Advertisement
ರಾಜ್ಯದಲ್ಲಿ ಪದವಿಪೂರ್ವ ಶಿಕ್ಷಣ ಹಂತದಲ್ಲಿ ವಿಜ್ಞಾನ ಸಂಯೋಜನೆಯಾದ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಮುದ್ರಿಸಲು ಬಹಳ ವರ್ಷಗಳಿಂದಲೂ ಪ್ರಯತ್ನಿಸಲಾಗುತ್ತಿತ್ತು.
Related Articles
Advertisement
ನಗರ ಪ್ರದೇಶದ ಪ್ರತಿಷ್ಠಿತ ಶಾಲೆಗಳಲ್ಲಿ ಆಂಗ್ಲಭಾಷೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೈಪೋಟಿಯೊಡ್ಡಿ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದು ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ, ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲು ಕಷ್ಟಕರವಾಗಿತ್ತು.
ಬಹುತೇಕ ವಿದ್ಯಾರ್ಥಿಗಳಿಗೆ ವಿಜ್ಞಾನ ಅಭ್ಯಾಸ ಮಾಡುವ ಆಸಕ್ತಿಯಿದ್ದರೂ ಇಂಗ್ಲಿಷ್ ಭಾಷೆಯ ಪ್ರಾವೀಣ್ಯದ ಕೊರತೆಯಿಂದ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದೆಲ್ಲಕ್ಕೂ ನಮ್ಮ ಸರಕಾರ ದೃಢ ನಿರ್ಧಾರ ಕೈಗೊಂಡು ಇತಿಶ್ರೀ ಹಾಡಿದೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನರಾಜ್ಯ ಸರಕಾರವು ಪಿಯುಸಿಯ ವಿಜ್ಞಾನ ಪಠ್ಯ ಪುಸ್ತಕಗಳನ್ನು ಕನ್ನಡದಲ್ಲಿ ಒದಗಿಸಿರುವುದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನ ವಾಗಿದೆ. ಇನ್ನು ಮುಂದೆ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಕಡೆ ತಮ್ಮ ಆಸಕ್ತಿಯನ್ನು ಕೇಂದ್ರೀಕರಿಸಿಕೊಳ್ಳುತ್ತಾರೆಂಬುದು ಸರಕಾರದ ಆಶಯವಾಗಿದೆ. ಎಸೆಸೆಲ್ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು ಹಾಗೆಯೇ ಕನ್ನಡದಲ್ಲಿಯೇ ಪಿಯುಸಿ ವಿಜ್ಞಾನ ವಿಷಯದಲ್ಲಿ
ಅಭ್ಯಾಸ ಮಾಡಿ, ಅತ್ಯಧಿಕ ಅಂಕ ಗಳಿಸಲು ಅನುಕೂಲವಾಗುತ್ತದೆ. ಸಿಇಟಿ, ಎನ್‌ಇಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಭಾಷೆಯಲ್ಲಿರುವುದರಿಂದ ಸುಲಲಿತವಾಗಿ ಅರ್ಥೈಸಿಕೊಂಡು ಹೆಚ್ಚು ಅಂಕ ಗಳಿಸಲು ಅನುಕೂಲವಾಗುತ್ತದೆ. ಆ ಮೂಲಕ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ನಾಂದಿಯಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವು ರಾಜ್ಯದ ನೆಲ, ಜಲ, ಭಾಷೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಕಂಕಣ ಬದ್ಧವಾಗಿದೆ. ನಮ್ಮ ರಾಜ್ಯ ಸರಕಾರವು ಅನೇಕ ನಿರ್ಣಯಗಳನ್ನು ಕೈಗೊಂಡು, ಕನ್ನಡ ಭಾಷೆಯ ಅಧ್ಯಯನ, ಸಂಶೋಧನೆಗೆ ಸಾಕಷ್ಟು ನೆರವು ನೀಡುತ್ತಿದೆ. ಹೊರನಾಡ ಕನ್ನಡಿಗರಿಗೆ ಕನ್ನಡ ಭಾಷೆಯ ಅಧ್ಯಯನಕ್ಕಾಗಿ ಕನ್ನಡ ಭಾಷಾ ಅಧ್ಯಯನ ಪೀಠಗಳಿಗೆ ನೆರವು ನೀಡುತ್ತಿದೆ. ಕನ್ನಡ ಕಲಿಕಾ ತರಗತಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೊರನಾಡ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆಯಲು, ಕನ್ನಡ ಸಂಸ್ಕೃತಿಯನ್ನು ಅಳವಡಿಸಿಕೊಂಡು, ಮುಂದಿನ ಪೀಳಿಗೆಗಳಿಗೂ ಬಳುವಳಿಯಾಗಿಸುವಂತೆ ಮಾಡಲು ಶ್ರಮಿಸುತ್ತಿದೆ. ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಈಗಲೂ ವಿದ್ಯಾರ್ಥಿಗಳು ಅವರ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾರೆ. ಆ ಕಾರಣಕ್ಕಾಗಿ ಆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ಸಮುದಾಯದ, ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳು ಎಂಜಿನಿಯರಿಂಗ್, ಮೆಡಿಕಲ್ ವ್ಯಾಸಂಗ ಮಾಡಲು ಅತ್ಯಂತ ಅನುಕೂಲವಾಗಿದೆ. ಇಂಗ್ಲಿಷ್ ಭಾಷೆ ಬದುಕು ಕಟ್ಟಿಕೊಡುತ್ತದೆ ಎಂಬುದಕ್ಕೆ ಯಾವ ದೇಶಗಳಲ್ಲಿಯೂ ನಿಖರ ಉತ್ತರ ಸಿಗುವುದಿಲ್ಲ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡುವುದರಿಂದ ಕರ್ನಾಟಕದಲ್ಲಿ ಹಿಂದುಳಿದ ಮತ್ತು ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸರಕಾರಿ ವ್ಯವಸ್ಥೆಯಡಿ ಈಗಾಗಲೇ 650 ಪಿಯು ವಿಜ್ಞಾನದ ಕಾಲೇಜುಗಳಿವೆ. ಅಲ್ಲದೆ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕೂಡ ವಿಜ್ಞಾನದ ಪಿಯು ಕಾಲೇಜುಗಳಿವೆ. ಈ ಕಾಲೇಜುಗಳಲ್ಲೂ ಕನ್ನಡದಲ್ಲಿ ವಿಜ್ಞಾನ ಬೋಧನೆ ಮಾಡುವುದರಿಂದ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್, ವೃತ್ತಿಪರ ಶಿಕ್ಷಣ ಅಭ್ಯಾಸ ಮಾಡಲು ಅನುಕೂಲವಾಗುತ್ತದೆ. ಕನ್ನಡ ಪಿಯು ಕಾಲೇಜು ಸಾಧನೆ
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ್ ತಾಲೂಕಿನ ಸಂಖ ಎಂಬ ಗ್ರಾಮದ ಶಿವಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಕಳೆದ 23 ವರ್ಷಗಳಿಂದ ಪಿಯು ವಿಜ್ಞಾನವನ್ನು ಕನ್ನಡದಲ್ಲಿ ಬೋಧನೆ ಮಾಡಲಾಗುತ್ತಿದೆ. ಅಲ್ಲಿನ ವಿದ್ಯಾಸಂಸ್ಥೆ ಮುಖ್ಯಸ್ಥರು ಮಹಾರಾಷ್ಟ್ರ ಸರಕಾರದ ಅನುಮತಿ ಪಡೆದು ಕನ್ನಡದಲ್ಲಿಯೇ ಪಿಯು ವಿಜ್ಞಾನ ಕಾಲೇಜು ತೆರೆದಿದ್ದಾರೆ. ಈ ಕಾಲೇಜಿನಲ್ಲಿ ನೂರು ವಿದ್ಯಾರ್ಥಿ ಗಳಿದ್ದು, ಪ್ರತೀ ವರ್ಷ ಕನಿಷ್ಠ 80ರಿಂದ 90 ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ವಿದೇಶ ದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿಲ್ಲಿಯಲ್ಲಿ ಕನ್ನಡ ಶಾಲೆಯು ಹಲವು ದಶಕಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಪಿಯು ಕಾಲೇಜು ಸಾಧನೆ ಮಾಡುತ್ತಿದೆ ಎಂದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಾಗ ಬಾರದೆಂಬುದು ನಮ್ಮ ಪ್ರಶ್ನೆ. ಹಾಗಾಗಿ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದಲ್ಲಿಯೂ ಪಿಯು ವಿಜ್ಞಾನ ಬೋಧಿಸುವ ತೀರ್ಮಾನ ಕೈಗೊಳ್ಳುವ ಇಚ್ಛೆ ಹೊಂದಲಾಗಿದೆ. ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ (ಕ್ರೈಸ್)ಯ ವಸತಿ ಶಾಲೆಗಳ ವಿದ್ಯಾರ್ಥಿಗಳು ಆ ವಸತಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು. ಈ ಕಾಲೇಜುಗಳಲ್ಲಿ ಕಾಲೇಜು ಆರಂಭಗೊಂಡ ದಿನದಿಂದಲೇ ಎನ್‌ಇಇಟಿ, ಸಿಇಟಿ ಸೇರಿದಂತೆ ವೃತ್ತಿಪರ ಕೋರ್ಸುಗಳಿಗೆ ಪೂರ್ವ ತರಬೇತಿ ನೀಡಲಾಗುವುದು. ಈ ವಸತಿ ಶಾಲೆಗಳು ಗುರುಕುಲ ಮಾದರಿಯನ್ನು ಹೊಂದಿದ್ದು, ಉಚಿತ ಊಟ, ಪಠ್ಯಪುಸ್ತಕ, ಉತ್ತಮ ಗುಣಮಟ್ಟದ ಪ್ರಯೋಗಾಲಯ, ಪರಿಣತ ಉಪನ್ಯಾಸಕರು, ವಿಶಾಲ ಮೈದಾನ ಹೊಂದಿದೆ. ಎಂಜಿನಿಯರ್, ಡಾಕ್ಟರ್‌ಗಳನ್ನು ರೂಪಿಸಲು ಆಂಗ್ಲಭಾಷೆಯ ಶಿಕ್ಷಣದಿಂದ ಮಾತ್ರ ಸಾಧ್ಯವೆಂಬ ಭ್ರಮೆಯನ್ನು ಅಳಿಸಿ, ಕನ್ನಡ ಮಾಧ್ಯಮದಿಂದ ಎಲ್ಲವೂ ಸಾಧ್ಯವೆನ್ನುವುದನ್ನು ಸಾಬೀತು ಪಡಿಸಲು ರಾಜ್ಯ ಸರಕಾರವು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಗ್ರಾಮೀಣ ಪ್ರದೇಶದ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಈ ಸುವರ್ಣ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಕೀಳರಿಮೆಯನ್ನು ತೊಡೆದುಹಾಕಿ ಮಾತೃ ಭಾಷೆಯಲ್ಲಿ ಪಿಯುಸಿ ವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡಿ ವೈದ್ಯಕೀಯ, ಎಂಜಿನಿಯರಿಂಗ್, ವೃತ್ತಿಪರ, ಸಂಶೋಧನ ವಿಭಾಗಕ್ಕೆ ದಾಪುಗಾಲು ಹಾಕಬೇಕು ಎಂದು ಹಾರೈಸುತ್ತೇನೆ. – ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿಗಳು