Advertisement

ಕನ್ನಡಕ್ಕಾಗಿ ವಿಶೇಷ ಅಭಿಯಾನ: ಜಿಲ್ಲಾಧಿಕಾರಿ

12:00 PM Oct 23, 2021 | Team Udayavani |

ದೇವನಹಳ್ಳಿ: 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅ.24ರಿಂದ 30ರವರೆಗೆ ಕನ್ನಡಕ್ಕಾಗಿ ನಾವು ಎಂಬ ವಿಶೇಷ ಅಭಿಯಾನದಡಿ ಬೆಂ.ಗ್ರಾ. ಜಿಲ್ಲಾಮಟ್ಟ ಹಾಗೂ ತಾಲೂಕುಮಟ್ಟದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ತಿಳಿಸಿದ್ದಾರೆ.

Advertisement

ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.28ರಂದು ಬೆಳಗ್ಗೆ 11 ಗಂಟೆಗೆ ದೇವನಹಳ್ಳಿ ಐತಿಹಾಸಿಕ ಕೋಟೆಯ ಆವರಣದಲ್ಲಿ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಸರ್ಕಾರಿ ಕಚೇರಿ ಮತ್ತು ಶಾಲಾ, ಕಾಲೇಜು, ವಿಶ್ವವಿದ್ಯಾಲಯ, ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಮೂರು ಸುಮಧುರ ಕನ್ನಡ ಗೀತೆಗಳನ್ನು ಲಕ್ಷ ಕಂಠಗಳಲ್ಲಿ ಏಕಕಾಲದಲ್ಲಿ ಹಾಡಲಿದ್ದಾರೆ ಎಂದರು.

ಇದನ್ನೂ ಓದಿ:- ಕಿತ್ತೂರಿನಲ್ಲಿ ಮನಸೂರೆಗೊಂಡ ಜನಪದ ಕಲಾವಾಹಿನಿ

ಸಂಗೀತ ಕಾರ್ಯಕ್ರಮ: ಅ. 24ರಿಂದ 30ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮತ್ತು ಜಿಲ್ಲಾ ಮಟ್ಟದ ಐಟಿ-ಬಿಟಿ ಕಂಪನಿಗಳಲ್ಲಿ, ಕೆಎಸ್‌ ಆರ್‌ಟಿಸಿ, ಕೆಪಿಟಿಸಿಎಲ್‌ ಸಂಸ್ಥೆಗಳಲ್ಲಿ, ಕಾರ್ಖಾನೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಲಿವೆ. ಕನ್ನಡದಲ್ಲಿ ಮಾತು ಮತ್ತು ಬರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

ಇದರಡಿ ನಾವು ಆಡುವ ಮಾತು ಕನ್ನಡದಲ್ಲಿಯೇ ಇರಬೇಕು ಎಂದು ಸಂಕಲ್ಪ ಮಾಡುವುದು. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡವನ್ನೇ ಬಳಸುವುದು, ಕನ್ನಡದಲ್ಲೇ ಬರೆಯುವುದು, ಸಹಿ ಮಾಡುವುದು ಹಾಗೂ ಸರಿಗನ್ನಡವನ್ನು ಬಳಸುವ ಅಭ್ಯಾಸ ಮಾಡುವುದು. ಮೊಬೈಲ್‌ನಲ್ಲಿ ಸಂದೇಶ ಕನ್ನಡದಲ್ಲೇ ಕಳುಹಿಸುವಂತೆ ಪ್ರೇರೇಪಿಸುವುದು ಎಂದರು. ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯಲ್ಲಿ 5 ನಿಮಿಷ ನಿರರ್ಗಳವಾಗಿ ಒಂದೂ ಅನ್ಯಭಾಷೆ

Advertisement

ಪದಗಳನ್ನು ಬಳಸದೇ ಕೇವಲ ಕನ್ನಡದಲ್ಲೇ ಮಾತ ನಾಡುವ ಸ್ಪರ್ಧೆಗಳ ಆಯೋಜನೆ ಮಾಡಲಾಗುವುದು. ಉತ್ತಮ ದೃಶ್ಯಚಿತ್ರ ಆಯ್ಕೆ ಮಾಡಿ ಅತ್ಯುತ್ತಮ ಸ್ಪರ್ಧಿಗಳಿಗೆ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಬಹುಮಾನ ಕೊಡಲಾಗುವುದು ಎಂದರು.

ಅಭಿಯಾನ ಯಶಸ್ವಿಗೊಳಿಸೋಣ: ಗಡಿತಾಲೂಕು ಕೇಂದ್ರದಲ್ಲಿ ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮದಡಿ ಗಡಿಭಾಗದ ತಾಲೂಕು ಪ್ರದೇಶಗಳಲ್ಲಿ ನಾಡಿನ ಸಂಸ್ಕೃತಿ, ಭಾಷೆ, ಸಾಹಿತ್ಯ ಕುರಿತಾದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ಎಲ್ಲರೂ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಕನ್ನಡಕ್ಕಾಗಿ ನಾವು ಅಭಿಯಾನ ಯಶಸ್ವಿಗೊಳಿಸೋಣ. ನಾಡು-ನುಡಿ ರಥವನ್ನು ಎಳೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸೋಣ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next