Advertisement
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೊಚ್ಚಲ ಭಾರತ ಭೇಟಿ ಕಳೆದ ಕೆಲವು ದಿನಗಳಿಂದ ತೀವ್ರವಾಗಿ ಚರ್ಚೆಯಲ್ಲಿರುವ ವಿಚಾರ ಮಾತ್ರವಲ್ಲದೆ ಜಾಗತಿಕವಾಗಿ ಕುತೂಹಲ ಮೂಡಿಸಿರುವ ಘಟನೆಯೂ ಹೌದು. ಫೆ. 24 ಮತ್ತು 25ರಂದು ಟ್ರಂಪ್ ಭಾರತದಲ್ಲಿರುತ್ತಾರೆ. ಜೊತೆಗೆ ಅವರ ಪತ್ನಿ ಮತ್ತು ಪುತ್ರಿ, ಅಳಿಯನೂ ಆಗಮಿಸುತ್ತಿರುವುದು ಈ ಪ್ರವಾಸಕ್ಕೊಂದು ಕೌಟುಂಬಿಕ ಆಯಾಮವನ್ನೂ ನೀಡಿದೆ. ಟ್ರಂಪ್ ಭೇಟಿಗಾಗಿ ಗುಜರಾತಿನಲ್ಲಿ ಸುಮಾರು ಮೂರು ತಿಂಗಳಿಂದಲೇ ತಯಾರಿ ಆರಂಭವಾಗಿದೆ.
Related Articles
Advertisement
ಟ್ರಂಪ್ ಭಾರತ ಭೇಟಿ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಿಷ್ಠಗೊಳಿಸಲು ಸಿಗುವ ಉತ್ತಮ ಅವಕಾಶ ಎಂದು ಭಾವಿಸಬಹುದು. ಈ ಮೂಲಕ ಆರ್ಥಿಕ ಅಭಿವೃದ್ಧಿ, ಜಾಗತಿಕ ಶಾಂತಿ ಇತ್ಯಾದಿ ಕ್ಷೇತ್ರಗಳಲ್ಲಿ ಧನಾತ್ಮಕವಾದ ಪರಿಣಾಮಗಳನ್ನು ನಿರೀಕ್ಷಿಸಬಹುದು. ಮುಖ್ಯವಾಗಿ ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ವ್ಯವಹಾರಗಳಲ್ಲಿರುವ ಅಡೆತಡೆಗಳ ನಿವಾರಣೆಗೆ ಈ ಭೇಟಿ ನೆರವಾಗಬೇಕೆಂಬುದು ಎರಡೂ ದೇಶಗಳ ಅಪೇಕ್ಷೆ.
ಹಾಗೇ ನೋಡಿದರೆ ಇರಾನ್ ವಿಚಾರವೊಂದನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಅಮೆರಿಕ ಮತ್ತು ಭಾರತ ಸಮಾನ ನಿಲುವನ್ನು ಹೊಂದಿವೆ. ದಶಕಗಳಿಂದ ನಮ್ಮ ಮಗ್ಗುಲ ಮುಳ್ಳಾಗಿರುವ ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಗೆ ಸಂಬಂಧಪಟ್ಟಂತೆ ಟ್ರಂಪ್ ನೀಡಿರುವ ಹೇಳಿಕೆಯೂ ಈ ಸಂದರ್ಭದಲ್ಲಿ ಗಮನಾರ್ಹವಾಗುತ್ತದೆ.
ಭಾರತದ ಮತ್ತು ಪಾಕ್ ನಡುವಣ ಯಾವುದೇ ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಬೇಕಾದರೆ ಪಾಕ್ ಮೊದಲು ತನ್ನ ನೆಲದಲ್ಲಿ ಹುಟ್ಟಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆಯನ್ನು ದಮನಿಸಬೇಕೆಂದು ಸ್ಪಷ್ಟ ಮಾತುಗಳಲ್ಲಿ ತಾಕೀತು ಮಾಡಿದ್ದಾರೆ ಟ್ರಂಪ್.ಭಾರತ ಬಹಳ ಹಿಂದಿನಿಂದಲೇ ಹೇಳಿಕೊಂಡು ಬರುತ್ತಿರುವ ಮಾತಿದು. ಭಾರತ ನಡೆಸುತ್ತಿರುವ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಈ ಮೂಲಕ ಟ್ರಂಪ್ ಆನೆಬಲ ತುಂಬಿದ್ದಾರೆ.
ಭಯೋತ್ಪಾದನೆ ನಿಗ್ರಹದಲ್ಲಿ ಪರಸ್ಪರ ಸಹಕಾರ, ಇಂಡೊ-ಫೆಸಿಫಿಕ್ ವಲಯಕ್ಕೆ ಸಂಬಂಧಪಟ್ಟಂತೆ ಚೀನ ಪ್ರಾಬಲ್ಯವನ್ನು ತಗ್ಗಿಸುವ ವ್ಯೂಹಾತ್ಮಕ ತಂತ್ರಗಾರಿಕೆ, ರಕ್ಷಣಾ ಮತ್ತು ವಾಣಿಜ್ಯ ಸಂಬಂಧ ಸಂವರ್ಧನೆ ಈ ಮುಂತಾದ ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚಿಸಲಿದ್ದಾರೆ. ಕೆಲವು ವರ್ಷಗಳಿಂದೀಚೆಗೆ ಕಾಡುತ್ತಿರುವ ಎಚ್-1ಬಿ ವಿಸಾ ಸಮಸ್ಯೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ. ಇವೆಲ್ಲ ದೇಶದ ಭದ್ರತೆ ಮತ್ತು ಹಿತಾಸಕ್ತಿಗೆ ಪೂರಕವಾಗಿರುವ ವಿಚಾರಗಳು.
ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತದ ಮೇಲೆ ಟ್ರಂಪ್‌ಗೆ ತುಸು ಮುನಿಸು ಇದೆ. ಭಾರತ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕೆಲವೊಂದು ವಸ್ತುಗಳ ಮೇಲೆ ಹೆಚ್ಚು ಸುಂಕ ವಿಧಿಸುತ್ತಿರುವುದು ಅಮೆರಿಕದ ಮುನಿಸಿಗೆ ಕಾರಣ. ಈ ಹಿನ್ನೆಲೆಯಲ್ಲಿ ಯಾವುದೇ ವಾಣಿಜ್ಯ ಒಪ್ಪಂದಕ್ಕೆ ಅಂಕಿತ ಹಾಕುವ ಸಾಧ್ಯತೆಯಿಲ್ಲ ಎನ್ನುವ ಅನುಮಾನವೊಂದು ಇತ್ತು.
ಈ ಕುರಿತು ಅಮೆರಿಕ ಸ್ಪಷ್ಟವಾಗಿ ಏನನ್ನೂ ಹೇಳದಿದ್ದರೂ ಈ ಕಗ್ಗಂಟು ಬಗೆಹರಿಯುವ ನಿರೀಕ್ಷೆ ಇದೆ. ಜಗತ್ತಿನ ದೊಡ್ಡಣ್ಣನೆಂದೇ ಅರಿಯಲ್ಪಡುವ ಅಮೆರಿಕ ಈಗ ಹಿಂದೆಂಗಿಂತಲೂ ಭಾರತಕ್ಕೆ ಹೆಚ್ಚು ನಿಕಟವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಮೋದಿ ಸರಕಾರದ ರಾಜ ತಾಂತ್ರಿಕ ನೈಪುಣ್ಯತೆ ಫಲ. ಈ ಹಿನ್ನೆಲೆಯಲ್ಲಿ ಟ್ರಂಪ್ ಭೇಟಿಯನ್ನು ರಾಜತಾಂತ್ರಿಕವಾಗಿ ಭಾರತದ ಚತುರ ನಡೆಯೆಂದು ಹೇಳಬಹುದು.