ಮಡಿಕೇರಿ: ಕಾವೇರಿ ನದಿ ಸೇರಿದಂತೆ ದೇಶದ ಎಲ್ಲಾ ನದಿಗಳ ರಕ್ಷಣೆ ಮತ್ತು ನಿರ್ವಹಣೆಗೆ ವಿಶೇಷ ಕಾನೂನನ್ನು ರೂಪಿಸುವ ಅಗತ್ಯವಿದೆ ಎಂದು ಖ್ಯಾತ ವಾಗ್ಮಿ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಜಿಲ್ಲಾ ಪ್ರಸ್‌ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಲೀನಗೊಂಡಿದ್ದ ಇಂಗ್ಲೆಂಡಿನ ಥೇಮ್ಸ್ ನದಿ, ಗುಜರಾತಿನ ಸಬರಮತಿ ನದಿಗಳು ಪ್ರಸ್ತುತ ಅತ್ಯಂತ ಸ್ವಚ್ಛವಾದ ನದಿಗಳಾಗಿ ಪರಿವರ್ತನೆಯಾಗಿದ್ದು, ಇಂತಹ ಬದಲಾವಣೆಗಳು ಇತರ ನದಿಗಳಲ್ಲೂ ಕಾಣಬೇಕಾಗಿದೆ ಎಂದರು.
ದೇವರೆಂದು ಭಕ್ತಿ ಭಾವದಿಂದ ನದಿಗಳನ್ನು ಪೂಜಿಸುವ ನಾವೇ ನದಿಯ ನೀರನ್ನು ಮಲೀನಗೊಳಿಸುತ್ತಿದ್ದು, ಪ್ರತಿಯೊಬ್ಬರಲ್ಲಿನ ಪ್ರಜ್ಞಾವಂತಿಕೆಯಿಂದ ಮಾತ್ರ ಜೀವನದಿ ಕಾವೇರಿಯ ಸ್ವತ್ಛತೆ ಮತ್ತು ಪಾವಿತ್ರ್ಯತೆಯನ್ನು ಸಂರಕ್ಷಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ದಶಕಗಳ ಅಂತರದಲ್ಲಿ ಜೀವನದಿ ಕಾವೇರಿಯ ಹರಿವಿನಲ್ಲಿ ಆತಂಕಕಾರಿ ಬದಲಾವಣೆಗಳಾಗಿದೆ. ಕಾವೇರಿ ನಾಶವಾದರೆ ಕೇವಲ ನದಿ ಮಾತ್ರವಲ್ಲ ಒಂದು ಇಡೀ ಸಂಸ್ಕೃತಿಯೇ ನಾಶವಾದಂತೆ ಎಂದು ಚಕ್ರವರ್ತಿ ಸೂಲಿಬೆಲೆ ಎಚ್ಚರಿಕೆಯ ನುಡಿಗಳನ್ನಾಡಿದರು.
ಜೀವನದಿ ಕಾವೇರಿ ಮಲಿನಗೊಳ್ಳುತ್ತಿರುವ ಬಗ್ಗೆ ರಾಷ್ಟ್ರೀಯ ಹಸಿರು ಪೀಠಕ್ಕೆ ಪತ್ರ ಬರೆದು, ಅವರ ಮೂಲಕ ನದಿಯ ಸಂರಕ್ಷಣೆಯ ಬಗ್ಗೆ ಸರ್ಕಾರಗಳಿಗೆ, ನದಿ ಹರಿಯುವ ಪ್ರದೇಶದ ಜಿಲ್ಲಾ ಆಡಳಿತ, ಗ್ರಾಮ ಪಂಚಾಯ್ತಿಗಳಿಗೆ ತಾಕೀತು ಮಾಡಲು ನಿರ್ದೇಶನ ನೀಡುವಂತೆ ಕೋರಲಾಗುತ್ತದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಬೆಂಗಳೂರಿನಲ್ಲಿ ಕುಳಿತು ಶುದ್ಧ ಕಾವೇರಿಯ ನೀರನ್ನು ಕುಡಿದು ಆರೋಗ್ಯವಂತರಾಗಿ ಇರಬೇಕಾದಲ್ಲಿ ನದಿ ಹರಿಯುವ ಪ್ರದೇಶಗಳ ಸಂರಕ್ಷಣೆ, ನದಿಯ ನಿರ್ವಹಣೆ ಅತ್ಯವಶ್ಯವಾಗಿ ನಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾವೇರಿಯ ಉಳಿವಿಗೆಂದೇ ವಿಶೇಷ ಪ್ಯಾಕೇಜನ್ನು ಸರ್ಕಾರ ಒದಗಿಸುವುದು ಅತ್ಯವಶ್ಯ. ಕಾವೇರಿಯ ಉಳಿವಿಗಾಗಿ ಇಲ್ಲಿನ ಪರಿಸರವನ್ನು ಜತನದಿಂದ ಕಾಯ್ದುಕೊಳ್ಳುವ ಸ್ಥಳೀಯರಿಗೆ, ಹೊರ ಜಿಲ್ಲೆಗಳತ್ತ ತಮ್ಮ ಅವಶ್ಯಕತೆಗಳಿಗಾಗಿ ನೋಡಲೇಬೇಕಾದ ಅನಿವಾರ್ಯತೆಯನ್ನು ಇಲ್ಲದಾಗಿಸಿ, ಇಲ್ಲಿಯೇ ಎಲ್ಲಾ ಸೌಲಭ್ಯಗಳು ದೊರಕುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಚರ್ಚೆಗಳು ನಡೆಯುವುದು ಸೂಕ್ತವೆಂದರು.ಅಭಿವೃದ್ಧಿಯ ವಿಚಾರಗಳ ನಡುವೆ ವಿಕಾಸದ ಪರಿಕಲ್ಪನೆ ಯಾರಲ್ಲೂ ಇದ್ದಂತಿಲ್ಲ. ಪರಿಸರವನ್ನು ಸಂರಕ್ಷಿಸಿಕೊಂಡು ಅಭಿವೃದ್ಧಿಯನ್ನು ಕಂಡುಕೊಳ್ಳುವುದು ವಿಕಾಸವಾಗುತ್ತದೆ. ಆದರೆ, ಪರಿಸರವನ್ನು ಕಳೆದುಕೊಂಡು ಸೌಲಭ್ಯಗಳನ್ನು ಹೊಂದುವುದೆ ಅಭಿವೃದ್ಧಿ ಎಂಬಂತಾಗಿದೆ. ಇದಕ್ಕೆ ಬೆಂಬಲವಾಗಿ ಸರ್ಕಾರಗಳು ಮುಂದುವರಿಯುತ್ತಿವೆ ಎಂದು ಮಾರ್ಮಿಕವಾಗಿ ನುಡಿದು, ಕೊಡಗಿನ ಹೈಟೆನ್ಶನ್ ಮಾರ್ಗ ನಿರ್ಮಾಣದಲ್ಲಿ ಸಹಸ್ರಾರು ಮರಗಳನ್ನು ಕಡಿಯಲು, ಎತ್ತಿನ ಹೊಳೆ ಯೋಜನೆ ಆಗುತ್ತದೋ ಬಿಡುತ್ತದೋ ಅಷ್ಟರಲ್ಲೆ ಯೋಜನೆ ಹಾದು ಹೋಗುವ ಪ್ರದೇಶದ ಅರಣ್ಯದ ಮರಗಳನ್ನು ತೆಗೆಯುವ ಕಾರ್ಯದ ಹಿಂದೆ ಆತಂಕ ಅಡಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು. ತ್ಯಾಗ ಮನೋಭಾವನೆ ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ಯುವ ಸಮೂಹದಲ್ಲಿ ಬಿತ್ತುವ ಮೂಲಕ ಕಾವೇರಿಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ.
ತಮಿಳುನಾಡಿನಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟ ತಮಿಳರ ಭಾವನೆಗಳನ್ನು ತಮ್ಮತ್ತ ವಾಲಿಸಿಕೊಂಡು ಚುನಾವಣೆೆ ಗೆಲ್ಲುವ ಪ್ರಯತ್ನವಾಗಿದೆ ಎಂದು ಅವರು ಟೀಕಿಸಿದರು. ಚಿತ್ರನಟ ರಜನೀಕಾಂತ್ ಪ್ರಸ್ತುತ ರಾಜಕಾರಣಿಯಾಗಿರುವುದರಿಂದ ಅವರು ಅಂತಹ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಸಂವಾದದಲ್ಲಿ ಕೊಡಗು ಪ್ರಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಉಪಸ್ಥಿತರಿದ್ದರು.
ಕೆಟ್ಟ ನಿರ್ವಹಣೆ
ಭಾಗಮಂಡಲ ಸುಂದರವಾಗಿ ದ್ದರೂ ಅಲ್ಲಿನ ನಿರ್ವಹಣೆ ಅತ್ಯಂತ ಕೆಟ್ಟದಾಗಿದೆ. ಪ್ರವಾಸೋದ್ಯಮ ಕೊಡಗಿನ ಜನತೆಗೆ ಅಗತ್ಯ ಆರ್ಥಿಕ ಶಕ್ತಿಯನ್ನು, ಉದ್ಯೋಗ ದೊರಕಿಸಿಕೊಡುತ್ತಿದೆ. ಭಾಗಮಂಡಲದತ್ತ ಸಾಗುವಹಾದಿ ಪರಿಸರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಕಾರಣ ಸಿಂಗಲ್ ರೋಡ್ ಆಗಿದೆ ಎನ್ನುವುದು ಪ್ರತಿಬಿಂಬಿಸುವಲ್ಲಿ ವಿಫಲವಾಗಿದ್ದೇ ವೆಂದು ಸೂಲಿಬೆಲೆ ವಿಷಾದಿಸಿದರು.