Advertisement

ದೀಪಾವಳಿಗೆ ವಿಶೇಷ ಖಾದ್ಯಗಳು

06:00 AM Nov 02, 2018 | |

ದೀಪಾವಳಿ ಹಬ್ಬ ಮತ್ತೆ ಬಂದಿದೆ. ಹೊಸ ಬಟ್ಟೆ ಧರಿಸಿ, ಪಟಾಕಿ, ಸುಡುಮದ್ದು ಸಿಡಿಸಿ, ಸಿಹಿ ಖಾದ್ಯ ತಿನ್ನುವ ಸಂಭ್ರಮ. ಆದರೆ ಪಟಾಕಿ, ಸುಡುಮದ್ದು ಸಿಡಿಸದೆ, ದೀಪ ಬೆಳಗಿಸಿ ಸರಳವಾಗಿ ಹಬ್ಬ ಆಚರಿಸೋಣ. ವಾತಾವರಣ ಕಲುಷಿತಗೊಳಿಸದೆ ಹಬ್ಬ ಆಚರಿಸೋಣ.

Advertisement

ಬೀಟ್‌ರೂಟ್‌ ಲಡ್ಡು
ಬೇಕಾಗುವ ಸಾಮಗ್ರಿ: 1 ಕಪ್‌ ತುರಿದ ಬೀಟ್‌ರೂಟ್‌, 1/4 ಕಪ್‌ ತುರಿದ ಒಣಕೊಬ್ಬರಿ, 1/4 ಕಪ್‌ ಸಕ್ಕರೆ, 2 ಚಮಚ ತುಪ್ಪ , 1/4 ಚಮಚ ಏಲಕ್ಕಿ ಪುಡಿ, ಗೋಡಂಬಿ, ದ್ರಾಕ್ಷೆ ಸ್ವಲ್ಪ.

ತಯಾರಿಸುವ ವಿಧಾನ: ಒಲೆಯ ಮೇಲೆ ದಪ್ಪ ತಳದ ಪಾತ್ರೆಯಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ತುರಿದ ಬೀಟ್‌ರೂಟನ್ನು ಹಾಕಿ ಹಸಿವಾಸನೆ ಹೋಗುವವರೆಗೆ 5 ನಿಮಿಷ ಸಣ್ಣ ಉರಿಯಲ್ಲಿ ಬಾಡಿಸಿ. ನಂತರ ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ, ತುರಿದ ಕೊಬ್ಬರಿಯನ್ನು ಹಾಕಿ. ಸಕ್ಕರೆ ಕರಗಿ ಮಿಶ್ರಣವು ಗಟ್ಟಿಯಾಗುವವರೆಗೂ ಚಮಚದಲ್ಲಿ ತೊಳಸುತ್ತಾ ಇರಿ. ತಳ ಹತ್ತಲು ಬಿಡಬಾರದು. ಮಿಶ್ರಣವು ಉಂಡೆ ಕಟ್ಟುವ ಹದಕ್ಕೆ ಬಂದ ನಂತರ ಅದನ್ನು ಬೇರೊಂದು ತಟ್ಟೆಗೆ ಹಾಕಿ. ತಣ್ಣಗಾಗುವ ಮೊದಲೇ ಚಮಚದಲ್ಲಿ ಸ್ವಲ್ಪ ತೆಗೆದುಕೊಂಡು ಕೈಗೆ ತುಪ್ಪ ಸವರಿ ಉಂಡೆ ಕಟ್ಟಿ. ಅದರ ಮೇಲೆ ಗೋಡಂಬಿ, ದ್ರಾಕ್ಷೆ ಇಟ್ಟು , ತುರಿದ ಕೊಬ್ಬರಿಯಿಂದ ಅಲಂಕರಿಸಿದರೆ ಬೀಟ್‌ರೂಟ್‌ ಲಡ್ಡು ಸವಿಯಲು ಸಿದ್ಧ.

ಕ್ಯಾರೆಟ್‌ ಒಬ್ಬಟ್ಟು
ಬೇಕಾಗುವ ಸಾಮಗ್ರಿ:
1 ಕಪ್‌ ಕ್ಯಾರೆಟ್‌, 1 ಕಪ್‌ ಕಾಯಿತುರಿ, 2 ಕಪ್‌ ಬೆಲ್ಲ, ಸ್ವಲ್ಪ ಏಲಕ್ಕಿ ಪುಡಿ, 1/2 ಕಪ್‌ ಮೈದಾಹಿಟ್ಟು , 1/2 ಕಪ್‌ ಚಿರೋಟಿ ರವೆ, ಚಿಟಿಕೆ ಅರಸಿನ, 2-3 ಚಮಚ ಎಣ್ಣೆ.

ತಯಾರಿಸುವ ವಿಧಾನ: ಕ್ಯಾರೆಟನ್ನು ಚೆನ್ನಾಗಿ ತೊಳೆದು ತುರಿಯಿರಿ. ಕಾಯಿತುರಿ, ಪುಡಿಮಾಡಿದ ಬೆಲ್ಲ ಎಲ್ಲ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಬಾಣಲೆಗೆ ಹಾಕಿ ತೊಳಸಿ. ಗಟ್ಟಿಯಾದಾಗ ಕೆಳಗಿಳಿಸಿ ಉಂಡೆ ಮಾಡಿ ಮೈದಾಹಿಟ್ಟು , ಚಿರೋಟಿ ರವೆ, ಅರಸಿನ-ಎಣ್ಣೆ ಹಾಕಿ ಬೆರೆಸಿ. 1/2 ಗಂಟೆ ಹಾಗೇ ಇಡಿ. ನಂತರ ಸ್ವಲ್ಪ ಲಟ್ಟಿಸಿ ಮೇಲಿನ ಕ್ಯಾರೆಟ್‌ ಮಿಶ್ರಣದ ಉಂಡೆ ಇಟ್ಟು ಮುಚ್ಚಿ ಲಟ್ಟಿಸಿ ಕಾದ ತವಾದ ಮೇಲೆ ಎಣ್ಣೆ ಹಾಕಿ ಎರಡೂ ಬದಿ ಸಣ್ಣ ಉರಿಯಲ್ಲಿ ಬೇಯಿಸಿ. ತುಪ್ಪದೊಂದಿಗೆ ತಿನ್ನಲು ರುಚಿ.

Advertisement

ಟೊಮೆಟೊ ಹಲ್ವ
ಬೇಕಾಗುವ ಸಾಮಗ್ರಿ:
1/4 ಕಪ್‌ ತುಪ್ಪ , 1 ಕಪ್‌ ಕಡಲೆಹಿಟ್ಟು, 1/2 ಕಪ್‌ ಟೊಮೆಟೊ ಪ್ಯೂರಿ, 1 ಕಪ್‌ ಸಕ್ಕರೆ, 2 ಚಮಚ ಚಿರೋಟಿ ರವೆ, 1/2 ಕಪ್‌ ಕಂಡೆನ್ಸ್‌ಡ್‌ ಹಾಲು, 2 ಚಮಚ ಸಪ್ಪೆ ಕೋವಾ, 5-6 ತುಪ್ಪದಲ್ಲಿ ಹುರಿದ ಗೋಡಂಬಿ.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಕಡಲೆಹಿಟ್ಟು ಹಾಕಿ ಕೆಂಪಗೆ ಹುರಿಯಿರಿ. ನಂತರ ಕೆಳಗಿಳಿಸಿ. ನಂತರ ಚಿರೋಟಿ ರವೆ ಹಾಕಿ ಹುರಿಯಿರಿ. ಬಳಿಕ‌ ಚಿರೋಟಿ ರವೆ, ಕಡಲೆಹಿಟ್ಟು ಬೆರೆಸಿ ಬಾಣಲೆಗೆ ಹಾಕಿ. ಸಕ್ಕರೆ ಹಾಕಿ ಒಲೆಯ ಮೇಲೆ ಇಟ್ಟು ಕಂಡೆನ್ಸ್‌ಡ್‌ ಹಾಲು ಹಾಕಿ ತೊಳಸಿ. ಸಕ್ಕರೆ ಕರಗಿದಾಗ ಸಪ್ಪೆ ಕೋವಾ, ಬೀಜ, ಸಿಪ್ಪೆ ತೆಗೆದು ರುಬ್ಬಿದ ಟೊಮೆಟೊ ಮಿಶ್ರಣ ಹಾಕಿ ಸ್ವಲ್ಪ ತುಪ್ಪ ಹಾಕಿ. ಕೈಯಾಡಿಸುತ್ತ ಇರಬೇಕು. ಬಾಣಲೆಯಿಂದ ತಳ ಬಿಡುತ್ತಾ ಬಂದಾಗ ಕೆಳಗಿಳಿಸಿ. ತುಪ್ಪ  ಸವರಿದ ತಟ್ಟೆಗೆ ಹಾಕಿ ತುಪ್ಪದಲ್ಲಿ ಹುರಿದ ಗೋಡಂಬಿಯಿಂದ ಅಲಂಕರಿಸಿ. ಈಗ ರುಚಿಯಾದ ಹಲ್ವ ಸವಿಯಿರಿ.

ಪುದೀನ ತೆಂಗೊಳಲು
ಬೇಕಾಗುವ ಸಾಮಗ್ರಿ:
1 ಕಟ್ಟು ಪುದೀನ ಸೊಪ್ಪು , 1 ಕಪ್‌ ಅಕ್ಕಿಹಿಟ್ಟು , 1 ಚಮಚ ಜೀರಿಗೆ, 2 ಚಮಚ ಉದ್ದಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು , ಕರಿಯಲು ಬೇಕಾದಷ್ಟು ಎಣ್ಣೆ, 2 ಚಮಚ ಬೆಣ್ಣೆ. 

 ತಯಾರಿಸುವ ವಿಧಾನ: ಪುದೀನ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಅಕ್ಕಿಹಿಟ್ಟು , ಜೀರಿಗೆ, ಉದ್ದಿನಪುಡಿ, ಉಪ್ಪು , ಬೆಣ್ಣೆ ಹಾಕಿ ಚೆನ್ನಾಗಿ ಬೆರೆಸಿ ಹದ ಬಂದ ಮೇಲೆ ಕಾದ ಎಣ್ಣೆಗೆ ಖಾರದ ಕಡ್ಡಿ ಅಚ್ಚಿಗೆ ಹಾಕಿ ಒತ್ತಬೇಕು. ತುಂಬಾ ಮೃದುವಾಗಿ 3 ವಾರಕ್ಕೂ ಕೆಡದ ರುಚಿಯಾದ ತೆಂಗೊಳಲು ಸವಿಯಲು ಸಿದ್ಧ.

ಸಾಬಕ್ಕಿ-ಹೆಸರುಬೇಳೆ ಪಾಯಸ
ಬೇಕಾಗುವ ಸಾಮಗ್ರಿ:
1/2 ಕಪ್‌ ಸಾಬಕ್ಕಿ , 1/2 ಕಪ್‌ ಹೆಸರುಬೇಳೆ, 2 ಕಪ್‌ ದನದ ಹಾಲು, 1 ಕಪ್‌ ಬೆಲ್ಲ, ತುಪ್ಪದಲ್ಲಿ ಹುರಿದ ದ್ರಾಕ್ಷೆ , ಗೋಡಂಬಿ ಸ್ವಲ್ಪ , 1/4 ಚಮಚ ಏಲಕ್ಕಿ ಪುಡಿ. 

 ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಹೆಸರುಬೇಳೆ ಹಾಕಿ ಪರಿಮಳ ಬರುವವರೆಗೆ ಹುರಿದು ಕೆಳಗಿಳಿಸಿ. ನಂತರ ಸಾಬಕ್ಕಿ ಹಾಕಿ ಸ್ವಲ್ಪ ಹುರಿದು ಕೆಳಗಿಳಿಸಿ. ಒಲೆಯ ಮೇಲೆ ಪಾತ್ರೆಯಿಟ್ಟು ಸ್ವಲ್ಪ ನೀರು ಹಾಕಿ ಸಾಬಕ್ಕಿ ಹಾಕಿ ಬೇಯಿಸಿ. ಹೆಸರುಬೇಳೆಯನ್ನು ಕುಕ್ಕರಿಗೆ ಸ್ವಲ್ಪ ನೀರು ಹಾಕಿ ಮೂರು ವಿಸಿಲ್‌ ಬರುವವರೆಗೆ ಬೇಯಿಸಿ. ನಂತರ ಬೆಂದ ಸಾಬಕ್ಕಿಗೆ ಹೆಸರುಬೇಳೆ ಮಿಶ್ರಣ ಸೇರಿಸಿ. ನಂತರ ಬೆಲ್ಲ ಹಾಕಿ ತೊಳಸಿ. ಬೆಲ್ಲ ಕರಗಿದ ನಂತರ ದನದ ಹಾಲು, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಕುದಿಸಿ. ಪಾಯಸದ ಹದಕ್ಕೆ ಬಂದಾಗ ಹುರಿದ ದ್ರಾಕ್ಷೆ , ಗೋಡಂಬಿ, ಏಲಕ್ಕಿ ಪುಡಿ ಸೇರಿಸಿ ಒಲೆಯಿಂದ ಕೆಳಗಿಳಿಸಿ. ಈಗ ಘಮಘಮ ಪಾಯಸ ತಿನ್ನಲು ಸಿದ್ಧ.

ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next