ಹಾಸನ: ನೆರೆಯ ಕೇರಳ ರಾಜ್ಯದಲ್ಲಿ ನೀಫಾ ವೈರಾಣು ಜ್ವರ ಕಂಡುಬಂದಿರುವುದರಿಂದ ಜಿಲ್ಲೆಯಲ್ಲಿಯೂ ಕಟ್ಟೇಚ್ಚರ ವಹಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಪಂ ಸಿಇಒ ಕೆ.ಎನ್.ವಿಜಯ್‌ಪ್ರಕಾಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ, ಕೃಷಿ, ಅಬಕಾರಿ, ಅರಣ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ನಗರಸಭೆ ಸೇರಿದಂತೆ ಸಂಬಂಧಪಟ್ಟ ವಿವಿಧ ಇಲಾಖೆಗಳು ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕೆಂದು ನಿರ್ದೇಶನ ನೀಡಿದರು.
ಅನಾರೋಗ್ಯದ ಪ್ರಾಣಿಗಳಿಂದ ದೂರ ಇರುವುದು, ವಿಶೇಷವಾಗಿ ಬಾವಲಿಗಳ ಪ್ರವೇಶವನ್ನು ತಪ್ಪಿಸಲು ತೆರದ ಬಾವಿಗಳಿಗೆ ಜಾಲರಿಯನ್ನು ಅಳವಡಿಸಿಕೊಳ್ಳುವಂತಹ ಜಾಗೃತಿ ಕಾರ್ಯಕ್ರಮಗಳು ಎಲ್ಲಾ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ತಲುಪುವಂತೆ ಗಮನಹರಿಸಬೇಕು. ಅರಣ್ಯ ಹಾಗೂ ಮಲೆನಾಡು ಪ್ರದೇಶ, ಅಂಗನವಾಡಿ ಕೇಂದ್ರ, ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಈ ನೀಫಾ ವೈರಾಣವಿನ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಬೇಕಿದ್ದು ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕು ಎಂದು ವಿಜಯ್ ಪ್ರಕಾಶ್ ಹೇಳಿದರು.
ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಮಾತನಾಡಿ, ನೀಫಾ ವೈರಾಣುವನ್ನು ತಡೆಗಟ್ಟಲು ಮುಖ್ಯವಾಗಿ ಅಂಗನವಾಡಿ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸುವುದರ ಜೊತೆಗೆ ವಿಶೇಷ ನಿಗಾವಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಅವರು ಮಾತನಾಡಿ ಬಾವುಲಿ ಕಚ್ಚಿದ ಅಥವಾ ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸುವುದರ ಮೂಲಕ ಇತರ ಪ್ರಾಣಿಗಳಿಗೆ, ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಆರೋಗ್ಯವಂತ ಮನುಷ್ಯರಿಗೆ ನಿಫಾ ಹರಡಲಿದೆ.
ಈ ಬಗ್ಗೆ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಸೋಂಕಿತ ರೋಗಿಗಳನ್ನು ನಿರ್ವಹಿಸುವಾಗ ಆಸ್ಪತ್ರೆಯ ಸಿಬ್ಬಂದಿ ಮುಖವಾಡ ಉಪಯೋಗಿಸಬೇಕು ಈ ರೀತಿಯ ಕ್ರಮಗಳನ್ನು ಅನುಸರಿಸಿದಲ್ಲಿ ವೈರಾಣು ಹರಡುವುದನ್ನು ತಡೆಯಬಹುದಾಗಿದೆ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ ನಗರಸಭೆ ಆಯುಕ್ತೆ ರೂಪಾಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.