Advertisement

ನವರಾತ್ರಿಗೆ ಬಗೆ ಬಗೆಯ ತಿನಿಸು

04:58 PM Oct 02, 2019 | mahesh |

ನವರಾತ್ರಿ ಬಂತೆಂದರೆ ಸಾಕು ಮನೆಯಲ್ಲಿ ವಿವಿಧ ರೀತಿಯ ಅಡುಗೆ ತಯಾರಾಗುತ್ತದೆ. ಒಂಬತ್ತು ದಿನಗಳೂ ಕೂಡ ಬಗೆ ಬಗೆಯ ಪದಾರ್ಥಗಳನ್ನು ಮಾಡುತ್ತಾರೆ. ಪ್ರದಾಯಿಕವಾಗಿ ಮಾಡುವ ತಿಂಡಿ ತಿನಿಸುಗಳು, ಕರಿದ ತಿಂಡಿಗಳು ಇರುತ್ತವೆ. ಖಾದ್ಯಗಳು ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನವಾಗಿದ್ದು ಅವೆಲ್ಲದರ ಮಿಶ್ರಣ ಇಲ್ಲಿದೆ.

Advertisement

ಮಾಲ್ಪುವಾ
ಬೇಕಾಗುವ ಸಾಮಗ್ರಿಗಳು
ಮೈದಾ: ಅರ್ಧ ಕಪ್‌
ಮಿಲ್ಕ್ ಪೌಡರ್‌: ಅರ್ಧ ಕಪ್‌
ರವೆ: ಎರಡು ಕಪ್‌
ಹಾಲು: ಮೂರರಿಂದ ನಾಲ್ಕು ಕಪ್‌
ಸಕ್ಕರೆ: ಅರ್ಧ ಕಪ್‌
ಏಲಕ್ಕಿ ಪುಡಿ: ಸ್ವಲ್ಪ
ಎಣ್ಣೆ: ಕರಿಯಲು ಬೇಕಾಗುವಷ್ಟು

ಮಾಡುವ ವಿಧಾನ
ಒಂದು ಬಾಣಲೆಗೆ ಮೈದಾ, ಮಿಲ್ಕ್ ಪೌಡರ್‌, ಏಲಕ್ಕಿ ಪುಡಿ, ರವೆ ಮತ್ತು ಹಾಲು ಹಾಕಿ ಮೃದು ಆಗುವವರೆಗೆ ಚೆನ್ನಾಗಿ ಕಲಸಿ 20 ನಿಮಿಷ ಬಿಡಿ. ಅನಂತರ ಇನ್ನೊಂದು ಪಾತ್ರೆಯನ್ನು ಒಲೆಯ ಮೇಲಿರಿಸಿ ಅದಕ್ಕೆ ಸಕ್ಕರೆ ನೀರು ಹಾಕಿ, 5 ನಿಮಿಷ ಸಕ್ಕರೆ ಕರಗುವ ವರೆಗೆ ಕುದಿಸಿ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಅದನ್ನು ತಣಿಯಲು ಬಿಡಿ. ಬಾಣಲೆಯಲ್ಲಿ ಕಾಯಿಸಿದ ಎಣ್ಣೆಗೆ ಕಲಸಿಟ್ಟುಕೊಂಡ ಮೈದಾ ಮಿಶ್ರಣವನ್ನು ಒಂದು ಸೌಟಿನಲ್ಲಿ ಹದವಾಗಿ ಬಿಡಿ ಅದು ಚೆನ್ನಾಗಿ ಕಾದ ಅನಂತರ ಅದನ್ನು ಮಗಚಿ ಇನ್ನೊಂದು ಬದಿಯನ್ನು ಕೆಂಪಗಾಗುವ ವರೆಗೆ ಕಾಯಿಸಿಕೊಂಡು ಅದನ್ನು ಸಕ್ಕರೆ ಪಾಕದಲ್ಲಿ ಸ್ವಲ್ಪ ಹೊತ್ತು ನೆನೆಯಲು ಬಿಟ್ಟರೆ ರುಚಿ ರುಚಿಯಾದ ಮಾಲ್ಪುವಾ ಸವಿಯಲು ಸಿದ್ಧ‌ವಾಗುತ್ತದೆ.

ಸಾಬುದಾನ್‌ ಕಿಚಡಿ


ಬೇಕಾಗುವ ಸಾಮಗ್ರಿಗಳು
ಸಾಬಕ್ಕಿ : ಒಂದು ಕಪ್‌
ಶೇಂಗಾ: ಅರ್ಧ ಕಪ್‌
ಜೀರಿಗೆ: ಎರಡು ಚಮಚ
ಹಸಿ ಮೆಣಸು : ಎರಡು
ಮೆಣಸಿನ ಹುಡಿ : ಎರಡು ಚಮಚ
ಬಟಾಟೆ : ಎರಡು
ಉಪ್ಪು : ರುಚಿಗೆ ತಕ್ಕಟ್ಟು
ಕರಿ ಮೆಣಸಿನ ಹುಡಿ : ರುಚಿಗೆ ಬೇಕಾದಷ್ಟು
ನಿಂಬೆ ರಸ: 2 ಚಮಚ
ಸಕ್ಕರೆ: 2 ಚಮಚ

ಸಾಬಕ್ಕಿಯನ್ನು ನೀರಿನಲ್ಲಿ 3 ಗಂಟೆಗಳ ಕಾಲ ನೆನೆಸಿಡಬೇಕು. ಇನ್ನೊಂದು ಬಾಣಲೆಯಲ್ಲಿ ಶೇಂಗಾವನ್ನು ಚೆನ್ನಾಗಿ ಹುರಿದುಕೊಂಡು ಅದನ್ನು ಮಿಕ್ಸಿಯಲ್ಲಿ ಸಣ್ಣಗೆ ಗ್ರೈಂಡ್‌ ಮಾಡಿಕೊಳ್ಳಿ, ಅನಂತರ ಮತ್ತೂಂದು ಬಾಣಲೆಯಲ್ಲಿ ತುಪ್ಪ, ಜಿರಿಗೆ, ಶೇಂಗಾ, ಚಿಕ್ಕದಾಗಿ ಹೆಚ್ಚಿಕೊಂಡ ಹಸಿಮೆಣಸು ಮತ್ತು ಮೆಣಸಿನ ಹುಡಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ ಅನಂತರ ಅದಕ್ಕೆ ಬೇಯಿಸಿಟ್ಟುಕೊಂಡ ಬಟಾಟೆಯನ್ನು ಚಿಕ್ಕ ಚಿಕ್ಕದಾಗಿ ಹೆಚ್ಚಿಕೊಂಡು ಅದಕ್ಕೆ ಸೇರಿಸಿ ಇನ್ನೊಮ್ಮೆ ಸರಿಯಾಗಿ ಮಿಶ್ರಣವಾಗುವ ವರೆಗೆ ಕಲಸಿಕೊಳ್ಳಿ . ಅನಂತರ ಇದಕ್ಕೆ ಉಪ್ಪು, ಸಾಬಕ್ಕಿ, ಮಿಕ್ಸಿಯಲ್ಲಿ ರುಬ್ಬಿಟ್ಟುಕೊಂಡ ಶೇಂಗಾ ಹುಡಿ ಹಾಕಿ ಕಲಸಿಕೊಳ್ಳಿ. ಅನಂತರ ಚೆನ್ನಾಗಿ ಮಿಶ್ರಣ ಮಾಡಿಕೊಂಡ ಕಿಚಡಿಗೆ ಸ್ವಲ್ಪ ನಿಂಬೆರಸ ಮತ್ತು ಅದಕ್ಕೆ ಕರಿ ಮೆಣಸಿನ ಹುಡಿ ಹಾಕಿ ಕಲಸಿಕೊಂಡು 10 ನಿಮಿಷ ಬೇಯಿಸಿಕೊಂಡರೆ ರುಚಿ ರುಚಿಯಾದ ಸಾಬುದಾನ್‌ ಕಿಚಡಿ ಸವಿಯಲು ಸಿದ್ಧ.

Advertisement

ರವಾ ಬರ್ಫಿ


ಬೇಕಾಗುವ ಸಾಮಗ್ರಿಗಳು
ತುಪ್ಪ: ಅರ್ಧ ಕಪ್‌
ರವೆ: ಒಂದು ಕಪ್‌
ಕಾಯಿತುರಿ: ಕಾಲು ಕಪ್‌
ಹಾಲು: ಎರಡೂವರೆಕಪ್‌
ಸಕ್ಕರೆ: ಒಂದು ಕಪ್‌
ಬಾದಮ್‌: 2 ಚಮಚ (ಪುಡಿ ಮಾಡಿಟ್ಟುಕೊಂಡ)
ಏಲಕ್ಕಿ ಪುಡಿ: ಸ್ವಲ್ಪ
ಗೋಡಂಬಿ: ಎರಡು ಚಮಚ

ಮಾಡುವ ವಿಧಾನ
ಒಂದು ಬಾಣಲೆಯನ್ನು ಬಿಸಿ ಮಾಡಿ ತುಪ್ಪ ಅನಂತರ ಅದಕ್ಕೆ ರವೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ . ಮತ್ತೂಂದು ಬಾಣಲೆಯಲ್ಲಿ ಹಾಲನ್ನು ಸಣ್ಣ ಉರಿಯಲ್ಲಿ ಕಾಯಿಸಿ ಅದಕ್ಕೆ ಹುರಿದಿಟ್ಟುಕೊಂಡ ರವೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ ಅದು ಮೃದುವಾದ ಅನಂತರ ಅದಕ್ಕೆ ಸಕ್ಕರೆ, ಬಾದಾಮಿ ಹುಡಿ, ಗೋಡಂಬಿ ಹುಡಿಯನ್ನು ಹಾಕಿ ಕಲಸಿಕೊಳ್ಳಿ. ಬೆಂಕಿ ಸಣ್ಣ ಉರಿಯಲ್ಲಿ ಹಾಕಿ ಅನಂತರ ಅದನ್ನು ಒಂದು ಪ್ಲೇಟ್‌ ಮೇಲೆ ನುಣ್ಣನೆಯ ಪೇಪರ್‌ ಹಾಕಿ ಅದರ ಮೇಲೆ ಈ ಮಿಶ್ರಣವನ್ನು ಹಾಕಿ ಅದರ ಮೇಲೆ ಚಿಕ್ಕದಾಗಿ ಹೆಚ್ಚಿಕೊಂಡ ಬಾದಾಮಿ ದ್ರಾಕ್ಷಿ ಹಾಕಿ ಅನಂತರ ಚೌಕಾಕೃತಿಯಲ್ಲಿ ಕತ್ತರಿಸಿದರೆ ರವಾ ಬರ್ಫಿ ಸವಿಯಲು ಸಿದ್ಧ.

ಎರಿಯಪ್ಪ


ಅಕ್ಕಿ: ಒಂದು ಕಪ್‌
ಗೋಧಿಹಿಟ್ಟು: ಒಂದು ಕಪ್‌
ಬೆಲ್ಲ: ಒಂದೂವರೆ ಕಪ್‌
ಕರಿಯಲು ಎಣ್ಣೆ: ಬೇಕಾದಷ್ಟು

ಅಕ್ಕಿಯನ್ನು ನಾಲ್ಕು ಗಂಟೆ ನೀರಿನಲ್ಲಿ ನೆನೆಸಿಟ್ಟುಕೊಂಡು ಅನಂತರ ಅದನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಹಿಟ್ಟಿಗೆ ಗೋಧಿ ಹಿಟ್ಟು, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರ ಮಾಡಿಕೊಳ್ಳಿ. ಇದು ಒಂದು ಹದಕ್ಕೆ ಬಂದ ಮೇಲೆ ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಕಾದ ಅನಂತರ ಹಿಟ್ಟನ್ನು ಸೌಟಿನಿಂದ ಎಣ್ಣೆಗೆ ಹಾಕಿ ಎರಡೂ ಕಡೆಯಲ್ಲೂ ಮಗುಚಿ ಚೆನ್ನಾಗಿ ಬೇಯಿಸಿಕೊಂಡರೆ ಸುಲಭವಾಗಿ ಮಾಡಿದ ಎರಿಯಪ್ಪ ಸವಿಯಲು ಸಿದ್ಧ.

ಸುಕ್ಕಿನ ಉಂಡೆ


ಬೇಕಾಗುವ ಸಾಮಗ್ರಿಗಳು

ಕಡ್ಲೆ ಬೇಳೆ: ಒಂದೂವರೆ ಕಪ್‌
ಕಾಯಿತುರಿ: ಒಂದೂವರೆ ಕಪ್‌
ಬೆಲ್ಲ : ಒಂದು ಕಪ್‌
ಗೋಧಿಹಿಟ್ಟು: ಎರಡು ಕಪ್‌
ಉಪ್ಪು : ರುಚಿಗೆ ತಕ್ಕಷ್ಟು
ಏಲಕ್ಕಿ ಪುಡಿ: ಸ್ವಲ್ಪ
ಎಣ್ಣೆ: ಕರಿಯಲು ಬೇಕಾದಷ್ಟು

ಮಾಡುವ ವಿಧಾನ
ಕಡಲೆ ಬೇಳೆಯನ್ನು ಚೆನ್ನಾಗಿ ಬೇಯಿಸಿ ಕಾಯಿತುರಿ ಮತ್ತು ಬೆಲ್ಲವನ್ನು ಸೇರಿಸಿ ಒಲೆಯ ಮೇಲೆ ಸಣ್ಣ ಉರಿಯಲ್ಲಿಟ್ಟು ಮಿಶ್ರಣ ಮಾಡಿಕೊಳ್ಳಿ, ಅನಂತರ ತಣಿದ ಮೇಲೆ ಕಡಲೆ ಬೇಳೆ ಮಿಶ್ರಣವನ್ನು ರುಬ್ಬಿಕೊಂಡು ಏಲಕ್ಕಿ ಪುಡಿ ಸೇರಿಸಿ ನಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಬೇಕು. ಗೋಧಿಹಿಟ್ಟಿಗೆ ಒಂದು ಚಮಚ ಬೆಲ್ಲ ಮತ್ತು ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅನಂತರ ಉಂಡೆಯನ್ನು ಗೋಧಿ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿದರೆ ರುಚಿ ರುಚಿಯಾದ ಸುಕ್ಕಿನ ಉಂಡೆ ಸವಿಯಲು ಸಿದ್ಧ.

- ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next