Advertisement
ಮಾಗಿಯ ಚಳಿ ಮುಗಿದು, ಬೇಸಿಗೆಯ ಸೂರ್ಯ ಪ್ರತಾಪ ಬೀರುವ ಹೊತ್ತಿನಲ್ಲಿ ನಾನು ತರಗತಿಯಲ್ಲಿದ್ದೆ. ಬೆಳಗ್ಗೆ 11 ಗಂಟೆ ಇದ್ದಿರಬಹುದೇನೋ. ಲೆಕ್ಚರರ್ ಎಂದಿನಂತೆ ಸಹಜವಾಗಿ ತರಗತಿಯನ್ನು ಆರಂಭಿಸಿದರು. ಅವರ ಪಾಠದೊಳಗೆ ಇಡೀ ತರಗತಿ ಮುಳುಗಿತ್ತು. ಎದೆಯೊಳಗೆ ಏನೋ ಜರಿಹುಳು ಹರಿದ ಅನುಭವ. ಮೆಲ್ಲಗೆ ಮುಟ್ಟಿ ನೋಡಿಕೊಂಡೆ. ಏನೂ ಇರಲಿಲ್ಲ. ಸುಮ್ಮನಾದೆ.
ಧಗೆ. ಮಳೆಗಾಲದಲ್ಲಿ ಹುಚ್ಚು ಮಳೆ. ನಮ್ಮೂರಲ್ಲಿ ಹೀಗಲ್ಲ. ಮಳೆ, ಬಿಸಿಲು, ಚಳಿ ಎಲ್ಲವೂ ಸಮಾನವಾಗಿ ಇರುವ ಪರಿಸರ. ನಮ್ಮೂರಲ್ಲೂ ಬೇಸಗೆಯಲ್ಲಿ ಹೀಗೆಯೇ ಬಿಸಿಲಿರುತ್ತದೆ. ಆದರೆ, ಚರ್ಮ ಸುಟ್ಟು ಹೋಗುವಂಥ ಉರಿ ಬಿಸಿಲು, ಸಹಿಸಲಸಾಧ್ಯ ಧಗೆ ಇಲ್ಲ. ಇಲ್ಲಿ ಸುತ್ತಲೂ ದಟ್ಟ ಕಾಡು ಇರುವುದರಿಂದ ಸದಾ ತಂಪಿರುತ್ತದೆ ಎಂದು ಭಾವಿಸಿದ್ದೆ.
Related Articles
Advertisement
ಇನ್ನು ಮಧ್ಯಾಹ್ನದ ಪಾಡು ಆ ದೇವರಿಗೇ ಪ್ರೀತಿ. ಸಂಜೆ ಹೊತ್ತಿಗಾಗಲೇ ನನ್ನ ಪರಿಸ್ಥಿತಿ ಕುಕ್ಕರ್‌ನಲ್ಲಿ ಒಂದೆರಡು ವಿಸಿಲ್‌ಗೆ ಬೇಯುವ ತೊಗರಿ ಬೇಳೆಯಂತಾಗುತ್ತದೆ. ಇನ್ನು ರಾತ್ರಿ ಫ್ಯಾನ್ ತಿರುಗದಿದ್ದರೆ, ಸೆಖೆಯಿಂದ ನಿದ್ದೆ ಬರದೇ, ಬೋರಲು ಬಿದ್ದು - ಅಂಗಾತ ಬಿದ್ದು ನಾವೇ ತಿರುಗುತ್ತಿರುತ್ತೇವೆ.
ಊರಲ್ಲಿ ಹದವಾಗಿ ತಿಂದು ಬೆಳೆಸಿದ್ದ ಬೊಜ್ಜು ಮೂರೇ ತಿಂಗಳಿಗೆ ಕರಗಿ ನೀರಾಗಿ ಅಲ್ಲಲ್ಲ , ಬೆವರಾಗಿ ಹರಿದು ಹೋಯಿತು. ಇಲ್ಲಿನ ವಾತಾವರಣ, ಅಷ್ಟೊಂದು ಸ್ಟ್ರಾಂಗ್. ಅಂದಹಾಗೆ, ಇಲ್ಲಿನ ಜನರ ಆಹಾರ ಕ್ರಮ, ಜೀವನ ಶೈಲಿಯೂ ಇದಕ್ಕೆ ಪೂರಕವಾಗಿಯೇ ಇದೆ. ಇಲ್ಲಿ ಸಿಗುವ ದೊಡ್ಡ ಗಾತ್ರದ ಎಳನೀರು, ವಿವಿಧ ರೀತಿಯ ತಂಪು ಪಾನೀಯಗಳು ಜನರ ಜೀವನದ ಜೊತೆ ಹಾಸುಹೊಕ್ಕಾಗಿವೆ. ಬಹುತೇಕವಾಗಿ ಇಲ್ಲಿನ ಜನರು ಬಿಸಿಲ ಧಗೆಗೆ ಬೆಂದ ಮೈಮನಸ್ಸು ಹಗುರಾಗಲು ತಪ್ಪದೇ ರಾತ್ರಿ ಸ್ನಾನ ಮಾಡಿ ನೆಮ್ಮದಿಯ ನಿದ್ರೆಗೆ ಜಾರುತ್ತಾರೆ.
ಅದೇನೇ ಇರಲಿ, ನಮ್ಮೂರಲ್ಲಿ ಬೆಳಗ್ಗೆ ಜಾಗಿಂಗ್ ಮಾಡಿದಾಗ ಅಥವಾ ಜಿಮ್‌ನಲ್ಲಿ ವರ್ಕೌಟ್ ಮಾಡಿದಾಗ ಮಾತ್ರ ಬರುತ್ತಿದ್ದ ನನ್ನ ಬೆವರಿಗೆ ಒಂದು ರೀತಿಯ ಪ್ರತಿಷ್ಠೆಯ ಸ್ಥಾನವಿತ್ತು. ಆದರೆ, ಇಲ್ಲಿನ ಜನತೆಗೆ ಅದು ಉಸಿರಾಟದಷ್ಟೇ ಸಹಜವಾಗಿದೆ. ನಾನು ತುಳುನಾಡಿಗೆ ಬಂದು ಒಂದು ವರುಷ ಕಳೆದಿದೆ. ನನ್ನ ದೇಹದ ಬೆವರಷ್ಟೇ ಅಲ್ಲ, ಅಜ್ಞಾನವೆಂಬ ಬೆವರೂ ಯಾವ ಮುಲಾಜಿಲ್ಲದೇ ಹರಿದು, ಇಳಿದು ಹೋಗಿದೆ. ಹೊಸ ವಾತಾವರಣಕ್ಕೆ ದೇಹ, ಮನಸ್ಸು ಒಗ್ಗಿಕೊಂಡಿದೆ. ಕಷ್ಟಪಟ್ಟು ಬೆವರು ಹರಿಸಿ, ಶಿಕ್ಷಕನಾಗುತ್ತಿದ್ದೇನೆಂಬ ಸಾರ್ಥಕದ ಭಾವವಿದೆ.
– ಮಹೇಶ್ ಎಂ.ಸಿ., ಉಜಿರೆ