Advertisement

ರಾಜಕಾರಣದ ಮರ್ಯಾದಾ ಪುರುಷೋತ್ತಮ

03:06 AM Jul 06, 2020 | Hari Prasad |

ಡಾ| ವಿ.ಎಸ್‌. ಆಚಾರ್ಯ ಅವರು ರಾಜ್ಯ ಕಂಡ ಅಪರೂಪದ ರಾಜಕಾರಣಿ. ಆಡಳಿತದಲ್ಲಿ ಪಾರದರ್ಶಕತೆ ತರಲು ಪ್ರಯತ್ನಿಸಿದವರು. ಅವರು ಜನಿಸಿದ್ದು 1940 ರ ಜುಲೈ 6 ರಂದು. ಅವರ ಜನ್ಮದಿನದ ಸಂದರ್ಭದಲ್ಲಿ ಒಂದು ನೆನಪು.

Advertisement

ರಾಜಕಾರಣವೆಂದರೆ ಮೂಗು ಮುರಿಯುತ್ತಿದ್ದ ಜನರ ಮಧ್ಯೆ ತಮ್ಮ ವ್ಯಕ್ತಿತ್ವದ ಮೂಲಕವೇ ಇಡೀ ಸಮಾಜವೇ, ಮೌಲ್ಯ ತುಂಬಿದ ರಾಜಕಾರಣವನ್ನು ಗೌರವಿಸುತ್ತದೆ ಎಂಬುದಕ್ಕೆ ಸಾಕ್ಷಿಯಾದವರು ಉಡುಪಿ ಕಡಿಯಾಳಿಯ ಕಟ್ಟೆ ಶ್ರೀನಿವಾಸ ಆಚಾರ್ಯರ ಮಗ ವೇದವ್ಯಾಸ ಶ್ರೀನಿವಾಸ ಅರ್ಥಾತ್‌ ವಿ.ಎಸ್‌. ಆಚಾರ್ಯ.

ಪ್ರಚಲಿತ ದಿನಗಳಂತೆ ಅಂದೂ ರಾಜಕಾರಣವೆಂದರೆ ತೋಳ್ಬಲ ಮತ್ತು ಹಣಬಲದ ಸ್ವತ್ತಾಗಿತ್ತು. ಅಂತಹ ದಿನಗಳಲ್ಲಿ ಪಂಡಿತ್‌ ದೀನ ದಯಾಳ್‌ ಜಿ ಅವರು ಪ್ರತಿಪಾದಿಸಿದ ರಾಜಕಾರಣದ ಮೂಲಕ ರಾಷ್ಟ್ರ ನಿರ್ಮಾಣದ ಕನಸು ತುಂಬಿದ ಆದರ್ಶದ ವಿಚಾರಧಾರೆಗಳಿಗೆ ಆಚಾರ್ಯರು ಓಗೊಟ್ಟರು.

ಪಂಡಿತ್‌ ದೀನ ದಯಾಳ್‌ ಜಿ ಅವರ ಕಲ್ಪನೆಯ ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಣಾ ಮನೋಭಾವದಿಂದ ಸೇವೆ ಮಾಡುವ ರಾಜಕಾರಣಿಗಳ ಅಗತ್ಯ ಅಂದಿನ ಜನಸಂಘಕ್ಕಿತ್ತು. ಪಂಡಿತ್‌ ಜೀಯ ಮಾತುಗಳಲ್ಲೇ ಹೇಳುವುದಾದರೆ ಭಾರತ ದೇಶದಲ್ಲಿ ರಾಜಕಾರಣವನ್ನು ವೃತ್ತಿಯಾಗಿಸಿಕೊಂಡವರು ಲಕ್ಷಾಂತರ ಮಂದಿ. ಆದರೆ ರಾಜಕಾರಣವನ್ನು ವ್ರತವಾಗಿ ಸ್ವೀಕರಿಸಿದವರು ಕೆಲವೇ ಕೆಲವು ಮಂದಿ.

ಆ ಎರಡನೇ ಪಥವನ್ನು ಆಚಾರ್ಯರು ಜನ ಸಂಘದಲ್ಲಿ ಸಕ್ರಿಯರಾದಾಗ ಸ್ವೀಕರಿಸಿದ್ದರು. ಅದೇ ಜನಸಂಘದ ಮೂಲಕ 28ನೇ ವಯಸ್ಸಿನಲ್ಲಿ ಡಾ| ಆಚಾರ್ಯರು ಉಡುಪಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು. ದೇಶದಲ್ಲಿ ದಿಲ್ಲಿಯ ಅನಂತರ ನಗರ ಆಡಳಿತವನ್ನು ಜನಸಂಘಕ್ಕೆ ತಂದುಕೊಟ್ಟ ಕೀರ್ತಿಗೆ ಪಾತ್ರರಾದರು. ಮಾತ್ರವಲ್ಲದೆ ದೇಶದಲ್ಲಿ ತಲೆಯ ಮೇಲೆ ಮಲ ಹೊರುವ ಪದ್ಧತಿ ನಿಷೇಧಿಸಿದ ಹೆಗ್ಗಳಿಕೆಯನ್ನೂ ಉಡುಪಿ ಪುರಸಭೆಗೆ ತಂದುಕೊಡುವಲ್ಲಿ ಯಶ ಕಂಡರು.

Advertisement

ಇಂದಿನ ಪೀಳಿಗೆಯ ಜನಪ್ರತಿನಿಧಿಗಳಿಗೆ ರಾಜಕಾರಣ ಸುಲಭವಾಗಿ ಕೈಗೆಟುಕುತ್ತಿದೆ. ಆದರೆ ಡಾ| ಆಚಾರ್ಯರಂತಹ ಹಿರಿಯರು ಕಡಿದಾದ ಸಾರ್ವಜನಿಕ ಜೀವನದಲ್ಲಿ ನಡೆದ ಹಾದಿಯ ದುರ್ಗಮತೆಯ ಇತಿಹಾಸ ಇಣುಕಿ ನೋಡುವಂತಿದೆ.

1975ರ ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಉಡುಪಿಯ ಚಿತ್ತರಂಜನ್‌ ಸರ್ಕಲ್‌ನಲ್ಲಿ ‘ಭಾರತ್‌ ಮಾತಾ ಕೀ ಜೈ’ ಎಂದು ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ಅಂದಿನ ಸರಕಾರ ಡಾ| ಆಚಾರ್ಯ ಎಂಬ ಅಜಾತ ಶತ್ರುವನ್ನು ಬಂಧಿಸಿತು.

19 ತಿಂಗಳುಗಳ ಜೈಲುವಾಸ. ಒಮ್ಮೆ ಯೋಚಿಸಿ. ಅಂದಿನ ಕೇಂದ್ರ ಸರಕಾರ ತುರ್ತು ಪರಿಸ್ಥಿತಿಯ ಮೂಲಕ ವಾಕ್‌ ಮತ್ತು ಪತ್ರಿಕಾ ಸ್ವಾತಂತ್ರ್ಯಗಳನ್ನು ಕಸಿದು ನ್ಯಾಯಾಂಗ – ಕಾರ್ಯಾಂಗವನ್ನೂ ನಿರ್ಬಂಧಿಸಿದಾಗ ಜೈಲುವಾಸಕ್ಕೆ ಹೆದರಿ ಆಚಾರ್ಯರಂತಹ ಹಿರಿಯರು ಮೌನವಹಿಸಿದ್ದರೆ ಪ್ರಜಾಪ್ರಭುತ್ವದ ಕತ್ತು ಹಿಸುಕಿದ ಸರಕಾರದ ನಿಲುವಿಗೆ ಗೆಲುವು ಸಿಗುತ್ತಿತ್ತು.

ಆದರೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ದೇಶಕ್ಕೆ ಸಮರ್ಪಿಸಿದ ಸಂವಿಧಾನದ ಆಶಯಗಳಲ್ಲೊಂದಾದ ಪ್ರತಿ ಪ್ರಜೆಯೂ ತನ್ನ ಹಕ್ಕುಗಳ ಪ್ರತಿಪಾದನೆ ಸಂದರ್ಭ ಕರ್ತವ್ಯವನ್ನು ಮರೆಯಬಾರದೆಂಬ ವಿಚಾರ ಮಹತ್ವ ಕಳೆದುಕೊಳ್ಳುತ್ತಿತ್ತು.

ದೇಶದಲ್ಲಿ ಸಂವಿಧಾನಕ್ಕೆ ಸವಾಲೊಡ್ಡುವ ಯಾವುದೇ ನಿಲುವನ್ನು ವಿರೋಧಿಸುವುದು ವ್ಯಕ್ತಿಯಾಗಿ ನನ್ನ ಕರ್ತವ್ಯ. ಅದಕ್ಕೋಸ್ಕರ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಸೇರಿದೆ ಎಂದಿದ್ದರು ಡಾ| ಆಚಾರ್ಯ. ಜನಪರ ಹೋರಾಟದ ಹೆಸರಿನಲ್ಲಿ ನಡೆಯುವ ಇಂದಿನ ಚಳವಳಿಗಳು ವ್ಯಾಪಾರೀಕರಣವಾಗಿ ಗೋಚರಿಸುತ್ತಿರುವಾಗ ಡಾ| ಆಚಾರ್ಯರು ದೇಶ ಮತ್ತು ಸಂವಿಧಾನ ಪ್ರಿಯರಿಗೆಲ್ಲ ಆದರ್ಶಪ್ರಾಯರು.

ಸಣ್ಣ ಸಣ್ಣ ಪ್ರಕರಣಗಳನ್ನೆಲ್ಲ ಸ್ವತಃ ಸಚಿವರೇ ಹಿಂಬಾಲಿಸುವುದು ಅಚ್ಚರಿಯ ವಿಷಯ. ಒಮ್ಮೆ ನಡುರಾತ್ರಿ, ನಮ್ಮ ಸಂಘಟನೆಯ ಮುಖಂಡರೊಬ್ಬರು ಫೋನಾಯಿಸಿ, ಸಾಮಾನುಗಳನ್ನು ತುಂಬಿದ ನಮ್ಮವರ ಲಾರಿಯೊಂದನ್ನು ಯಾರೋ ಅಪಹರಿಸಿದ್ದಾರೆ. ಎರಡು ದಿನಗಳಿಂದ ಹುಡುಕಿದರೂ ಸಿಗುತ್ತಿಲ್ಲ. ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ನೀವು ಈಗಲೇ ಗೃಹ ಸಚಿವರಿಗೆ ಹೇಳಬೇಕು ಎಂದು ಒತ್ತಾಯಿಸಿದರು. ನಾನಾದರೂ ಮಾಡುವುದೇನು? ಆಗ ರಾತ್ರಿ 12.45 ಮೀರಿತ್ತು. ಗೃಹ ಸಚಿವರು ಏನೆನ್ನುತ್ತಾರೋ ಎಂಬ ಭಯ ಮಿಶ್ರಿತ ಆತಂಕ ಒಂದೆಡೆಯಾದರೆ, ಮತ್ತೊಂದೆಡೆ ಸಂಘಟನೆಯ ಪ್ರಮುಖರ ಅಪರೂಪದ ಒತ್ತಾಯ. ಏನಾದರಾಗಲಿ ಎಂದು ಫೋನಾಯಿಸಿದೆ.

ಎರಡೇ ರಿಂಗಿಗೆ ಫೋನ್‌ ಎತ್ತಿಕೊಂಡ ಗೃಹ ಸಚಿವ ಆಚಾರ್ಯರಿಗೆ ಒಂದೇ ಉಸಿರಲ್ಲಿ ಸ್ನೇಹಿತರ ಸಂಕಷ್ಟ ಹೇಳಿಕೊಂಡು, ತಡರಾತ್ರಿ ಫೋನ್‌ ಮಾಡಿದ್ದಕ್ಕೆ ಕ್ಷಮೆ ಕೋರಿದೆ. ಅಚ್ಚರಿಯೆಂದರೆ ಅವರು ಅಷ್ಟೇ ಸರಳವಾಗಿ ಹೇಳಿದ್ದು-ನೀವು ಹೇಳಿದ ಲಾರಿ ಕುಮಟಾ ದಾಟಿ ಯಲ್ಲಾಪುರದ ಘಾಟಿ ಏರುತ್ತಿದೆ. ನಮ್ಮವರು ಅದನ್ನು ಬಹಳ ಹೊತ್ತಿನಿಂದ ಹಿಂಬಾಲಿಸುತ್ತಿದ್ದಾರೆ.

ಪರಿಸ್ಥಿತಿ ನೋಡಿಕೊಂಡು ಇನ್ನೊಂದು ಗಂಟೆಯಲ್ಲಿ ಲಾರಿ ವಶಪಡಿಸಿಕೊಳ್ಳುತ್ತೇವೆ ಎಂದಾಗ ಅಚ್ಚರಿಗೊಳಗಾಗುವ ಸರದಿ ನನ್ನದು. ನಡು ರಾತ್ರಿಯಲ್ಲೂ ಕರ್ತವ್ಯ ನಿರತ ಗೃಹ ಸಚಿವರ ಮಾತು ಆಲಿಸಿ ಬೆರಗಾದೆ. ಮಾತ್ರವಲ್ಲದೆ ನನ್ನ ಸಂಘಟನೆಯ ಹಿರಿಯರು ಸಚಿವರ ಕರ್ತವ್ಯ ನಿಷ್ಠೆ ನೆನೆದು ಭಾವುಕರಾಗಿದ್ದರು.

ಸರ್ವವ್ಯಾಪಿ ಸರ್ವಸ್ಪರ್ಶಿ
ವಿ.ಎಸ್‌.ಆಚಾರ್ಯರು ಯಾವುದೇ ಹುದ್ದೆಯಲ್ಲಿರಲಿ, ಯಾವುದೇ ಖಾತೆ ಹೊಂದಿರಲಿ, ಇತರ ಖಾತೆಗಳ ಸಚಿವರೂ ಅವರಿಂದ ಅನುಭವ ಪಡೆಯುತ್ತಿದ್ದರು. ಒಮ್ಮೆ ರಾಜ್ಯದಲ್ಲಿ ಕೋಳಿಜ್ವರ ವ್ಯಾಪಕವಾದಾಗ ಪಶುಸಂಗೋಪನ ಸಚಿವರ ಪರವಾಗಿ ಡಾ| ಆಚಾರ್ಯರು ಸದನದಲ್ಲಿ ಉತ್ತರ ಕೊಡುತ್ತಿದ್ದರು. ಸದಸ್ಯರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ ಬಳಿಕ ಉಪ ಪ್ರಶ್ನೆ ಕೇಳಲು ಅವಕಾಶವಿರುತ್ತದೆ.

ಈ ಪ್ರಶ್ನೆಯೇ ಸರಕಾರ ಮತ್ತು ಸಚಿವರನ್ನು ಬಹುತೇಕ ಬಾರಿ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಡಾ| ಆಚಾರ್ಯರು, ಕಾಯಿಲೆಗೆ ಕಾರಣಗಳೇನು? ಅದನ್ನು ಹೇಗೆ ನಿಯಂತ್ರಿಸಬಹುದು. ಕೋಳಿ ಜ್ವರದ ಸಾಧಕ-ಬಾಧಕಗಳು, ಜನ ಜೀವನದ ಮೇಲೆ ಬೀರುವ ಪರಿಣಾಮವೇನು ಎಂದು ವಿವರಿಸುತ್ತಿದ್ದರು.

ಪ್ರಶ್ನೆ ಕೇಳಿದ ರಾಜ್ಯದ ಉತ್ತರ ಭಾಗದ ಶಾಸಕರೊಬ್ಬರು ಆಚಾರ್ಯರತ್ತ ಕೈ ಮುಗಿದು, ನಿಮ್ಮ ಉತ್ತರಕ್ಕೆ ಉಪ ಪ್ರಶ್ನೆಯ ಮಾತಿರಲಿ. ಬೇರೆ ಯಾವ ಅನುಮಾನವೂ ಉಳಿದಿಲ್ಲ ಎಂದಿದ್ದರಂತೆ. ಅಂದರೆ ಪ್ರತಿ ವಿಷಯದಲ್ಲೂ ತುಂಬಾ ಅಧ್ಯಯನ ಮಾಡಬಲ್ಲ ಡಾ| ಆಚಾರ್ಯರು ಇಂದಿನ ನಮ್ಮಂಥ ಜನಪ್ರತಿನಿಧಿಗಳಿಗೆ ಸದಾ ಮಾರ್ಗದರ್ಶಕರು, ಪ್ರೇರಣಾದಾಯಕರು.

ನಿಷ್ಕಳಂಕ ಬದುಕು
ಡಾ| ಆಚಾರ್ಯರ ಸಾರ್ವಜನಿಕ ಬದುಕು ನಿಷ್ಕಳಂಕವಾಗಿದ್ದು, ತನಗಾಗಲಿ, ತನ್ನವರಿಗಾಗಲಿ, ಸಹಾಯಕ್ಕಾಗಿ ಅಧಿಕಾರವನ್ನು ಬಳಸಿದವರಲ್ಲ. ತನ್ನ ಬಳಿ ಬಂದವರ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತೋ, ಇಲ್ಲವೋ? ಎಂಬುದಕ್ಕಿಂತ, ಸಮಸ್ಯೆಗಳನ್ನು ಪೂರ್ಣ ಆಲಿಸಿ, ನಿಯಮ ಮತ್ತು ಕಾನೂನಿನ ಇತಿಮಿತಿಗಳನ್ನು ಮನವರಿಕೆ ಮಾಡುತ್ತಿದ್ದುದನ್ನು ನಾನು ಕಣ್ಣಾರೆ ಕಂಡಿದ್ದೆ. ಆಚಾರ್ಯರು ಎಂದೂ ವಿಷಯವನ್ನು ಅಧ್ಯಯನ ಮಾಡದೆ ಮಾತನಾಡುತ್ತಿರಲಿಲ್ಲ.

ವೈದ್ಯಕೀಯ ಶಿಕ್ಷಣ ಸಚಿವರಾಗಿ ನನೆಗುದಿಗೆ ಬಿದ್ದಿದ್ದ ಎಲ್ಲ ಮೆಡಿಕಲ್‌ ಕಾಲೇಜು ಕಡತಗಳನ್ನು ವಿಲೇವಾರಿಗೊಳಿಸಿದರು. ಆಚಾರ್ಯರ ಮಾನಸಿಕತೆಗೆ ಗೃಹ ಇಲಾಖೆ ಹೇಳಿಸಿದ್ದಲ್ಲ ಎಂದು ಅವರನ್ನು ಬಲ್ಲ ಅನೇಕರು ಹೇಳುತ್ತಿದ್ದರು.

ಆದರೆ ಗೃಹ ಇಲಾಖೆ ವಹಿಸಿಕೊಂಡ ಅನಂತರ ಒಂದರ್ಥದಲ್ಲಿ ಒಳ ದಬ್ಟಾಳಿಕೆಗೆ ಒಳಗಾದ ಇಲಾಖೆಯ ಆಯಕಟ್ಟಿನ ಜಾಗದಲ್ಲಿ ಪ್ರಥಮ ಬಾರಿಗೆ ಪಾರದರ್ಶಕ ಅಧಿಕಾರಿಗಳ ನೇಮಕವಾಯಿತು. ಆಚಾರ್ಯರಂತಹ ಮೇರು ವ್ಯಕ್ತಿಗಳು ನಮ್ಮ ಇಲಾಖೆಯ ಮುಖಂಡರೆನ್ನಲು ನಮಗೆ ಹೆಮ್ಮೆ ಎಂದು ಅನೇಕ ಹಿರಿಯ ಅಧಿಕಾರಿಗಳು ಹೇಳುತ್ತಿದ್ದುದನ್ನು ಕೇಳಿದ್ದೆ.

– ಕೋಟ ಶ್ರೀನಿವಾಸ ಪೂಜಾರಿ, ಧಾರ್ಮಿಕ ಮತ್ತು ದತ್ತಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next