ಕಾರ್ಕಳ: ವಿಶೇಷ ಮಕ್ಕಳಲ್ಲಿ ಅಂಗ ವೈಕಲ್ಯವಿರುವುದನ್ನು ಹೊರತು ಪಡಿಸಿದರೆ ಅವರು ಎಂದೂ ವಿಕಲಚೇತನರಲ್ಲ, ಅವರಿಗೆ ಪ್ರಶಿಕ್ಷಣದ ಜತೆ ಸರಿಯಾದ ಮಾರ್ಗದರ್ಶನ ನೀಡಿದಲ್ಲಿ ಅವರಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಲು ಸಾಧ್ಯವೆಂದು ಶ್ರೀ ಕ್ಷೇತ್ರ ಒಡಿಯೂರು ಇಲ್ಲಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಅವರು ಇತ್ತೀಚೆಗೆ ಚೇತನಾ ವಿಶೇಷ ಶಾಲೆ ಇಲ್ಲಿ ವಿಶೇಷ ಮಕ್ಕಳಿಗೋಸ್ಕರ ಸುಮಾರು ರೂ. 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಫಿಸಿಯೋಥೆರಫಿ ಘಟಕದ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಇಂದು ವಿಶೇಷ ಮಕ್ಕಳ ಬೆಳವಣಿಗೆ ಸಮಯದಲ್ಲಿ ಅವರಿಗೆ ಪ್ರಶಿಕ್ಷಣದ ಜತೆ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಫಿಸಿಯೋಥೆರಫಿ ಚಿಕಿತ್ಸೆಯು ಅತೀ ಆವಶ್ಯಕವಿದ್ದು ಇದಕ್ಕೆ ಪೂರಕವಾಗಿ ಚೇತನಾ ವಿಶೇಷ ಶಾಲೆಯಲ್ಲಿ ಪೂರ್ಣ ಪ್ರಮಾಣದ ಫಿಸಿಯೋಥೆರಫಿ ಘಟಕದ ಸ್ಥಾಪನೆಯಿಂದ ವಿಶೇಷ ಮಕ್ಕಳ ಬೆಳ ವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಹ್ಯಾಂಗ್ಯೊ ಐಸ್ಕ್ರೀಮ್ ಪ್ರೈ.ಲಿ. ಮಂಗಳೂರು ಇದರ ಆಡಳಿತ ನಿರ್ದೇಶಕ ಪ್ರದೀಪ್ ಜಿ. ಪೈ, ಮುಂಬಯಿಯ ಉದ್ಯಮಿಗಳಾದ ದಿವಾಕರ್ ಎನ್. ಶೆಟ್ಟಿ, ಅಪ್ಪಣ್ಣ ಎಂ. ಶೆಟ್ಟಿ, ಗಿಲ್ಬರ್ಟ್ ಸೈಮನ್ ಡಿ’ಸೋಜಾ, ನೂತನವಾಗಿ ನಿರ್ಮಾಣವಾಗಲಿರುವ ಫಿಸಿಯೋಥೆರಫಿ ಘಟಕದ ನಿರ್ಮಾಣಕ್ಕೆ ಹಾಗೂ ವಿಶೇಷ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುವ ಭರವಸೆ ನೀಡಿದರು.
ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಬಿ. ಗಣಪತಿ ಹೆಗ್ಡೆ, ಭಾರತೀ ಸೇವಾ ಮಂಡಳಿ ಅಧ್ಯಕ್ಷ ಎಂ. ಗಣಪತಿ ಪೈ, ಶಾಲಾ ಸಲಹಾ ಮಂಡಳಿ ಸದಸ್ಯ ಶ್ಯಾಮ ಎನ್. ಶೆಟ್ಟಿ ಮುಂಬಯಿ ಉಪಸ್ಥಿತರಿದ್ದರು.
ಶಾಲಾ ಸಂಚಾಲಕರಾದ ರಘುನಾಥ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿಯರಾದ ಮಂಜುಳಾ, ಸಂಧ್ಯಾ, ಸುಮಿತ್ರಾ, ಶೋಭಾ ಹಾಗೂ ಶಾಲಾ ಟ್ರಸ್ಟಿ ಗೀತಾ ಜಿ. ಪೈ ಅತಿಥಿಗಳನ್ನು ಪರಿಚಯಿಸಿದರು. ಶಾಲಾ ಮುಖ್ಯೋ ಪಾಧ್ಯಾಯಿನಿ ಹೇಮಲತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸಂಧ್ಯಾ ವಂದಿಸಿದರು.