Advertisement

ಒರಟು ನಾಲಗೆಯ ಟ್ರಂಪ್‌ಗಿಂತ, ಮೃದು ಮಾತಿನ ಡೆಮಾಕ್ರಾಟ್‌ಗಳೇ ಅಪಾಯಕಾರಿ!

01:16 PM Aug 31, 2020 | Hari Prasad |

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಸನ್ನಿಹಿತವಾಗುತ್ತಿರುವ ಸಮಯದಲ್ಲೇ ರಿಪಬ್ಲಿಕನ್‌ ಹಾಗೂ ಡೆಮಾಕ್ರಾಟ್‌ ಪಕ್ಷಗಳ ನಡುವೆ ದಾಳಿ-ಪ್ರತಿದಾಳಿ ಜೋರಾಗಿ ನಡೆದೇ ಇದೆ.

Advertisement

ಈ ವರ್ಷವಂತೂ ಕೋವಿಡ್‌ನಿಂದಾಗಿ ಅಮೆರಿಕ ಹೈರಾಣಾಗಿ ಹೋಗಿದೆ.

ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕವು ಕೋವಿಡ್‌ 19 ವಿಷಯದಲ್ಲಿ ಆರಂಭಿಕ ಸಮಯದಲ್ಲಿ ತೋರಿಸಿದ ದಡ್ಡತನದಿಂದಾಗಿ, ಇಂದು ನಂಬರ್‌ 1 ಹಾಟ್‌ಸ್ಪಾಟ್‌ ಆಗಿ ಬದಲಾಗಿದೆ.

ಈ ವಿಚಾರದಲ್ಲಿ ಟ್ರಂಪ್‌ರನ್ನು ಕಟಕಟೆಯಲ್ಲಿ ನಿಲ್ಲಿಸಬಹುದೇ? ಖಂಡಿತ ನಿಲ್ಲಿಸಬೇಕು. ಕೋವಿಡ್‌ 19 ಅಪಾಯದ ಬಗ್ಗೆ ಆರಂಭದಲ್ಲಿ ಟ್ರಂಪ್‌ ಅಸಡ್ಡೆ ಮಾಡಿದ್ದರಿಂದಲೇ ಪರಿಸ್ಥಿತಿ ಒಂದು ಹಂತಕ್ಕೆ ಕೈಜಾರಿತು ಎನ್ನುವುದು ಸತ್ಯ. ಆದರೆ ಸತ್ಯ ಒಂದೇ ಇರುವುದಿಲ್ಲ.

ಟ್ರಂಪ್‌ ಅಷ್ಟೇ ಅಲ್ಲ, ಅಮೆರಿಕನ್ನರ ಅಸಡ್ಡೆಯ ಗುಣವೂ ಇದಕ್ಕೆ ಕಾರಣ. ಈಗಲೂ ಅಲ್ಲಿನ ಒಂದು ಬಹುದೊಡ್ಡ ಜನವರ್ಗ, ಮಾಸ್ಕ್ ಹಾಕುವುದನ್ನು ಕಡ್ಡಾಯಗೊಳಿಸುವುದನ್ನು ಶೋಷಣೆ ಎಂದು ಕರೆಯುತ್ತದೆ.

Advertisement

ಕೋವಿಡ್‌ 19 ನಡುವೆಯೇ ಇತ್ತೀಚೆಗೆ ಅಮೆರಿಕನ್‌ ಪೊಲೀಸರಿಂದ ನಡೆದ ಕಪ್ಪುವರ್ಣೀಯ ವ್ಯಕ್ತಿ ಜಾರ್ಜ್‌ ಫ್ಲಾಯ್ಡನ ‘ಹತ್ಯೆ’, ಆ ವಿಚಾರದಲ್ಲಿ ಅಮೆರಿಕದಾದ್ಯಂತ ಪೊಲೀಸ್‌ ಇಲಾಖೆಯ ವಿರುದ್ಧ ನಡೆದಿರುವ ಪ್ರತಿಭಟನೆಗಳು, ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌ ರ್ಯಾಲಿಗಳು ಬಹಳ ಸದ್ದು ಮಾಡುತ್ತಿವೆ.

ಜಾರ್ಜ್‌ ಫ್ಲಾಯ್ಡ ವಿಚಾರದಲ್ಲಿ ಪ್ರತಿಭಟಿಸುತ್ತಿರುವ ಎಡಪಂಥೀಯ ಅಮೆರಿಕನ್ನರು ಮತ್ತು ಡೆಮಾಕ್ರಾಟ್‌ಗಳು ಈ ವಿಚಾರದಲ್ಲೂ ಟ್ರಂಪ್‌ ಅವರನ್ನೇ ದೋಷಿಯನ್ನಾಗಿ ನಿಲ್ಲಿಸಲು ಪ್ರಯತ್ನಿಸುತ್ತಿರುವುದಕ್ಕೆ ನನ್ನ ತಕರಾರಿದೆ. ಟ್ರಂಪ್‌, ಕೋವಿಡ್‌ ವಿಚಾರದಲ್ಲಿ ಎಡವಿರಬಹುದೇ ಹೊರತು, ಅವರ ಆಡಳಿತಕ್ಕೂ ಜಾರ್ಜ್‌ ಫ್ಲಾಯ್ಡ ಹತ್ಯೆಗೂ ಸಂಬಂಧವೇ ಇಲ್ಲ. ಈ ವಿಷಯದಲ್ಲಿ ಅವರ ಆಡಳಿತದತ್ತ ಬೆರಳು ತೋರಿಸುವುದು ಕುತಂತ್ರವೇ ಸರಿ.

ಸತ್ಯವೇನೆಂದರೆ ಒಬಾಮಾ ಅವಧಿಯಲ್ಲೇ ಅಮೆರಿಕನ್‌ ಪೊಲೀಸರ ಕ್ರೌರ್ಯಕ್ಕೆ ಕಪ್ಪು ವರ್ಣೀಯರು ಹೆಚ್ಚು ಸಾವನ್ನಪ್ಪಿದ್ದರು. ಅಂದರೆ ನಿಜಕ್ಕೂ ಪೊಲೀಸ್‌ ಇಲಾಖೆಯ ಮನಃಸ್ಥಿತಿಯಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಇದರರ್ಥ.

ಹಾಗೆಂದು ಸಾವನ್ನು ಅಂಕಿ ಅಂಶಗಳಲ್ಲಿ ತುಲನೆ ಮಾಡುವುದಕ್ಕೆ ಆಗುವುದಿಲ್ಲವಾದರೂ ಅಂದಿನ ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌ ಪ್ರತಿಭಟನೆಗಳು ಈಗಿನಂತೆ ಆಡಳಿತ ವಿರೋಧಿ ಪ್ರತಿಭಟನೆಗಳಾಗಿ ರೂಪ ಪಡೆದಿರಲಿಲ್ಲ! ಒಬಾಮಾ ಆಡಳಿತವನ್ನು ಯಾರೂ ಕಟಕಟೆಯಲ್ಲಿ ನಿಲ್ಲಿಸಲು ಕನಿಷ್ಠ ಪಕ್ಷ ಯೋಚಿಸಲೂ ಇಲ್ಲ ಎನ್ನುವುದನ್ನು ಗಮನಿಸಬೇಕು.

ಗಮನಾರ್ಹ ಸಂಗತಿಯೆಂದರೆ, ಟ್ರಂಪ್‌ ವಿಷಯ ಬಂದಾಗಲೆಲ್ಲ ರಾಜಕೀಯ ಪರಿಣತರು ಅವರನ್ನು ಒಬಾಮಾ ಜತೆ ತುಲನೆ ಮಾಡುತ್ತಾ, ಕೊನೆಗೆ, “ಒಬಾಮಾ ಅದ್ಭುತ ಆಡಳಿತಗಾರರಾಗಿದ್ದರು’ ಎಂದು ತೀರ್ಪು ನೀಡಿಬಿಡುತ್ತಾರೆ. ಆದರೆ ಸತ್ಯವೇನೆಂದರೆ, ಒಬಾಮಾ ಒಳ್ಳೆಯ ಭಾಷಣಕಾರರಾಗಿದ್ದರಷ್ಟೇ ಹೊರತು, ಆಡಳಿತಗಾರರಲ್ಲ.

ಅವರ ಅವಧಿಯಲ್ಲಿ ಅಮೆರಿಕದಿಂದ ಜಗತ್ತು ಅನುಭವಿಸಿದ ತೊಂದರೆ ಅಷ್ಟಿಷ್ಟಲ್ಲ. ಆದಾಗ್ಯೂ, ಅಮೆರಿಕದಲ್ಲಿ ಕೆಲವು ಶ್ಲಾಘನೀಯ ಕೆಲಸಗಳು (ಮುಖ್ಯವಾಗಿ ಆರೋಗ್ಯ ವ್ಯವಸ್ಥೆಯಲ್ಲಿ) ನಡೆದವಾದರೂ, ಒಟ್ಟಾರೆಯಾಗಿ ಪೂರ್ವಗ್ರಹಗಳನ್ನೆಲ್ಲ ಬದಿಗಿಟ್ಟು ತುಲನೆ ಮಾಡಿದರೆ ಟ್ರಂಪ್‌ ನಿಜಕ್ಕೂ ಶ್ಲಾಘನೀಯ ಹೆಜ್ಜೆಗಳನ್ನಿಟ್ಟಿರುವುದು ಅರ್ಥವಾಗುತ್ತದೆ.

ಟ್ರಂಪ್‌ರನ್ನು ಕ್ರೂರಿ ಎಂದು ಬಿಂಬಿಸುವಲ್ಲಿ ಅಮೆರಿಕದ ಒಂದು ವರ್ಗ ಸಾಕಷ್ಟು ಯಶಸ್ವಿಯಾಗಿಬಿಟ್ಟಿದೆ. ಆದರೆ ಅಮೆರಿಕವು ಜಗತ್ತಿನ ಮೇಲೆ ಅತೀಹೆಚ್ಚು ಕ್ರೌರ್ಯ ಮೆರೆದದ್ದು ಒಬಾಮಾ, ಕ್ಲಿಂಟನ್‌, ಬುಷ್‌ ಅವಧಿಯಲ್ಲಿಯೇ ಹೊರತು ಟ್ರಂಪ್‌ ಅವಧಿಯಲ್ಲಲ್ಲ ಎನ್ನುವ ಸತ್ಯವನ್ನು ಅಲ್ಲಗಳೆಯಲಾಗದು. ಈ ತ್ರಿಮೂರ್ತಿಗಳ ಅವಧಿಯಲ್ಲೇ ಜಾಗತಿಕ ಉಗ್ರಪಡೆಗಳು ಬಲಿಷ್ಠವಾಗುತ್ತಾ ಸಾಗಿದ್ದು, ಮಧ್ಯಪ್ರಾಚ್ಯವು ಗುಣವಾಗದಷ್ಟು ರೋಗಗ್ರಸ್ತವಾಗಿತ್ತು ಎಂದರೂ ತಪ್ಪಿಲ್ಲ.

ಸತ್ಯವೇನೆಂದರೆ ಟ್ರಂಪ್‌ ಆಡಳಿತಾವಧಿಯಲ್ಲಿ ಅಮೆರಿಕ ಅನಾವಶ್ಯಕ ಯುದ್ಧಗಳನ್ನು ಕಡಿಮೆ ಮಾಡಿದೆ. ಟ್ರಂಪ್‌ ಅವರ ನೇರ-ನಿಷ್ಠುರ ನಡೆಗಳು ಚೀನ, ಉತ್ತರ ಕೊರಿಯಾದಂಥ ಉದ್ಧಟ ರಾಷ್ಟ್ರಗಳು ಹಿಂದಡಿ ಇಡುವಂತೆ ಮಾಡಿವೆ. ವಿದೇಶಾಂಗ ನೀತಿಗಳಲ್ಲಿ ಟ್ರಂಪ್‌ ಆಡಳಿತದ ಗಮನಾರ್ಹ ಹೆಜ್ಜೆಗಳ ಬಗ್ಗೆ ಈಗ ಸೆಕ್ರೆಟರಿ ಆಫ್ ಸ್ಟೇಟ್‌ ಮೈಕ್‌ ಪಾಂಪಿಯೋ ಮಾಡಿರುವ ಭಾಷಣ ಕನ್ನಡಿ ಹಿಡಿಯುತ್ತದೆ.

ಚೀನವನ್ನು ಎದುರು ಹಾಕಿಕೊಂಡರು
ಮುಖ್ಯವಾಗಿ, ಚೀನ ವಿಷಯದಲ್ಲಿ ಟ್ರಂಪ್‌ರ ನಡೆ-ನುಡಿಗಳನ್ನು ಗಮನಿಸಿ. ಕೆಲವು ವರ್ಷಗಳಿಂದ ಚೀನದ ಕುತಂತ್ರಗಳ ಬಗ್ಗೆ ಅವರು ನೇರವಾಗಿಯೇ ಪ್ರಧಾನ ವೇದಿಕೆಗಳಲ್ಲಿ ಮಾತನಾಡಲಾರಂಭಿಸಿದ್ದಾರೆ. ಚೀನಿ ಕಂಪೆನಿಗಳ ಕಳ್ಳಾಟಗಳಿಗೆ ಕತ್ತರಿ ಹಾಕಿದ್ದಾರೆ. ರಾಜತಾಂತ್ರಿಕರ ರೂಪದಲ್ಲಿ ಚೀನ ಕಳುಹಿಸುವ ಗೂಢಚಾರಿಗಳನ್ನು ವಾಪಸ್‌ ಕಳುಹಿಸಿದ್ದಾರೆ,ಇಲ್ಲವೇ ಜೈಲಿಗಟ್ಟಿದ್ದಾರೆ. ಚೀನದ ವ್ಯಾಪಾರ ನೀತಿಗಳಿಗೆ ಬಹಿರಂಗವಾಗಿಯೇ ಸವಾಲೊಡ್ಡುತ್ತಾ ಬರುತ್ತಿದ್ದಾರೆ.

ಕೋವಿಡ್ 19 ವಿಚಾರದಲ್ಲಂತೂ ಇಂದು ಚೀನ ಖಳನಾಯಕನಾಗಿ ನಿಲ್ಲಲು ಟ್ರಂಪ್‌ ಅವರ ಪ್ರಬಲ ಟೀಕಾಸ್ತ್ರಗಳೇ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ, ಚೀನದ ತಾಳಕ್ಕೆ ಕುಣಿಯುವ ವಿಶ್ವ ಆರೋಗ್ಯ ಸಂಸ್ಥೆಯನ್ನು ನೇರವಾಗಿಯೇ ಝಾಡಿಸುವ ಮೂಲಕ ಜಗತ್ತಿನ ರಾಷ್ಟ್ರಗಳೆಲ್ಲ ಜಿನ್‌ಪಿಂಗ್‌ ಆಡಳಿತದ ವಿರುದ್ಧ ಮಾತನಾಡುವ ಧೈರ್ಯ ತೋರುವಂತೆ ಮಾಡಿದ್ದಾರೆ ಟ್ರಂಪ್‌. ಡೊನಾಲ್ಡ್‌ ತಮ್ಮ ವೈಫ‌ಲ್ಯವನ್ನು ಮುಚ್ಚಿಟ್ಟುಕೊಳ್ಳಲು ಚೀನದತ್ತ ಬೆರಳು ತೋರಿಸುತ್ತಿರಲೂಬಹುದಾದರೂ ಚೀನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ಪ್ರಬಲ ಪ್ರತಿರೋಧ ಅನಿವಾರ್ಯವಾಗಿತ್ತು.

ಅತ್ತ ಉತ್ತರ ಕೊರಿಯಾ ವಿಚಾರಕ್ಕೆ ಬಂದರೆ, ಆರಂಭಿಕ ಸಮಯದಲ್ಲಿ ಟ್ರಂಪ್‌-ಕಿಮ್‌ಜಾಂಗ್‌ ಉನ್‌ ನ‌ಡುವಿನ ವಾಗ್ಬಾಣಗಳು, ಧಮಕಿಗಳು ಯುದ್ಧಕ್ಕೆ ಕಾರಣವಾಗಿಬಿಡುತ್ತವೆ ಏನೋ ಎಂಬಂತೆ ಭಾಸವಾಯಿತಾದರೂ ಕೊನೆಗೂ ಉತ್ತರ ಕೊರಿಯಾದ ನಾಯಕತ್ವವು ಹೆದರಿ ಮಾತುಕತೆಗೆ ಬರುವಂತೆ ಮಾಡಿದರು ಟ್ರಂಪ್‌. ಎರಡು ಬಾರಿ ಕಿಮ್‌ಜಾಂಗ್‌ ಉನ್‌ ಜತೆ ಮಾತುಕತೆಯಾಡಿದ್ದಷ್ಟೇ ಅಲ್ಲದೇ, ಉ. ಕೊರಿಯಾ ದ. ಕೊರಿಯಾದ ಜತೆಗೂ ಸಂಧಾನ ಮಾಡಿಕೊಳ್ಳುವಂತೆ ಮಾಡಿದರು.

ಇನ್ನು ಸದಾ ಬಿಕ್ಕಟ್ಟಿನಿಂದ ಕೂಡಿರುವ ಮಧ್ಯಪ್ರಾಚ್ಯದ ವಿಚಾರದಲ್ಲೂ ಟ್ರಂಪ್‌ ಆಡಳಿತ ಗಮನಾರ್ಹ ಕಠಿನ ಹೆಜ್ಜೆಗಳನ್ನಿಟ್ಟಿದೆ. ಮುಖ್ಯವಾಗಿ, ಐಸಿಸ್‌ ಭಯೋತ್ಪಾದಕರು ಇಂದು ಧೂಳೀಪಟವಾಗಿದ್ದರೆ ಅದರಲ್ಲಿ ಟ್ರಂಪ್‌ ನಾಯಕತ್ವಕ್ಕೆ ಶ್ರೇಯಸ್ಸು ಸಲ್ಲಬೇಕು. ಐಸಿಸ್‌ ಅನ್ನು ಅಜಮಾಸು ನಿರ್ನಾಮ ಮಾಡಿರುವುದಷ್ಟೇ ಅಲ್ಲದೇ ಅದರ ಮುಖ್ಯಸ್ಥ ಅಬು ಬಕ್ರ್ ಅಲ್‌ ಬಗ್ಧಾದಿಯೂ ಹತನಾಗಿದ್ದಾನೆ.

ಇರಾನ್‌ ವಿಚಾರದಲ್ಲಿ ಟ್ರಂಪ್‌ ಆಡಳಿತದ ವೈಖರಿ ಅತಿರೇಕವೆನಿಸುವಂತಿದೆಯಾದರೂ ಆಯತೊಲ್ಹಾ, ಹೆಜ್ಬೊಲ್ಲಾ ಮತ್ತು ಹಮಾಸ್‌ನ್ನು ಹತ್ತಿಕ್ಕಿರುವುದರಿಂದಾಗಿ ಇಂದು ಇಸ್ರೇಲ್‌ನಂಥ ರಾಷ್ಟ್ರಗಳು ನೆಮ್ಮದಿಯಿಂದ ಉಸಿರಾಡುವಂತಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ, ಇಸ್ರೇಲ್‌ ಹಾಗೂ ಯುಎಇ ನಡುವೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಮುನ್ನುಡಿ ಬರೆಯುವ ಮೂಲಕ ಡೊನಾಲ್ಡ್‌ ಟ್ರಂಪ್‌ ಇತಿಹಾಸ ನಿರ್ಮಿಸಿರುವುದನ್ನು ಅವಗಣಿಸುವಂತೆಯೇ ಇಲ್ಲ.

ಹಾಗೆಂದು, ನಾನಿಲ್ಲಿ ಟ್ರಂಪ್‌ರನ್ನು ಮೆಸೀಹಾ (ಪರಿಪೂರ್ಣ) ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿಲ್ಲ. ಆ ವ್ಯಕ್ತಿಯಲ್ಲಿ ಅನೇಕ ಕೊರತೆಗಳಿವೆ. ಹಿಂದೆ-ಮುಂದೆ ಯೋಚಿಸದೇ ಇಡುವ ಹೆಜ್ಜೆಗಳಿಂದಾಗಿ ಎಷ್ಟೋ ರಾಷ್ಟ್ರಗಳಿಗೆ ಸಂಕಷ್ಟಗಳೂ ಎದುರಾಗುತ್ತಿವೆ. ಆದರೆ ಇದಕ್ಕಾಗಿ ಟ್ರಂಪ್‌ರನ್ನು ಹಿಟ್ಲರ್‌ಗೆ ಹೋಲಿಸುವುದು ಮೂರ್ಖತನವೇ ಸರಿ. ಒಟ್ಟಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ, ಒರಟು ನಾಲಿಗೆಯ ಟ್ರಂಪ್‌ಗಿಂತ ಮೃದು ಮಾತಿನ ಡೆಮಾಕ್ರಾಟ್‌ಗಳೇ ಜಗತ್ತಿಗೆ ಬಹಳ ಅಪಾಯಕಾರಿ ಎನ್ನುವುದು.

– ಬುನಿಂ ಎಲಾನ್‌ (ಲೇಖಕರು ಇಸ್ರೇಲ್‌ನ ಪ್ರಖ್ಯಾತ ರಾಜಕೀಯ ಅಂಕಣಕಾರರು)

Advertisement

Udayavani is now on Telegram. Click here to join our channel and stay updated with the latest news.

Next