Advertisement
ನಮ್ಮ ಸುತ್ತಲಿನ ಎಷ್ಟೋ ನದಿಗಳಿಗೆ ನೆಲದ ಸರಳ ಲೆಕ್ಕಗಳಿವೆ. ಅವು ವಿಜ್ಞಾನ- ಗಣಿತದ ಅರ್ಥಗಳಲ್ಲ. ಉದಾಹರಣೆಗೆ, ದಕ್ಷಿಣದ ಪ್ರಯಾಗವೆಂದು ಕರೆಯುವ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಸಂಗಮವಾಗುತ್ತವೆ. ಈ ನದಿ ಬದಿಯ ಒಬ್ಬ ಹುಡುಗನನ್ನು ಅಡ್ಡ ನಿಲ್ಲಿಸಿ ಒಂದಕ್ಕೆ ಒಂದು ಸೇರಿಸಿದರೆ ಎಷ್ಟೆಂದು ಒಮ್ಮೆ ಕೇಳಿ ನೋಡಿ. ಆ ಹುಡುಗ ಕೊಡುವ ಉತ್ತರ “ಒಂದೇ’ ಎಂದು!
Related Articles
Advertisement
ಈ ಜಗತ್ತಿನ ಮೊದಲ ಮನುಷ್ಯ ತನ್ನ ಮುಖ ನೋಡಿಕೊಂಡದ್ದು ನದಿಯಲ್ಲೇ ಇರಬೇಕು. ಕನ್ನಡಿ ಹುಟ್ಟಿಕೊಂಡದ್ದು ಆನಂತರದಲ್ಲಿ. ಕರ್ಣ ನದಿಯಲ್ಲಿ ನಿಂತು ಬೊಗಸೆ ಜಲದಲ್ಲಿ ಅಪ್ಪ ಸೂರ್ಯನನ್ನು, ನಿಂತ ನೀರಲ್ಲಿ ಅಮ್ಮ ಕುಂತಿಯನ್ನು ಒಂದೇ ಬಾರಿ ನೋಡಿದ ಚಿತ್ರವನ್ನು ರನ್ನ ಮಹಾಕವಿ ಅದ್ಭುತವಾಗಿ ಚಿತ್ರಿಸಿದ್ದಾನೆ.
ನೀರ ಹಾದಿಯಲ್ಲಿ ಆಟ, ರಂಪಾಟ!
ಜಗತ್ತಿನ ಎಲ್ಲ ನಾಗರಿಕತೆಗಳು ಸುಸ್ಥಿರಗೊಂಡಿದ್ದು ನದಿಯ ಬದಿಯಲ್ಲೇ. ಮನುಷ್ಯ ಮೊದಲು ಕಾಲು ಮೂಲದಿಂದ ಒಂದಾಳು ಎತ್ತರಕ್ಕೆ ಏತದ ಮೂಲಕ ನೀರು ಎತ್ತುತ್ತಾನೆ. ಆನಂತರ ಬಂದಂತಹ ಯಂತ್ರಾನ್ವೇಷಣೆಗಳು ನೀರನ್ನು ಎತ್ತರಕ್ಕೆ ಎತ್ತಿದವು. ಈಗ ಸಾವಿರಾರು ಅಡಿ ಆಳದಿಂದ ಸಾವಿರಾರು ಅಡಿ ಎತ್ತರಕ್ಕೆ ನೀರೆತ್ತುವ ಬೋರ್‌ವೆಲ್ ಪಂಪುಗಳು ಬಂದಿವೆ. ಹರಿಯುವ ನದಿ ಏರುಮುಖವಾಗಿ ತಿರುಗುವ, ಸಾವಿರಾರು ಕೋಟಿ ಖರ್ಚಿನ ಎತ್ತಿನಹೊಳೆ ಯೋಜನೆ ನಮ್ಮ ನೆಲದಲ್ಲೇ ನಡೆಯುತ್ತಿದೆ.
ನದಿಯ ಹತ್ತಿರ ಮನುಷ್ಯ ಬಂದದ್ದು ಇತಿಹಾಸವಾದರೆ, ಮನುಷ್ಯನ ಹತ್ತಿರ ನೀರು ಏರಿದ್ದು ವಿಜ್ಞಾನ. ನಮ್ಮ ಪ್ರಾಚೀನರು ಮನೆ, ಊರು ಕಟ್ಟುವಾಗ ನದಿ ಇದೆಯಾ ಎಂದು ನೋಡಿದರು. ಈಗಿನ ನಾಗರಿಕರು ವಾಸ್ತು, ರಸ್ತೆ, ಕರೆಂಟು, ಮೊಬೈಲ್ ರೇಂಜ್ ಇದ್ದಲ್ಲಿ ಮನೆ ಕಟ್ಟುತ್ತಾರೆ. ನೀರು ಅದರಷ್ಟಕ್ಕೆ ಬರುತ್ತದೆ ಬಿಡಿ, ಅದಕ್ಕೇಕೆ ಚಿಂತೆ ಎಂದು ತಂತ್ರಜ್ಞಾನದ ಮೊರೆ ಹೋಗುತ್ತಾರೆ. ಈ ಕಾರಣಕ್ಕಾಗಿಯೇ ಬುಲ್ಡೋಜರ್ ಹತ್ತುವ ಕಡೆಯೆಲ್ಲ ನದಿ ಏರುತ್ತಿದೆ. ನಾಗರಿಕತೆ, ನದಿ ಮೂಲದಿಂದ ಎತ್ತರಕ್ಕೆ ಹರಿದಿದೆ.
ನದಿ ಸಂಸ್ಕೃತಿ, ನದಿ ನಾಗರಿಕತೆ, ನದಿ ಜನಪದ, ನದಿ ಐತಿಹ್ಯಗಳಿಗೆ ನಮ್ಮಲ್ಲಿ ಕೊರತೆ ಇಲ್ಲ. ಈ ಭೂಮಿಯ ಮೇಲೆ ಎಲ್ಲೆಲ್ಲಿ ನದಿ ಹರಿದು ಹೋಗಿದೆಯೋ ಅಲ್ಲೆಲ್ಲ ಮನುಷ್ಯ ನಡೆದಾಡಿದ್ದಾನೆ. ಹರಿಯುವ ನೀರನ್ನು ಹಂಚಿಕೊಂಡಿದ್ದಾನೆ. ಕಡಿಮೆಯಾಯಿತು ಎಂದು ಜಗಳ ಆಡಿದ್ದಾನೆ. ಜಿಗುಪ್ಸೆಗೊಂಡಾಗ ಅದೇ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೀನು ಹಿಡಿದಿದ್ದಾನೆ, ಮರಳು ಎತ್ತಿದ್ದಾನೆ, ದೋಣಿ ಇಟ್ಟು ದಡ ಸೇರಿಸಿದ್ದಾನೆ, ಕಟ್ಟೆ ಕಟ್ಟಿ ಎಲ್ಲಿಗೋ ತಿರುಗಿಸಿ ಬೇಸಾಯ ಮಾಡಿ ಭತ್ತ ಬೆಳೆದಿದ್ದಾನೆ. ಅನ್ನದ ದಾರಿಯಲ್ಲಿ ನದಿಯನ್ನು ಪೂಜಿಸಿದ್ದಾನೆ, ಹಾಡಿದ್ದಾನೆ, ಪ್ರಾರ್ಥಿಸಿದ್ದಾನೆ.
ಅರಿವು ಮೂಡಬೇಕಾದ ಅಗತ್ಯ…
ನದಿಯನ್ನು ಕುಡಿದವನು, ಕಬಳಿಸಿದವನು, ಹಣವಾಗಿ ಪರಿವರ್ತಿಸಿದವನು ಮನುಷ್ಯನೇ. ಬರೀ ಕೃಷಿಗಲ್ಲ, ನದಿಗಳು ಕಾರ್ಖಾನೆಯ ಕಡೆಗೂ ಹರಿದಿವೆ. ಶಕ್ತಿಯಾಗಿ ಪರಿವರ್ತಿತಗೊಂಡಿವೆ. ಊರು, ರಾಜ್ಯ ದಾಟಿ ಎಲ್ಲೆಲ್ಲಿಗೋ ಮುಟ್ಟಿವೆ. ಈ ಕಾರಣಕ್ಕಾಗಿಯೇ ನಮ್ಮ ದೇಶದ ಎಷ್ಟೋ ತುಂಬಿ ಹರಿಯುವ ನದಿಗಳು ಬತ್ತಿವೆ, ಬರಡಾಗಿವೆ, ಬಸವಳಿದಿವೆ, ತಾಯಿ, ಪ್ರಕೃತಿ, ಮಾತೆ ಎಂದೆಲ್ಲ ಭಾವಿಸಿದ ನಾವೇ ನದಿಯ ರಕ್ತಹೀರುತ್ತೇವೆ. ಕಾರ್ಖಾನೆಗಳ ವಿಷ,ಕಸವನ್ನು ನದಿಗೆ ಸುರಿದಿದ್ದೇವೆ. ವಿಷಪ್ರಾಶನ ಮಾಡಿ ಜಲಚರಗಳನ್ನು ಸಾಯಿಸಿದ್ದೇವೆ.
ಇದೇ ಮನುಷ್ಯ ಕೆಲವು ಕಡೆ ಬತ್ತಿದ ನದಿಗಳಿಗೆ ಮರು ಜೀವ ಕೊಟ್ಟಿದ್ದಾನೆ. ಸರಕಾರಗಳು, ಪರಿಸರವಾದಿ ಸೇವಾ ಸಂಸ್ಥೆಗಳು ಪ್ರತಿ ವರ್ಷ ನದಿ ಉಳಿಸುವ ಯೋಜನೆಗಳಿಗಾಗಿಯೇ ಕೋಟಿ ಕೋಟಿ ವ್ಯಯಸುತ್ತಿವೆ. ನದಿಯೊಳಗಡೆ ಬೀಡು ಬಿಟ್ಟ ಮೀನು, ಕಪ್ಪೆ, ಜಲಚರಗಳು ತನ್ನ ಒಡಲನ್ನು ಮಲಿನಗೊಳಿಸುತ್ತಿಲ್ಲ. ಮಣ್ಣಿನ ಮೇಲೆ ಬದುಕುವ ಮನುಷ್ಯ ದಿನೇ ದಿನೇ ನದಿಗಳನ್ನು ಕಲುಷಿತಗೊಳಿಸುವುದು ಮಹಾ ಅಪರಾಧವೇ ಸರಿ.
ಈ ನದಿ ನಿನ್ನದಲ್ಲ, ನಿನ್ನ ಹಿರಿಯರದ್ದೂ ಅಲ್ಲ, ಮುಂದೆ ಹುಟ್ಟಬೇಕಾದ ಮಕ್ಕಳದ್ದು ಎಂಬ ಅರಿವು ನಮ್ಮೊಳಗಡೆ ಹುಟ್ಟುವವರೆಗೆ ನದಿಗಳು ನೆಮ್ಮದಿಯಿಂದ ಉಸಿರಾಡಲಾರವು…!
ಕೃತಜ್ಞತೆಯ ರೂಪದಲ್ಲಿ ಗಂಗಾಜಲ ಕಳಿಸಿದ್ದರು!
ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ. ಆಗ “ಇಂಡಿಯಾ ಟುಡೇ’ ಪಾಕ್ಷಿಕ, ಅಂತಾರಾಷ್ಟ್ರೀಯ ಖ್ಯಾತಿಯ ಶಹನಾಯ್ ವಾದಕ ಬಿಸ್ಮಿಲ್ಲಾ ಖಾನ್ ಬಗ್ಗೆ ಒಂದು ಮುಖಪುಟ ಲೇಖನ ಪ್ರಕಟಿಸಿತ್ತು. ಖಾನ್ ಸಾಹೇಬರ ಕುಟುಂಬ ಆರ್ಥಿಕವಾಗಿ ನಲುಗಿದೆ ಎಂಬ ಸಾರಾಂಶದ ಸ್ಟೋರಿ ಅದು. ಅದನ್ನು ಓದಿದ ಎಸ್. ಎಂ. ಕೃಷ್ಣ ಅವರು, ಪಿಯುಸಿ ಓದಿದ್ದ ಖಾನ್ ಕುಟುಂಬದ ಸದಸ್ಯನೊಬ್ಬನಿಗೆ ಉಚಿತವಾಗಿ ಮೆಡಿಕಲ್ ಸೀಟು ಕೊಟ್ಟು, ಬೆಂಗಳೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಓದಲು ಅವಕಾಶ ಕಲ್ಪಿಸಿ, ಖಾನ್ ಸಾಹೇಬರಿಗೆ ಪತ್ರ ಬರೆದರು. ಆ ಸಹಾಯಕ್ಕೆ ಬಿಸ್ಮಿÇÉಾ ಖಾನ್ ಕೃತಜ್ಞತೆ ಸಲ್ಲಿಸಿದ್ದು ಹೇಗೆ ಗೊತ್ತೇ? ಒಂದು ಬಾಟಲಿಯಲ್ಲಿ ಗಂಗಾಜಲವನ್ನು ತುಂಬಿಸಿ ಮುಖ್ಯಮಂತ್ರಿಗಳಿಗೆ ಕಳಿಸಿದ್ದರು! ಗಂಗೆಗೆ, ನೀರಿಗೆ ಮನುಷ್ಯರನ್ನು, ಮನಸ್ಸು- ಕುಟುಂಬಗಳನ್ನು ಜೋಡಿಸುವ ಶಕ್ತಿ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಯಿತು.