Advertisement

ನಮ್ಮ ಸಂಸ್ಕಾರ ಆನಂದ ಸಾಗರ

09:30 AM Apr 04, 2019 | Hari Prasad |

ನಮ್ಮ ಹಿರಿಯರು ನೂರಾರು ವರ್ಷ ಬಾಳಿ ನೂರಾರು ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸುತ್ತಿದ್ದರು. ಇಂದು ಕಾಲ ಬದಲಾಗಿದೆ. ಕೆಲವು ಸಂಪ್ರದಾಯಗಳನ್ನು ಹಿರಿಯರು ಹೇಳಿದರೆಂದು ಅದರ ಅರ್ಥ ಅರಿಯದೇ ಪಾಲಿಸುತ್ತೇವೆ…

Advertisement

ಬಲಗಾಲಿಟ್ಟು ಒಳಗೆ ಬಾ’ , “ಅಯ್ಯೋ, ಒಂಟಿ ಸೀನು ಅಪಶಕುನ’, “ಕರಿಬೆಕ್ಕು ಅಡ್ಡ ಹೋಯಿತು’, ರಾತ್ರಿ ಕಸ ಹೊರಗೆ ಎಸೆಯಬೇಡಿ’- ಹೀಗೆ ನೂರಾರು ಶಾಸ್ತ್ರಗಳನ್ನು ಹಿರಿಯರ ಬಾಯಿಯಲ್ಲಿ ಯಾವಾಗಲೂ ಕೇಳುತ್ತಿರುತ್ತೇವೆ. ನಿಂತರೆ ತಪ್ಪು , ಕುಂತರೆ ತಪ್ಪು ಅನ್ನುತ್ತಾರಲ್ಲ ಎಂದು ಯುವಕ/ಯುವತಿಯರಿಗೆ ಅನಿಸಿದರೆ ತಪ್ಪೇನಿಲ್ಲ. ಕೂಸು ಹುಟ್ಟುವುದಕ್ಕೆ ಒಂದು ಶಾಸ್ತ್ರ, ಆ ದಿನ ಹುಟ್ಟಿದರೆ ಚೆನ್ನ, ಈ ನಕ್ಷತ್ರ ಒಳ್ಳೆಯದು, ಆ ರಾಶಿ ಒಳ್ಳೆಯದು ಎಂದೆಲ್ಲ ಶಾಸ್ತ್ರವಿದೆ. ಎಣ್ಣೆ ಸ್ನಾನ ಹೆಣ್ಣಾದರೆ ಶುಕ್ರವಾರ, ಗಂಡಾದರೆ ಶನಿವಾರ ನಿಷಿದ್ಧವಂತೆ. ತಲೆ ಕೂದಲು ತೆಗೆಸಲು, ಅನ್ನಪ್ರಾಶನ ಮಾಡಿಸಲು, ನಾಮಕರಣ ಮಾಡಿಸಲು, ಕಿವಿಯೋಲೆ ತೊಡಿಸಲು, ಅಕ್ಷರಾಭ್ಯಾಸ ಮಾಡಿಸಲು, ಶಾಲೆಗೆ ಕಳುಹಿಸಲು, ಉಪನಯನ ಮಾಡಿಸಲು, ಮದುವೆ ಮಾಡಿಸಲು- ಹೀಗೆ ಸಾಗುತ್ತಲೇ ಇರುತ್ತದೆ ಶಾಸ್ತ್ರಗಳು! ಗರ್ಭಧಾರಣೆ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ- ಹೀಗೆ ಹದಿನಾರು ಸಂಸ್ಕಾರಗಳ ಉಲ್ಲೇಖ ನಮ್ಮ ಶಾಸ್ತ್ರಗಳಲ್ಲಿದೆ.

ಈಗಿನ ಕಂಪ್ಯೂಟರ್‌/ಮೊಬೈಲ್ ಯುಗದಲ್ಲಿ ತಂದೆತಾಯಿಗಳಿಬ್ಬರೂ ಉದ್ಯೋಗದಲ್ಲಿ, ಮಕ್ಕಳೆಲ್ಲ ಶಾಲಾಭ್ಯಾಸದಲ್ಲಿ ನಿರತರಾಗಿ ಎಲ್ಲ ಶಾಸ್ತ್ರ- ಸಂಪ್ರದಾಯಗಳನ್ನು ಪಾಲಿಸಲು ಸಮಯವಂತೂ ಇಲ್ಲವೇ ಇಲ್ಲ. ಸಮಯ ಸಿಕ್ಕಾಗ ಮನೆಕೆಲಸ. ಮೊಬೈಲ್‌ನ ಗುಂಡಿ ಒತ್ತಿದರೆ ಮನೆಬಾಗಿಲಿಗೆ ತಿಂಡಿತಿನಿಸು ಬರುತ್ತದೆ. ಪೂಜೆ-ಪುನಸ್ಕಾರಗಳನ್ನೂ ಮೊಬೈಲ್‌ನಲ್ಲೇ ಹೇಳಿಮಾಡಿಸಿ ಪ್ರಸಾದ ಮನೆಗೆ ಕಳುಹಿಸುವ ವೇಗದ ಯುಗವಿದು! ಈ ಶಾಸ್ತ್ರಗಳನ್ನೆಲ್ಲ ಬದಿಗೊತ್ತಬೇಕೆ? ಇವೆಲ್ಲ ಮೂಢನಂಬಿಕೆಗಳೆ? ಎಂಬ ಪ್ರಶ್ನೆ ಬಾರದೇ ಇರದು. ಈಗಿನ ವೇಗದ ಬದುಕಿಗೆ ಕೆಲವು ಶಾಸ್ತ್ರಗಳನ್ನು “ಔಟ್‌ಡೇಟೆಡ್‌’ ಎನ್ನಬಹುದಾದರೂ ಅದರ ಹಿಂದೆ ಇರುವ ಅರ್ಥವನ್ನು ಅರಿಯಲು ನಾವು ಪ್ರಯತ್ನಿಸಿ ಪಾಲಿಸಬಹುದಲ್ಲವೆ?

ಮನೆ ಸ್ವಚ್ಛವಾಗಿರಲಿ ಅಂತ…
ಮುಂಜಾನೆ ಎದ್ದ ತತ್‌ಕ್ಷಣ ಮನೆಯನ್ನು ಸ್ವಚ್ಛಗೊಳಿಸಿದರೆ, ಇವತ್ತಿನ ಎಲ್ಲ ಕೆಲಸಗಳೂ ಸಫ‌ಲವಾಗುತ್ತವೆ ಎಂಬ ನಂಬಿಕೆ ಕೆಲವರಲ್ಲಿದೆ. ಮನೆ ಸ್ವತ್ಛವಾಗಿದ್ದರೆ ನಮ್ಮ ಮನಸ್ಸು ಶುದ್ಧವಾಗಿದ್ದು ಕೆಲಸ ಮಾಡಲು ಒಳ್ಳೆಯ ಅವಕಾಶ ಕಲ್ಪಿಸಿಕೊಡಬಹುದಲ್ಲವೆ? ರಾತ್ರಿ ಕಸಗುಡಿಸಿ ಅದನ್ನು ಎಸೆಯಬಾರದು, ಸಂಜೆ ದೀಪ ಹಚ್ಚುವ ಹೊತ್ತಿನಲ್ಲಿ ಮನೆಯನ್ನು ಸ್ವತ್ಛ ಮಾಡಬಾರದು ಎನ್ನುವರು ಹಿರಿಯರು.

ಹಿಂದೆ ಮನೆಯಲ್ಲಿ ವಿದ್ಯುತ್‌ ಸಂಪರ್ಕವಿರದ ಕಾರಣ ರಾತ್ರಿ ಕತ್ತಲಲ್ಲಿ ಗುಡಿಸಿ ಬಿಸಾಡಿದ ಕಸದಲ್ಲಿ ಅಮೂಲ್ಯ ವಸ್ತುಗಳೇನಾದರೂ ಇದ್ದು ಕಳೆದು ಹೋಗುವ ಸಾಧ್ಯತೆಯಿತ್ತು. ಆ ಕಾರಣ, ಹಿರಿಯರು ರಾತ್ರಿ ಕಸಗುಡಿಸಲು ನಕಾರ ಎತ್ತಿರಬಹುದು. ಈಗ ವಿದ್ಯುತ್‌ ದೀಪಗಳೇನೋ ಇದೆ. ಆದರೂ ಹಿರಿಯರ ಮಾತನ್ನು ಪಾಲಿಸಿದರೆ ರಾತ್ರಿಯ ಬೆಳಕಲ್ಲಿ ಕಾಣದಿರುವ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಕಡಿಮೆಯಾಗಬಹುದಲ್ಲವೆ?

Advertisement

ಕತ್ತಲಲ್ಲಿ ಸೊಪ್ಪು ಹಾಕಬೇಡಿ
ಸಂಜೆ ಸೊಪ್ಪಿನ ಪದಾರ್ಥಗಳನ್ನು, ಹಾಗಲಕಾಯಿ ಇತ್ಯಾದಿ ಕೆಲವು ಪದಾರ್ಥಗಳನ್ನು ಅಡುಗೆಗೆ ಬಳಸುವುದು ನಿಷಿದ್ಧವೆಂದು ಅಜ್ಜಿ ಹೇಳಿದ ನೆನಪು. ರಾತ್ರಿ ಕತ್ತಲೆಯ ಮಬ್ಬು ಬೆಳಕಲ್ಲಿ ಕಾಯಿಪಲ್ಯಗಳಲ್ಲಿರುವ ಕ್ರಿಮಿಕೀಟಗಳು ಕಣ್ಣಿಗೆ ಕಾಣಿಸದೇ, ಅಡುಗೆಯಲ್ಲಿ ಸೇರಿದರೆ ಆರೋಗ್ಯ ಕೆಡಬಹುದು ಎಂಬುದು ಕಾರಣವಾಗಿರಬಹುದು. ಈಗ ಟ್ಯೂಬ್‌ಲೈಟ್‌, CFL ಬೆಳಕಿನಲ್ಲಿ ಆ ಹುಳುಗಳು ಕಾಣುವುದರಿಂದ ಕಾಯಿಪಲ್ಯ ತೊಳೆದು ಅಡುಗೆ ಮಾಡಬಹುದೇನೋ!
ಚಾಕು, ಕತ್ತಿ, ಕತ್ತರಿ, ಉಪ್ಪು, ಹಿಂಗು, ಉಪ್ಪಿನಕಾಯಿ ಇತ್ಯಾದಿಗಳನ್ನು ಕೈಯಲ್ಲಿ ನೀಡಬೇಡಿ, ನೀಡಿದರೆ ನಿಮ್ಮ ನಡುವೆ ಜಗಳವಾಗುತ್ತದೆ ಎಂದು ಹೇಳುತ್ತಿದ್ದರು ಹಿರಿಯರು. ಚಾಕು, ಕತ್ತಿ, ಕತ್ತರಿಗಳು ಒಂದು ಕಡೆ ಹರಿತ, ಇನ್ನೊಂದು ಕಡೆ ಹಿಡಿಕೆಯನ್ನು ಹೊಂದಿರುತ್ತವೆ. ಎಷ್ಟೇ ಜಾಗೃತಿ ವಹಿಸಿದರೂ ತಪ್ಪಿ ತಗಲುವ ಸಾಧ್ಯತೆಯೂ ಇರಬಹುದು. ಆಗ “ನೀನು ತಾಗಿಸಿದ್ದು, ನಾ ತಾಗಿಸಿದ್ದು’ ಎಂದು ಜಗಳವೂ ಆಗಬಹುದು.

ಉಪ್ಪು, ಹಿಂಗು ಇತ್ಯಾದಿಗಳನ್ನು ನೀಡುವಾಗ ತಪ್ಪಿ ಬಿದ್ದರೆ ನೆಲಕ್ಕೆಲ್ಲ ತಾಗಿ ಅಂಟಾಗುವುದೋ, ವಾಸನೆಯೋ ಬಂದು ತೊಂದರೆಯಾಗಬಹುದು. ಯಾರಾದರೂ ಜಾರಿಬೀಳುವ, ಅಲರ್ಜಿಯಿರುವವರಿಗೆ ತೊಂದರೆಯಾಗುವ ಸಾಧ್ಯತೆಯೂ ಇರಬಹುದು. ಅಪ್ಪಿತಪ್ಪಿ ಕೆಲವೊಮ್ಮೆ ಹಿರಿಯರು ಹೇಳಿದಂತೆ ಆಕಸ್ಮಿಕವಾಗಿ ಉಪ್ಪು, ಕತ್ತರಿಗಳನ್ನು ಒಬ್ಬರಿಗೊಬ್ಬರು ಕೊಟ್ಟ ದಿನವೋ, ಮಾರನೆಯ ದಿನವೋ ಜಗಳವೂ ಆಗಬಹುದು. ಹಿರಿಸೊಸೆಯಾದರೆ ಸೋಮವಾರ ಎಣ್ಣೆ ಹಚ್ಚಬಾರದು, ಶನಿವಾರ ಗಂಡುಮಕ್ಕಳಿರುವ ತಾಯಿ ಎಣ್ಣೆ ಹಚ್ಚಬಾರದು, ಗಂಡುಮಗುವಿಗೂ ಶನಿವಾರ ಎಣ್ಣೆ ಸ್ನಾನ ನಿಷಿದ್ಧವೆಂದು ಕೆಲವರು ಪಾಲಿಸುತ್ತಾರೆ. ಹಿಂದೆ ಮನೆಯಲ್ಲಿ ಮನೆ ತುಂಬಾ ಜನ. ಸೋಮವಾರ ಶಿವಾಲಯಕ್ಕೂ, ಶನಿವಾರ ಆಂಜನೇಯ ದೇವಸ್ಥಾನಕ್ಕೂ ಎಣ್ಣೆ ಕೊಟ್ಟು ಬರುವ ಸಂಪ್ರದಾಯವಿತ್ತು. ಅಗತ್ಯಕ್ಕೆಷ್ಟು ಬೇಕೋ ಅಷ್ಟೇ ಸಾಮಾನುಕೊಳ್ಳುವುದು, ಅಷ್ಟೇ ಅಡುಗೆ ತಯಾರಿ ಮಾಡಿ ಮನೆಯವರಿಗೆಲ್ಲ ಬಡಿಸಬೇಕಾದ ಪರಿಸ್ಥಿತಿಯಲ್ಲಿ ಮನೆಯವರೆಲ್ಲರೂ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಮಾಡಿದರೆ ದೇವರಿಗೆ ನೀಡಲು ಎಣ್ಣೆ ಕಡಿಮೆಯಾಗುತ್ತದೆ ಎಂದು ಹಿರಿಯರು ಆದಷ್ಟು ಆ ನೆಪದಲ್ಲಾದರೂ ಎಣ್ಣೆ ಉಳಿಯಲಿ ಎಂದು ಶಾಸ್ತ್ರವನ್ನು ಮಾಡಿರಬಹುದೇನೋ.

ಮಳೆಗಾಲದಲ್ಲಿ ಮದ್ವೆ ಆಗುತ್ತೆ!
ಶುಭಕಾರ್ಯಕ್ಕಾಗಿಯೋ, ಪರೀಕ್ಷೆಗಾಗಿಯೋ ಹೊರಡುವ ಮೊದಲು ಕೆಲವು ಕಡೆ ಮೊಸರೋ, ಸಕ್ಕರೆಯೋ, ತಣ್ಣನೆಯ ಹಾಲೋ ಕುಡಿದು ಹೊರಡುವ ಸಂಪ್ರದಾಯ ಕೆಲವರಲ್ಲಿ. ಮೊಸರು, ಹಾಲು ನಮ್ಮ ದೇಹವನ್ನು ತಂಪಾಗಿಸುವ ಜೊತೆಗೆ ದೇಹದಲ್ಲಿ ಪಾಸಿಟಿವ್‌ ಎನರ್ಜಿಯನ್ನು ತುಂಬುತ್ತದೆ. ರುಬ್ಬುವ ಕಲ್ಲನ್ನು ಯಾವ ಮಸಾಲೆ ಸಾಮಗ್ರಿಗಳಿರದೇ ಸುಮ್ಮನೆ ರುಬ್ಬಬೇಡಿ ಎನ್ನುತ್ತಿದ್ದರು ಹಿರಿಯರು. ಅದರಲ್ಲಿ ಅಪ್ಪಿತಪ್ಪಿ ಇರುವ ಇರುವೆ, ಜಿರಳೆಗಳನ್ನು ತಿಳಿಯದೇ ರುಬ್ಬಿದರೆ ಪ್ರಾಣಿಗಳ ಜೀವವೂ ಹಾನಿ, ಅಲ್ಲದೇ ಅಪ್ಪಿತಪ್ಪಿ ಮುಂದಿನ ಬಾರಿ ಶುಭ್ರವಾಗಿದೆಯೆಂದು ಅಂದುಕೊಂಡು ಹಾಕಿದ ಮಸಾಲೆಯಲ್ಲಿ ಅವುಗಳು ಸೇರುವ ಸಾಧ್ಯತೆಯೂ ಇರಬಹುದು. ಈಗ ರುಬ್ಬುವ ಕಲ್ಲುಗಳು ಕೆಲವರಿಗೆ ಪ್ರಾಚ್ಯವಸ್ತುವಾದರೂ ಮಿಕ್ಸರ್‌, ಗ್ರೈಂಡರ್ ಗಳಿಗೂ ಆ ಶಾಸ್ತ್ರವನ್ನು ಪಾಲಿಸಿದರೆ ಒಳಿತು. ಇಲ್ಲದಿದ್ದರೆ ಸಸ್ಯಾಹಾರಿಗಳೂ ಕೀಟಾಹಾರಿಗಳಾಗುವ ಸಾಧ್ಯತೆಯಿದೆ.
ತೆಂಗಿನಕಾಯಿ ತುರಿಯುವಾಗ ಅದನ್ನು ತಿನ್ನಬಾರದು, ತಿಂದರೆ ಮಳೆಗಾಲದಲ್ಲಿ ಮದುವೆಯಾಗುತ್ತದೆ ಎಂದು ನಮ್ಮ ಮಲೆನಾಡ ಹಿರಿಯರು ಹೇಳುತ್ತಾರೆ. ಒಮ್ಮೆ ತಿಂದರೆ ಯಾವಾಗಲೂ ತಿನ್ನುವ ಅಭ್ಯಾಸವಾಗಬಹುದು. ಶುಭಸಮಾರಂಭದಲ್ಲಿ , ದೇವರ ನೈವೇದ್ಯವನ್ನು ತಯಾರಿಸುವ ಸಂದರ್ಭದಲ್ಲಿ , ಎಂಜಲು ಮಾಡುವುದು ಕೂಡ ಆರೋಗ್ಯಕರವಲ್ಲ. ಹಾಗಾಗಿಯೇ ‘ಮಳೆಗಾಲದಲ್ಲಿ ಮದುವೆಯಾಗುವುದು’ ಎಂದು ಹೆದರಿಸಿರಬಹುದು.

ನಮ್ಮ ಹಿರಿಯರು ನೂರಾರು ವರ್ಷ ಬಾಳಿ ನೂರಾರು ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸುತ್ತಿದ್ದರು. ಇಂದು ಕಾಲ ಬದಲಾಗಿದೆ. ಕೆಲವು ಸಂಪ್ರದಾಯಗಳನ್ನು ಹಿರಿಯರು ಹೇಳಿದರೆಂದು ಅದರ ಅರ್ಥ ಅರಿಯದೇ ಪಾಲಿಸುತ್ತೇವೆ. ಕೆಲವನ್ನು ರೂಪಾಂತರಗೊಳಿಸಿ ಉಪಯೋಗಿಸಿದರೆ ಕೆಲವನ್ನು ಪಾಲಿಸದಿರುವುದು ಒಳ್ಳೆಯದೇನೋ. ಕಾಲಕ್ಕೆ ತಕ್ಕಂತೆ ಅವನ್ನು ಬದಲಾಯಿಸಿಕೊಳ್ಳಬೇಕಲ್ಲವೆ? ಕೆಲವು ಶಾಸ್ತ್ರಗಳಿಗೆ ಪರ್ಯಾಯವನ್ನು ಕಂಡುಕೊಳ್ಳಬಹುದು.

— ಸಾವಿತ್ರಿ ಶ್ಯಾನುಭಾಗ

Advertisement

Udayavani is now on Telegram. Click here to join our channel and stay updated with the latest news.

Next