Advertisement
ಗೋಂದೋಲು ಪೂಜೆಮರಾಠಿ ನಾಯ್ಕ ಜನಾಂಗದ ಸಂಸ್ಕೃತಿ ಪರಂಪರೆಯ ಮುಖ್ಯ ಧಾರ್ಮಿಕ ವಿಧಿ. ಶಕ್ತಿ ಸ್ವರೂಪಿಣಿ ದೇವಿಗೆ ಗೀತ ನೃತ್ಯಗಳ ಪೂಜೆಯೇ ಗೋಂದೋಲು. ತುಳುನಾಡಿನಲ್ಲಿ ಇದನ್ನು ವರ್ಷಾನುಗಟ್ಟಲೆಯಿಂದ ಆಚರಿಸಲಾಗುತ್ತಿದೆ. ಕಾಲಭೈರವನ ಪೂಜೆಗಾಗಿಯೂ ಈ ಆರಾಧನಾ ವಿಧಾನವನ್ನು ಅನುಸರಿಸಲಾಗುತ್ತದೆ. ಮಲೆನಾಡು ಮತ್ತು ಮಹಾರಾಷ್ಟ್ರ ಭಾಗದಲ್ಲಿ ಈ ಆಚರಣೆಯನ್ನು ಧಾರ್ಮಿಕ ಕೇಂದ್ರಗಳಲ್ಲಿ ನಡೆಸುವುದು ವಾಡಿಕೆ. ಆದರೆ ತುಳುನಾಡಿನಲ್ಲಿ ಮನೆಗಳಲ್ಲೇ ಶುಭ ಕಾರ್ಯದ ಹರಕೆ ರೂಪದಲ್ಲಿ ನಡೆಸುತ್ತಾರೆ. ಪೂಜಾ ವಿಧಾನಗಳನ್ನು ನಡೆಸಲು ಮರಾಠಿ ಜನಾಂಗದವರೇ ಆಗಬೇಕೆಂಬ ನಂಬಿಕೆ ಇದೆ.
ಗುಂಪುಗೂಡಿದ ಭಕ್ತರು ಗೀತ ನೃತ್ಯಗಳ ಮೂಲಕ ಪಂಚ ದೀವಟಿಗೆ ಹಿಡಿದು ಭಜನೆಗಳನ್ನು ಜಪಿಸಿಕೊಂಡು ದೇವಿಯ ಸ್ಮರಣೆ ಮಾಡುತ್ತಾರೆ. ದೇವಿ ಪಾತ್ರಿಗೆ ದೇವಿಯ ಆವಾಹನೆಯಾಗಿ ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ಪೂಜೆ ಕೊನೆಗೊಳುತ್ತದೆ. ಹರಕೆಯ ರೂಪದಲ್ಲಿ ಕುರಿ, ಕೋಳಿ ಒಪ್ಪಿಸುತ್ತಾರೆ. ಪಾರಂಪಳ್ಳಿಯ ಗೋಂದೋಲು
ಬ್ರಹ್ಮಾವರದ ಪೇತ್ರಿವರೆಗೆ ತುಳುನಾಡಿನ ಗೋಂದೋಲು ನಡೆಯುತ್ತಿದೆ. ಆದರೆ ಅನಂತರ ಕುಂದಾಪುರ, ಬೈಂದೂರುವರೆಗೂ ಗೋಂದೋಲು ಪೂಜೆ ಇಲ್ಲ ಪಾರಂಪಳ್ಳಿಯಲ್ಲಿ ಮಾತ್ರ ನೂರಾರು ವರ್ಷಗಳಿಂದ ಹರಕೆ ರೂಪದಲ್ಲಿ ನಡೆಯುತ್ತಿದೆ ಎನ್ನುತ್ತಾರೆ ಗುಂಡು ಪೂಜಾರಿ ಮೇಸ್ತ್ರಿ. ಈ ಭಾಗದಲ್ಲಿ ಹೆಚ್ಚಾಗಿರುವ ದೇವಾಡಿಗ, ಮೊಗವೀರ, ಪೂಜಾರಿ ಹಾಗೂ ಇತರ ಸಮುದಾಯದವರು ಜತೆಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಗ್ರಾಮದ ಸುಮಾರು 600 ಮನೆಯವರು ಸಭೆ ಸೇರಿ ಮಾರ್ಚ್-ಎಪ್ರಿಲ್‌ನ ಮಂಗಳವಾರ/ ಶುಕ್ರವಾರದ ದಿನ ಪೂಜೆ ನಡೆಸುತ್ತೇವೆ ಎನ್ನುತ್ತಾರೆ ಅಧ್ಯಾಪಕ ಕೃಷ್ಣಪ್ಪ ಪೂಜಾರಿ.
Related Articles
ಈ ಪ್ರಾಂತ್ಯದಲ್ಲಿ ಗೋಂದೋಲು ಪೂಜೆ ನಡೆಸುವುದು ನೀಲಾವರದ ತಂಡದವರು ಮಾತ್ರ. ಊರವರು ಪೂಜೆ ನಡೆಸಿಕೊಡಬೇಕೆಂದು ನೀಲಾವರ ಮಟಪಾಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ತಂಡದ ಬಳಿ ವೀಳ್ಯ ಕೊಡುತ್ತಾರೆ. ಅಂತೆಯೇ ತಂಡದ ಎಂಟತ್ತು ಮಂದಿ ಬಂದು ಪೂಜೆ ನಡೆಸುತ್ತಾರೆ. ಕೊನೆಗೆ ದರ್ಶನ ಪಾತ್ರಿಯಿಂದ ದರ್ಶನ, ಭಕ್ತರ ಪ್ರಶ್ನೆಗಳಿಗೆ ಪರಿಹಾರ ದೊರೆಯುತ್ತದೆ. ದೊಂದಿ ಸೇವೆ, ಕುರಿ, ಕೋಳಿ ನೈವೇದ್ಯ ಮೂಲಕ ಪೂಜೆ ಮುಕ್ತಾಯವಾಗುತ್ತದೆ.
Advertisement
ಪಾರಂಪಳ್ಳಿಯಲ್ಲಿ ಯಾಕೆ ವಿಶೇಷ?ಈ ಪ್ರಾಂತ್ಯದಲ್ಲಿ ಮಾರಿ ಓಡಿಸುವ ಆಚರಣೆ ಇಲ್ಲ. ಇದಕ್ಕೆ ಕಾರಣ ಸಾಲಿಗ್ರಾಮದಲ್ಲಿ ಶ್ರೀ ಗುರುನರಸಿಂಹ ಹಾಗೂ ಶ್ರೀ ಆಂಜನೇಯ ದೇವಾಲಯ ಮುಖಾಮುಖೀಯಾಗಿದೆ. ಆಂಜನೇಯ ಹಾಗೂ ಗುರುನರಸಿಂಹ ದೇವಾಲಯಗಳ ಮಧ್ಯೆ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡ ಮಾರಿ ಓಡಿಸುವಂತಿಲ್ಲ. ಆದ್ದರಿಂದ ಇಲ್ಲಿ ಗೋಂದೋಲು ಆಚರಣೆ ಮಾತ್ರ ಇದೆ. ನೂರಾರು ವರ್ಷಗಳಿಂದ ಇದೆ
ಪಾರಂಪಳ್ಳಿಯ ಚಿತ್ರಪಾಡಿಯಿಂದ ಕಾರ್ಕಡವರೆಗೆ ಮಾರಿ ಓಡಿಸಬಾರದು ಎಂಬ ನಿಯಮ ಇರುವ ಕಾರಣ ಎರಡು ವರ್ಷಕ್ಕೊಮ್ಮೆ ಆಚರಿಸುವ ಈ ಗೋಂದೋಲು ಪೂಜೆ ಭಕ್ತಿ ಭಾವದ ಆಚರಣೆಯಾಗಿದೆ. ಆರೋಗ್ಯ, ಮಳೆ, ಬೆಳೆ, ಸಮೃದ್ಧಿ, ನೆಮ್ಮದಿಗಾಗಿ ನಾವು ಸಾಮೂಹಿಕವಾಗಿ ಇಲ್ಲಿ ಪ್ರಾರ್ಥಿಸುತ್ತೇವೆ.
– ಶೇಖರ್ ಪೂಜಾರಿ, ಗಿಳಿಯಾರು ಶಾಲಾ ಶಿಕ್ಷಕರು — ಲಕ್ಷ್ಮೀ ಮಚ್ಚಿನ