Advertisement

ಪ್ರವಾಸಿ ತಾಣಗಳಿಗೆ ಮುಗಿಬೀಳುತ್ತಿರುವ ಜನ : ಅಪಾಯದ ಅರಿವಿರಲಿ

01:35 AM Oct 06, 2020 | Hari Prasad |

ಕೋವಿಡ್‌ನಿಂದಾಗಿ ಅತಿಹೆಚ್ಚು ಹಾನಿ ಅನುಭವಿಸಿದ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಪ್ರಮುಖವಾದದ್ದು.

Advertisement

ಪ್ರವಾಸೋದ್ಯಮವನ್ನು ಅವಲಂಬಿಸಿರುವ ಹೊಟೇಲ್‌ಗ‌ಳು, ಹೋಂ ಸ್ಟೇಗಳು, ಅಂಗಡಿಗಳು, ಸಂಚಾರ ಸಂಸ್ಥೆಗಳು ಲಾಕ್‌ಡೌನ್‌ ಸಮಯದಲ್ಲಿ ತತ್ತರಿಸಿಹೋದವು.

ಕೋವಿಡ್‌ ಪ್ರಕರಣಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ನೋಡಿದಾಗ, ಪ್ರವಾಸೋದ್ಯಮ ಕ್ಷೇತ್ರದ ಚೇತರಿಕೆ ಈಗಲೇ ಆರಂಭವಾಗುವುದು ಅಸಾಧ್ಯವೇನೋ ಎಂದೆನಿಸುತ್ತಿತ್ತು.

ಆದರೆ ನಿರ್ಬಂಧಗಳು ಸಡಿಲವಾಗುತ್ತಿರುವಂತೆಯೇ ದೇಶಾದ್ಯಂತ ನಿಧಾನಕ್ಕೆ ಒಂದೊಂದಾಗಿಯೇ ಪ್ರದೇಶಗಳು ಪ್ರವಾಸಿಗಳಿಗೆ ತೆರೆದುಕೊಳ್ಳಲು ಆರಂಭಿಸಿವೆ. ನಿರೀಕ್ಷೆಗೂ ಮೀರಿ ಜನರು ಪ್ರವಾಸಿ ತಾಣಗಳತ್ತ ಹರಿದು ಬರುತ್ತಿದ್ದಾರೆ.

ಸಪ್ಟಂಬರ್‌ ತಿಂಗಳಿಂದೀಚೆಗೆ ದೇಶದ ವಿವಿಧ ಟ್ರಾವೆಲ್‌ ಪೋರ್ಟಲ್‌ಗ‌ಳಲ್ಲಿ (ಪ್ರವಾಸೋದ್ಯಮದ ಬುಕ್ಕಿಂಗ್‌ ಮಾಡುವ ಜಾಲತಾಣಗಳಲ್ಲಿ) 40 ಪ್ರತಿಶತ ಏರಿಕೆ ಕಂಡು ಬಂದಿದೆ ಎನ್ನುತ್ತದೆ ಇತ್ತೀಚಿನ ವರದಿ.

Advertisement

ಜನರೀಗ ಸದ್ಯಕ್ಕೆ ದೂರದ ಊರುಗಳಿಗೆ ಪ್ರಯಾಣಿಸುವ ಬದಲು ತಮ್ಮ ಊರುಗಳ ಸನಿಹದ ಪ್ರವಾಸಿ ತಾಣಗಳಿಗೆ ರಜಾ ದಿನಗಳಂದು ಅಥವಾ ಶನಿವಾರ ಹಾಗೂ ರವಿವಾರದಂದು ಹೆಚ್ಚಾಗಿ ಹೋಗುತ್ತಿದ್ದಾರೆ.

ಪ್ರವಾಸೋದ್ಯಮದ ಚೇತರಿಕೆಯ ದೃಷ್ಟಿಯಿಂದ ಇದು ಆಶಾದಾಯಕ ಬೆಳವಣಿಗೆಯೇ ಆದರೂ ಇದು ಎಲ್ಲಿ ಕೋವಿಡ್‌ ಸಾಂಕ್ರಾಮಿಕದ ಹೆಚ್ಚಳಕ್ಕೆ ಕಾರಣವಾಗುತ್ತದೋ ಎಂಬ ಆತಂಕವೂ ಸೃಷ್ಟಿಯಾಗಿದೆ.

ಏಕೆಂದರೆ, ಸಾಗರೋಪಾದಿಯಲ್ಲಿ ಮುಗಿಬೀಳುತ್ತಿರುವ ಜನರು ಸಾಮಾಜಿಕ ಅಂತರದ ಪಾಲನೆ, ಮಾಸ್ಕ್ ಧರಿಸುವಿಕೆಯಂಥ ನಿಯಮಗಳನ್ನು ಕಿಂಚಿತ್ತೂ ಪಾಲಿಸುತ್ತಿಲ್ಲ ಎನ್ನುತ್ತಿವೆ ವರದಿಗಳು. ಕೋವಿಡ್‌ ಅಪಾಯದ ಕುರಿತ ಅಸಡ್ಡೆಯೋ ಅಥವಾ ತಿಂಗಳುಗಟ್ಟಲೇ ಲಾಕ್‌ಡೌನ್‌ನಿಂದಾಗಿ ಎಲ್ಲೂ ಹೋಗಲಾಗದ ಫ‌ಲಿತಾಂಶವೋ ತಿಳಿಯದು, ಒಟ್ಟಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳಿಗೆ ಯುವಕರು ಮುಗಿಬೀಳುತ್ತಿದ್ದಾರೆ.

ಭಾರತದಲ್ಲಷ್ಟೇ ಅಲ್ಲ ಕೋವಿಡ್‌ನ‌ ಜಾಗತಿಕ ಹಾಟ್‌ಸ್ಪಾಟ್‌ ಆಗಿರುವ ಅಮೆರಿಕದಲ್ಲಿ ಹಾಗೂ ಬಹುತೇಕ ಐರೋಪ್ಯ ರಾಷ್ಟ್ರಗಳಲ್ಲೂ ಯುವಜನ ಅಪಾಯ ಲೆಕ್ಕಿಸದೇ ಬೀಚ್‌ಗಳಿಗೆ, ಪಬ್‌ಗಳಿಗೆ, ಪ್ರವಾಸಿ ತಾಣಗಳಿಗೆ ದಾಂಗುಡಿಯಿಡುತ್ತಿರುವುದು ವರದಿಯಾಗುತ್ತಲೇ ಇವೆೆ.

ಕೋವಿಡ್‌ನ‌ ತವರು ಚೀನದ ವುಹಾನ್‌ನಲ್ಲಿ ನಿರ್ಬಂಧಗಳನ್ನು ಸಡಿಲಿಸಿದ್ದೇ ತಡ ಸಾವಿರಾರು ಸಂಖ್ಯೆಯಲ್ಲಿ ಯುವಕರು ಅಮ್ಯೂಸ್ಮೆಂಟ್‌ ಪಾರ್ಕ್‌ಗಳಿಗೆ, ಉದ್ಯಾನಗಳಿಗೆ, ಮಾಲ್‌ಗ‌ಳಿಗೆ ಮುಗಿಬಿದ್ದದ್ದು ಸ್ಥಳೀಯಾಡಳಿತಕ್ಕೆ ಆತಂಕ ಹುಟ್ಟಿಸಿತ್ತು.

ಈಗ ಅನೇಕ ಕಂಪೆನಿಗಳು ವರ್ಕ್‌ಫ್ರಂ ಹೋಂ ಪದ್ಧತಿ ಅನುಷ್ಠಾನಕ್ಕೆ ತಂದಿರುವುದರಿಂದಾಗಿ ಯುವಕರು ಮನೆಯಿಂದಲೇ ಕೆಲಸ ಮಾಡುವಂತಾಗಿದೆ.

ಹೊರಗೆಲ್ಲೂ ಸಂಚರಿಸದೇ ಮನೆಯಲ್ಲೇ ಇದ್ದು ಅವರಿಗೆ ಬೇಸರ, ಬಂಧನಕ್ಕೊಳಗಾಗಿರುವ ಭಾವನೆ ಕಾಡುತ್ತಿರಬಹುದು. ಹಾಗೆಂದಾಕ್ಷಣ ‘ಏನಾಗುತ್ತೋ ನೋಡೇಬಿಡೋಣ’ ಎಂಬ ಹುಚ್ಚು ಹಠಕ್ಕೆ ಬಿದ್ದು, ಅಪಾಯ ಮೈಮೇಲೆ ಎಳೆದುಕೊಳ್ಳುತ್ತಾ ಹೋದರೆ ದೇಶದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬರುವುದು ದೂರದ ಕನಸಾಗಿ ಉಳಿದುಹೋಗುತ್ತದೆ.

ಸರಕಾರ ಈಗ ಮಾಸ್ಕ್ ಇಲ್ಲದವರಿಗೆ ದಂಡ ವಿಧಿಸುವ ನಿಯಮವನ್ನು ಜಾರಿ ಮಾಡಿದೆಯಾದರೂ, ಇದು ಪ್ರವಾಸಿ ಕ್ಷೇತ್ರದಲ್ಲೂ ಕಟ್ಟುನಿಟ್ಟಾಗಿ ಅನುಷ್ಠಾನವಾಗುವಂತೆ ಮಾಡಬೇಕಿದೆ. ಇಲ್ಲದಿದ್ದರೆ ವೀಕೆಂಡ್‌ ತಾಣಗಳೆಲ್ಲವೂ ಬಹುದೊಡ್ಡ ಹಾಟ್‌ಸ್ಪಾಟ್‌ ಆಗಿ ಬದಲಾಗುವುದರಲ್ಲಿ ಹೆಚ್ಚು ಸಮಯ ಹಿಡಿಯುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next