Advertisement
ಸಹಕಾರಿ ಕ್ಷೇತ್ರಕ್ಕೆ ನಿಮ್ಮ ಪ್ರವೇಶ ಹೇಗೆ ?ನಮ್ಮದು ಜಮೀನುದಾರಿ ಮನೆತನ. ಕಾರ್ಕಳ ತಾಲೂಕಿನ ವರಂಗ ನನ್ನೂರು. 40 ವರ್ಷಗಳ ಹಿಂದೆ ಅಲ್ಲಿ ಒಂದು ಸಣ್ಣ ಸೊಸೈಟಿಯಿತ್ತು. ನಾಲ್ಕು ಕುರ್ಚಿ ಹಾಕಿಕೊಂಡು ಬೆಳೆ ಸಾಲ, ಪಡಿತರ ವಿತರಿಸಲಾಗುತ್ತಿತ್ತು. ಅದನ್ನು ನೋಡಿ ಈ ಸಹಕಾರಿ ಕ್ಷೇತ್ರದಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂಬ ಆಲೋಚನೆ ಬಂತು. ಎಸೆಸೆಲ್ಸಿ ತನಕ ಓದಿ ಕೆಲಸಕ್ಕೆ ಸೇರಲು ನಿರ್ಧರಿಸಿದೆ. ಆಗ, ಬಂಟ್ವಾಳ ನಾರಾಯಣ ನಾಯಕ್ ಎಂಬವರ ಮೂಲಕ ಒಬ್ಬ ಉದ್ಯೋಗಿಯಾಗಿ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಸೇರಿದೆ. ಆರು ವರ್ಷ ಅಲ್ಲಿ ದುಡಿದು, ಸ್ವಂತ ವ್ಯವಹಾರದತ್ತ ಮುಖ ಮಾಡಿದೆ. ಆ ಬಳಿಕ ಅಮರನಾಥ ಶೆಟ್ಟಿ ಅವರು ಜನತಾದಳದಿಂದ ಸಚಿವರಾಗಿದ್ದಾಗ, ಕಾರ್ಕಳದ ಭೂ ಅಭಿವೃದ್ಧಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿ 3 ವರ್ಷ ಅಧ್ಯಕ್ಷನಾದೆ. ಅನಂತರ 1994ರಿಂದ ಎಸ್‌ಸಿಡಿಸಿಸಿ ಅಧ್ಯಕ್ಷನಾಗಿ ಇಲ್ಲಿವರೆಗೆ ಸಾಗಿ ಬಂದಿದ್ದೇನೆ.
ನಾನು ಅಧ್ಯಕ್ಷನಾಗಿ ಬಂದಾಗ ಮಹಿಳೆಯರು ಸಹಕಾರಿ ಕ್ಷೇತ್ರಕ್ಕೆ ಬರುತ್ತಿರಲಿಲ್ಲ. ಅವರೆಲ್ಲ ಮನೆಗೆಲಸಕ್ಕೆ ಸೀಮಿತರಾಗಿದ್ದರು. ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ನವೋದಯ ಸ್ವ-ಸಹಾಯ ಗುಂಪು ಪ್ರಾರಂಭಿಸಿದೆ. ಈಗ ಅದು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗೊಳಿಸಿದೆೆ. ಮಹಿಳೆಯರ ಈ ಸ್ವಾವ ಲಂಬನೆಯ ಬದುಕು ಜಿಲ್ಲೆಯಲ್ಲಿ ದೊಡ್ಡ ಒಂದು ಸಂಘಟನೆಗೆ ಕಾರಣವಾಗಿದೆ. ಹೀಗಾಗಿ ನನ್ನ ಸಂಘಟನೆಯ ಹಿಂದಿನ ಶಕ್ತಿಯೇ ನಮ್ಮ ನವೋದಯ ಸ್ವ-ಸಹಾಯ ಗುಂಪಿನಲ್ಲಿ ತೊಡಗಿ ಕೊಂಡಿ ರುವ ಲಕ್ಷಾಂತರ ಜನರು. ಜತೆಗೆ ನಮ್ಮ ಬ್ಯಾಂಕ್ ಗ್ರಾಹಕರು.
Related Articles
ಸಾಮಾನ್ಯವಾಗಿ ನಮ್ಮ ಬ್ಯಾಂಕ್ ಚುನಾವಣೆಗಳು ಬಂದಾಗ ಕಠಿಣ ಅಥವಾ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತವೆ. ಅದು ಬಿಟ್ಟರೆ ದೇಶದಲ್ಲಿ ನೋಟ್ ಬ್ಯಾನ್ ಆಗಿದ್ದ ಸಂದರ್ಭದಲ್ಲಿ ನಮ್ಮ ಬ್ಯಾಂಕ್‌ಗೆ ಆದಾಯ ತೆರಿಗೆ ಇಲಾಖೆಯವರು ಬಂದು ಪರಿಶೀಲನೆ ನಡೆಸಿ ದ್ದರು. ಆ ಘಟನೆ ತುಂಬಾ ಬೇಸರ ತಂದಿದ್ದರೂ ಎಲ್ಲಿಯೂ ಲೋಪ ವಾಗಿಲ್ಲ ಎಂದು ಗೊತ್ತಾದಾಗ ಸಮಾಧಾನ ವಾಯಿತು.
Advertisement
ಬ್ಯಾಂಕ್‌ಗಳ ತವರೂರಿನಲ್ಲೇ ಸಹಕಾರಿ ಬ್ಯಾಂಕ್ ಅನ್ನು ಸರಿಸಾಟಿಯಾಗಿ ಬೆಳೆಸಿದ್ದು ಹೇಗೆ?ನಮ್ಮ ಜಿಲ್ಲೆ ಬ್ಯಾಂಕ್‌ಗಳ ತವರೂರು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿಯೂ ಮುಂದಿದೆ. ಹೀಗಿರುವಾಗ ಸಹಕಾರಿ ರಂಗದಲ್ಲಿಯೂ ಜಿಲ್ಲೆಯನ್ನು ಏಕೆ ತವರೂರು ಮಾಡಬಾರದೆಂದು ಆಲೋಚಿಸಿ ಕಾರ್ಯಪ್ರವೃತ್ತನಾದೆ. ಅದರ ಪ್ರಯತ್ನ ಈಗ ಜನರ ಮುಂದಿದೆ. ಈಗ ವಾಣಿಜ್ಯ ಬ್ಯಾಂಕ್‌ಗಳಿಗೆ ಸರಿಸಾಟಿಯಾಗಿ 105 ಶಾಖೆಗಳೊಂದಿಗೆ ನಮ್ಮ ಬ್ಯಾಂಕ್ ಬೆಳೆದಿದೆ. ಈ ಹಿಂದೆ ಸಹಕಾರಿ ಬ್ಯಾಂಕ್ ಅಂದಾಗ ಸೊಸೈಟಿ ಎಂಬ ಕೀಳರಿಮೆಯಿತ್ತು. ಆದರೆ ಆ ಭಾವನೆ ಹೋಗಲಾಡಿಸಿ ಅತ್ಯಾಧುನಿಕ ಸೇವೆಗಳೊಂದಿಗೆ ಕಾರ್ಪೊರೇಟ್ ರೂಪ ನೀಡಲಾಗಿದೆ. ಅವಕಾಶ ಕೊಟ್ಟಿದ್ದರೆ ಎಸ್‌ಸಿಡಿಸಿಸಿ ಬ್ಯಾಂಕ್ ಅನ್ನು ದೇಶದೆಲ್ಲೆಡೆ ವಿಸ್ತರಿಸುತ್ತಿದ್ದೆ. ಆದರೆ ಈ ಹಿಂದೆ ದೇಶದೆಲ್ಲೆಡೆ ವ್ಯವಹಾರ ಮಾಡಲು ನೀಡಿದ್ದ ಪರವಾನಗಿಯನ್ನು ಆರ್‌ಬಿಐ ನಂತರ ಜಿಲ್ಲೆಗೆ ಸೀಮಿತಗೊಳಿಸಿತು.
ಖಂಡಿತವಾಗಿಯೂ; ದೇಶದಲ್ಲಿ ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವಷ್ಟು ಉತ್ತೇಜನ, ಆರ್ಥಿಕ ಬೆಂಬಲ ಸಹಕಾರಿ ಬ್ಯಾಂಕ್‌ಗಳಿಗೆ ನೀಡುತ್ತಿಲ್ಲ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ನಷ್ಟದಲ್ಲಿದ್ದಾಗ ಆರ್ಥಿಕ ಸಹಾಯಧನ ದೊರೆಯುತ್ತದೆ. ಸಹಕಾರಿ ಬ್ಯಾಂಕ್‌ಗಳಿಗೆ ನಯಾಪೈಸೆ ಕೊಡುವುದಿಲ್ಲ. ಕೋಟಿಗಟ್ಟಲೆ ಹಣ ಸರಕಾರಿ ಬ್ಯಾಂಕ್‌ಗಳಿಗೆ ಬಂದು ಬೀಳುತ್ತದೆ. ಆದರೆ ಸರಕಾರ ನಮ್ಮಲ್ಲಿ ಠೇವಣಿ ಇಡುವುದಿಲ್ಲ. ನಾವು ಜನರಿಂದ ಠೇವಣಿ ಪಡೆದು ರೈತರಿಗೆ ಸಾಲ ಕೊಡುತ್ತೇವೆ. ಇಷ್ಟಾಗಿಯೂ ವಾಣಿಜ್ಯ ಬ್ಯಾಂಕ್‌ಗಳ ಜತೆೆ ಪೈಪೋಟಿ ಮಾಡುತ್ತಿದ್ದೇವೆ ಎನ್ನುವುದು ಸ್ಪಷ್ಟ. ಆರ್‌ಬಿಐ ಹಾಗೂ ಸರಕಾರಗಳಿಂದ ನಿಮ್ಮ ನಿರೀಕ್ಷೆ ಏನು?
ಸರಕಾರದ ಯೋಜನೆಗಳಿಗೆ ಬರುವ ಹಣದ ಸ್ವಲ್ಪಪಾಲನ್ನು ಸದೃಢ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡಬೇಕು. ಜತೆಗೆ ಹೊಸ ತಂತ್ರಜ್ಞಾನ ಅಳವಡಿಸುವುದಕ್ಕೆ ಆರ್ಥಿಕ ನೆರವು ಕೊಡಬೇಕು. ಅದುಬಿಟ್ಟು, ನಷ್ಟದಲ್ಲಿರುವ ಬ್ಯಾಂಕ್‌ಗಳಂತೆ ಸಬ್ಸಿಡಿ ಕೊಡಿ ಎಂದು ಯಾವತ್ತೂ ನಾವು ಕೇಳುವುದಿಲ್ಲ. ರೈತರ ಸಾಲಮನ್ನಾ ಯೋಜನೆ ಹಣವನ್ನು ಸಮಯಕ್ಕೆ ಸರಿಯಾಗಿ ಸರಕಾರ ಬಿಡುಗಡೆಗೊಳಿಸಬೇಕು. ಅದರಿಂದ ಸಹಕಾರಿ ಬ್ಯಾಂಕ್ ಮತ್ತು ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸಿದಂತಾಗುತ್ತದೆ. ರೈತರು ಕೃಷಿಯಿಂದ ವಿಮುಖರಾಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕೃಷಿಯಿಂದ ರೈತರು ವಿಮುಖರಾಗುತ್ತಿರುವುದಕ್ಕೆ ಪ್ರಮುಖ ಕಾರಣ, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವುದು. ಹೀಗಾಗಿ ಬೆಳೆಗೆ ಸೂಕ್ತ ಬೆಲೆ ಅಥವಾ ಮಾರುಕಟ್ಟೆ ಲಭಿಸಿದಾಗ, ಉನ್ನತ ಶಿಕ್ಷಣ ಪಡೆದ ರೈತರ ಮಕ್ಕಳೂ ಕೃಷಿಯಲ್ಲೇ ತೊಡಗಿಸಿಕೊಳ್ಳಬಹುದು. ನಮಗೆ ಅವಕಾಶ ಕೊಟ್ಟರೆ, ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ನಿರ್ಮಿಸಲೂ ಸಿದ್ಧ. ವಾಣಿಜ್ಯ ಬ್ಯಾಂಕ್‌ಗಳಂತೆ ಸಹಕಾರಿ ಬ್ಯಾಂಕ್‌ಗಳನ್ನು ವಿಲೀನಗೊಳಿಸುವುದು ನಿಮ್ಮ ದೃಷ್ಟಿಯಲ್ಲಿ ಪೂರಕವೇ ಅಥವಾ ಮಾರಕವೇ?
ಯಾವುದೇ ಬ್ಯಾಂಕ್‌ಗಳನ್ನು ವಿಭಜನೆಗೊಳಿಸುವುದಕ್ಕಿಂತ ವಿಲೀನಗೊಳಿಸುವುದು ಉತ್ತಮ. ಆದರೆ ಆರ್ಥಿಕ ಸುಸ್ಥಿತಿ ಅಥವಾ ಉತ್ತಮ ಆಡಳಿತವಿಲ್ಲದ ಬ್ಯಾಂಕ್‌ಗಳನ್ನು ವಿಲೀನಗೊಳಿಸುವುದರಲ್ಲಿ ಅರ್ಥವಿಲ್ಲ. ಸಹಕಾರ ಕ್ಷೇತ್ರದಲ್ಲಿಯೂ ಇದನ್ನು ಮಾಡಿದರೆ ಒಳ್ಳೆಯದು. ಆದರೆ ಪ್ರತಿಯೊಂದು ಗ್ರಾಮದಲ್ಲಿಯೂ ಒಂದು ಸಹಕಾರಿ ಬ್ಯಾಂಕ್ ಅಥವಾ ಸೊಸೈಟಿ ಇರಬೇಕು. ಹೀಗಾಗಿ ಗ್ರಾಮ ಮಟ್ಟದ ಸೊಸೈಟಿಗಳನ್ನು ವಿಲೀನಗೊಳಿಸಬಾರದು. ಅದು ಸೂಕ್ತವೂ ಅಲ್ಲ.
ಖಂಡಿತ ಇಲ್ಲ; ಬಹುಶಃ ಯಾರೇ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಗುರುತಿಸುವ ರೀತಿ ಇದಾಗಿರಬಹುದು ಎಂದುಕೊಂಡಿದ್ದೇನೆ. ಜ.19ರಂದು ನೆಹರೂ ಮೈದಾನದಲ್ಲಿ ನಡೆಯುವ ಕಾರ್ಯಕ್ರಮ ನಿಜಕ್ಕೂ ನನ್ನ ಪಾಲಿಗೆ ಅಪೂರ್ವ ಗೌರವದ ಸ್ಮರಣೀಯ ಕ್ಷಣ. ದೇಶದ ಎಲ್ಲ ಸಹಕಾರಿ ಸಾಧಕರಿಗೆ ಮತ್ತಷ್ಟು ಕೆಲಸ ಮಾಡುವುದಕ್ಕೆ ಹುರುಪು ನೀಡುವ ಗೌರವ ಇದೆಂದು ಭಾವಿಸಿದ್ದೇನೆ. ಸಹಕಾರಿ ಕ್ಷೇತ್ರಕ್ಕೆ ಇಂಥದೊಂದು ದೊಡ್ಡ ಗೌರವ ಸಲ್ಲಿಕೆಯಾಗುತ್ತಿರುವುದಕ್ಕೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಮೊದಲ ಬಾರಿಗೆ ಮಂಗಳೂರು ಇಷ್ಟೊಂದು ದೊಡ್ಡ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದೆ ಎನ್ನಲಾಗುತ್ತಿದೆ.
ಎರಡು ಲಕ್ಷ ಜನರು ಸೇರಿ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿ ಅಭಿನಂದಿಸಲು ಹೊರಟಿರುವಾಗ, ಅದಕ್ಕೆ ನಾನು ನಿಜವಾಗಿಯೂ ಅರ್ಹನೇ ಎಂಬ ಭಾವನೆ ನನ್ನೊಳಗೆ ಈಗ ಮೂಡಿದೆ. ಏಕೆಂದರೆ, ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಇದು ಜನ ಮಾಡುವ ಕಾರ್ಯಕ್ರಮ. ಜನತೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು, ರಚನಾತ್ಮಕವಾಗಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಇದೇ ಸಾಕ್ಷಿ. ಚಾರಿತ್ರಿಕವಾದ ಈ ಕಾರ್ಯಕ್ರಮದ ಮೂಲಕ ಸಹಕಾರಿ ಕ್ಷೇತ್ರ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕೆಂಬುದು ನನ್ನ ಹೆಬ್ಬಯಕೆ. ದಕ್ಷಿಣ ಕನ್ನಡದ ಸಹಕಾರಿ ವಲಯದಲ್ಲಿ ನೀವು ಅಜಾತಶತ್ರುವೇ?
ದಕ್ಷಿಣ ಕನ್ನಡ ರಾಜಕೀಯಕ್ಕೆ ಹೆಸರುವಾಸಿಯಾದ ಜಿಲ್ಲೆ. ಆದರೆ ಸಹಕಾರಿ ವಿಷಯದಲ್ಲಿ ಅದು ಎಲ್ಲಿಯೂ ಕಾಣಿಸಿಲ್ಲ ಎನ್ನುವುದು ಬಹಳ ಮುಖ್ಯ. ಜನರಿಗೆ ಸೌಲಭ್ಯ ಕೊಡಿಸುವುದೇ ನಮ್ಮಂಥ ಸಹಕಾರಿಗಳ ಆದ್ಯ ಕರ್ತವ್ಯ. ರಾಜಕೀಯ ಮಾಡಲು ಇಲ್ಲಿಗೆ ಬಂದಿಲ್ಲ. ನಮ್ಮ ನಡುವೆ ಅಭಿಪ್ರಾಯ ಬೇಧವಿರಬಹುದು; ಆದರೆ ರಾಜಕೀಯ ಮೀರಿ ನಿಲ್ಲುವುದು ಮತ್ತು ನಿಂತಿರುವುದು ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರದ ವಿಶೇಷತೆ. ಬಹುಶಃ ಈ ಅಂಶವೂ ಸಹ ನಾನು ಸತತ 25 ವರ್ಷಗಳಿಂದ ಅಧ್ಯಕ್ಷನಾಗಿ ಮುಂದುವರಿದಿರಲು ಒಂದು ಕಾರಣವಾಗಿರಬಹುದು. ನಾವು ರಾಜಕೀಯ ದೂರವಿಟ್ಟು ಕೆಲಸ ಮಾಡಿದಾಗ ಪ್ರತಿಸ್ಪರ್ಧಿ ಅಥವಾ ಶತ್ರುಗಳು ಹುಟ್ಟಿಕೊಳ್ಳುವುದಿಲ್ಲ. ಕೈ ಜೋಡಿಸುವುದು ಸಹಕಾರಿ ಕ್ಷೇತ್ರದ ಚಿಹ್ನೆ. ಹೀಗಾಗಿ ಒಂದು ಕೈಗೆ ಇನ್ನೊಂದು ಕೈ ಜೋಡಿಸುವ ಕೆಲಸ ಮಾಡಿದ್ದೇನೆಯೇ ವಿನಾ ಬೇರ್ಪಡಿಸಿಲ್ಲ. ಜಿಲ್ಲೆಯ ಸೊಸೈಟಿಗಳಲ್ಲಿ ಬಿಜೆಪಿ ಪ್ರಾಬಲ್ಯವಿದ್ದರೂ, ನಿಮ್ಮ ವಿಷಯದಲ್ಲಿ ಎಲ್ಲರೂ ಒಂದಾಗುತ್ತಾರೆ; ಇದರ ಗುಟ್ಟೇನು?
ಸೇವೆಗೆ ನನ್ನ ಮೊದಲ ಆದ್ಯತೆ. ಚುನಾವಣೆಯಲ್ಲಿ ಸಹಕರಿಸಲು ಹೇಳಿದಾಗ ಎಲ್ಲರೂ ಬೆಂಬಲಿಸುತ್ತಾರೆ. ನಾನು ಎಲ್ಲಿಯೂ ರಾಜಕೀಯ ಮಾಡುವುದಿಲ್ಲ; ನನ್ನ ಪಾಲಿಗೆ ಸಹಕಾರವೇ ಒಂದು ಪಕ್ಷ. ಆ ಮೂಲಕ ನಾವೆಲ್ಲ ಪಕ್ಷ ಮೀರಿ ಒಟ್ಟಾಗಿ ಹೋಗುತ್ತಿದ್ದೇವೆ. ಸಕ್ರಿಯ ರಾಜಕಾರಣದಿಂದ ದೂರ ಉಳಿದ ಕಾರಣವೇನು? ಅದು ನಿಮ್ಮ ಸಹಕಾರ ಕ್ಷೇತ್ರವನ್ನು ಬೆಳೆಸುವ ಸುವರ್ಣ ಅವಕಾಶವಾಗಿ ತೋರಲಿಲ್ಲವೇ?
ಸಕ್ರಿಯ ರಾಜಕಾರಣಕ್ಕೆ ಬರುವ ಆಸೆ ಖಂಡಿತ ಇಲ್ಲ. ನನಗೆ ಈ ಸಹಕಾರ ಕ್ಷೇತ್ರವೇ ಸಾಕು; ಇದೇ ನನಗೆ ಪೂರ್ಣ ಸಂತೃಪ್ತಿ, ಸಂತೋಷ ಕೊಟ್ಟಿದೆ. ರಾಜಕಾರಣದಲ್ಲಿ ಇರುತ್ತಿದ್ದರೆ ಈಗ ಯಾವುದೋ ಒಂದು ಪಕ್ಷದ ರಾಜೇಂದ್ರ ಕುಮಾರ್ ಆಗಿರುತ್ತಿದ್ದೆ. ರಾಜಕೀಯಕ್ಕೆ ಬರುವಂತೆ ಸಾಕಷ್ಟು ಮಂದಿಯಿಂದ ಒತ್ತಡ, ಒತ್ತಾಯ ಬರುತ್ತಿದೆ. ಈ ಸಹಕಾರಿ ಕ್ಷೇತ್ರದಲ್ಲಿ ಲಭಿಸಿದ ಸಂತೃಪ್ತಿ ಬಹುಶಃ ಅಲ್ಲಿ ಸಿಗುತ್ತಿರಲಿಲ್ಲ. ಹಾಗಾಗಿಯೇ ಮನಸ್ಸು ಮಾಡಿಲ್ಲ. ಮುಂದೆಯೂ ಆ ದಿಕ್ಕಿನಲ್ಲಿ ನನ್ನ ಚಿಂತನೆಯಿಲ್ಲ. ನಾಲ್ಕು ದಶಕದ ಈ ಸುದೀರ್ಘ ಸಹಕಾರಿ ಚಟುವಟಿಕೆಗಳು ಸಾಕು ಎಂದು ಎಂದಾದರೂ ಅನ್ನಿಸಿದೆಯೇ?
ಆ ರೀತಿಯ ಯೋಚನೆ ಖಂಡಿತ ನನ್ನ ಮನಸ್ಸಿಗೆ ಬಂದಿದೆ. ಸಹಕಾರಿ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಮಂದಿ ಹೊಸಬರನ್ನು ಬೆಳೆಸಿದ್ದೇನೆ. ಮುಂದೆಯೂ ಬೆಳೆಸುತ್ತೇನೆ. ಆದರೆ ವಯಸ್ಸು ನೋಡಿದಾಗ, ನನಗೂ 70 ವರ್ಷವಾಗುತ್ತಿದೆ. ಯಾವುದೇ ಕ್ಷೇತ್ರದಲ್ಲಿ ವಯೋನಿವೃತ್ತಿ ಸಹಜ. ಹೀಗಾಗಿ ನನ್ನ ಬದುಕಿನಲ್ಲಿ ಅಮೂಲ್ಯವಾದ ಈ ಸಹಕಾರಿ ಕ್ಷೇತ್ರದ ಸಂಬಂಧ ನೋಡಿಕೊಂಡು ಮುಂದಿನ ದಿನಗಳಲ್ಲಿ ಆಲೋಚಿಸುವೆ. ನವೋದಯ ಗುಂಪುಗಳಿಗೆ ವಿಂಶತಿ ಸಂಭ್ರಮ
ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ನಡಿ ಈಗ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಹಾಗೂ ಉತ್ತರ ಕನ್ನಡದಲ್ಲಿ ಸುಮಾರು 35,000ಕ್ಕೂ ಹೆಚ್ಚು ನವೋದಯ ಸ್ವ-ಸಹಾಯ ಸಂಘಗಳು ರಚನೆಗೊಂಡು, ಅದರಲ್ಲಿ ಒಟ್ಟು 3.50 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ಸದಸ್ಯರ ಪೈಕಿ ಶೇ.75ರಷ್ಟು ಮಹಿಳಾ ಗುಂಪುಗಳಾಗಿರುವುದು ವಿಶೇಷ. ಈ ಸದಸ್ಯರಿಗೆ ಚೈತನ್ಯ ವಿಮಾ ಯೋಜನೆ ಮೂಲಕ ವೈದ್ಯಕೀಯ ಸೌಲಭ್ಯವಿದೆ. ಈ ಸ್ವ-ಸಹಾಯ ಗುಂಪು ಪ್ರಾರಂಭಗೊಂಡು 20 ವರ್ಷ ಆಗಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವದ ಜತೆಗೆ “ವಿಂಶತಿ’ ಸಂಭ್ರಮ ಕೂಡ ಆಚರಿಸಲಾಗುತ್ತಿದೆ. ಎಸ್‌ಸಿಡಿಸಿಸಿ ಬ್ಯಾಂಕ್ ಈಗ ಒಟ್ಟು 105 ಶಾಖೆಗಳನ್ನು ಹೊಂದಿದ್ದು, ಒಟ್ಟು 6748.84 ಕೋಟಿ ರೂ. ವ್ಯವಹಾರ ನಡೆಸುತ್ತಿದೆ. ∙ ಸಂದರ್ಶನ : ಸುರೇಶ್ ಪುದುವೆಟ್ಟ