Advertisement
ಗಿರಿಧರ ನಾಯಕ್ ಅವರ ತಂದೆ ದಿ| ಕೆ.ರಾಮ ನಾಯಕ್ ಪುರಾತನ ವಸ್ತುಗಳ ಸಂಗ್ರಹಣೆಯ ಭಂಡಾರವಾಗಿದ್ದರು. ಒಮ್ಮೆ ಗಿರಿಧರ ನಾಯಕ್ ಮನೆ ಪಕ್ಕ ಕ್ಯಾಂಟೀನ್ ಹಾಕಿ ವ್ಯಾಪಾರ ಮಾಡಲು ಪ್ರಾರಂಭಿಸಿದರು. ಜೀವನ ಸಾಗಿಸಲು ಅವರು ಕಂಡುಕೊಂಡ ದಾರಿ ಇದು. ಆದರೆ ಆ ವೇಳೆ ವೃದ್ಧಾಪ್ಯದಿಂದ ಮನೆಯಲ್ಲೇ ಇದ್ದ ಅವರ ತಂದೆ ಸುಮಾರು 88 ವರ್ಷ ಪ್ರಾಯವಾಗಿದ್ದ ರಾಮ ನಾಯಕ್ ಮಗನನ್ನು ಕರೆದು ಈ ದಂಧೆ ನಿನಗೆ ಬೇಡ. ಈ ಮನೆಯಲ್ಲಿ ನಿನ್ನ ಕುಟುಂಬದ ಜೀವನ ಸಾಗಿಸಲು ಬೇಕಾಗಿರುವ ನನ್ನ ಪುರಾತನ ಸಂಗ್ರಹವಿದೆ. ಇದರ ಬಗ್ಗೆ ನೀನು ತಿಳಿಯಬೇಕು ಎಂದು ಹೇಳಿ ಅವರ ವಶದಲ್ಲಿದ್ದ ಅಂಚೆ ಚೀಟಿ ಸಂಗ್ರಹಣೆಯಿಂದ ಹಿಡಿದು ಒಂದೊಂದಕ್ಕೆ ಮೌಲ್ಯ ಸೂಚಿಸುವ ಅಂತಾರಾಷ್ಟ್ರೀಯ ಪುಸ್ತಕಗಳನ್ನು ಗಿರಿಧರ ನಾಯಕ್‌ಗೆ ತೋರಿಸಿ ಇದನ್ನು ನೀನು ಮುಂದುವರಿಸು. ನಿನಗೆ ಗೌರವಾನ್ವಿತ ಬದುಕು ಸಾಗಿಸಲು ಸಾಕು ಎಂದಿದ್ದರಂತೆ. ಗಿರಿಧರ ನಾಯಕ್ ಅವರ ಕ್ಯಾಂಟೀನ್‌ಗೆ ಅಂದೇ ಬೀಗ ಬಿತ್ತು. ಮತ್ತೆ ಅವರ ದೃಷ್ಟಿ ಹರಿದದ್ದು ಪ್ರಾಚೀನ ವಸ್ತುಗಳ ಮೇಲೆ. ಈಗ ಅವರಿಗೆ ನೆಮ್ಮದಿಯ ಬದುಕು ಸಾಗಿಸುವಷ್ಟು ಇದು ನೆರವು ನೀಡುತ್ತಿದೆ.
ಗಿರಿಧರ ನಾಯಕ್ ಅವರ ತಾಯಿ ಸೀತಾ ಬಾೖ ನಾಯಕ್ ಇವರ ಸಹೋದರಿ ಲೀಲಾ ಬಾಯಿ ಬಾಳಿಗ. ಇವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವ ಮೊದಲು ಅವರ ಮದುವೆ ವೇಳೆ ಧರಿಸಿದ್ದ ಪಟ್ಟೆ ಸೀರೆ ಸಹಿತ ಎಲ್ಲ ವಸ್ತುಗಳನ್ನು ಮಂಗಳೂರಿನ ಮೈದಾನದಲ್ಲಿ ಸುಟ್ಟು ಗಾಂಧಿ ಹೇಳಿದ ಖಾದಿ ಮಾತ್ರ ಜೀವನ ಪರ್ಯಂತ ಉಡುವೆವು ಅನ್ನುವ ಪ್ರತಿಜ್ಞೆ ತೆಗೆದುಕೊಂಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ್ದವರು.
ಇವರಿಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ ಗಾಂಧೀಜಿಯ ಉಬ್ಬು ಶಿಲ್ಪದ ಬೆಳ್ಳಿಯ ಮೆಡಲ್ ದೊರೆತಿತ್ತು. ಇವರು ಗಾಂಧಿ ಹತ್ಯೆ ನಡೆದ ವೇಳೆ ನೊಂದು ಗಾಂಧಿಗೆ ಸಮರ್ಪಿಸಿದ ‘ಸ್ವತಂತ್ರ ಬರೆದ ಹಾಡುಗಳು ಮಹಾತ್ಮರಿಗೆ’ ಅನ್ನುವ ಅನೇಕ ಕವನ ಬರೆದು ಪುಸ್ತಕ ಪ್ರಕಟಿಸಿ ಈ ಪುಸ್ತಕ ಮಾರಿ ಬಂದ ಹಣವನ್ನು ಗಾಂಧಿ ಸ್ಮಾರಕ ನಿಧಿಗೆ ಅರ್ಪಿಸಿದ್ದರು.
Related Articles
ಇವರು ಬಾಪೂಜಿಯ ತತ್ವಗಳಲ್ಲಿ ತುಂಬಾ ಶ್ರದ್ಧೆ, ಖಾದಿ ಪ್ರೇಮಿಗಳು, ಖಾದಿಯನ್ನು ಹೆಗಲ ಮೇಲೆ ಹೊತ್ತು ಬಡವರ ಸೇವೆ ಸಲ್ಲಿಸಿದವರು. ಗಾಂಧಿ ಹತ್ಯೆ ತಿಳಿದಾಗ ರಾತ್ರಿ ಪೂರ್ತಿ ಕಣ್ಣೀರು ಸುರಿಸುತ್ತಾ ಬೆಳಗ್ಗೆ ಭಾವನಾ ಗೀತೆಗಳನ್ನು ಬರೆದರೆಂದು ಹೇಳಲಾಗಿದೆ. ಇವರಿಗೆ ಸ್ವಾತಂತ್ರ್ಯ ಸಂಗ್ರಾಮದ ವೇಳೆ ದೊರೆತ ಹಾಗೂ ಇವರು ಉಪಯೋಗಿಸುತ್ತಿದ್ದ ಅನೇಕ ಆ ಕಾಲದ ವಸ್ತುಗಳು ಗಿರಿಧರ ನಾಯಕ್ ಸಂಗ್ರಹದಲ್ಲಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪದಕ, ಒಂದು ರೂಪಾಯಿಯ ಗಾಂಧಿ ಸ್ಮಾರಕ ನಿಧಿ ಕೂಪನ್‌ಗೆ ಅಂದು ಅರ್ಥ ಸಚಿವರಾಗಿದ್ದ ಜೆ.ಬಿ. ಕೃಪಲಾನಿ ರುಜು ಹಾಕಿದ್ದರು. ಖಾದಿ ಬಟ್ಟೆ ಖರೀದಿಗೆ ಸದಸ್ಯರಿಗೆ ನೀಡುವ ಎರಡು ರೂಪಾಯಿಯ ಕೂಪನ್ ‘ಖಾದಿ ಹುಂಡಿ’ ಸೇವಾ ದಳದ ಬ್ಯಾಡ್ಜ್, ಮಹಾತ್ಮಾ ಗಾಂಧಿ ಸೇವಾ ಸಂಘದ ಬ್ಯಾಡ್ಜ್, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಸದಸ್ಯತನಕ್ಕೆ ನೀಡಿದ ಒಂದು ರೂಪಾಯಿಯ ಕೂಪನ್, ಇದಕ್ಕೆ ನೆಹರೂ ಹಸ್ತಾಕ್ಷರ ಹಾಕಿದ್ದರು. ಹೀಗೆ ಲೀಲಾ ಬಾಯಿ ಬಾಳಿಗ ಅವರು ಸ್ವಾತಂತ್ರ್ಯ ಸಂಗ್ರಾಮದ ವೇಳೆ ತಮ್ಮ ವಶವಿರಿಸಿದ್ದ ಎಲ್ಲವನ್ನೂ ನಾಯಕ್ ಸಂಗ್ರಹಿಸಿಟ್ಟಿದ್ದಾರೆ.
Advertisement
ಗಿರಿಧರ ನಾಯಕ್ ಮಂಗಳೂರಿನ ಕದ್ರಿ ಪಾಲಿಟೆಕ್ನಿಕ್‌ನಲ್ಲಿ ಶಿಕ್ಷಣ ಮಾಡುತ್ತಿದ್ದ ವೇಳೆ ಮೂರು ವರ್ಷ ಅವರ ಚಿಕ್ಕಮ್ಮ ಲೀಲಾ ಬಾಯಿ ಬಾಳಿಗ ಮನೆಯಲ್ಲಿ ವಾಸ್ತವ್ಯವಿದ್ದರು. ಇವರ ಪತಿ ಕೇಶವ ಬಾಳಿಗ ಅವರು ಶಿಕ್ಷಕ ವೃತ್ತಿ ಮಾಡಿಕೊಂಡಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ. 1968ರಿಂದ 1970ರವರೆಗೆ ಗಿರಿಧರ ನಾಯಕ್ ಇವರ ಸ್ವಾತಂತ್ರ್ಯ ಸಂಗ್ರಾಮದ ಇವರ ವಶವಿದ್ದ ಎಲ್ಲವನ್ನೂ ಪಡೆದು ಇಟ್ಟಿದ್ದರು. 1973 ರಲ್ಲಿ ಲೀಲಾ ಬಾಯಿ ಬಾಳಿಗಾ ಮೃತಪಟ್ಟ ಬಳಿಕ ಅವರ ಮಠ ಎಲ್ಲವೂ ಮುಚ್ಚಲ್ಪಟ್ಟಿತು. ಆದರೆ ಗಿರಿಧರ ನಾಯಕ್ ಅವರ ಸ್ವಾತಂತ್ರ್ಯ ಸಂಗ್ರಾಮದ ಪುರಾತನ ವಸ್ತು ಉಳಿಸಿಕೊಳ್ಳಲು ಸಫಲರಾದರು. ಗಿರಿಧರ ನಾಯಕ್ ಬಳಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿ ಹೇಳಬಹುದಾದ ಅನೇಕ ಆ್ಯಂಟಿಕ್‌ಗಳಿವೆ. ಎಲ್ಲವೂ ಕೂಡ ಸಾಕಷ್ಟು ಜಾಗರೂಕವಾಗಿ ಇರಿಸಿಕೊಂಡಿದ್ದಾರೆ. ಇವರ ಈ ಒಂದು ಸಂಗ್ರಹಣೆಯ ಹುಚ್ಚು ಅವರಿಗೆ ಜೀವನಕ್ಕೂ ದಾರಿ ಮಾಡಿಕೊಟ್ಟಿದೆ ಅನ್ನುವುದು ಹೆಮ್ಮೆಯ ವಿಷಯ. – ರಾಮದಾಸ್ ಕಾಸರಗೋಡು