್ನು ಶಿಬಿರಾರ್ಥಿಗಳಿಗೆ ಧಾರೆಯೆರೆದಿದ್ದಾರೆ. ಡಾ|  ಬಾಲಮುರಳೀಕೃಷ್ಣ ಅವರು ಈ ಕರುಂಬಿತ್ತಿಲ್‌ ಸಂಗೀತ ಶಿಬಿರಕ್ಕೆ ಭೇಟಿ ನೀಡಿದ್ದ ಸಂದರ್ಭಗಳಲ್ಲಿ ನಾನು ಕರುಂಬಿತ್ತಿಲ್‌ ಶಿಬಿರದಲ್ಲಿ ಶಾಶ್ವತವಾಗಿ ಸಂಗೀತಮಯನಾಗಿ ನೆಲೆಸಿರುತ್ತೇನೆ ಎಂದು ಪ್ರೀತಿಯಿಂದ ಮತ್ತು ಭಾವುಕತೆಯಿಂದ ನುಡಿದಿದ್ದರು.ವಿಶೇಷ ಕಛೇರಿಗಳು, ಪ್ರತಿ ಶಿಬಿರಾರ್ಥಿಗೂ ಮೃದಂಗ, ವಯೊಲಿನ್‌ ಜೊತೆ ಪ್ರದರ್ಶನ ನೀಡುವ ಅವಕಾಶ, ಸಂಗೀತ ಕ್ವಿಜ್‌, ಸಂಗೀತ ಪ್ರಾತ್ಯಕ್ಷಿಕೆ ಕಾದಿದೆ. ಸಂಗೀತ ದಿಗ್ಗಜರು ಶಿಬಿರಾರ್ಥಿಗಳಿಗೆ ಪಾಠವನ್ನೂ ಮಾಡುತ್ತಾರೆ. ಮೇ 27ರಂದು ಸಮಾರೋಪ. ಅಂದು ಶಿಬಿರಾರ್ಥಿಗಳ ಸಮೂಹ ಕಛೇರಿಯೊಂದಿಗೆ ಮುಖ್ಯ ಅತಿಥಿಗಳಾದ ವಿದ್ವಾನ್‌ ವಿ.ವಿ. ಸುಂದರನ್‌, ವಿದ್ವಾನ್‌ ನೆಯ್ನಾಲಿ ಸಂತಾನ ಗೋಪಾಲನ್‌ ಅವರ ಕಛೇರಿಯೊಂದಿಗೆ ಈ ಶಿಬಿರಕ್ಕೆ ತೆರೆ ಬೀಳಲಿದೆ.

ವಿಶೇಷತೆ
ಸಂಗೀತದ ಮೇಲಿನ ಅನನ್ಯ ಪ್ರೀತಿಯಿಂದ ವರ್ಷವಿಡೀ ದೇಶ ವಿದೇಶಗಳ ಕಾರ್ಯಕ್ರಮಗಳಿಗಾಗಿ ಸಮಯ ಸಾಲದು ಎಂಬಂತಿದ್ದರೂ ಬೇಸಗೆ ಬರುತ್ತಿದ್ದಂತೆಯೇ ಎಲ್ಲ ಕಾರ್ಯಗಳನ್ನು ಬದಿಗೊತ್ತಿ ಈ ಸಂಗೀತ ಶಿಬಿರಕ್ಕೆ ಕುಟುಂಬ ಸಮೇತ ಆಗಮಿಸುವ ವಿಠ್ಠಲ್‌ ರಾಮಮೂರ್ತಿ ಅವರ ಕುಟುಂಬ, ಸಂಗೀತ ಪ್ರೇಮಿಗಳಿಗೆ ರಸದೌತಣ ಉಣಬಡಿಸುತ್ತಿದೆ. ಈ ಶಿಬಿರದಲ್ಲಿ ದಕ್ಷಿಣ ಕನ್ನಡ ಮಾತ್ರವಲ್ಲದೆ, ದೂರದ ನಗರಗಳಿಂದಲೂ ಶಿಬಿರಾರ್ಥಿಗಳು ಬರುತ್ತಾರೆ. ಹಾಗೆ ಬಂದವರೆಲ್ಲ ಕರುಂಬಿತ್ತಿಲ್‌ ಕುಟುಂಬದ ಸದಸ್ಯರಂತೆಯೇ ಸಕ್ರಿಯರಾಗಿ ಬೆರೆಯುತ್ತಾರೆ. ಇದು ಈ ಶಿಬಿರದ ವಿಶೇಷತೆ.

Advertisement

— ಗುರುಮೂರ್ತಿ ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next