Advertisement
ಈ ವೈರಸ್ ಪರೋಕ್ಷವಾಗಿ ಜನರ ಸಂಬಂಧಗಳು, ಬದುಕಿನ ಗುಣಮಟ್ಟ ಹಾಗೂ ಆದ್ಯತೆಗಳನ್ನೇ ಬದಲಿಸಲಾರಂಭಿಸಿದೆ.
Related Articles
Advertisement
ಇದೇನೇ ಇದ್ದರೂ, ಮಾನವ ಜನಾಂಗ ಸಹಸ್ರಾರು ವರ್ಷಗಳಿಂದ ಎಲ್ಲ ಸಂಕಷ್ಟಗಳು, ಮಹಾಮಾರಿಗಳನ್ನು ಎದುರಿಸಿಯೂ ವಿಕಸನಗೊಂಡು ಸದೃಢವಾಗಿದ್ದರೆ, ಅದಕ್ಕೆ ನಮ್ಮ ಲಕ್ ಅಲ್ಲ, ಬದಲಾಗಿ, ಬದಲಾವಣೆಗೆ ತ್ವರಿತವಾಗಿ ಒಗ್ಗಿಕೊಳ್ಳುವ ನಮ್ಮ ಗುಣ ಕಾರಣ ಎನ್ನುವುದನ್ನು ಮರೆಯುವಂತಿಲ್ಲ.
ಈ ವರ್ಷವು ಜನರ ಬಿಡುವಿಲ್ಲದ ಓಟಕ್ಕೆ ಬ್ರೇಕ್ ಹಾಕಿದೆ, ಅವರ ಆಕಾಂಕ್ಷೆಗಳಿಗೆ ತಡೆ ಒಡ್ಡಿದೆಯಾದರೂ, ಇದು ಸರ್ವಿಸಿಂಗ್ ಕಾಣದೇ ತೊಂದರೆಗಳ ನಡುವೆಯೇ ಓಡುತ್ತಿದ್ದ ಬದುಕನ್ನು ಮತ್ತೆ ರಿಪೇರಿ ಮಾಡಲು ಎದುರಾಗಿರುವ ಬೃಹತ್ ಅವಕಾಶವೆಂದೇ ನಾವು ನೋಡಬೇಕಿದೆ.
ನಿಸ್ಸಂಶಯವಾಗಿಯೂ ಅನೇಕರಿಗೆ ಇದು ಅತ್ಯಂತ ಬಿಕ್ಕಟ್ಟಿನ ಸಮಯವೇ ಆದರೂ, ಈ ಸಮಯವನ್ನು ನಾವೀಗ ಸರಿಯಾಗಿ ಬಳಸಿಕೊಂಡೆವೆಂದರೆ, ಅಂದರೆ, ನಾವು ಸಾಗಿಬಂದ ಹಾದಿಯನ್ನು ಕೂಲಂಕಶವಾಗಿ ಅವಲೋಕಿಸಿ, ಮುಂದಿನ ಬದುಕಿನ ರೂಪುರೇಷೆಯನ್ನು ಸಿದ್ಧಪಡಿಸಿಕೊಳ್ಳಲು ಮುಂದಾದರೆ, ಜೀವನದ ಪಥವನ್ನು ಸಂಪೂರ್ಣವಾಗಿ ಬದಲಿಸಲು ಸಾಧ್ಯವಾಗುತ್ತದೆ. ಇಂಥ ಬೃಹತ್ ಅವಕಾಶ ಯಾವಾಗಲೂ ಬರುವುದಿಲ್ಲ ಎನ್ನುವುದನ್ನು ಕಡೆಗಣಿಸದಿರೋಣ (ಇದು ವ್ಯಕ್ತಿಗಳಿಗಷ್ಟೇ ಅಲ್ಲದೇ, ದೇಶಗಳಿಗೂ ಅನ್ವಯವಾಗುವ ಮಾತು).
ಜಗತ್ತಿನಾದ್ಯಂತ ಹಲವರಿಂದು ಮಹಾನಗರಗಳಲ್ಲಿನ ತಮ್ಮ ಮನೆಗಳನ್ನು ಮಾರಿ, ಹುಟ್ಟೂರಿಗೆ ತೆರಳಲಾರಂಭಿಸಿದ್ದಾರೆ. ನಮ್ಮ ಲಂಡನ್‌ನಲ್ಲಿ ನಾವು ಇಂಥ ಬದಲಾವಣೆಗೆ ಸಾಕ್ಷಿಯಾಗುತ್ತಿದ್ದೇವೆ. ನ್ಯೂಯಾರ್ಕ್‌ನಲ್ಲೂ ಇಂಥದ್ದೊಂದು ಬದಲಾವಣೆ ಕಾಣಿಸಿಕೊಳ್ಳುತ್ತಿದೆ. ಹಾಗೆಂದು, ವಾಪಾಸ್ ಹೋಗುವವರೆಲ್ಲ ಹೆದರಿ ಹೋಗುತ್ತಿದ್ದಾರೆ ಎಂದು ಭಾವಿಸುವುದು ಬಾಲಿಶವಾಗುತ್ತದೆ. ಅವರು ತಮ್ಮ ಆದ್ಯತೆಯನ್ನು, ಬದುಕಿನ ಪಥವನ್ನು ಬದಲಿಸಿಕೊಂಡಿದ್ದಾರೆ ಎನ್ನುವುದು ಇದರರ್ಥ.
ಹಾಗೆಂದು, ಮಹಾನಗರಗಳನ್ನು ಎಲ್ಲರೂ ತೊರೆಯುವುದಕ್ಕೆ ಸಾಧ್ಯವಿಲ್ಲವಾದರೂ, ಕನಿಷ್ಠಪಕ್ಷ ಬದುಕಿನ ಶೈಲಿಯಲ್ಲಿ ಪರ್ಯಾಯ ಮಾರ್ಗವನ್ನು ಆಯ್ದುಕೊಳ್ಳುವ ವಿಷಯದಲ್ಲಾದರೂ ಅವರು ಚಿಂತಿಸಲಾರಂಭಿಸಿದ್ದಾರೆ. ಇಂಥದ್ದೊಂದು ಚಿಂತನೆ ಅನಿವಾರ್ಯವೇ? ಬದುಕಿನ ರೀತಿ ಬದಲಾಗಲೇಬೇಕೇ, ಈ ರೀತಿಯ ಏಕಾಏಕಿ ಬದಲಾವಣೆ ಸರಿಯೋ ತಪ್ಪೋ ಎನ್ನುವ ಪ್ರಶ್ನೆ ಎದುರಾಗುತ್ತದೆ. ಸರಿ ತಪ್ಪು ಎನ್ನುವುದನ್ನು ಸಾಮೂಹಿಕ ನೆಲೆಗಟ್ಟಿನಲ್ಲಿ ನೋಡಲೇಬಾರದು. ತಮಗೆ ಯಾವುದು ಸರಿ, ಯಾವುದು ಸರಿಯಲ್ಲ ಎನ್ನುವುದನ್ನು ವೈಯಕ್ತಿಕವಾಗಿ ನಿರ್ಧರಿಸಬೇಕು.
ಜನರೇನಂದಾರು ಎಂಬ ಭಯದಲ್ಲಿಆಗಲೇ ಹೇಳಿದಂತೆ ಕೋವಿಡ್ ಬಿಕ್ಕಟ್ಟಿನ ಈ ಸಮಯವು ಬೃಹತ್ ಅವಕಾಶಗಳ ಜತೆಗೆ ಅಪಾರ ಒತ್ತಡವನ್ನೂ ಜನರ ಜೀವನದಲ್ಲಿ ತಂದೊಡ್ಡಿದೆ. ಈ ಒತ್ತಡವು ಹತಾಶೆಯ ರೂಪದಲ್ಲೂ ಪ್ರಕಟಗೊಳ್ಳಲಾರಂಭಿಸಿದೆ. ದಿನಗಳು ಉರುಳುತ್ತಾ ಸಾಗಿದಂತೆ ಜನರಲ್ಲಿ ಭ್ರಮನಿರಸನ, ಬೇಗುದಿ, ನಿರಾಶೆ ಮತ್ತು ಯಾತನೆ ಕಾಣಿಸಿಕೊಳ್ಳಲಾರಂಭಿಸಿದೆ. ಈ ಬೇಗುದಿಯಿಂದ ಮುಕ್ತರಾಗಲು ಅನೇಕರು ದಾರಿ ಹುಡುಕಲಾರಂಭಿಸಿದ್ದಾರಾದರೂ, ಇನ್ನೂ ಕೆಲವುವರು ತಿಳಿದೂ ತಿಳಿದೂ ಯಾತನೆ ಅನುಭವಿಸುತ್ತಿದ್ದಾರೆ. ನನಗೆ ಪರಿಚಯವಿರುವ ಅನೇಕರು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ‘ಹೆದರುತ್ತಿದ್ದಾರೆ’. ಜೀವನ ಶೈಲಿಯ ರಂಗು ಕಡಿಮೆಯಾಗಿಬಿಟ್ಟರೆ ಎಲ್ಲಿ ತಾವು ಕಟ್ಟಿಕೊಂಡ ಇಮೇಜ್‌ಗೆ ಧಕ್ಕೆಯಾಗುತ್ತದೋ, ಎಲ್ಲಿ ತಮ್ಮ ಸಮಾನಕ್ಕೆ ಇರುವವರ ಕಣ್ಣಲ್ಲಿ ‘ಅವಮಾನ’ ಎದುರಿಸಬೇಕಾಗುತ್ತದೋ, ಅಥವಾ ‘ನಗೆಪಾಟಲಿಗೀಡಾಗಬೇಕಾಗುತ್ತದೋ’ ಎಂಬ ಭಯ ಇವರಿಗೆಲ್ಲ. ಈ ಕಾರಣಕ್ಕಾಗಿಯೇ, ಸಾಲಸೋಲ ಮಾಡಿಯಾದರೂ ಪರವಾಗಿಲ್ಲ, ತಮ್ಮ ಜೀವನ ಶೈಲಿಯಲ್ಲಿ, ಖರ್ಚು ವೆಚ್ಚಗಳಲ್ಲಿ ಯಾವುದೇ ರೀತಿಯ ವ್ಯತ್ಯಯ ಎದುರಾಗದಂತೆ ಸ್ಟೇಟಸ್ ಮೆಂಟೇನ್ ಮಾಡುವ ಒತ್ತಡವನ್ನು ಸೃಷ್ಟಿಸಿಕೊಂಡುಬಿಟ್ಟಿದ್ದಾರೆ. ನಾನು ಕೇಳುವುದು ಇಷ್ಟೇ….ನೀವು ತುಸು ಕೆಳಕ್ಕೆ ಕುಸಿದಾಕ್ಷಣ ನಿಮ್ಮನ್ನು ಯಾರಾದರೂ ಕೀಳಾಗಿ ನೋಡುತ್ತಾರೆಂದರೆ, ಅಪಹಾಸ್ಯ ಮಾಡುತ್ತಾರೆಂದರೆ, ಅಂಥವರ ಸಂಗವೇಕೆ ಬೇಕು ನಿಮಗೆ? ಮೊದಲಿಂದಲೂ ನಿಮ್ಮನ್ನು ಗೌರವಿಸುತ್ತಾ ಬಂದವರು, ನಿಮ್ಮ ಜೀವನ ಶೈಲಿಯ ಗುಣಮಟ್ಟ ಕುಸಿದಾಕ್ಷಣ ಒಂದೇ ಕ್ಷಣದಲ್ಲಿ ಅವಗಣನೆ ಮಾಡುತ್ತಾರೆಂದರೆ, ಅಂಥ ಸಮಾಜವೇಕೆ ಬೇಕು ನಿಮಗೆ? ನಿಮ್ಮ ಬಗ್ಗೆ ಒಂದಿಷ್ಟೂ ಆಪ್ಯಾಯತೆ ಇರದ ಜನರ ಮುಂದೆ ‘ಎಲ್ಲವೂ ಚೆನ್ನಾಗಿದೆ’ ಎಂದು ತೋರಿಸಿಕೊಳ್ಳುವುದಕ್ಕಾಗಿ, ಅಪಾರ ಒತ್ತಡ, ಸಾಲದ ಭಾರ ಮತ್ತು ಅಭದ್ರತೆಯನ್ನು ಹೊರಬೇಕೇ? ನಿಮ್ಮ ಬಗ್ಗೆ ಒಂದಿಷ್ಟೂ ಕೇರ್ ಮಾಡದ ಜನರನ್ನು ಮೆಚ್ಚಿಸುವುದಕ್ಕಾಗಿ ನೀವು ಇಷ್ಟೆಲ್ಲ ಸಂಕಷ್ಟ ಎದುರಿಸಬೇಕೇನು? ನಿಮ್ಮ ಬದುಕು ನಿಮ್ಮದು
ಯಾವ ನಿರ್ಧಾರವು ಇಂಥ ಕ್ಲಿಷ್ಟ ಸಮಯದಲ್ಲಿ ನಿಮ್ಮ ಮತ್ತು ನಿಮ್ಮ ಮನೆಯವರ ಮೇಲಿಂದ ಒತ್ತಡವನ್ನು ಕಡಿಮೆಗೊಳಿಸುತ್ತದೋ, ಬದುಕನ್ನು ಮತ್ತೆ ಕಟ್ಟಿಕೊಳ್ಳಲು ನಿಮಗೆ ಸಹಕರಿಸುತ್ತದೋ ಅಂಥ ನಿರ್ಧಾರ ಕೈಗೊಳ್ಳಲು ಹಿಂಜರಿಯದಿರಿ. ಜನರೇನಂದಾರು ಎಂದು ಅಳುಕುವ ಸಮಯವಲ್ಲ ಇದು. ನಿಮಗೆ ಅನುಕೂಲವಾಗುವಂಥ ನಿರ್ಣಯಗಳನ್ನು ನೀವು ತೆಗೆದುಕೊಳ್ಳಬೇಕೇ ಹೊರತು, ಇನ್ನೊಬ್ಬರಿಗಾಗಿ ಕಟ್ಟಿಕೊಂಡ ಭ್ರಮೆಗಳಿಗೆ ತಕ್ಕಂತೆ ಬದುಕುವುದರತ್ತ ಗಮನ ಹರಿಸಬಾರದು. ಮತ್ತೊಂದು ಮುಖ್ಯವಾದ ವಿಚಾರವನ್ನು ಮರೆಯಬೇಡಿ. ನಾವು ಜನರ ಬಗ್ಗೆ ಹೇಗೆ ಭಾವಿಸುತ್ತೀವೋ, ಅದೇ ರೀತಿಯೇ ಜನರೂ ನಮ್ಮ ಬಗ್ಗೆ ಭಾವಿಸುತ್ತಾರೆ ಎನ್ನುವುದು. ಅಂದರೆ, ನಿಮ್ಮ ಕಣ್ಣಲ್ಲಿ ಕೆಳಕ್ಕೆ ಕುಸಿಯಬಾರದು ಎಂದು ಎದುರಿನವನು ಹೆಣಗಾಡುತ್ತಿರಲೂಬಹುದಲ್ಲವೇ! ಹೀಗಾಗಿ, ಎದುರಿನವರೂ ಸಹ ನಿಮ್ಮಷ್ಟೇ ಹೆದರಿರುತ್ತಾರೆ ಅಥವಾ ಅಭದ್ರತೆಯನ್ನು ಮುಚ್ಚಿಕೊಳ್ಳುವ ಮುಖವಾಡ ಧರಿಸಿರುತ್ತಾರೆ. ಆದರೆ ದಿನಗಳೆದಂತೆ ಭಾವನಾತ್ಮಕವಾಗಿ ಅನೇಕರಿಗೀಗ ಸಾಕುಸಾಕಾಗಿದೆ. ಅವರಿಗೆ ಎಲ್ಲವೂ ಸರಿಯಿದೆ ಎಂಬಂತೆ ಬಿಂಬಿಸಲು ನಕಲಿ ನಗುಮುಖದಿಂದ ಇರುವುದು ಸಾಕಾಗಿದೆ, ಈ ಓಟದಿಂದ ಸಾಕಾಗಿದೆ. ಈ ಕಾರಣಕ್ಕಾಗಿಯೇ, ಎಲ್ಲವೂ ಸರಿಯಿದೆ ಎಂಬಂತೆ ನಟಿಸುವ ಬದಲು, ನಿಮ್ಮಲ್ಲಿ ನಿಜಕ್ಕೂ ಮಂದಹಾಸ ಮೂಡಿಸುವಂಥ ಮಾರ್ಗಗಳನ್ನು ಹುಡುಕುವುದಕ್ಕೆ ಮುಂದಾಗಿ. – ಅಲೆನ್ ಡೆ ಬಾಟನ್ ಬ್ರಿಟನ್ ಲೇಖಕ, ಉದ್ಯಮಿ