Advertisement
ಕೋಮಾರನಹಳ್ಳಿಯವರೇ ಆದ ಸೀತಾರಾಮಾಚಾರ್, 35 ವರ್ಷಗಳ ಹಿಂದೆ ಈ ಹೋಟೆಲ್ ಆರಂಭಿಸಿದ್ರು. ಈಗ ಅವರ ಮಗ ಕೆ.ಎಸ್.ಮಧುಸೂದನ್ ಈ ಹೋಟೆಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಹೋಟೆಲ್‌ಗೆ ನಾಮಫಲಕವಿಲ್ಲದ ಕಾರಣ, ಹೊಸದಾಗಿ ಹೋಗುವವರು ಮಧು ಮಂಡಕ್ಕಿ ಹೋಟೆಲ್ ಯಾವುದು ಎಂದು ಕೇಳಿದರೆ ತೋರಿಸುತ್ತಾರೆ. ದಾವಣಗೆರೆಯಿಂದ ಶಿವಮೊಗ್ಗಕ್ಕೆ ಆಗ್ಗಾಗ್ಗೆ ಓಡಾಡುವವರು ಮಧು ಹೋಟೆಲ್‌ನಲ್ಲಿ ಒಂದು ಮಿರ್ಚಿನಾದ್ರೂ ತಿಂದು ಹೋಗುವುದನ್ನು ಮರೆಯಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ ಹೀಗೆ ಹಲವು ರಾಜಕಾರಣಿಗಳು, ಸಿನಿಮಾ ನಟರು, ಪತ್ರಕರ್ತರು, ನೌಕರರು, ಪ್ರವಾಸಿಗರು ಮಧು ಮಂಡಕ್ಕಿಯ ರುಚಿಗೆ ಮನಸೋತಿದ್ದಾರೆ.
ಒಂದು ತಪ್ಪಲೆಯಲ್ಲಿ ಒಗ್ಗರಣೆ ಮಂಡಕ್ಕಿ ಮಾಡಿದ್ರೆ ಒಂದು ಗಂಟೆಯಲ್ಲಿ ಖಾಲಿಯಾಗಿರುತ್ತದೆ. ಯಾವುದನ್ನೂ ಮೊದಲೇ ಸಿದ್ಧಪಡಿಸಿ ಇಟ್ಟಿರುವುದಿಲ್ಲ. ಗ್ರಾಹಕರನ್ನು ನೋಡಿಕೊಂಡು ಆಗಲೇ ಸಿದ್ಧಪಡಿಸಿಕೊಡುತ್ತಾರೆ. ದಿನಕ್ಕೆ ಎಷ್ಟು ಮಂಡಕ್ಕಿ ಖಾಲಿ ಯಾಗುತ್ತೆ ಎಂಬುದನ್ನು ಇವರು ಈವರೆಗೂ ಲೆಕ್ಕ ಇಟ್ಟಿಲ್ಲ. ವಾರ ಪೂರ್ತಿ ಹೋಟೆಲ್ ತೆರೆದೇ ಇರುವುದರಿಂದ ತಿಂಡಿ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆ ಮೇಲೆ ಜನ ಬರುತ್ತಾರೆ. ಮಂಡಕ್ಕಿ ಒಗ್ಗರಣೆ, ಅವಲಕ್ಕಿ ಒಗ್ಗರಣೆ ಜೊತೆ ಮೆಣಸಿನಕಾಯಿ ಬಜ್ಜಿ ಅಥವಾ ಪಕೋಡಾ ತಿಂದು ಒಂದು ಕಪ್ ಟೀ ಕುಡಿದ್ರೆ ಅಲ್ಲಿಗೆ ಒಂದೊತ್ತಿನ ಊಟ ಮುಗಿದಂತೆ. ನರ್ಗೀಸ್, ಚೌಚೌ(ಸೇವ್) ಕೂಡ ಇಲ್ಲಿ ಸಿಗುತ್ತೆ. ಮಂಡಕ್ಕಿ-ಅವಲಕ್ಕಿ ಒಗ್ಗರಣೆಯನ್ನು ಮೊಸರಿನೊಂದಿಗೆ ತಿಂದರೆ ಅದರ ರುಚಿಯೇ ಬೇರೆ. ಮಧು ಅವರೊಂದಿಗೆ ನಾಲ್ಕೈದು ಮಂದಿ ಕೆಲಸ ಮಾಡುತ್ತಾರೆ. ಬಜ್ಜಿ ಕರಿಯುವುದು, ಮಂಡಕ್ಕಿ ಒಗ್ಗರಣೆ ಹಾಕುವುದು ಹೀಗೆ ಎಲ್ಲರೂ ಒಂದೊಂದು ಕೆಲಸ ಮಾಡುತ್ತಾರೆ. ಸಾಮಾನ್ಯ ಹೋಟೆಲ್‌ಗಳಂತೆ ಕುರ್ಚಿ, ಟೇಬಲ್‌ಗಳಿಲ್ಲದ ಮಧು ಹೋಟೆಲ್, ಮಂಡಕ್ಕಿ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಹೋಟೆಲ್‌ನ ಸಮಯ:
ಬೆಳಗ್ಗೆ 5.30ಕ್ಕೆ ಪ್ರಾರಂಭವಾದ್ರೆ ರಾತ್ರಿ 9 ಗಂಟೆವರೆಗೆ ತೆರೆದಿರುತ್ತದೆ. ಊರ ಹಬ್ಬ ಇದ್ರೆ ಮಾತ್ರ ರಜೆ.
Related Articles
ಕೋಮಾರನಹಳ್ಳಿ ಗ್ರಾಮ, ಹರಿಹರ ತಾಲೂಕು, ಶಿವಮೊಗ್ಗ ಮುಖ್ಯರಸ್ತೆಯಲ್ಲಿ ಮಲೇಬೆನ್ನೂರು ಹೋಬಳಿ ಕೇಂದ್ರದಿಂದ 2 ಕಿ.ಮೀ. ಸಾಗಿದರೆ ಬಲಭಾಗದಲ್ಲಿ ಇದೆ.
Advertisement
ದೊರೆಯುವ ತಿಂಡಿಗಳು: ಖಾರಾ (ಸೇವ್), ಮಂಡಕ್ಕಿ ಖಾರಾ, ಒಗ್ಗರಣೆ ಮಂಡಕ್ಕಿ, ಒಗ್ಗರಣೆ ಅವಲಕ್ಕಿ, ಮೆಣಸಿನ ಕಾಯಿ (ಮಿರ್ಚಿ), ಈರುಳ್ಳಿ ಬಜ್ಜಿ, ಟೀ… ಹೀಗೆ ಮೂರು ನಾಲ್ಕು ಬಗೆಯ ತಿಂಡಿ ಸಿಗುತ್ತದೆ. ಮಂಡಕ್ಕಿ ಒಗ್ಗರಣೆ, ಮಿರ್ಚಿ, ಟೀ ಮೂರೂ ಸೇರಿ 30 ರೂ., ಮಂಡಕ್ಕಿ ಒಗ್ಗರಣೆ, ಅವಲಕ್ಕಿ ಒಗ್ಗರಣೆ ಪ್ಲೇಟ್‌ಗೆ ದರ 20 ರೂ.. ಸಿಂಗಲ್ ಬಜ್ಜಿ, ಟೀಗೆ ತಲಾ 5 ರೂ. – ಭೋಗೇಶ ಆರ್.ಮೇಲುಕುಂಟೆ – ಫೋಟೋ ಕೃಪೆ: ಕೆ.ಎಂ.ಶ್ರೀವತ್ಸಾ.