ಕಲಬುರಗಿ: ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದಿಸೆಯಲ್ಲಿ ರಾಷ್ಟ್ರೀಯ ಶಿಕ್ಷಣ ಯೋಜನೆಯಡಿ ಜಿಲ್ಲೆಯ ಮದರಸಾಗಳಿಗೆ ವಿಶೇಷ ಅನುದಾನ ನೀಡಲಾಗುವುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಮಹಬೂಲ್ ಕಾರಟಗಿ ಹೇಳಿದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ ಚುಲಬುಲ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸರ್ಕಾರ ಯೋಜನೆ ಮದರಸಾಗಳ ಗುಣಮಟ್ಟವನ್ನು ಉನ್ನತೀಕರಣಗೊಳಿಸಲು ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಮದರಸಾಗಳಲ್ಲಿ ಮೂಲಭೂತ ಸೌಲಭ್ಯ ಇರುವ ಕನಿಷ್ಠ 25 ಮಕ್ಕಳಿಗೆ ಊಟ ವಸತಿ ಸೌಕರ್ಯ ನೀಡುವ ಸಂಸ್ಥೆಗಳಿಗೆ ವಿಶೇಷ ಸೌಲಭ್ಯ ಕಲ್ಪಿಸುವ 12 ಲಕ್ಷ ರೂ.ಗಳ ಅನುದಾನ ನೀಡಲಾಗುವುದು ಎಂದು ಹೇಳಿದರು.
ಕುಡಾ ಅಧ್ಯಕ್ಷ ಹಾಗೂ ಪ್ರಧಾನಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮದ ಸದಸ್ಯರಾದ ಮಹಮದ್ ಅಸಗರ್ ಚುಲಬುಲ್ ಮಾತನಾಡಿ, ಮದರಸಾಗಳಿಗೆ ಕೇಂದ್ರ ಸರ್ಕಾರ ನೀಡುವ ವಿಶೇಷ ಅನುದಾನ ನೀಡುವ ತಿಳಿವಳಿಕೆ ಮೂಡಿಸಿಕೊಳ್ಳಲು ಈ ಸಭೆ ಕರೆಯಲಾಗಿದೆ. ಸರ್ಕಾರದ ಅತ್ಯುತ್ತಮ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಕೇವಲ 43 ಮೈನಾರಿಟಿ ಡಿಕ್ಲೇರ್ಡ್ ಶಿಕ್ಷಣ ಸಂಸ್ಥೆ ಘೋಷಣೆಯಾಗಿದೆ. ಆದರೆ ಇನ್ನೂ 200ಕ್ಕಿಂತ ಹೆಚ್ಚು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಅಲ್ಪಸಂಖ್ಯಾತ ಡಿಕ್ಲೇರ್ಡ್ ಸಂಸ್ಥೆ ಬಾಕಿ ಇರುತ್ತದೆ. ಉಳಿದ 200 ಶಿಕ್ಷಣ ಸಂಸ್ಥೆ ಮೈನಾರಿಟಿ ಡಿಕ್ಲೇರ್ಡ್ ಪ್ರಮಾಣ ಪತ್ರ ಶಿಕ್ಷಣ ಇಲಾಖೆಯಿಂದ ಪಡೆಯಬೇಕೆಂದು ಅಸಗರ ಚುಲ್‌ಬುಲ್ ಮನವಿ ಮಾಡಿದರು.
ಮಸ್ತಾನ್ ಬಿರಾದಾರ ಮಾತನಾಡಿ, ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳಾದರೂ ಪ್ರಧಾನ ಮಂತ್ರಿಗಳ 15 ಅಂಶಗಳ ಅನುಷ್ಠಾನ ಸಮಿತಿಯನ್ನು ರಚಿಸಲು ಇನ್ನೂ ಸಾಧ್ಯವಾಗಿಲ್ಲ. ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯನ್ನೊಳಗೊಂಡ ಅನುಷ್ಠನ ಸಮಿತಿ ರಚಿಸಿದರೆ, ಆ ಮೂಲಕ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿತ್ತು ಎಂದರು.
ಮಹಾನಗರ ಪಾಲಿಕೆ ಮೇಯರ್ ಶರಣುಕುಮಾರ ಮೋದಿ, ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಜಿಲ್ಲಾ ವಕ್ ಅಧಿಕಾರಿಯಾದ ಗುಲಾಮ ಸಾಮದಾನಿ ಇ.ಸಿ.ಒ., ನುಸ್ರತ್ ಮೊಹಿನುದ್ದೀನ್, ಇಕ್ಬಾಲ್ ಅಲಿ, ಮಾಜಿ ಮೇಯರ್ ಅಸಾಧಿಕ್ ಅಹ್ಮದ್ ಚುಲಬುಲ್ ಹಾಜರಿದ್ದರು.