ಹುಬ್ಬಳ್ಳಿ: ‘ಆಮ್ ಆದ್ಮಿ ಪಕ್ಷದ ಸಮಾಜಮುಖೀ ಚಿಂತನೆಯ ವೇಗ ತಗ್ಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ನಮ್ಮ ಅಗ್ರೆಸಿವ್ ನೀತಿ ಮುಂದುವರಿದಿದೆ. ಅಭಿವೃದ್ಧಿಯ ಸೂಕ್ಷ್ಮತೆ ಅರಿಯದವರಿಂದ ಆಪ್ ಸರಕಾರದ ವಿರುದ್ಧ ಇಲ್ಲಸಲ್ಲದ ಗೂಬೆ ಕೂರಿಸುವ ಕಾರ್ಯ ನಡೆಯುತ್ತಿದೆ. ಆದರೆ, ದಿಲ್ಲಿಯಲ್ಲಿ ಉತ್ತಮ ಭವಿಷ್ಯದ ದೃಷ್ಟಿಯಿಂದ ಭದ್ರ ಬುನಾದಿ ಹಾಕುವುದರಲ್ಲಿ ಆಪ್ ಕಾರ್ಯೋನ್ಮುಖವಾಗಿದೆ.’ – ಹೀಗೆ, ಎಎಪಿ ಸಾಧನೆ ಹಾಗೂ ದಿಲ್ಲಿ ಸರಕಾರದ ಕಾರ್ಯ ವಿಧಾನವನ್ನು ವ್ಯಾಖ್ಯಾನಿಸಿದವರು ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ.
ಆಪ್ ಸರಕಾರದ ಅಭಿವೃದ್ಧಿ ಚಿಂತನೆ, ರೈತಪರ ಕಾಳಜಿ, ಎಎಪಿ ಮುಂದಿನ ಹೆಜ್ಜೆ, ಪ್ರಧಾನಿ ನರೇಂದ್ರ ಮೋದಿ ಸರಕಾರದ ನಡೆ, ದೇಶಪಾಂಡೆ ಪ್ರತಿಷ್ಠಾನದ ಸಾಧನೆ ಕುರಿತಾಗಿ ಸಿಸೋಡಿಯಾ ಅವರು ‘ಉದಯವಾಣಿ’ಯೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ನೈಜ ಅಭಿವೃದ್ಧಿಗೆ ಒತ್ತು: ಕೇವಲ ಕಟ್ಟಡಗಳನ್ನು ಕಟ್ಟಿ ಅದೇ ನೈಜ ಅಭಿವೃದ್ಧಿ ಎಂದು ಮುಗಿಲೆತ್ತರಕ್ಕೆ ಬಿಂಬಿಸುವುದು ನಮ್ಮಿಂದಾಗದು. ಶಿಕ್ಷಣ, ಆರೋಗ್ಯ ಸೇವೆ, ಉದ್ಯೋಗ ಸೃಷ್ಟಿ, ರೈತರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕೆ ನಮ್ಮ ಮೊದಲಾದ್ಯತೆ. ದಿಲ್ಲಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಹೆಜ್ಜೆ ಇರಿಸಲಾಗಿದೆ. ಮುಖ್ಯವಾಗಿ ಬಡ-ಮಧ್ಯಮ ವರ್ಗಗಳವರಿಗೆ ಅತ್ಯುತ್ತಮ ಹಾಗೂ ಕೈಗೆಟಕುವ ದರದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ದೊರೆಯಬೇಕೆಂದು ಹಲವು ಸುಧಾರಣೆ, ಪ್ರಯೋಗ ಹಾಗೂ ಹೊಸತನಗಳಿಗೆ ನಾಂದಿ ಹಾಡಲಾಗಿದೆ.
ಆಮ್ ಆದ್ಮಿಯ ವೇಗ ತಗ್ಗಿದೆ ಎಂಬುದು ಕೆಲವರ ಆರೋಪ ಇರಬಹುದು. ಆದರೆ, ಅದು ವಾಸ್ತವ ಅಲ್ಲ. ನಿರೀಕ್ಷೆಯಂತೆ ದಿಲ್ಲಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಅಭಿವೃದ್ಧಿ ಹಾಗೂ ಚಿಂತನೆಯಲ್ಲಿ ನಾವೆಂದೂ ರಾಜಿ ಮಾಡಿಕೊಂಡಿಲ್ಲ, ಮಾಡಿಕೊಳ್ಳುವುದೂ ಇಲ್ಲ.
ರೈತರು ಸತ್ತರೆ ಜಗತ್ತು ಬದುಕೀತೆ?: ರೈತರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವುದಕ್ಕೆ ಮೊದಲಾದ್ಯತೆ ದೊರೆಯಬೇಕಿದೆ. ರೈತರು ಆತ್ಮಹತ್ಯೆ ಮಾಡುತ್ತ ಸಾಗಿದರೆ ಕೃಷಿ ಉಳಿಯುವುದಾದರೂ ಹೇಗೆ? ಕೃಷಿ ಇಲ್ಲವೆಂದಾದರೆ ದಿಲ್ಲಿ ಸೇರಿ ಇನ್ನಿತರ ನಗರಗಳು, ಜಗತ್ತು ಬದುಕುಳಿಯಲು ಸಾಧ್ಯವೇ? ಈ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಕೃಷಿ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ದಿಲ್ಲಿಯಲ್ಲಿ ರೈತರಿಗೆ ದೇಶದಲ್ಲೇ ಅತಿ ಹೆಚ್ಚು ಪರಿಹಾರ ನೀಡಿದ್ದೇವೆ. ಅದೇ ರೀತಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪಡೆದ ಭೂ ಸ್ವಾಧೀನಕ್ಕೆ ಹೆಚ್ಚಿನ ಪರಿಹಾರ ನೀಡಿದ್ದೇವೆ.
ದೇಶಪಾಂಡೆ ಪ್ರತಿಷ್ಠಾನ ಕರ್ನಾಟಕದಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳು ಮಾದರಿಯಾಗಿವೆ. ಕೃಷಿ ವಿಚಾರದಲ್ಲಿ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ಕೈಗೊಂಡ ಕೃಷಿ ಹೊಂಡಗಳ ಅಭಿಯಾನ ನಿಜಕ್ಕೂ ಅದ್ಭುತ ಕೆಲಸ. ರೈತರಿಗೆ ಮಹತ್ವದ ಸಹಕಾರಿ ಯೋಜನೆ ಇದು. ದೇಶಪಾಂಡೆ ಪ್ರತಿಷ್ಠಾನದ ಕೌಶಲ ಅಭಿವೃದ್ಧಿ, ನವೋದ್ಯಮ, ಶಿಕ್ಷಣ, ಆರೋಗ್ಯ ಇನ್ನಿತರ ಕ್ಷೇತ್ರಗಳ ಸುಧಾರಣೆಯ ಪ್ರಯೋಗ ಹಾಗೂ ಯಶೋಗಾಥೆಗಳನ್ನು ದಿಲ್ಲಿಯಲ್ಲಿ ಅಳವಡಿಸಲು ನಾವು ಉತ್ಸುಕರಾಗಿದ್ದೇವೆ. ಅದರ ಅಂಗವಾಗಿಯೇ ಇದು ನನ್ನ ಅಧ್ಯಯನ ಪ್ರವಾಸವಾಗಿದೆ.
ಯಾವುದೇ ಅನುಮಾನ ಬೇಡ. ಜನರ ಮಧ್ಯದಲ್ಲಿದ್ದು, ಅಭಿವೃದ್ಧಿ-ಸುಧಾರಣೆಯ ವೇಗ ತಗ್ಗದಂತೆ, ಸಾಮಾನ್ಯ ಜನರೊಟ್ಟಿಗೆ ಕಾರ್ಯ ನಿರ್ವಹಿಸುವ ನಮ್ಮ ಉದ್ದೇಶ ಖಂಡಿತವಾಗಿಯೂ ಮುಂದುವರಿಯಲಿದೆ. ‘ಪಂಜಾಬ್ ವಿಧಾನಸಭೆ ಹಾಗೂ ದಿಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಮತದಾರರು ನಮ್ಮನ್ನು ಸೋಲಿಸಿಲ್ಲ ಬದಲಾಗಿ ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂ)ನಮ್ಮನ್ನು ಸೋಲಿಸಿವೆ’ ಎಂಬುದು ಸಿಸೋಡಿಯಾ ಅನಿಸಿಕೆ.
ಮೋದಿಯದ್ದು ಒಡೆದಾಳುವ ನೀತಿ..
ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಬಗ್ಗೆ ಹೇಳುವುದಕ್ಕೇನಿದೆ? ಅವರದ್ದೇನಿದ್ದರೂ ಒಡೆದಾಳುವ ನೀತಿ. ಜನರಿಗೆ ಗೊತ್ತಾಗದ ರೀತಿಯಲ್ಲಿ ಇದನ್ನು ಸಾಕಾರಗೊಳಿಸುತ್ತ ಮೋದಿಯವರು ಮುನ್ನಡೆದಿದ್ದಾರೆ. ಹಲವು ವಿಚಾರಗಳಲ್ಲಿ ದೇಶದಲ್ಲಿ ಗೊಂದಲ ಸೃಷ್ಟಿಸುವ, ಅದರಲ್ಲಿಯೇ ಸಮಾಜ ಹಾಗೂ ಭಾವನೆಗಳನ್ನು ಒಡೆಯುವ ಮೂಲಕ ನಮ್ಮದೇನಿದ್ದರೂ ಯಶಸ್ವಿ ಆಡಳಿತದ ಸರಕಾರವೆಂದು ಬಿಂಬಿಸುತ್ತ ಸಾಗಿದ್ದಾರೆ ಎಂದು ಮನೀಶ್ ಸಿಸೋಡಿಯಾ ಹೇಳಿದರು.
– ಅಮರೇಗೌಡ ಗೋನವಾರ