Advertisement

ಡ್ರಗ್ಸ್‌ ತಡೆಗೆ ವಿಶೇಷ ಅಭಿಯಾನ

04:30 AM Jul 27, 2018 | Karthik A |

ಮಂಗಳೂರು: ಮಾದಕ ಪದಾರ್ಥಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ಪೊಲೀಸರು ಆಗಸ್ಟ್‌, ಸೆಪ್ಟಂಬರ್‌ ನಲ್ಲಿ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ವ್ಯಾಪಕ ಅಭಿಯಾನ ಮತ್ತು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ವಿವಿಧ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಉದಯವಾಣಿಗೆ ತಿಳಿಸಿದ್ದಾರೆ.

Advertisement

ಪೊಲೀಸ್‌ ಅಧಿಕಾರಿಗಳು ಮತ್ತು ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವುದು, ವಿಚಾರ ಸಂಕಿರಣ; ಪ್ರಬಂಧ, ಭಾಷಣ, ಚಿತ್ರ ರಚನೆ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸುವುದು, ಬೀದಿ ನಾಟಕ ಪ್ರದರ್ಶನ ಇತ್ಯಾದಿ ನಡೆಯಲಿವೆ. ಅಲ್ಲದೆ ಡ್ರಗ್ಸ್‌ ಸಾಗಾಟ, ದಾಸ್ತಾನು, ಸೇವನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು.


ಮಾದಕ ವಸ್ತುಗಳ ಹಾವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಕಳೆದ ಕೆಲವು ವರ್ಷಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಸಂಪೂರ್ಣ ನಿರ್ಮೂಲನೆ ಸಾಧ್ಯವಾಗಿಲ್ಲ. ಇತ್ತೀಚೆಗೆ ರಾಜ್ಯ ವಿಧಾನ ಮಂಡಲದಲ್ಲಿ ಕೂಡ ರಾಜ್ಯಾದ್ಯಂತ ವ್ಯಾಪಿಸಿರುವ ಡ್ರಗ್ಸ್‌ ಹಾವಳಿ ಬಗ್ಗೆ ಚರ್ಚೆ ನಡೆದಿತ್ತು. ಸರಕಾರವು ಮಾದಕ ಪದಾರ್ಥಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆ ರಚಿಸುವಂತೆ ರಾಜ್ಯದ ಎಲ್ಲ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆ ಪ್ರಕಾರ ಎಲ್ಲ ಜಿಲ್ಲೆಗಳಲ್ಲಿ ಡ್ರಗ್ಸ್‌ ವಿರುದ್ಧ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.

ಹೆಚ್ಚುತ್ತಿರುವ ಡ್ರಗ್ಸ್‌ ಬಳಕೆ
ಕಳೆದ ಮೂರು ವರ್ಷಗಳಲ್ಲಿ ಎನ್‌.ಡಿ.ಪಿ.ಎಸ್‌. (ಮಾದಕ ವಸ್ತುಗಳ ತಡೆ ಮತ್ತು ನಿಯಂತ್ರಣ) ಕಾಯ್ದೆಯಡಿ ದಾಖಲಾದ ಪ್ರಕರಣಗಳ ಅಂಕಿ-ಅಂಶ ಗಮನಿಸಿದರೆ ಮಂಗಳೂರಿನಲ್ಲಿ ಡ್ರಗ್ಸ್‌ ಬಳಕೆ, ಸಾಗಾಟ ಏರಿಕೆ ಕಂಡು ಬರುತ್ತಿದೆ. ಇಲ್ಲಿ ಗಾಂಜಾ ಪ್ರಕರಣಗಳೇ ಅಧಿಕ. ಗಾಂಜಾ ಸಾಗಾಟ, ಪತ್ತೆ ಕಾರ್ಯದ ಜತೆಗೆ ಗಾಂಜಾ ಸೇವನೆ ಮಾಡುವವರನ್ನು ಕೂಡ ಬಂಧಿಸಿ ಕ್ರಮ ಜರಗಿಸಲಾಗುತ್ತದೆ.

ಮಂಗಳೂರಿನಲ್ಲಿ ಡ್ರಗ್ಸ್‌ ವಿರುದ್ಧ  ಕಾರ್ಯಾಚರಣೆ ನಡೆಸಲು ನಾವು ಮೊದಲೇ ನಿರ್ಧರಿಸಿದ್ದೆವು. ಇದೀಗ ರಾಜ್ಯ ಸರಕಾರದ ಆದೇಶವೂ ಬಂದಿದೆ. ಹಾಗಾಗಿ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಆಗಸ್ಟ್‌ ಮತ್ತು ಸೆಪ್ಟಂಬರ್‌ ನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಡ್ರಗ್ಸ್‌ ಬಗ್ಗೆ ಜಾಗೃತಿಯ  ಜತೆಗೆ ವಿಶೇಷ ಕಾರ್ಯಾಚರಣೆಯನ್ನೂ ಈ ಸಂದರ್ಭ ನಡೆಸಲಾಗುವುದು.
– ಟಿ.ಆರ್‌. ಸುರೇಶ್‌, ಪೊಲೀಸ್‌ ಕಮಿಷನರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next