Advertisement

DREAMS –ಈ ಕನಸುಗಳನ್ನೂ ಒಮ್ಮೆ ನೋಡಿಬಿಡಿ

05:30 PM May 29, 2020 | Hari Prasad |

ಈ ಅಂಕಣದಲ್ಲಿ  ಪ್ರತಿ ವಾರವೂ ಒಂದೊಂದು ವಿಶ್ವ ಚಿತ್ರದ ಬಗ್ಗೆ ಹೇಳುತ್ತೇವೆ. ಸದಾ ನಮ್ಮೊಳಗೆ ಕುಳಿತು ಕಾಡುವ, ಖುಷಿ ಕೊಡುವ, ಚಿಂತನೆಗೆ ಹಚ್ಚುವ-ಎಂದೆಲ್ಲಾ ಹೇಳುವುದಕ್ಕಿಂತ ನಮ್ಮನ್ನು ಸದಾ ಹಸಿರಾಗಿಡುವ ಚಿತ್ರಗಳ ಬಗ್ಗೆ ಬರೆಯುವ ಹುಮ್ಮಸ್ಸು. ಇದರಲ್ಲಿ ಕಲಾ ಅಥವಾ ವಾಣಿಜ್ಯ ಚಿತ್ರಗಳೆಂಬ ಬೇಲಿ ಇರುವುದಿಲ್ಲ; ಇಲ್ಲಿ ಬರೆಯುವುದೆಲ್ಲವೂ ಒಳ್ಳೆಯ ಚಿತ್ರಪಟಗಳಷ್ಟೇ. ಅಕಿರಾ ಕುರಸೋವಾರ ‘ಡ್ರೀಮ್ಸ್‌’ನಿಂದ ಆರಂಭ.

Advertisement

ಒಂದು ಅದ್ಭುತವಾದ ಕನಸು ಹೇಗಿರಬಹುದು ಎಂದುಕೊಳ್ಳುತ್ತೀರಿ? ಕನಸು ಎಂದ ಕೂಡಲೇ ಯಾರೂ ಸಹ ಕಪ್ಪು ಮತ್ತು ಬಿಳುಪಿನಲ್ಲಿ ಊಹಿಸಿಕೊಳ್ಳಲಾರಿರಿ. ಯಾಕೆಂದರೆ ಕನಸು ಯಾವಾಗಲೂ ವರ್ಣರಂಜಿತ.

ಹತ್ತಾರು ಬಣ್ಣಗಳ ಮಧ್ಯೆ ಎದ್ದೇಳುವ ಪುಟ್ಟ ಪುಟ್ಟ ಬಣ್ಣ ಬಣ್ಣದ ಚಿಟ್ಟೆಗಳ ಹಾಗೆ ಈ ಕನಸುಗಳೂ ಸಹ. ಹಾಗಾಗಿ ನಾವು ಆ ಕನಸಿಗೆ ಅರ್ಥ ವಿಸ್ತಾರ ನೀಡುವುದಕ್ಕಿಂತ ಹೆಚ್ಚಾಗಿ ಖುಷಿಪಟ್ಟು ಕಳೆದು ಬಿಡುತ್ತೇವೆ.

ಇಂಥದ್ದೇ ಎಂಟು ಕನಸುಗಳನ್ನು ಒಂದು ಸುಂದರ ಗುಚ್ಛವಾಗಿ ಕಟ್ಟಿ ಕೊಟ್ಟವರು ಜಪಾನಿನ ಪ್ರಸಿದ್ಧ ಚಿತ್ರ ನಿರ್ದೇಶಕ ತಮ್ಮ ‘ಡ್ರೀಮ್ಸ್‌’ನಲ್ಲಿ. ಎಲ್ಲವೂ ಪುಟ್ಟ ಪುಟ್ಟ ಪ್ರಯಾಣ. ಇಡೀ ಪಯಣವೇ ಹೇಗಿದೆ ಎಂದರೆ ಎಂಟು ಕಡೆ ಕಟ್ಟೆ ಪೂಜೆ ಮುಗಿಸಿ ಎರಡು ಕಿ.ಮೀ ಕ್ರಮಿಸಿದ ಹಾಗೆ. ಇಡೀ ಕನಸುಗಳ ಪಯಣದ ಹಾದಿಗೆ ತಗಲುವ ಸಮಯ 119 ನಿಮಿಷಗಳು. ಅಂದರೆ ಬರೋಬ್ಬರಿ ಎರಡು ಗಂಟೆ.

ಸನ್‌ ಶೈನ್‌ ಥ್ರೂ ದಿ ರೇನ್‌, ದಿ ಪೀಚ್‌ ಆರ್ಚರ್ಡ್‌, ದಿ ಬ್ಲಿಜರ್ಡ್‌, ದಿ ಟನೆಲ್‌, ಕ್ರೌಸ್‌, ಮೌಂಟ್‌ ಫ್ಯೂಜಿ ಇನ್‌ ರೆಡ್‌, ದಿ ವೀಪಿಂಗ್‌ ಡೆಮನ್‌ ಹಾಗೂ ವಿಲೇಜ್‌ ಆಫ್ ದಿ ವಾಟರ್‌ಮಿಲ್ಸ್‌- ಎಂಟು ವರ್ಣರಂಜಿತ ಕನಸುಗಳು ಬಹಳ ವಿಭಿನ್ನವಾದ ಲೋಕವನ್ನು ಪರಿಚಯಿಸುತ್ತವೆ.

Advertisement

ನಮ್ಮಲ್ಲಿ ಬಿಸಿಲು – ಮಳೆ ಒಟ್ಟಿಗೆ ಬೀಳುವಾಗ ನರಿಗೆ ಮದುವೆಯಾಗುತ್ತಿದೆ ಎನ್ನುವ ಮಾತಿದೆ. ಅದೇ ಕಲ್ಪನೆಯು ಜಪಾನಿನಲ್ಲೂ ಇದೆ. ಆದರೆ ನರಿ ಮದುವೆಯಾಗುವುದನ್ನು ಯಾರೂ ನೋಡಬಾರದೆಂದಿದೆ.

ಅದರಂತೆ ತಾಯಿಯೊಬ್ಬಳು ತನ್ನ ಮಗನಿಗೆ ಇಂಥ ಹವಾಮಾನವಿದ್ದಾಗ ನರಿಗಳು ಮದುವೆಯಾಗುತ್ತಿರುತ್ತವೆ. ಅದನ್ನು ನೋಡಬಾರದು. ಒಂದುವೇಳೆ ನೀನು ನೋಡುತ್ತಿರುವುದು ಅವುಗಳಿಗೆ ಗೊತ್ತಾದರೆ ಸಿಟ್ಟಾಗುತ್ತವೆ. ಆಗ ನರಿಗಳ ಕ್ಷಮೆ ಕೋರಬೇಕು. ಅವು ಕ್ಷಮಿಸಿದರೆ ಪರವಾಗಿಲ್ಲ ; ಇಲ್ಲವಾದರೆ ನೀನು ನಿನ್ನನ್ನು ಕೊಂದುಕೊಳ್ಳಬೇಕು ಎಂದಿರುತ್ತಾಳೆ.

ಮಗುವಿನ ಕುತೂಹಲ ಸಣ್ಣದೇ? ಒಂದು ದಿನ ಬಿಸಿಲು ಮಳೆಯ ವಾತಾವರಣವಿದ್ದಾಗ ಮೆಲ್ಲಗೆ ಕದ್ದು ಮುಚ್ಚಿ ಮಗು, ಒಂದು ಮರದ ಹಿಂದೆ ಹೋಗಿ ನಿಂತು ನರಿಗಳ ಮದುವೆ ನೋಡುತ್ತದೆ. ಇದನ್ನು ನರಿ ಕಂಡು ಓಡಿಸಿಕೊಂಡು ಬರುತ್ತದೆ.

ಮಗು ಮನೆಗೆ ಓಡಿ ಬರುವಾಗ ಅಮ್ಮ ಬಾಗಿಲಲ್ಲಿ ಚಾಕು ಹಿಡಿದು ನಿಂತಿರುತ್ತಾಳೆ. ಮಗುವಿಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಸುಮ್ಮನೆ ನಿಂತುಕೊಳ್ಳುತ್ತದೆ. ಆಗ ಅಮ್ಮ, ನನ್ನ ಮಾತನ್ನು ಉಲ್ಲಂಘಿಸಿದ್ದಿ. ನರಿಗಳಿಗೆ ಕೋಪ ಬಂದಿದೆ. ಅವುಗಳಲ್ಲಿ ಕ್ಷಮೆ ಕೋರು ಇಲ್ಲವಾದರೆ ಈ ಚಾಕಿನಿಂದ ನಿನ್ನನ್ನು ನೀನು ಕೊಂದುಕೋ ಎಂದು ಹೇಳುತ್ತಾಳೆ.

ಮಗುವಿಗೆ ಏನು ಮಾಡಬೇಕೆಂದು ತೋಚದೇ, ಮತ್ತೆ ಆ ಮರದ ಬಳಿಗೆ ಚಾಕು ಹಿಡಿದು ಹೋಗುತ್ತಾನೆ. ಆದರೆ ಅಷ್ಟರಲ್ಲಿ ನರಿಗಳು ಇರುವುದಿಲ್ಲ. ಬಾನಿನಲ್ಲಿ ಮಳೆ ಬಿಲ್ಲು ಅರಳಿರುತ್ತದೆ. ಮಗು, ನರಿಗಳ ಮನೆ ಹುಡುಕುತ್ತಾ ನಿಲ್ಲುತ್ತಾನೆ. ಇಡೀ ಒಂದು ಕನಸಿನಲ್ಲಿ ಕಟ್ಟಿಕೊಡುವ ಬಾಲ್ಯದ ಮುಗ್ಧತೆ, ಕುತೂಹಲ, ತಾಜಾತನ ಅದ್ಭುತ. ಬಾಲ್ಯದಷ್ಟೇ ತಾಜಾವಾಗಿ ಮನಸ್ಸಿನಲ್ಲಿ ಉಳಿಯುವಂಥ ಕನಸಿದು. ಹೀಗೆ ಪ್ರತಿ ಕನಸುಗಳೂ ವಿಶಿಷ್ಟವಾದವು.

ಈ ಕನಸುಗಳಲ್ಲಿ ಕೆಲವು ಒಂದು ಬಗೆಯ ಅಭಿಪ್ರಾಯದಂತೆಯೂ ತೋರುವುದುಂಟು. ವಿಶೇಷವಾಗಿ ಸೈನಿಕನೊಬ್ಬನ ಕುರಿತಾದ ಕನಸಿನಲ್ಲಿ ಯುದ್ಧ, ಸಾವು, ನೋವು, ಅದರ ಅರ್ಥ ಹೀನತೆ, ಗೊಂದಲಗಳು, ದ್ವಂದ್ವ ಎಲ್ಲವೂ ಬರುತ್ತವೆ. ಅಲ್ಲಿ ತನ್ನ ನಿಲುವಿನ ವ್ಯಾಖ್ಯಾನದಂತೆ ಕುರಸೋವಾ ಪ್ರಸ್ತುತಪಡಿಸಿದ್ದಾರೆ.

ಕೊನೆಯ ಕನಸು ‘ವಿಲೇಜ್‌ ಆಫ್ ದಿ ವಾಟರ್‌ಮಿಲ್ಸ್‌’ ಮಾತ್ರ ಈಗ ಕೋವಿಡೋತ್ತರ ಬದುಕಿಗೆ ಸ್ಫೂರ್ತಿ ತುಂಬುವಂತಿದೆ. ಬದುಕಿನ ಸಹಜತೆ ಎಂಬುದಕ್ಕೆ ವ್ಯಾಖ್ಯಾನವೆಂಬಂತೆ ತೋರುವ ಚಿತ್ರದಲ್ಲಿ ಸಂತೋಷದ ಸಹಜತೆಯೂ ಅನಾವರಣಗೊಳ್ಳುತ್ತದೆ. ಬದುಕನ್ನು ಸಹಜವಾಗಿ ಅನುಭವಿಸುವ ಬಗೆಯನ್ನೂ ಮೆಲ್ಲನೆಯ ದನಿಯಲ್ಲಿ ಹೇಳಿಕೊಡುತ್ತದೆ.

ಬದುಕು ನದಿ ಇದ್ದ ಹಾಗೆ. ತನ್ನದೇ ಆದ ಪಾತ್ರದಲ್ಲಿ, ಲಯದಲ್ಲಿ ಸಾಗಿ ಹೋಗುತ್ತದೆ. ಅದಕ್ಕೆ ನಾವು ಅದನ್ನು ಹಿಂಬಾಲಿಸಿದರೆ (ಅಷ್ಟೇ ಸಹಜತೆಯಿಂದ) ಚೆಲುವು ಕಾಣ ಸಿಗುತ್ತದೆ. ಇಲ್ಲವಾದರೆ ಬದುಕೆಂಬುದು ಯಾಂತ್ರಿಕ ಗೋಜಲಾಗಿ ಕಾಣಸಿಗುತ್ತದೆ. ಅದಕ್ಕೇ ಬದುಕೆಂಬ ಗಂಟನ್ನು ಗೋಜಲು ಮಾಡಿಕೊಂಡಿದ್ದು ನಾವೇ ಎಂಬುದನ್ನು ಈ ಚಿತ್ರ ವಿವರಿಸುತ್ತದೆ. ಎಂಟೂ ಕನಸುಗಳೂ ಕುರಸೋವಾರು ಕಂಡ ಕನಸುಗಳೇ. ಒಂದು ಲೆಕ್ಕದಲ್ಲಿ ಇವೆಲ್ಲವೂ ಇವರ ಬದುಕಿನದ್ದೇ.

ಎಂಟೂ ಕನಸುಗಳು ಭೂತ, ವರ್ತಮಾನ ಹಾಗು ಭವಿಷ್ಯತ್‌ ನೆಲೆಯಲ್ಲಿ ಹಾದು ಹೋಗುತ್ತವೆ. ಅಕಿರಾ ಕುರಸೋವಾ ಸಂಕೀರ್ಣತೆಯನ್ನು ಚೆನ್ನಾಗಿ ಕಟ್ಟಿಕೊಡುವಲ್ಲಿ ನಿಸ್ಸೀಮರು. ಅವರ ಸೆವೆನ್‌ ಸಮುರಾಯ್‌, ರೋಷಮನ್‌ ಎಲ್ಲವೂ ಅದೇ ನೆಲೆಯದ್ದು.

ಡ್ರೀಮ್ಸ್‌ನಲ್ಲಿಯೂ ಸಂಕೀರ್ಣತೆಯನ್ನು ಪದರಗಟ್ಟಿದಂತೆ ಕಟ್ಟಿಕೊಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಪ್ರತಿ ಕನಸೂ ಪ್ರತ್ಯೇಕವಾಗಿಯೇ ನಿಲ್ಲುತ್ತವೆ; ಒಂದೊಂದು ಹೂವಿನ ಹಾಗೆ. ಪ್ರತಿ ಹೂವಿಗೂ ಅದರದ್ದೇ ಆದ ಸೌಂದರ್ಯವಿದೆ, ಬಣ್ಣವಿದೆ. ಹಾಗೆಯೇ ಈ ಕನಸುಗಳೂ ಸಹ.

ಸಂಕೀರ್ಣತೆಯನ್ನು ಕಟ್ಟಿಕೊಡಬೇಕೆಂದು ಹಳೆಯದ್ದು ಮತ್ತು ಈಗಿನದ್ದನ್ನು ಅಥವಾ ಭವಿಷ್ಯದ ಊಹೆಯನ್ನು ಎದುರುಬದುರು ನಿಲ್ಲಿಸುವ ಕ್ಲೀಷೆಗೆ ಕೈ ಹಾಕದೇ, ಆಯಾ ಕಾಲಕ್ಕೆ ಅನುಗುಣವಾದ ಎಳೆಗಳನ್ನೇ ಹಿಡಿದು, ಅಲ್ಲಿಯೇ ಸಂಕೀರ್ಣತೆಯನ್ನು ಕಟ್ಟಿಕೊಡಲು ಪ್ರಯತ್ನಿಸುವುದು ಕುರಸೋವಾರ ವಿಶೇಷತೆ. ಅದೇ ಇಲ್ಲಿಯೂ ಕಂಡಿದೆ. ಆಗಾಗ್ಗೆ ನೋಡುವಂಥ ಸಿನಿಮಾ.

ಚಿತ್ರ ನಿರ್ದೇಶಕರು ಅಥವಾ ಸೃಜನಶೀಲರು (ಹತ್ತಾರು ಹೊಸತನ್ನು ಸೃಷ್ಟಿಸುವವರು) ಸದಾ ಆಸೆ ಬುರುಕರು, ಎಂದಿಗೂ ಅವರು ಸಂತೃಪ್ತ ಸ್ವಭಾವದವರಲ್ಲ.. ಹಾಗಾಗಿಯೇ ಅವರು ನಿರಂತರವಾಗಿ ಹುಡುಕಾಟದಲ್ಲಿಯೇ ಮುಳುಗಿರುತ್ತಾರೆ. ಚಿತ್ರ ಜಗತ್ತಿನಲ್ಲಿ ಇಷ್ಟೊಂದು ವರ್ಷದಿಂದ ಕೆಲಸ ಮಾಡಲು ಯಾಕೆ ಸಾಧ್ಯವಾಗಿದೆ ಎಂದರೆ, ನಾನೂ ಸಹ ಮುಂದಿನ ಬಾರಿ ಒಳ್ಳೆಯದನ್ನು ಮಾಡಬೇಕೆಂದೇ ಪ್ರಯತ್ನಿಸುತ್ತೇನೆ.
– ಅಕಿರಾ ಕುರಸೋವಾ

ಜಪಾನಿನ ಅತ್ಯಂತ ಹೆಸರಾಂತ ಚಿತ್ರ ನಿರ್ದೇಶಕ ಅಕಿರಾ ಕುರಸೋವಾ (ಮಾರ್ಚ್‌ 23, 1910-ಸೆಪ್ಟೆಂಬರ್‌ 6, 1998). ತಮ್ಮ 57 ವರ್ಷಗಳ ಚಿತ್ರ ಜೀವನದಲ್ಲಿ ನಿರ್ದೇಶಿಸಿದ್ದು 30 ಚಿತ್ರಗಳು. ಜಾಗತಿಕ ಸಿನಿಮಾಗಳ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆದವರು.

1936 ರಲ್ಲಿ ಚಿತ್ರ ಜಗತ್ತಿಗೆ ಆಗಮಿಸುವ ಮುನ್ನ ಅವರು ಒಬ್ಬ ಚಿತ್ರ ಕಲಾವಿದ. ಕೆಲವು ಚಿತ್ರಗಳಲ್ಲಿ ಚಿತ್ರಕಥೆಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಸಾಹಸಮಯ ಚಿತ್ರದ ಮೂಲಕ ನಿರ್ದೇಶಕರಾಗಿ (ಸಂಶಿರೊ ಸಗತ ಮೊದಲ ಚಿತ್ರ) ಬಡ್ತಿ ಪಡೆದವರು.

ಅವರ ರೋಷಮನ್‌, ಸೆ‌ವೆನ್‌ ಸಮುರಾಯ್‌. ಯೋಜಿಂಬೊ, ಇಕಿರೊ, ಕಾಗೆಮುಶ, ರ್ಯಾನ್‌, ಥ್ರೋನ್‌ ಆಫ್ ಬ್ಲಿಡ್‌ ಇತ್ಯಾದಿ ಚಿತ್ರಗಳನ್ನು ನಿರ್ದೇಶಿಸಿದವರು. ಮದದಯೋ ಅವರ ಕೊನೆಯ ಚಿತ್ರ. 1990 ರಲ್ಲಿ ಅವರ ಜೀವಮಾನ ಸಾಧನೆಗೆ ಅಕಾಡೆಮಿ ಅವಾರ್ಡ್‌ ಗೌರವ ಸಂದಿತ್ತು.

— ಅಶ್ವಘೋಷ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next