Advertisement

ಅಪೂರ್ವ ಶೈಲಿಯ ಶಿಲಾ ಶಿಲ್ಪ ವೈಶಿಷ್ಟ್ಯತೆಯ ವಿನೂತನ ದೇಗುಲ

08:40 AM Apr 30, 2018 | Karthik A |

ತೆಕ್ಕಟ್ಟೆ: ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿಯ ಶ್ರೀ ಹರಿಹರ ಕ್ಷೇತ್ರ, ಆನೆಗುಡ್ಡೆ ಶ್ರೀ ವಿನಾಯಕ ದೇಗುಲ, ಶ್ರೀ ಸೂರ್ಯನಾರಾಯಣ ದೇಗುಲ, ನಾಗಾಚಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಗಳು ಜಿಲ್ಲೆಯಲ್ಲಿಯೇ ಪ್ರಸಿದ್ಧವಾಗಿವೆ. ಈ ಪುಣ್ಯ ಕ್ಷೇತ್ರದಲ್ಲಿ  ರಾ.ಹೆ. 66 ಕ್ಕೆ ಹೊಂದಿಕೊಂಡು ಅಪೂರ್ವ ಶೈಲಿಯ ಶಿಲಾ ಶಿಲ್ಪ ವೈಶಿಷ್ಟ್ಯತೆಯನ್ನು ಒಳಗೊಂಡ ನೂತನ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲ ಹಾಗೂ ರಾಜಗೋಪುರ ಎಲ್ಲರ ಗಮನ ಸೆಳೆಯುತ್ತಿದೆ.

Advertisement

ಸ್ವಪ್ನ ಸೂಚನೆ
ಮೂಲತಃ ಗಂಗೊಳ್ಳಿಯ ಹೊಸ್ಮನೆ ಕೀರ್ತಿಶೇಷ ಗೌರಮ್ಮ ಮತ್ತು ಮಂಜುನಾಥ ಶೇರೆಗಾರ ಪುತ್ರರಾದ ದೇವಿ ಆರಾಧಕ ಉದ್ಯಮಿ ದೇವರಾಯ ಶೇರೆಗಾರ ಅವರು ಕುಂಭಾಸಿಯಲ್ಲಿ ಮನೆ ನಿರ್ಮಿಸಿ ಅನಂತರ ಸಮೀಪದ ಜಾಗವನ್ನು ಖರೀದಿಸಿ ನಿವೇಶನ ನಿರ್ಮಿಸಬೇಕು ಎನ್ನುವ ಯೋಜನೆಯಲ್ಲಿದ್ದ ಅವರಿಗೆ ಸ್ವಪ್ನದಲ್ಲಿ ಆರಾಧ್ಯ ದೇವತೆ ಪ್ರತ್ಯಕ್ಷಳಾಗಿ ನೆಲೆ ಕಲ್ಪಿಸುವಂತೆ ಪ್ರೇರೇಪಿಸಿದರು ಎಂದು ಹೇಳಲಾಗಿದೆ. ಈ ಭೂಮಿ ಹಿಂದೆ ಬ್ರಾಹ್ಮಣ ಕುಟುಂಬವೊಂದರ ವಶದಲ್ಲಿದ್ದು ಆ ಕುಟುಂಬದವರು ಶ್ರೀ ವಾದಿರಾಜ ಗುರುಗಳು ಅನುಗ್ರಹಿಸಿ ನೀಡಿದ್ದ ದೇವಿಯ ಚೈತನ್ಯವೊಂದನ್ನು ಇಲ್ಲಿ ಪೂಜಿಸುತ್ತಿದ್ದರು.

ಅಷ್ಟ ಮಂಗಲ ಪ್ರಶ್ನೆ
ಕೇರಳ ಪಯ್ಯನ್ನೂರಿನ ಪ್ರಸಿದ್ಧ ಜೋಯಿಸರಾದ ಮಾಧವನ್‌ ಪೊದುವಾಳರ ಮೂಲಕ ಇಲ್ಲಿ ಅಷ್ಟಮಂಗಲ ಪ್ರಶ್ನೆ ಇರಿಸಿದಾಗ ಎಲ್ಲ ವಿಷಯಗಳೂ ನಿಚ್ಚಳಗೊಂಡವು. ಅದರಲ್ಲಿ ದೊರೆತ ಸೂಚನೆಯಂತೆ ಕುಂಭಾಸಿಯ ಅವರ ನಿವಾಸದ ಸಮೀಪವೇ ದೇವರಾಯರು ಶ್ರೀ ಗಣಪತಿ, ಶ್ರೀ ವೆಂಕಟರಮಣ ಸಹಿತ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರ ದೇವಾಲಯ ನಿರ್ಮಿಸಲು ಸಂಕಲ್ಪಿಸಿದರು. ಕುಟುಂಬದ ಆರಾಧ್ಯ ದೇವಿ ಶ್ರೀ ಕಾಳಿಕಾ ಪರಮೇಶ್ವರೀ, ಅವರ ಜತೆ ಬಂದ ದೇವಿಯ ಪರಿವಾರ ಶಕ್ತಿ ಶ್ರೀ ಚಾಮುಂಡೇಶ್ವರೀ ಮತ್ತು ಆ ಭೂಮಿಯಲ್ಲಿ ಮೊದಲೇ ನೆಲೆ ನಿಂತಿದ್ದ ಬ್ರಾಹ್ಮಣ ಕುಟುಂಬ ಆರಾಧಿಸುತ್ತಿದ್ದ ಶ್ರೀ ದುರ್ಗಾ ಶಕ್ತಿ, ಹೀಗೆ ಮೂರೂ ಅಂಶಗಳನ್ನೊಳಗೊಂಡ ಶ್ರೀ ಚಂಡಿಕಾದುರ್ಗಾಪರಮೇಶ್ವರೀ ನಾಮಾಂಕಿತದಿಂದ ದೇವಳ ನಿರ್ಮಿಸಲು ಸೂಚನೆ ದೊರೆಯಿತು, ಹೊರ ಭಾಗದ ಗೋಳಿಮರದ ಬುಡದಲ್ಲಿ ಶ್ರೀ ನಾಗಯಕ್ಷೀ ಮತ್ತು ಶ್ರೀ ಸ್ವರ್ಣಯಕ್ಷೀ ಶಕ್ತಿ ಸ್ಥಾಪನೆಗೂ ಆದೇಶವಾಗಿದೆ ಎಂದು ಹೇಳಲಾಗಿದೆ.

ಅದ್ಭುತ ಮರದ ಕುಸುರಿ ಕೆತ್ತನೆ


ಪಯ್ಯನ್ನೂರಿನ ಜ್ಯೋತಿ ಮಾಧವನ್‌ ಪೊದುವಾಳರ ಮಾರ್ಗದರ್ಶನ, ಮುನಿಯಂಗಳ ಮಹೇಶ ಭಟ್ಟರ ವಾಸ್ತುಶಿಲ್ಪ, ಕಾರ್ಕಳದ ಶಿಲ್ಪಿ ಸತೀಶ್‌ ಆಚಾರ್‌ ರ ಕಲ್ಲುಕೆತ್ತನೆ, ಬಾರ್ಕೂರಿನ ಕಾಷ್ಠ ಶಿಲ್ಪಿ ಶ್ರೀಪತಿ ಆಚಾರ್‌ ರ ಮರದ ಕುಸುರಿ ಕೆತ್ತನೆ ಹಾಗೂ ತಮಿಳುನಾಡಿನ ಕುಶಲಿಗಳಿಂದ ಲೋಹ ಶಿಲ್ಪಕಲೆ ಅದ್ಭುತವಾಗಿ ಮೇಳೈಸಿದೆ.

ದೇಗುಲದ ಒಳ ಪ್ರಕಾರದಲ್ಲಿನ ದಾರುಶಿಲ್ಪದಲ್ಲಿ ಅಭಿವ್ಯಕ್ತಗೊಂಡ ಕಂಬಗಳಲ್ಲಿ ಮೈದಳೆದು ನಿಂತಿರುವ ನೃತ್ಯ ಕನ್ನಿಕೆಯರು, ನಾಗ ಕನ್ನಿಕೆಯರು, ನೃತ್ಯ ಬಾಲೆಯರ ವಿವಿಧ ಕಲಾತ್ಮಕ ಭಂಗಿಯನ್ನು ಒಳಗೊಂಡ ಕುಸುರಿ ಕೆಲಸಗಳು ಆಕರ್ಷಕವಾಗಿವೆ. ಹೊಯ್ಸಳ ಶೈಲಿಯಲ್ಲಿನ ನವದುರ್ಗೆಯರು, ಚೋಳ ಶೈಲಿಯ ಅಷ್ಟ ಲಕ್ಷ್ಮೀ, ವಿವಿಧ ಪ್ರಕಾರದ ಹೂ ಬಳ್ಳಿ, ಪ್ರಾಣಿ, ಪಕ್ಷಿಗಳ ಕೆತ್ತನೆಗಳು ನೋಡುಗರನ್ನು ವಿಭಿನ್ನ ಕಲ್ಪನಾಸ್ತರದೆಡೆಗೆ ಕೊಂಡೊಯ್ಯುತ್ತಿದೆ.

Advertisement

ತಾಯಿಯ ಪ್ರೇರಣೆ
ತಾಯಿಯ ಪ್ರೇರಣೆಯಿಂದಲೇ ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಆಗ ಸುಮಾರು 40 ವರ್ಷದ ಹಿಂದೆ ನಮ್ಮ ಮನೆ ದೇವರಿಗೆ ಸರಿಯಾದ ಸ್ಥಾನವಿರಲಿಲ್ಲ ಆಗ ಅತೀ ಬಡತನ ನನ್ನಲ್ಲಿ ದೇಗುಲ ನಿರ್ಮಾಣ ಮಾಡುವ ಶಕ್ತಿ ಇರಲಿಲ್ಲ. ಉದ್ಯೋಗ ಅರಸಿ ಮುಂಬಯಿಗೆ ಹೋದೆ ತಾಯಿ ನನ್ನನ್ನು ರಕ್ಷಿಸಿದ್ದಾಳೆ. ಅಷ್ಟಮಂಗಲ ಪ್ರಶ್ನೆಯಂತೆ ಶ್ರೀ ಸನ್ನಿಧಿಗೆ 1800 ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗಿದೆ. ಈ ಸ್ಥಳದಲ್ಲಿ ತಾಯಿಗೆ ಸ್ಥಾನ ಕೊಡಲು ಮುಂದಾದಾಗ ಎಲ್ಲವೂ ವೃದ್ಧಿಯಾಗುತ್ತಾ ಹೋಗಿದೆ.
– ದೇವರಾಯ ಎಂ.ಶೇರೆಗಾರ್‌, ದೇಗುಲದ  ಪ್ರಧಾನ ವ್ಯವಸ್ಥಾಪಕರು.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next