Advertisement

ಡೊಂಗರಕೇರಿಯಲ್ಲಿ ‘ವಿಶಿಷ್ಟರಿಗಾಗಿ ವಿಶೇಷ ಮೇಳ’ 

10:31 AM Jan 08, 2018 | Team Udayavani |

ಮಹಾನಗರ: ಮಕ್ಕಳು ಐಸ್‌ಕ್ಯಾಂಡಿ ತಿನ್ನುತ್ತಾ, ಜಾರುಬಂಡಿಯಲ್ಲಿ ಜಾರುತ್ತಾ, ತಿರುಗುವ ತೊಟ್ಟಿಲಲ್ಲಿ ಕುಳಿತು ಸಂಭ್ರಮಿಸುತ್ತಿದ್ದರೆ ಹೆತ್ತವರು ಅವರ ಖುಷಿ ನೋಡಿ ಮೈ ಮರೆಯುತ್ತಿದ್ದರು. ಈ ಸನ್ನಿವೇಶ ಕಂಡು ಬಂದದ್ದು ಆಶಾಜ್ಯೋತಿ ಸಂಸ್ಥೆಯಿಂದ ಡೊಂಗರ ಕೇರಿಯಲ್ಲಿರುವ ಕೆನರಾ ಹೈಸ್ಕೂಲ್‌ನಲ್ಲಿ ರವಿವಾರ ನಡೆದ ‘ವಿಶಿಷ್ಟರಿಗಾಗಿ ವಿಶೇಷ ಮೇಳ’ದಲ್ಲಿ. ಈ ಮೇಳ ವಿಶಿಷ್ಟ ಮಕ್ಕಳ ಪಾಲಿಗೆ ಸ್ವರ್ಗವಾಗಿತ್ತು ಎಂದರೆ ತಪ್ಪಾಗಲಾರದು.

Advertisement

ವಿವಿಧ ತಿನಿಸು
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಚಿತವಾಗಿ ಕಲ್ಲಂಗಡಿ, ಬಾಂಬೆ ಮಿಠಾಯಿ, ಐಸ್‌ಕ್ರೀಂ, ಚಕ್ಕುಲಿ, ಬಾಳೆಹಣ್ಣು, ನೆಲಗಡಲೆ, ಚರುಮುರಿ, ಚಾಕಲೇಟ್‌ ನ್ನು ವಿತರಿಸುವ ನಿಟ್ಟಿನಲ್ಲಿ ಕೂಪನ್‌ಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಕೂಪನ್‌ನಲ್ಲಿ ನೀಡಿದ ಸಂಖ್ಯೆಯ ಮಳಿಗೆಗೆ ತೆರಳಿ ತಮಗೆ ಬೇಕಾದ ತಿಂಡಿಗಳನ್ನು ತಿನ್ನುವ ಅವಕಾಶ ಕಲ್ಪಿಸಲಾಗಿತ್ತು. ಇದರೊಂದಿಗೆ ರಿಂಗ್‌ ಆಟ, ಕುದುರೆಗೆ ಬಾಲ ಇಡುವ ಆಟಗಳಲ್ಲಿ ವಿಶಿಷ್ಟ ಮಕ್ಕಳು ಭಾಗವಹಿಸಿ ಖುಷಿಪಟ್ಟರು.

ಪ್ರತಿಭಾ ಪ್ರದರ್ಶನ
ತಿಂಡಿ, ಆಟಗಳ ನಡುವೆ ಪ್ರತಿಭಾ ಪ್ರದರ್ಶನ, ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಶಿಷ್ಟ ಮಕ್ಕಳಲ್ಲಿ ಶಕ್ತಿ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸುಮಾರು 1,500ರಷ್ಟು ಜನರು ಭಾಗವಹಿಸಿದ್ದರು.

ಆತ್ಮಸ್ಥೈರ್ಯ ತುಂಬಬೇಕು
ವಿಶೇಷ ಮಕ್ಕಳ ಬಗೆಗೆ ಕರುಣೆ ತೋರಿಸುವುದಕ್ಕಿಂತಲೂ ಅವರಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸಮಾಡಬೇಕಾಗಿದೆ. ದೇವಸ್ಥಾನ, ಚರ್ಚ್‌, ಮಸೀದಿಗಳಿಗೆ ತೆರಳಿ ಪ್ರಾರ್ಥಿಸಿ ಪುಣ್ಯ ಪಡೆಯುವುದಕ್ಕಿಂತಲೂ ಇಂತಹ ಮಕ್ಕಳ ಸೇವೆ ಮಾಡಿ ದೊರೆಯುವ ಪುಣ್ಯವೇ ಶ್ರೇಷ್ಠ ಎಂದು ವಕೀಲರು, ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಖಜಾಂಚಿ ಪದ್ಮರಾಜ್‌ ಆರ್‌. ಹೇಳಿದರು.

ಅವಕಾಶ ನೀಡಿ
ಕಾರ್ಪೊರೇಶನ್‌ ಬ್ಯಾಂಕ್‌ನ ಎ.ಕೆ. ವಿನೋದ್‌ ಮಾತನಾಡಿ, ವಿಶಿಷ್ಟ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ನೀಡಬೇಕಾಗಿದೆ. ಇಂತಹ ಕಾರ್ಯವನ್ನು ಸೇವಾ ಭಾರತಿ ಮಾಡಿದೆ ಎಂದು ಹೇಳಿದರು. ಸೇವಾ ಭಾರತಿಯ ಟ್ರಸ್ಟಿ ಮುಕುಂದ್‌ ಕಾಮತ್‌, ಕೆ.ಎಸ್‌. ಕಾರಂತ, ಆಶಾಜ್ಯೋತಿಯ ಅಧ್ಯಕ್ಷ ಶ್ರೀನಿವಾಸ ರಾವ್‌ ಮೊದಲಾದವರು ಉಪಸ್ಥಿತರಿದ್ದರು. ಆಶಾಜ್ಯೋತಿ ಜತೆ ಕಾರ್ಯದರ್ಶಿ ಪಣೀಂದ್ರ ವಂದಿಸಿದರು.

Advertisement

ಸಮ್ಮಾನ
ಈ ಸಂದರ್ಭ ಮೂಡಬಿದಿರೆಯ ಗಣೇಶ್‌ ಕಾಮತ್‌ ಹಾಗೂ ಗೋವಿಂದ ಶಾಸ್ತ್ರೀ ಅವರನ್ನು ಸಮ್ಮಾನಿಸಲಾಯಿತು. ಗೀತಾ ಅವರಿಗೆ ಕೃತಕ ಕಾಲು ವಿತರಿಸಲಾಯಿತು.

ಕ್ರೌರ್ಯ ಬೇಡ
ನಟ, ನಿರ್ದೇಶಕ ರಾಜ್‌ ಬಿ. ಶೆಟ್ಟಿ ಮಾತನಾಡಿ, ನಾನು ಮಂಗಳೂರಿಗ ಎಂದು ಹೇಳಲು ಹೆಮ್ಮೆ ಇದೆ. ಆದರೆ ಕೆಲವು ದಿನಗಳಿಂದ ಇಲ್ಲಿ ನಡೆಯುತ್ತಿರುವ ಘಟನೆಗಳು ತುಂಬಾನೇ ನೋವು ನೀಡುತ್ತಿವೆ. ಧರ್ಮ, ರಾಜಕೀಯ ಹೆಸರಲ್ಲಿ
ಕ್ರೌರ್ಯ ಮಾಡುವುದು ಬೇಡ. ಸಾಧ್ಯವಾದರೆ ಇತರರಿಗೆ ಸಹಾಯ ಮಾಡೋಣ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next