Advertisement
ಪ್ರಗತಿ ಪರಿಶೀಲನಾ ಸಭೆ ಸಹ ನಡೆಸಿದ್ದಾರೆ. ಹಿಂದೆ ಮೈತ್ರಿ ಸರ್ಕಾರದಲ್ಲಿ ಎನ್. ಮಹೇಶ್ ಶಿಕ್ಷಣ ಸಚಿವರಾಗಿದ್ದಾಗ ಜಿಲ್ಲೆಯ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ 79.92 ಕೋಟಿ ರೂ. ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದೆವು. ಈಗ ಕೊಠಡಿಗಳ ನಿರ್ಮಾಣ ಸೇರಿದಂತೆ ಜಿಲ್ಲೆಯ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ.ಗಳ ಅನುದಾನ ಅಗತ್ಯವಿದೆ. ಅದನ್ನು ಬಜೆಟ್‌ನಲ್ಲಿ ನೀಡಬೇಕು. ಕೇಂದ್ರ ಸರ್ಕಾರ ಸರ್ವ ಶಿಕ್ಷಣ ಅಭಿಯಾನದಲ್ಲಿ ಶಾಲೆಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
Related Articles
Advertisement
ನೀರಿನ ಯೋಜನೆಗೆ ಹಣ ನೀಡಿ: ಚಾಮರಾಜನಗರ, ಗುಂಡ್ಲುಪೇಟೆ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾರ್ಯಗತವಾಗಿದೆ. ಹನೂರು ತಾಲೂಕಿಗೆ ಇನ್ನೂ ಜಾರಿಯಾಗಿಲ್ಲ. ಆ ತಾಲೂಕಿನ 291 ಹಳ್ಳಿಗಳಿಗೆ 414 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ಇದರಲ್ಲಿ 98 ಗ್ರಾಮಗಳಿಗೆ 166 ಕೋಟಿ ರೂ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮಂಜೂರಾಗಿ ಕೆಲಸ ಆರಂಭವಾಗಿದೆ. ಇನ್ನುಳಿದ 183 ಹಳ್ಳಿಗಳಿಗೆ 248 ಕೋಟಿ ರೂ.ಅನುದಾನ ಅಗತ್ಯವಿದೆ.
ಈ ಅನುದಾನ ನೀಡಿ ಯೋಜನೆ ಕಾರ್ಯಗತವಾದರೆ, ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ದೊರೆತಂತಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಈ ಯೋಜನೆಗೆ ಬಜೆಟ್‌ನಲ್ಲಿ ಹಣ ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಪುಟ್ಟರಂಗ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಉಪಸ್ಥಿತರಿದ್ದರು.
ನಳಿನ್‌ಕುಮಾರ್ ಕಟೀಲ್ ಬೇಜವಾಬ್ದಾರಿ ಹೇಳಿಕೆ: ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಬಾಲಿಶ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹರಿಕತೆ ದಾಸರಂತೆ ಮಾತನಾಡುತ್ತಿದ್ದಾರೆ. ಉತ್ತರನ ಪೌರುಷ ಒಲೆಯ ಮುಂದೆ ಎಂಬಂತೆ ಅವರ ಪೌರುಷ ಇಲ್ಲಿ ಮಾತ್ರ, ದೆಹಲಿಯಲ್ಲಲ್ಲ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಗೇಲಿ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತಾರೆ. ಇಲ್ಲಿ ನಳಿನ್‌ಕುಮಾರ್ ಅವರು ಕಾಂಗ್ರೆಸ್ ಮುಕ್ತ ಜಿಲ್ಲೆ ಮಾಡುತ್ತೇವೆ ಎನ್ನುತ್ತಾರೆ. ಮೊದಲಿಗೆ ದೇಶದಲ್ಲಿ ಬಿಜೆಪಿ ಯಾವ ರೀತಿ ಅಧಿಕಾರ ಕಳೆದುಕೊಳ್ಳುತ್ತಿದೆ ಎಂದು ನೋಡಲಿ. 2017ರಲ್ಲಿ ದೇಶದಲ್ಲಿ ಶೇ.71ರಷ್ಟಿದ್ದ ಬಿಜೆಪಿ ಆಡಳಿತ ಈಗ ಶೇ.40ಕ್ಕೆ ತಲುಪಿದೆ. 17 ರಾಜ್ಯಗಳ ಪೈಕಿ 9 ರಾಜ್ಯಗಳಲ್ಲಿ ಮೈತ್ರಿಕೂಟದ ಸರ್ಕಾರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಯಾವತ್ತೂ ಬಿಜೆಪಿ ಮುಕ್ತ ಭಾರತ ಮಾಡುವುದಾಗಿ ಹೇಳಿಲ್ಲ. ಆಡಳಿತ ಪಕ್ಷಕ್ಕೆ ಪ್ರಬಲ ವಿರೋಧ ಪಕ್ಷ ಇದ್ದಾಗಲೇ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯ ಎಂದು ತಿಳಿಸಿದರು.
ನಿಮ್ಮನ್ನೇ ನೀವು ಪ್ರಶ್ನೆ ಮಾಡಿಕೊಳ್ಳಿ: ಸಿದ್ದರಾಮಯ್ಯ ಅವರನ್ನು ನಿದ್ರಾರಾಮಯ್ಯ ಎಂದಿದ್ದಾರೆ. ಅವರು 5 ವರ್ಷ ಮುಖ್ಯಮಂತ್ರಿಯಾಗಿ ಸುಭದ್ರ ಸರ್ಕಾರ ನೀಡಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮ ಜಾರಿ ಮಾಡಿದ್ದಾರೆ. ಅದರ ಹಿಂದೆ ಇದ್ದ ಬಿಜೆಪಿ ಸರ್ಕಾರ 3 ಮುಖ್ಯಮಂತ್ರಿಗಳನ್ನು ಕಂಡಿತ್ತು. 6 ಮಂತ್ರಿಗಳು ರಾಜೀನಾಮೆ ನೀಡಬೇಕಾಯಿತು ಏಕೆ? ಸಿದ್ದರಾಮಯ್ಯನವರ ವಿರುದ್ಧ ಮಾತನಾಡುವ ಮೊದಲು ನಿಮ್ಮನ್ನೇ ನೀವು ಪ್ರಶ್ನೆ ಮಾಡಿಕೊಳ್ಳಿ ಎಂದು ಕಟೀಲ್ ಅವರಿಗೆ ತಿರುಗೇಟು ನೀಡಿದರು.
ಉತ್ತರನ ಪೌರುಷ ಒಲೆಯ ಮುಂದೆ!: ಕಾಂಗ್ರೆಸ್ ವಿರುದ್ಧ ಟೀಕೆ ಮಾಡುವ ಮೊದಲು ರಾಜ್ಯಕ್ಕೆ ಕೇಂದ್ರದಿಂದ ಬರ ಪರಿಹಾರ, ಜಿಎಸ್‌ಟಿ, ತೆರಿಗೆ ಹಣ ಬರಬೇಕು. ಅದನ್ನು ತರಲು ಪ್ರಯತ್ನ ನಡೆಸಿ. ಉತ್ತರನ ಪೌರುಷ ಒಲೆ ಮುಂದೆ ಎಂಬಂತೆ, ನಿಮ್ಮ ಪೌರುಷ ಇಲ್ಲಿ ತೋರಿಸಬೇಡಿ. ದೆಹಲಿಯ ಪಾರ್ಲಿಮೆಂಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ದನಿಯೆತ್ತಿ ಎಂದು ವ್ಯಂಗ್ಯವಾಡಿದರು.
ಜಿಲ್ಲೆಗೆ ಸಿಎಂ ಭೇಟಿ ನೀಡಿ ಪ್ರಗತಿ ಪರಿಶೀಲಿಸಲಿ: ಸಿಎಂ ಯಡಿಯೂರಪ್ಪ ಅವರು ಶೀಘ್ರವೇ ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಮಾಜಿ ಸಂಸದ ಧ್ರುವನಾರಾಯಣ ಒತ್ತಾಯಿಸಿದರು. ಕಳೆದ ಬಾರಿ ಸಿಎಂ ಆಗಿದ್ದಾಗಲೂ ಯಡಿಯೂರಪ್ಪನವರು ಚಾಮರಾಜನಗರಕ್ಕೆ ಬರಲಿಲ್ಲ. ಮೂಢನಂಬಿಕೆಯಿಂದ ಮುಖ್ಯಮಂತ್ರಿಯಾಗಿದ್ದಾಗ ಅವರು ಚಾ.ನಗರಕ್ಕೆ ಭೇಟಿ ನೀಡುತ್ತಿಲ್ಲ.
ಅಧಿಕಾರಕ್ಕೆ ಬಂದು 7 ತಿಂಗಳಾಗಿದೆ. ಇನ್ನಾದರೂ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ, ಅಭಿವೃದ್ಧಿಯ ಕುರಿತು ಅಧಿಕಾರಿಗಳ ಸಭೆ ನಡೆಸಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನೇಕ ಬಾರಿ ಚಾ.ನಗರಕ್ಕೆ ಬಂದು ಸಾವಿರಾರು ಕೋಟಿ ರೂ.ಅನುದಾನ ನೀಡಿದರು. ಇನ್ನಾವ ಸಿಎಂ ಸಹ ಚಾ.ನಗರಕ್ಕೆ ಇಷ್ಟೊಂದು ಬಾರಿ ಭೇಟಿ ನೀಡಿರಲಿಲ್ಲ. ಇಷ್ಟೊಂದು ಅನುದಾನ ನೀಡಿರಲಿಲ್ಲ ಎಂದು ಸಮರ್ಥಿಸಿದರು.
ಕಾಂಗ್ರೆಸ್‌ನದು ವಂಶ ಪಾರಂಪರ್ಯ ರಾಜಕಾರಣ ಎನ್ನುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ವಂಶಪಾರಂಪರ್ಯ ರಾಜಕಾರಣವಲ್ಲವೇ? ಎಂದು ಪ್ರಶ್ನಿಸಿದರು. ಚಾಮುಲ್ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ನಾವು ಯಾರನ್ನೂ ಸಮರ್ಥಿಸಿಕೊಳ್ಳುವುದಿಲ್ಲ. ರಕ್ಷಣೆ ಮಾಡುವುದಿಲ್ಲ ಎಂದರು.