Advertisement

ಜಿಪಂ ವಿಶೇಷ ಸಾಮಾನ್ಯ ಸಭೆ ಮತ್ತೆ ಮುಂದಕ್ಕೆ

01:31 PM Jun 03, 2017 | Team Udayavani |

ದಾವಣಗೆರೆ: 2017-18 ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಅನುದಾನದ ಕ್ರಿಯಾಯೋಜನೆ ಹಾಗೂ ತೀವ್ರ ಬರಗಾಲ ನಿಮಿತ್ತ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಅಗತ್ಯ ಕ್ರಮಗಳ ಕುರಿತಂತೆ ಶುಕ್ರವಾರ ಕರೆಯಲಾಗಿದ್ದ ಜಿಲ್ಲಾ ಪಂಚಾಯತ್‌ ವಿಶೇಷ ಸಾಮಾನ್ಯ ಸಭೆ ಕೋರಂ ಕೊರತೆಯಿಂದ ಮುಂದೂಲ್ಪಟ್ಟಿತು. 

Advertisement

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್‌ ಅಧ್ಯಕ್ಷತೆಯಲ್ಲಿ 2017-18 ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಅನುದಾನದ ಕ್ರಿಯಾಯೋಜನೆ ಹಾಗೂ ತೀವ್ರ ಬರಗಾಲ ನಿಮಿತ್ತ ಜನ-ಜಾನು ವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಅಗತ್ಯ ಕ್ರಮಗಳ ಕುರಿತಂತೆ ಕರೆಯಲಾಗಿದ್ದ ಮಹತ್ವದ ವಿಶೇಷ ಸಾಮಾನ್ಯ ಸಭೆಗೆ ಕಡಿಮೆ ಸದಸ್ಯರು ಹಾಜರಾಗಿದ್ದರು. 

ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಸಭೆಯಲ್ಲಿ 11.30 ಆದರೂ ಕುಂದೂರು ಕ್ಷೇತ್ರದ ಬಿಜೆಪಿ ಸದಸ್ಯೆ ದೀಪಾ ಜಗದೀಶ್‌ ಒಳಗೊಂಡಂತೆ ಇಬ್ಬರು ಸದಸ್ಯರ ಹೊರತುಪಡಿಸಿ ಇತರೆ ಸದಸ್ಯರ ಸುಳಿವೇ ಇರಲಿಲ್ಲ. ಅತಿ ಮುಖ್ಯವಾಗಿ ಯಾವುದೇ ಸ್ಥಾಯಿ ಸಮಿತಿ ಅಧ್ಯಕ್ಷರು ಕೊನೆಯವರೆಗೆ ಸಭೆಗೆ ಬರಲೇ ಇಲ್ಲ. ಸಭೆಗೆ ಬಂದಂತಹ ಅಧಿಕಾರಿಗಳು ಚರ್ಚೆಯಲ್ಲಿ ತೊಡಗಿದ್ದರು.

11.30ರ ನಂತರ ಅಧ್ಯಕ್ಷೆ ಉಮಾ ರಮೇಶ್‌, ಉಪಾಧ್ಯಕ್ಷ ಡಿ. ಸಿದ್ದಪ್ಪ, ಸದಸ್ಯರಾದ ಎಂ.ಆರ್‌. ಮಹೇಶ್‌, ಸವಿತಾ ಕಲ್ಲಪ್ಪ, ಕೆ.ಆರ್‌. ಜಯಶೀಲ ಇತರರು ಆಗಮಿಸಿದರು. ಒಟ್ಟಾರೆ 36 ಸದಸ್ಯತ್ವ ಬಲದಲ್ಲಿ ಎರಡನೇ ಮೂರು ಭಾಗದಷ್ಟು ಅಂದರೆ 26 ಸದಸ್ಯರಿದ್ದರೆ ಸಾಮಾನ್ಯ ಸಭೆ ನಡೆಸಬಹುದಿತ್ತು. ಆದರೆ, ಮಧ್ಯಾಹ್ನ 12 ಗಂಟೆಯಾದರೂ ಸದಸ್ಯರ ಸಂಖ್ಯೆ 14 ದಾಟಲೇ ಇಲ್ಲ.

ತಮ್ಮ ಹಾಗೂ  ತರೆ ಪಕ್ಷದ ಸದಸ್ಯರ ನಿರೀಕ್ಷೆಯಲ್ಲೇ ಆಸೀನರಾಗಿದ್ದ ಅಧ್ಯಕ್ಷೆ ಉಮಾ ರಮೇಶ್‌ ಸಭಾಂಗಣದಿಂದ ಹೊರ ಹೋದರು. ಕೆಲ ಹೊತ್ತಿನ ನಂತರ ಸಭಾಂಗಣಕ್ಕೆ ಆಗಮಿಸಿದ ಅವರು, ಅನಿವಾರ್ಯ ಕಾರಣದಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು. ಅಲ್ಲಿಗೆ ಎರಡನೇ ಬಾರಿಗೆ ವಿಶೇಷ ಸಾಮಾನ್ಯ ಸಭೆ ಮುಂದೂಲ್ಪಟ್ಟಂತಾಯಿತು. 

Advertisement

ಕಳೆದ ಮೇ.10 ರಂದು ಸಹ 2017-18 ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ ಅನುದಾನದ ಕ್ರಿಯಾಯೋಜನೆ ಹಾಗೂ ತೀವ್ರ ಬರಗಾಲ ನಿಮಿತ್ತ ಜನ-ಜಾನು ವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಅಗತ್ಯ ಕ್ರಮಗಳ ಕುರಿತಂತೆಯೇ ವಿಶೇಷ ಸಾಮಾನ್ಯ ಸಭೆ ನಿಗದಿಯಾಗಿತ್ತು. ಸಭೆಗೆ ಅಧಿಕಾರಿ ವರ್ಗದವರು ಬಂದಿದ್ದರು. ಆದರೆ, ಜಿಲ್ಲಾ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು, ಕೆಲವಾರು ಸದಸ್ಯರು ಬೆಂಗಳೂರು, ಮೈಸೂರಿನಲ್ಲಿ ಕಾರ್ಯಾಗಾರಕ್ಕೆ ತೆರಳಿದ್ದರಿಂದ ಮುಂದೂಲ್ಪಟ್ಟಿತ್ತು. 

ಬೇರೆ ಅರ್ಥವೇ ಇಲ್ಲ: ಸಭೆ ಮುಂದೂಡಲ್ಪಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್‌, ನಿಗದಿತ ಪ್ರಮಾಣದಲ್ಲಿ ಸದಸ್ಯರು ಬರದೇ ಇದ್ದ ಕಾರಣದಿಂದಾಗಿಯೇ ಇಂದಿನ ಸಭೆಯನ್ನು ಮುಂದೂಡಲಾಗಿದೆ. ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ದಾವಣಗೆರೆಗೆ ಆಗಮಿಸಿದ್ದು, ಅವರ ಕಾರ್ಯಕ್ರಮಕ್ಕೆ ಬಿಜೆಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿದ್ದಾರೆ.

ಗುರುವಾರವೇ ಜಿಲ್ಲಾ ಅಧ್ಯಕ್ಷರು, ಈಶ್ವರಪ್ಪನವರ ಕಾರ್ಯಕ್ರಮದ ಬಗ್ಗೆ ತಿಳಿಸಿ, ಸಭೆ ಮುಂದೂಡುವಂತೆಯೂ ಮನವಿ ಮಾಡಿದ್ದರು. ಮೊದಲೇ ಸಭೆ ನಿಗದಿಯಾಗಿದ್ದರಿಂದ ಸಭೆ ನಡೆಸೋಣ ಅಂದುಕೊಂಡಿದ್ದೆವು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಬರದೇ ಮುಂದೂಡಬೇಕಾಯಿತು. ಸಭೆ ಮುಂದೂಡಿದ್ದಕ್ಕೆ ಬೇರೆ ಅರ್ಥ ಇಲ್ಲ ಎಂದರು. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂಬ ಒತ್ತಡ ಹಾಕಲು ಬಿಜೆಪಿ ಸದಸ್ಯರೇ ಸಭೆಗೆ ಬಂದಿಲ್ಲವೇ ಎಂದು ಪ್ರಶ್ನಿಸಿದಾಗ, ನನ್ನ ಅವಧಿ ಮುಗಿದೇ ಇಲ್ಲ.

ಹಾಗಾಗಿ ರಾಜೀನಾಮೆ ಕೊಡಿ ಎಂದು ಒತ್ತಾಯ ಮಾಡುವ ಮಾತೇ ಇಲ್ಲ. ಒಂದೂವರೆ ವರ್ಷ ಅವಧಿಯಲ್ಲಿ ಇನ್ನೂ 6 ತಿಂಗಳ ಅವಧಿ ಇದೆ. ಇಂದಿನ ಸಭೆಗೆ ಸದಸ್ಯರು ಬರದೇ ಇರುವುದಕ್ಕೂ ನಾನು ರಾಜೀನಾಮೆ ಕೊಡಬೇಕು ಎನ್ನವುದಕ್ಕೂ ಸಂಬಂಧವೇ ಇಲ್ಲ ಎಂದು ಉತ್ತರಿಸಿದರು. ಜಿಲ್ಲಾ ಪಂಚಾಯತಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿದ್ದೇವೆ ಎಂದಷ್ಟೇ ಉತ್ತರಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next