Advertisement

ಸವಿಯಿರಿ ಆಟಿ ತಿಂಗಳ ಖಾದ್ಯ

10:27 PM Jul 12, 2019 | mahesh |

ಮಳೆಗಾಲದಲ್ಲಿ ಸ್ಥಳೀಯಾಗಿ ದೊರೆಯುವ ಆಹಾರವಸ್ತುಗಳಿಗೆ ಅಡುಗೆ ಮನೆಯಲ್ಲಿ ಪ್ರಾಶಸ್ತ್ಯ. ಈ ಸಮಯ ಕಾಡಿನಲ್ಲಿ ದೊರೆಯುವ ಕಳಲೆ, ಗದ್ದೆಗಳಲ್ಲಿ ಬೆಳೆಯುವ ಚಗಚೆ ಸೊಪ್ಪು, ಅಪರೂಪಕ್ಕೆ ಕಾಣ ಸಿಗುವ ಅಣಬೆ, ಮಳೆಗಾಲದ ಆರಂಭದಲ್ಲಿ ಸಿಗುವ ಕಲ್ಲಣಬೆ ಇತ್ಯಾದಿ ನೈಸರ್ಗಿಕ ಆಹಾರ ಪೋಷಕಾಂಶಗಳ ಆಗರ. ಕಾಯಿಲೆಗಳು ಕಾಡುವ ಆಷಾಢ ಮಾಸ ಹಾಲೆ ಮರದ ತೊಗಟೆಯ ಕಷಾಯದೊಂದಿಗೆ ಆರಂಭ. ಕೆಸು, ಮರಕೆಸು ಬಳಸಿ ತಯಾರಿಸಿದ ಪತ್ರೊಡೆ, ಕಪ್ಪು ಕೆಸುವಿನ ದಂಟಿನ ಪಲ್ಯ, ಕೆಸುವಿನ ಬೇರು, ಹಲಸಿನ ಬೀಜದ ಸಾರು. ಉಪ್ಪಿನ ನೀರಿನಲ್ಲಿ ಸಂಗ್ರಹಿಸಿಟ್ಟ ಕಾಡು ಮಾವಿನ ಹಣ್ಣಿನ ಸಾರು ಇವು ಆಟಿ ತಿಂಗಳ ವಿಶೇಷ ಖಾದ್ಯಗಳು.

Advertisement

ಕಳಲೆ ಸಾಂಬಾರು
ಬೇಕಾಗುವ ಸಾಮಗ್ರಿಗಳು

ಕಳಲೆ: 2 ದಿನ ನೀರಲ್ಲಿ ಮುಳುಗಿಸಿಡಬೇಕು: 2 ಕಪ್‌
ತೊಗರಿ ಬೇಳೆ: ಅರ್ಧ ಕಪ್‌
ಎಣ್ಣೆ: ಕಾಲು ಚಮಚ
ಅರಶಿನ: ಕಾಲು ಚಮಚ
ಸಾಸಿವೆ: ಅರ್ಧ ಚಮಚ
ಜೀರಿಗೆ : ಅರ್ಧ ಚಮಚ
ಕಡ್ಲೆ ಬೇಳೆ: ಕಾಲು ಚಮಚ
ಮೆಂತ್ಯ: ಕಾಲು ಚಮಚ
ಉದ್ದಿನಬೇಳೆ: ಕಾಲು ಚಮಚ
ಕೊತ್ತಂಬರಿ ಬೀಜ: 1 ಚಮಚ
ಮೆಣಸಿನಕಾಯಿ: 9
ಕರಿಬೇವು ಸೊಪ್ಪು: 15
ಇಂಗು: ಸ್ವಲ್ಪ
ಹುಣಸೆಹಣ್ಣು: ಸ್ವಲ್ಪ
ಕೊತ್ತಂಬರಿ ಸೊಪ್ಪು: ಸ್ವಲ್ಪ
ತೆಂಗಿನತುರಿ: ಅರ್ಧ ಕಪ್‌
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಕಳಲೆಯ ಜತೆ ಸೇರಿಸಿ ಸ್ವಲ್ಪ ನೀರು, ಅರಶಿನ, ಉಪ್ಪು ಹಾಕಿ ಬೇಯಿಸಬೇಕು. 3 ಸೀಟಿ ಬರುವವರೆಗೆ ಬೇಯಿಸಬೇಕು. ಒಂದು ಬಾಣಲೆಯನ್ನು ಗ್ಯಾಸ್‌ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಮೆಂತ್ಯ, ಮೆಣಸಿನಕಾಯಿ, ಕರಿಬೇವು ಹಾಕಿ ಹುರಿದುಕೊಳ್ಳಬೇಕು. ಅದು ಕೆಂಬಣ್ಣ ಬರುವಾಗ ಕೊತ್ತಂಬರಿ ಹಾಗೂ ಇಂಗು ಹಾಕಿ ಚೆನ್ನಾಗಿ ಹುರಿದು ಈ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ತೆಂಗಿನ ತುರಿ ಹಾಕಿ ಅರೆಯಬೇಕು. ಹುಣಸೆ ಹಣ್ಣು ಸೇರಿಸಿಕೊಳ್ಳಬೇಕು. ಮಸಾಲೆಯನ್ನು ಬೇಯಿಸಿದ ಕಣಿಲೆ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಬೇಯಿಸಬೇಕು. ಅದು ಕುದಿದಾಗ ಒಗ್ಗರಣೆ ಹಾಕಿದರೆ ಕಣಿಲೆ ಪದಾರ್ಥ ಸವಿಯಲು ಸಿದ್ಧ.

ಪತ್ರೊಡೆ
ಬೇಕಾಗುವ ಸಾಮಗ್ರಿಗಳು
ಅಕ್ಕಿ: ಒಂದು ಕಾಲು ಕಪ್‌
ಕಡಲೆಬೇಳೆ: ಕಾಲು ಕಪ್‌
ಮೆಂತ್ಯೆ: ಒಂದು ಚಮಚ
ತೆಂಗಿನತುರಿ: ಒಂದು ಕಪ್‌
ಹುಣಸೆ ಹಣ್ಣು: ಒಂದು ಚಮಚ
ಬೆಲ್ಲ: ಕಾಲು ಪ್‌
ಒಣಮೆಣಸು: 5
ಕೊತ್ತಂಬರಿ: ಒಂದು ಚಮಚ
ಜೀರಿಗೆ: ಅರ್ಧ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಇಂಗು ಸ್ವಲ್ಪ
ಕೆಸುವಿನ ಎಲೆ: 5
ತುಪ್ಪ:ಸ್ವಲ್ಪ

Advertisement

ಮಾಡುವ ವಿಧಾನ
ಅಕ್ಕಿಯ ಜತೆ ಉಳಿದ ಸಾಮಗ್ರಿಗಳನ್ನು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಚೆನ್ನಾಗಿ ರುಬ್ಬಿಕೊಳ್ಳಬೇಕು. ಅನಂತರ ಕೆಸುವಿನ ಎಲೆಯ ನಾರನ್ನು ತೆಗೆದು ಹಿಟ್ಟನ್ನು ಎಲೆಗೆ ಸಂಪೂರ್ಣವಾಗಿ ಲೇಪಿಸಬೇಕು. ಹೀಗೆ 5 ಎಲೆಗಳನ್ನು ಒಂದರ ಮೇಲೊಂದರೆ ಎಲೆಗಳನ್ನು ಇಟ್ಟು ಹಿಟ್ಟು ಲೇಪಿಸಿ ಮಡುಚಿಡಬೇಕು. ಇದನ್ನು ಹಬೆಯಲ್ಲಿ 35 ನಿಮಿಷ ಬೇಯಿಸಬೇಕು. ಅದನ್ನು ಸಣ್ಣಗೆ ಕತ್ತರಿಸಿಡಬೇಕು. ಒಂದು ಪಾತ್ರೆಗೆ ತುಪ್ಪ ಹಾಕಿ ಅದು ಬಿಸಿಯಾಗುವಾಗ ಈ ತಿಂಡಿಯನ್ನು ಹಾಕಿ ಹುರಿದರೆ ಪತ್ರೊಡೆ ಸವಿಯಲು ಸಿದ್ಧವಾಗುತ್ತದೆ.

ಉಪ್ಪಿನಲ್ಲಿ ಹಾಕಿದ ಹಲಸಿನ ಸೊಳೆ ಪಲ್ಯ
ಗಾಜು ಮತ್ತು ಪಿಂಗಾಣಿ ಪಾತ್ರಗಳಲ್ಲಿ ಸಿಂಕ್‌ನಲ್ಲಿ ತೊಳೆಯುವಾಗ ಚೌಕಾಕಾರದ ಕಾಟನ್‌ ಬಟ್ಟೆ ಅಥವಾ ಲೆದರ್‌ ಪೀಸ್‌ ಅಂಗೈ ಅಗಲದಷ್ಟು ಮಧ್ಯಕ್ಕೆ ಕತ್ತರಿಸಿ ಸಿಂಗ್‌ ಜಾಲರಿಗೆ ಕೂರುವಂತೆ ಹಾಸಿ. ಇದರಿಂದ ಸೋಪು ನೀರಿನಿಂದ ಪಾತ್ರೆ ಕೈ ಜಾರಿ ಬಿದ್ದರೂ ಒಡೆಯುವುದಿಲ್ಲ.

ಬೇಕಾಗುವ ಸಾಮಗ್ರಿಗಳು
ಉಪ್ಪಿನಲ್ಲಿ ಹಾಕಿದ ಸೊಳೆ: 3ಕಪ್‌
ತೆಂಗಿನ ತುರಿ : ಅರ್ಧ ಕಪ್‌
ಸಾಸಿವೆ: ಸ್ವಲ್ಪ
ಕರಿಬೇವಿನ ಎಲೆ: ಸ್ವಲ್ಪ
ಕೊತ್ತಂಬರಿ: 4 ಚಮಚ
ಮೆಣಸು: 6
ಬೆಳ್ಳುಳ್ಳಿ: 5 ಎಸಳು
ಇಂಗು ಸ್ವಲ್ಪ
ಉದ್ದಿನ ಬೇಳೆ: ಒಂದು ಚಮಚ
ಜೀರಿಗೆ: ಅರ್ಧ ಚಮಚ

ಮಾಡುವ ವಿಧಾನ
ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆಯನ್ನು 2 ಗಂಟೆ ನೀರಲ್ಲಿ ಹಾಕಿಟ್ಟು ಬೇಯಿಸಿಕೊಳ್ಳಬೇಕು. ಒಂದು ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಕೊತ್ತಂಬರಿಯನ್ನು ಹುರಿಯಬೇಕು. ಅದನ್ನು ಜೀರಿಗೆ, ಮೆಣಸು, ತೆಂಗಿನ ತುರಿಯ ಜತೆ ಸೇರಿಸಿ ಅರೆಯಬೇಕು. ಹಿಟ್ಟು ತುಂಬಾ ಮೃದುವಾಗುವುದು ಬೇಡ. ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಹಾಗೂ ಇಂಗು ಹಾಕಿ ಚೆನ್ನಾಗಿ ಹುರಿಯಬೇಕು. ಅನಂತರ ಅದಕ್ಕೆ ಬೇಯಿಸಿದ ಹಲಸಿನ ಸೊಳೆ ಹಾಗೂ ಮಸಾಲೆಯನ್ನು ಸೇರಿಸಿ ಬಿಸಿ ಮಾಡಿದರೆ ಪಲ್ಯ ಸಿದ್ಧವಾಗುತ್ತದೆ.

ಕೆಸುವಿನ ಸೊಪ್ಪಿನ ಚಟ್ನಿ
ಕೆಸುವಿನ ಎಲೆ: 6
ಬೆಳ್ಳುಳ್ಳಿ: 5 ಎಸಳು
ಹಸಿ ಮೆಣಸಿನ ಕಾಯಿ: 6
ಹುಣಸೆಹಣ್ಣು
ತೆಂಗಿನ ಕಾಯಿ ತುರಿ: ಮುಕ್ಕಾಲು ಕಪ್‌
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: 2 ಚಮಚ
ಸಾಸಿವೆ: ಕಾಲು ಚಮಚ
ಉದ್ದಿನ ಬೇಳೆ: ಅರ್ಧ
ಚಮಚ, ಇಂಗು ಸ್ವಲ್ಪ

ಮಾಡುವ ವಿಧಾನ
ಕೆಸುವಿನ ಎಲೆಯನ್ನು ಸಣ್ಣಗೆ ಹೆಚ್ಚಿಕೊಂಡು ಇಡಬೇಕು. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಬೆಳ್ಳುಳ್ಳಿ , ಹಸಿಮೆಣಸು ಹಾಕಿ ಹುರಿದಿಟ್ಟುಕೊಳ್ಳಬೇಕು. ಅದನ್ನು ಬೇರೆ ಪಾತ್ರೆಗೆ ಹಾಕಿ ಅದೇ ಬಾಣಲೆಗೆ ಕೆಸುವಿನ ಎಲೆಯನ್ನು ಹಾಕಿ ಸ್ವಲ್ಪ ಹುರಿದು ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಅನಂತರ ಈ ಎಲೆ, ಬೆಳ್ಳುಳ್ಳಿ, ಮೆಣಸು, ಹುಣಸೆಹಣ್ಣು, ಉಪ್ಪು, ತೆಂಗಿನಕಾಯಿ ತುರಿ ಹಾಕಿ ಸಣ್ಣಗೆ ರುಬ್ಬಿಕೊಳ್ಳಬೇಕು. ಸಾಸಿವೆ, ಉದ್ದಿನ ಬೇಳೆಯಲ್ಲಿ ಒಗ್ಗರಣೆ ಹಾಕಿದರೆ ಕೆಸುವಿನ ಸೊಪ್ಪಿನ ಚಟ್ನಿ ಸವಿಯಲು ಸಿದ್ಧವಾಗುತ್ತದೆ.

ಚಗಚೆ ಸೊಪ್ಪಿನ ಪಲ್ಯ
ಬೇಕಾಗುವ ಸಾಮಗ್ರಿಗಳು

ತೆಂಗಿನ ತುರಿ: 3 ಕಪ್‌
ತಗಟೆ ಸೊಪ್ಪು: 2 ಕಪ್‌
ಹಲಸಿನ ಬೀಜ: ಒಂದು ಕಪ್‌
ಈರುಳ್ಳಿ: 1
ಮೆಣಸಿನಕಾಯಿ: 4
ಕೊತ್ತಂಬರಿ: 2ಚಮಚ
ಜೀರಿಗೆ: ಒಂದು ಚಮಚ
ಅಕ್ಕಿ: 2 ಚಮಚ
ಎಣ್ಣೆ: ಒಂದು ಚಮಚ
ಸಾಸಿವೆ: ಒಂದು ಚಮಚ
ಕರಿಬೇವಿನ ಎಲೆ: 4
ಉಪ್ಪು: ರುಚಿಗೆ ತಕ್ಕಷ್ಟು

ಮೊದಲು ಅಕ್ಕಿಯನ್ನು ಚೆನ್ನಾಗಿ ಹುರಿದು ಹುಡಿ ಮಾಡಿಟ್ಟುಕೊಳ್ಳಬೇಕು. ಅನಂತರ ಮೆಣಸು, ಕೊತ್ತಂಬರಿ ಹಾಗೂ ಜೀರಿಗೆಯನ್ನು ಹುಡಿ ಮಾಡಿಕೊಳ್ಳಬೇಕು. ಹಲಸಿನ ಬೀಜವನ್ನು ಒಂದು ಪಾತ್ರೆಯಲ್ಲಿ ಬೇಯಿಸಬೇಕು. ಅದಕ್ಕೆ ಚಗಚೆ ಸೊಪ್ಪನ್ನು ಹಾಕಬೇಕು. ಅನಂತರ ಅದಕ್ಕೆ ಈರುಳ್ಳಿ ಹಾಗೂ ಮೆಣಸು ಮಿಶ್ರಣಗಳ ಹುಡಿಯನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಕರಿಬೇವಿನ ಸೊಪ್ಪು ಹಾಗೂ ತೆಂಗಿನ ತುರಿಯನ್ನು ಹಾಕಿ ಹುರಿದಿ ಆ ಮಿಶ್ರಣವನ್ನು ಬೇಯುತ್ತಿರುವ ಚಗಚೆಸೊಪ್ಪಿಗೆ ಹಾಕಬೇಕು. 2 ನಿಮಿಷ ಬೇಯಿಸಿ ಅಕ್ಕಿ ಹುಡಿಯನ್ನು ಸೇರಿಸಿದರೆ ಚಗಚೆ ಪಲ್ಯ ಸವಿಯಲು ಸಿದ್ಧ.

-  ಸಂಗ್ರಹ (ಸುಶ್ಮಿತಾ ಶೆಟ್ಟಿ)

Advertisement

Udayavani is now on Telegram. Click here to join our channel and stay updated with the latest news.

Next