Advertisement

ಮೋದಿ ಸರಕಾರ 4 ವರ್ಷ : ಜನರಿಗೆ ಮೋದಿ ಸರಕಾರ ಈಗಲೂ ಅಚ್ಚುಮೆಚ್ಚು 

11:18 PM May 25, 2018 | Karthik A |

ಮಣಿಪಾಲ ಬ್ಯೂರೋ: ವ್ಯಾಪಕ ನಿರೀಕ್ಷೆ ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಶನಿವಾರಕ್ಕೆ 4 ವರ್ಷಗಳನ್ನು ಪೂರೈಸಲಿದೆ. ಹಿಂದಿನ ಸರಕಾರಗಳಿಗೆ ಹೋಲಿಸಿದರೆ, ಅತಿ ಹೆಚ್ಚು ಚರ್ಚೆಗೊಳಪಟ್ಟ, ಜನಪ್ರಿಯತೆ ಕಾಯ್ದುಕೊಂಡ ಸರಕಾರಗಳಲ್ಲಿ ಮುಂಚೂಣಿಯಲ್ಲಿದೆ. 2014 ರಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ನೇತೃತ್ವದ ಎನ್‌.ಡಿ.ಎ. ಮೈತ್ರಿಕೂಟ ಅಧಿಕಾರ ಚುಕ್ಕಾಣಿಯನ್ನು ಹಿಡಿದಿತ್ತು. ನೀತಿ ರೂಪಣೆಯಲ್ಲಿ ಅತ್ಯಂತ ಪ್ರಬಲ, ಖಡಕ್‌ ಎಂಬ ಕಾರಣಕ್ಕೆ ಹೆಸರು ಮಾಡಿದೆ. ಹಿಂದಿನ ಯುಪಿಎ -2 ಸರಕಾರ ಈ ವಿಷಯದಲ್ಲಿ ದುರ್ಬಲ ಇದ್ದ ಕಾರಣದಿಂದ ಈ ಸರಕಾರಕ್ಕೆ ಜನಪ್ರಿಯತೆ ತಂದುಕೊಟ್ಟಿದೆ. ಇತ್ತೀಚೆಗೆ ಲೋಕಲ್‌ ಸರ್ಕಲ್‌ ಹೆಸರಿನ ಸಂಸ್ಥೆ ಈ ಕುರಿತಂತೆ ಸರ್ವೇಯೊಂದನ್ನು ನಡೆಸಿದ್ದು, ಜನಪ್ರಿಯತೆಯ ಮಟ್ಟ 4ನೇ ವರ್ಷದಲ್ಲಿ ಶೇ.57ರಷ್ಟಿದೆ ಎಂದಿದೆ. ಆದರೆ 3ನೇ ವರ್ಷಕ್ಕೆ ಹೋಲಿಸಿದರೆ ಶೇ. 4ರಷ್ಟು ಕಡಿಮೆ. 3ನೇ ವರ್ಷದಲ್ಲಿ ಜನಪ್ರಿಯತೆ ಮಟ್ಟ ಶೇ.61ರಷ್ಟಿತ್ತು.

Advertisement


ಜನಪ್ರಿಯತೆ ಯಾಕಾಗಿ? 

ಹೆಚ್ಚಿನ ಜನರು ಮೋದಿ ಸರಕಾರದ ಮೇಲೆ ಪ್ರೀತಿ ಹೊಂದಿರುವುದು ವಿಶ್ವಾದ್ಯಂತ ಭಾರತದ ವರ್ಚಸ್ಸನ್ನು ಹೆಚ್ಚಿಸಿದ್ದಕ್ಕಾಗಿ. ಇದರೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಟ, ಪಾಕಿಸ್ಥಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡುತ್ತಿರುವುದು ಮತ್ತು ಮೂಲಸೌಕರ್ಯ ವೃದ್ಧಿ, ತೆರಿಗೆ ಕಿರಿಕಿರಿಗಳನ್ನು ತಪ್ಪಿಸಿದ್ದಕ್ಕಾಗಿ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. 
ಮೋದಿ ಜನಪ್ರಿಯತೆ: 57%

ಯುವ ಜನತೆಗೆ ಫೇವರಿಟ್‌ 
ಪ್ರಧಾನಿ ಮೋದಿ ಯುವ ಜನತೆಗೆ ಅಚ್ಚುಮೆಚ್ಚಿನ ನಾಯಕನಾಗಿದ್ದು, ದೇಶಾದ್ಯಂತ ದೊಡ್ಡ ಹಿಂಬಾಲಕ ವರ್ಗವನ್ನೇ ಸೃಷ್ಟಿಸಿಕೊಂಡಿದ್ದಾರೆ. ಹಿಂದಿನ ಸರಕಾರಗಳಲ್ಲಿ ಯುವಕರನ್ನೇ ಉದ್ದೇಶಿಸಿ ಮಾತನಾಡುವ ನಾಯಕರು ಇರಲಿಲ್ಲ. ಜತೆಗೆ ಯುವಕರ ಮಿಡಿತವನ್ನು ಅರ್ಥೈಸಿಕೊಂಡು ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹೊರತರುವ, ಪ್ರತಿಕ್ರಿಯಿಸುವ ಸಾವಧಾನತೆ ಅಷ್ಟಾಗಿ ಇರಲಿಲ್ಲ ಎಂಬುದು ಯುವಜನರ ಅಭಿಮತ.

ನೇರ ಪ್ರತಿಕ್ರಿಯೆ
ಪ್ರಧಾನಿ ಮೋದಿ ಅವರ ಸರಕಾರ ಗರಿಷ್ಠ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣಗಳನ್ನು, ಅಂತರ್ಜಾಲದ ಅನಂತ ಸಾಧ್ಯತೆ ಗಳನ್ನು ಆಡಳಿತದಲ್ಲಿ ಬಳಸಿಕೊಳ್ಳುತ್ತಿದ್ದು, ಯುವ ಜನತೆಗೆ ನೇರ ಪ್ರತಿಕ್ರಿಯೆಗಳನ್ನು ನೀಡುತ್ತಿದೆ. ಜತೆಗೆ ತತ್‌ ಕ್ಷಣ ಸ್ಪಂದಿಸುತ್ತಿದೆ.

ಭಾಗೀದಾರಿಕೆ 
ಆಧುನಿಕ ಸಂವಹನ ಸಾಧ್ಯತೆಗಳ ಮೂಲಕ ಮೋದಿ ಸರಕಾರ ಯುವಕರನ್ನು ಆಡಳಿತದೊಂದಿಗೆ ಭಾಗೀದಾರಿಕೆಗೆ ಆಹ್ವಾನಿಸುತ್ತಿದೆ. ಇದಕ್ಕಾಗಿ ಸರಕಾರ ಮೈ ಗವ್‌ ನಂತಹ ಪೋರ್ಟಲ್‌ ಗ‌ಳನ್ನು ಹೊಂದಿದ್ದು, ಪ್ರತಿ ವಿಚಾರದಲ್ಲೂ ಯುವಜನರ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಪಡೆಯುತ್ತಿದೆ. 

Advertisement

ಅಭಿವೃದ್ಧಿ ಮಂತ್ರ
ಪ್ರಧಾನಿ ಮೋದಿ ಹೋದಲ್ಲೆಲ್ಲ ಅಭಿವೃದ್ಧಿ ಮಂತ್ರವನ್ನೇ ಹೆಚ್ಚಾಗಿ ಪಠಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಹಲವು ಚರ್ಚಿತ ವಿಚಾರಗಳಿದ್ದರೂ, ಅವರು ಪ್ರಮುಖವಾಗಿ ಅಭಿವೃದ್ಧಿಯನ್ನೇ ಹೆಚ್ಚು ಪ್ರಸ್ತಾವಿಸುವುದರಿಂದ ಮತ್ತು ವಿವಾದಾತ್ಮಕ ಅಂಶಗಳ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡದ ಜಾಣತನಗಳನ್ನು ಪ್ರದರ್ಶಿಸುವುದರಿಂದ ಜನಪ್ರಿಯತೆ ಸಾಧಿಸಲು ಕಾರಣವಾಗಿದೆ. 

ಮೋದಿ ನಡೆ ಪ್ರಶ್ನಿಸಿದ ವಿಪಕ್ಷಗಳು
ನಾಲ್ಕು ವರ್ಷಗಳ ಆಡಳಿತವು ಹಲವು ಟೀಕೆಗಳಿಗೂ ಒಳಗಾಗಿದೆ. ವಿಪಕ್ಷಗಳು ನಾಲ್ಕು ಮೋದಿ ಆಡಳಿತ ನಾಲ್ಕನೇ ವರ್ಷದ ದಿನವನ್ನು ವಿಶ್ವಾಸಘಾತ ದಿನವನ್ನಾಗಿ ಆಚರಿಸಲು ನಿರ್ಧರಿಸಿವೆ. ಅಷ್ಟೇ ಅಲ್ಲ, ಹಲವು ವಿಷಯಗಳಲ್ಲಿ ಮೋದಿ ಸರಕಾರದ ಆಡಳಿತವನ್ನು ವಿಪಕ್ಷಗಳು ಕಟುವಾಗಿ ಟೀಕಿಸಿವೆ. ನೋಟು ಅಮಾನ್ಯ ಮಾಡಿದಾಗ ಜನರಿಗೆ ನಗದು ಸಿಗದೇ ಪರಿತಪಿಸುವಂತಾದಾಗ ಮೋದಿ ಸರಕಾರದ ವಿರುದ್ಧ ಪ್ರತಿಪಕ್ಷಗಳು ಟೀಕೆ ಮಾಡಿದ್ದವು. ಸರ್ಜಿಕಲ್‌ ಸ್ಟೈಕ್‌ ನಡೆಸಿದಾಗ ಸೇನೆಯನ್ನು ಪ್ರಶ್ನಿಸಿದ್ದಕ್ಕೆ ವಿಪಕ್ಷಗಳ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು.

ಇನ್ನೊಂದೆಡೆ ಶಿವಸೇನೆಯೂ ಸರಕಾರವನ್ನು ಟೀಕಿಸಿದೆ. ಟಿಡಿಪಿಯಂತೂ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲ ಎಂದು ಮೈತ್ರಿಕೂಟದಿಂದಲೇ ಹೊರನಡೆದಿದೆ. ಉದ್ಯಮಿ ನೀರವ್‌ ಮೋದಿ, ವಿಜಯ್‌ ಮಲ್ಯ ಸಾಲ ಮರುಪಾವತಿ ಮಾಡದೇ ಅಕ್ರಮವೆಸಗಿ ವಿದೇಶಕ್ಕೆ ಪರಾರಿಯಾದಾಗ ಪ್ರತಿಪಕ್ಷಗಳು ವಿಪರೀತವಾಗಿ ಸರಕಾರವನ್ನು ಟೀಕಿಸಿವೆ. ಅಲ್ಲದೆ ಜಿ.ಎಸ್‌.ಟಿ. ಜಾರಿಯಲ್ಲಿ ವ್ಯತ್ಯಯವಾದಾಗ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿವೆ. ಇತ್ತೀಚೆಗಷ್ಟೇ, ಫಿಟ್‌ ನೆಸ್‌ ಚಾಲೆಂಜನ್ನು ಟ್ವಿಟರ್‌ನಲ್ಲಿ ಘೋಷಿಸಿದಾಗ ಮೋದಿ ಅದನ್ನು ಸ್ವೀಕರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಫ್ಯೂಯೆಲ್‌ ಚಾಲೆಂಜ್‌ ಎದುರಿಸುವಂತೆ ಟೀಕಿಸಿತು. ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬಗ್ಗೆಯೂ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.

ಮೋದಿ ಸರಕಾರದ ಮೇಲಿದ್ದ ನಿರೀಕ್ಷೆಗಳು
– ಹಣದುಬ್ಬರ ಇಳಿಕೆ
– ಗಡಿಭದ್ರತೆ, ಭಯೋತ್ಪಾದಕ 
– ಕೃತ್ಯಗಳಿಗೆ ತಡೆ
– ಭ್ರಷ್ಟಾಚಾರ ಮುಕ್ತ ಆಡಳಿತ
– ವಿದೇಶದಿಂದ ಕಪ್ಪು ಹಣ ತರುವುದು
– ಮೂಲಸೌಕರ್ಯ ವೃದ್ಧಿಗೆ ಉತ್ತೇಜನ
– ಅಗತ್ಯ ವಸ್ತುಗಳ ಬೆಲೆ ಇಳಿಕೆ

ಮೋದಿ ಹಾದಿ ಪ್ಲಸ್‌ – ಮೈನಸ್‌
- ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಇಲ್ಲದಿರುವುದು 
- ಬಿಗಿಯಾದ ಆಡಳಿತ, ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ
- ವಿದೇಶಗಳಲ್ಲಿ ಭಾರತದ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿರುವುದು 
- ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶ  ಮತ್ತು ಉತ್ತಮ ಪ್ರಗತಿ .
- ಸರಕಾರದ ವಿವಿಧ ಯೋಜನೆಗಳಿಗೆ ಆಧಾರ್‌ ನೇರ ಸಂಪರ್ಕ, ಇದರಿಂದ ಸಬ್ಸಿಡಿ ಸೋರಿಕೆ ತಡೆಗಟ್ಟಿರುವುದು 
- ನೋಟು ನಿಷೇಧ ಬಳಿಕ ಡಿಜಟಲೀ ಕರಣಕ್ಕೆ ಒತ್ತು. ಇದರಿಂದ ಅಕ್ರಮಗಳಿಗೆ ತಡೆ.
- ಪಾಕಿಸ್ಥಾನ ಮತ್ತು ನಾಗಾ ಬಂಡುಕೋರರ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌ 

- ಕೆಲವು ವಿವಾದಾಸ್ಪದ ವಿಚಾರಗಳಲ್ಲಿ ಉದ್ದೇಶ ಪೂರ್ವಕ ಮೌನ 
- ಹೆಚ್ಚುತ್ತಿರುವ ತೈಲ ಬೆಲೆ ನಿಯಂತ್ರಣಕ್ಕೆ ಯತ್ನಿಸಿಲ್ಲ
- ಸಾಲ ಮಾಡಿ ವಿದೇಶಕ್ಕೆ ಪರಾರಿಯಾದವರನ್ನು ಕಾನೂನು ಕೈಗೆ ತಂದೊಪ್ಪಿಸಿಲ್ಲ
- ಕಪ್ಪು ಹಣ ವಾಪಸ್‌ ತರುವ ಬಗ್ಗೆ ಸಫ‌ಲವಾಗಿಲ್ಲ 
- ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿಯಲ್ಲಿ ಹೆಚ್ಚಳ 
- ಬ್ಯಾಂಕ್‌ಗಳ ಸಾಲ ವಸೂಲಾತಿಯಲ್ಲಿ ಹಿನ್ನಡೆ 


ಟಾಪ್‌ ಸಾಧನೆಗಳು

ಜಿ.ಎಸ್‌.ಟಿ. 
ದೇಶಕ್ಕೊಂದೇ ತೆರಿಗೆ ಎಂಬ ಪರಿಕಲ್ಪನೆಯಡಿ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ.)ಯನ್ನು ಸಂಸತ್ತಿನಲ್ಲಿ ಅನುಮೋದನೆ ಪಡೆದು 2017 ಜುಲೈ ವೇಳೆಗೆ ಅನುಷ್ಠಾನಕ್ಕೆ ತರಲಾಯಿತು. ಇದರಲ್ಲಿ ಹಲವು ವಿರೋಧಾಭಾಸಗಳಿದ್ದರೂ ದಶಕಗಳಿಂದ ಜಾರಿಯಾಗದೇ ಇದ್ದ ಜಿ.ಎಸ್‌.ಟಿ.ಯನ್ನು ಜಾರಿ ಮಾಡುವಲ್ಲಿ ಸಫ‌ಲವಾಯಿತು. ಆದರೆ ಜಿ.ಎಸ್‌.ಟಿ.ಯಲ್ಲಿ ಕೆಲವು ಲೋಪಗಳಿದ್ದು, ಅವುಗಳನ್ನು ಸರಿಪಡಿಸಲು ಸರಕಾರ ಯತ್ನಿಸುತ್ತಿದೆ. 

ವಿದೇಶಗಳೊಂದಿಗೆ ಸಂಬಂಧ 
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಿಂದ ಹಿಡಿದು ಇಂದಿನವರೆಗೆ ಪ್ರಮುಖ ಗುರಿಯಾಗಿಸಿದ್ದು ವಿದೇಶಗಳೊಂದಿಗೆ ಸಂಬಂಧ ವೃದ್ಧಿ. ಒಟ್ಟು 54 ದೇಶಗಳಿಗೆ ಮೋದಿ ಭೇಟಿ ನೀಡಿದ್ದು, ಬಾಂಧವ್ಯ ವೃದ್ಧಿಗೆ ಯತ್ನಿಸಿದ್ದಾರೆ. ಮೋದಿ ಭೇಟಿಯ ಪರಿಣಾಮ ಮಧ್ಯಪ್ರಾಚ್ಯ ದೇಶಗಳು, ಯುರೋಪ್‌ ನ ದೇಶಗಳೊಂದಿಗಿನ ಸಂಬಂಧ ವೃದ್ಧಿಯಾಗಿದೆ. ಜತೆಗೆ ಭಾರತವನ್ನು ವಿಶ್ವಸಂಸ್ಥೆ ಖಾಯಂ ಸದಸ್ಯ ರಾಷ್ಟ್ರವಾಗಲು ವಿವಿಧ ದೇಶಗಳ ಬೆಂಬಲ, ಎನ್‌.ಎಸ್‌.ಜಿ. ಸದಸ್ಯತ್ವ ಲಭಿಸಿದ್ದು ವಿದೇಶಾಂಗ ನೀತಿಯ ಗೆಲುವು.

ಸಮಾಜ ಕಲ್ಯಾಣ ಯೋಜನೆಗಳು 
ಸುಮಾರು 30ಕ್ಕೂ ಹೆಚ್ಚು ಸಮಾಜ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಎಲ್ಲಾ ಯೋಜನೆಗಳಿಗೆ 10 ಕೋಟಿಗೂ ಹೆಚ್ಚು ಮಂದಿ ಹೆಸರು ನೋಂದಾಯಿಸಿದ್ದು, ನಿರೀಕ್ಷಿತ ನೆರವು ಪಡೆದಿದ್ದಾರೆ.

ಡಿಜಿಟಲೀಕರಣಕ್ಕೆ ಒತ್ತು
ಹಿಂದೆಂದೂ ಇಲ್ಲದಂತೆ ಮೋದಿ ಸರಕಾರ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ. ಆಧಾರ್‌ ಮೂಲಕ ಸಬ್ಸಿಡಿಯನ್ನು ಜನರ ಖಾತೆಗೇ ವರ್ಗಾಯಿಸುವುದರಿಂದ ಹಿಡಿದು, ವಿವಿಧ ಯೋಜನೆಗಳ ಸಾಲ ಸೌಲಭ್ಯಗಳು, ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಕೆ ವರೆಗೆ ಡಿಜಿಟಲೀಕರಣ ಮಾಡಲಾಗಿದೆ. 


ಮುಂದಿರುವ ಸವಾಲುಗಳು

1. ಮುಂಬರುವ ರಾಜಸ್ಥಾನ, ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಅಧಿಕಾರ ಮರುಸ್ಥಾಪನೆ 

2. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆಗೆ ಯತ್ನಿಸಬೇಕಾದ್ದು (ಜಿಎಸ್‌ಟಿ ಅಡಿ ತರುವುದು) 

3. ಕುಂಟುತ್ತಿರುವ ಸಂಸದರ ಆದರ್ಶ ಗ್ರಾಮ ಯೋಜನೆಗೆ ವೇಗ 

4. ಸಾಲ ಮಾಡಿ ವಿದೇಶಗಳಿಗೆ ಓಡಿ ಹೋದವರನ್ನು ಭಾರತಕ್ಕೆ ವಾಪಸ್‌ ಕರೆತರುವುದು 

5. ಮೇಕ್‌ ಇನ್‌ ಇಂಡಿಯಾ, ಸ್ಕಿಲ್‌ ಇಂಡಿಯಾ ಬಲಪಡಿಸಿ ಉದ್ಯೋಗಾವಕಾಶ ಹೆಚ್ಚಿಸುವುದು 

6. ಗಂಗಾ ಶುದ್ಧೀಕರಣ ನಿರೀಕ್ಷಿತ ಪ್ರಮಾಣಕ್ಕೆ ತಲುಪುವಂತೆ ಮಾಡುವುದು 

7. ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ,  ಪಾಕ್‌ಜತೆ ಸಂಬಂಧ ವೃದ್ಧಿ 

8. ಜನರ ವಿಶ್ವಾಸವನ್ನು 2019ರ ಚುನಾವಣೆವರೆಗೆ ಕಾಯ್ದುಕೊಳ್ಳುವುದು 

ಹೆಸರು ತಂದ ಯೋಜನೆಗಳಿವು
ಫ‌ಸಲ್‌ ವಿಮಾ

ರೈತರನ್ನು ಬರಗಾಲದ ಬೇಗೆಯಿಂದ ತಪ್ಪಿಸಲು ತಂದ ಯೋಜನೆ. ಬೀಜ ವೈಫ‌ಲ್ಯ ಹಾಗೂ ಕೋಯ್ಲೋತ್ತರ ಹಾನಿಗೂ ಈ ಯೋಜನೆಯಡಿ ಪರಿಹಾರ ಸಿಗುವುದು ವಿಶೇಷ. 

‘ಉಜ್ವಲ’ ಯೋಜನೆ 
5 ಕೋಟಿ ಬಿಪಿಎಲ್‌ ಬಡ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕದ ಯೋಜನೆ. ಯೋಜನೆಯಲ್ಲಿ ಸಂಪರ್ಕ ಉಚಿತವಾಗಿದ್ದು, ಗ್ಯಾಸ್‌ ರಿಫಿಲ್‌ಗೆ ಹಣ ಪಾವತಿಸಬೇಕು.  

ಸ್ಕಿಲ್‌ ಇಂಡಿಯಾ 
ಮಾನವ ಸಂಪನ್ಮೂಲ ಹೆಚ್ಚಿಸುವ ಉದ್ದೇಶ ಕೌಶಲ ಭಾರತ ಮಿಷನ್‌ನದ್ದು.2022ರ ವೇಳೆಗೆ ಒಟ್ಟಾರೆ 40 ಕೋಟಿ ಮಂದಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.  

ಸ್ಟಾರ್ಟಪ್‌ ಇಂಡಿಯಾ 
ಭಾರತವನ್ನು ‘ಸ್ಟಾರ್ಟ್‌ ಅಪ್‌’ ಕಂಪೆನಿಗಳ ಮೂಲ ಸ್ಥಾನ ಮಾಡುವ ಉದ್ದೇಶವಿದ್ದು ಇದರಡಿ 3 ವರ್ಷ ತೆರಿಗೆ ವಿನಾಯಿತಿ ಇದೆ. 

ಸ್ಟಾಂಡಪ್ ಇಂಡಿಯಾ 
ಎಸ್ಸಿ, ಎಸ್ಟಿ ಜನರು, ಮಹಿಳೆಯರನ್ನು ಉದ್ಯಮಪತಿಗಳನ್ನಾಗಿ ಮಾಡುವ ಉದ್ದೇಶದಿಂದ ಸ್ಟಾಂಡಪ್ ಇಂಡಿಯಾ ಯೋಜನೆ ಹೊರತರಲಾಗಿದೆ.

ಡಿಜಿಟಲ್‌ ಇಂಡಿಯಾ 
ಪ್ರತಿ ಗ್ರಾಮಕ್ಕೆ ಬ್ರಾಡ್‌ಬ್ಯಾಂಡ್‌ ಸಂಪರ್ಕ, ಆಡಳಿತ ವ್ಯವಸ್ಥೆ ಗಣಕೀಕೃತಗೊಳಿಸಿ ತ್ವರಿತ ಮತ್ತು ಭ್ರಷ್ಟಾಚಾರ ಮುಕ್ತ ಸೇವೆಗೆ ಆದ್ಯತೆ ಕಲ್ಪಿಸುವುದು ಇದರ ಪ್ರಮುಖ ಉದ್ದೇಶ.

ಚಿನ್ನ ಠೇವಣಿ ಯೋಜನೆ
ದೇಶದಲ್ಲಿರುವ 52 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನವನ್ನು ಸದುಪಯೋಗಪಡಿಸಿಕೊಳ್ಳಲು ಚಿನ್ನ ಠೇವಣಿ ಮತ್ತು ಚಿನ್ನದ ಬಾಂಡ್‌ ಯೋಜನೆ ಇದರ ಉದ್ದೇಶ.

ಸ್ಮಾರ್ಟ್‌ ಸಿಟಿ
100 ಸ್ಮಾರ್ಟ್‌ ಸಿಟಿ ನಿರ್ಮಾಣ ಯೋಜನೆ ಇದೆ. ನಗರಗಳ ಆಯ್ಕೆ ಆಗಿದೆ. ಈ ಯೋಜನೆ ಸರ್ವೇ, ವರದಿಗಳ ಸಲ್ಲಿಕೆ ಹಂತದಲ್ಲಿದೆ. ಕಾಮಗಾರಿ ಆರಂಭವಾಗಬೇಕಿದೆ. 

‘ಜನಧನ’ ಯೋಜನೆ 
ಎಲ್ಲರೂ, ಅದರಲ್ಲೂ ಬಡವರೂ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಬೇಕು, ಈ ಮೂಲಕ ಸಬ್ಸಿಡಿ ಹಣವನ್ನು ನೇರ ಜನರ ಖಾತೆಗೆ ವರ್ಗಾಯಿಸುವ ಉದ್ದೇಶದಿಂದ ಹುಟ್ಟಿಕೊಂಡಿದೆ.

ಉಡುಪಿ ಜಿಲ್ಲೆಗೆ ಕೇಂದ್ರದ 688 ಕೋ.ರೂ. ನೆರವು
ಉಡುಪಿ:
ಕೇಂದ್ರದ ಎನ್‌.ಡಿ.ಎ. ಸರಕಾರದಿಂದ ಜಿಲ್ಲೆಗೆ ಒಂದಿಷ್ಟು ಲಾಭವಾಗಿದೆ. ನೊಂದ ಮಹಿಳೆಯರಿಗೆ ಆಸರೆ, ಚಿಕಿತ್ಸೆ, ತರಬೇತಿ ನೀಡುವ ‘ಸಖೀ’ ವನ್‌ ಸ್ಟಾಪ್‌ ಕೇಂದ್ರ ಉಡುಪಿಯಲ್ಲಿ ಇತ್ತೀಚಿಗೆ ಉದ್ಘಾಟನೆಗೊಂಡಿದೆ. ಮಣಿಪಾಲದಲ್ಲಿ ಕೌಶಲಾಭಿವೃದ್ಧಿ ತರಬೇತಿ ನೀಡುವ ಪ್ರಧಾನಮಂತ್ರಿ ಕೌಶಲ ಕೇಂದ್ರ ಫೆಬ್ರವರಿಯಲ್ಲಿ ಕಾರ್ಯಾರಂಭ ಮಾಡಿದೆ. ಜಿಲ್ಲೆಗೆ ಮಂಜೂರಾದ ಪಾಸ್‌ಪೋರ್ಟ್‌ ಕೇಂದ್ರ ಬ್ರಹ್ಮಾವರದ ಅಂಚೆ ಕಚೇರಿಯಲ್ಲಿ ಕಾರ್ಯಪ್ರವೃತ್ತವಾಗಿದೆ.ಕೊಂಕಣ ರೈಲ್ವೇ ನಿಗಮ ಉಡುಪಿಯಲ್ಲಿ ರಾಮಕೃಷ್ಣ ಹೆಗಡೆ ಕೌಶಲ ತರಬೇತಿ ಕೇಂದ್ರದ ಕಟ್ಟಡವನ್ನು ನಿರ್ಮಿಸುತ್ತಿದ್ದು, ಸದ್ಯ ರೈಲ್ವೇ ಸಮುದಾಯ ಭವನದಲ್ಲಿ ತರಬೇತಿ ನೀಡಲಾಗುತ್ತಿದೆ. ದಕ್ಷಿಣ ಭಾರತದ ಪ್ರಥಮ ಜೆಮ್ಸ್‌ ಆ್ಯಂಡ್‌ ಜುವೆಲ್ಲರಿ ಸೆಂಟರ್‌ ಉದ್ಘಾಟನೆಗೆ ಸಜ್ಜಾಗಿದೆ. ಒಟ್ಟು 688 ಕೋಟಿ ರೂ. ಅನುದಾನ ಬಂದಿದೆ ಎಂಬುದು ಸಂಸದೆ ಶೋಭಾ ಕರಂದ್ಲಾಜೆ ನೀಡುವ ಮಾಹಿತಿ .

ದಕ್ಷಿಣ ಕನ್ನಡ ಜಿಲ್ಲೆಗೆ ಲಭಿಸಿದ ಯೋಜನೆ – ಅನುದಾನ ಲೆಕ್ಕಾಚಾರ
ಮಂಗಳೂರು:
ಬೆಂಗಳೂರು ಅನಂತರ ಕರ್ನಾಟಕದಲ್ಲೇ ಅತಿದೊಡ್ಡ ನಗರವಾಗಿ ಬೆಳೆಯುತ್ತಿರುವ ಮಂಗಳೂರು ನಗರವನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೂ ನಿರೀಕ್ಷೆಯಷ್ಟು ಅನುದಾನ, ಒಂದಷ್ಟು ಹೊಸ ಅಭಿವೃದ್ಧಿ ಯೋಜನೆಗಳು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಉತ್ತೇಜನ ಲಭಿಸಿದೆ ಎನ್ನುವುದು ಇಲ್ಲಿನ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರ ವಾದ. 2014ರಿಂದ 2018ವರೆಗೆ ಜಿಲ್ಲೆಗೆ ಕೆಲವೊಂದು ಪ್ರಮುಖ ಯೋಜನೆಗಳು ಅನುಷ್ಠಾನಗೊಂಡಿವೆ. ಕೆಲವು ಯೋಜನೆಗಳಿಗೆ ಮಂಜೂರಾತಿ ಲಭಿಸಿದ್ದು, ಇನ್ನೂ ಕೆಲವು ಯೋಜನೆಗಳು ಪ್ರಸ್ತಾವನೆ ಹಂತದಲ್ಲೇ ಇವೆ. ಸಂಸದರು ನೀಡುವ ಅಂಕಿ-ಅಂಶದಂತೆ ಒಟ್ಟು 10 ಸಾವಿರ ಕೋಟಿ ರೂ. ಗೂ ಅಧಿಕ ಮೊತ್ತ ಬಿಡುಗಡೆಗೊಂಡಿದೆ. ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನದಲ್ಲಿ  ಸಿಂಹಪಾಲು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ (7,646 ಕೋ. ರೂ) ದೊರೆತಿದೆ.

ಮಂಜೂರಾಗಿರುವ ಯೋಜನೆಗಳು
– ಭಾರತ್‌ಮಾಲಾ ಯೋಜನೆಯಲ್ಲಿ ಹಳೆ ಬಂದರಿನಿಂದ ರಾಷ್ಟ್ರೀಯ ಹೆದ್ದಾರಿ-66ಕ್ಕೆ1300 ಕೋ.ರೂ. ವೆಚ್ಚದಲ್ಲಿ ನೂತನ ರಸ್ತೆ ನಿರ್ಮಾಣ. 

– ಚಾರ್ಮಾಡಿ-ಮನಿಹಳ್ಳ-ನಿಡುಗಲ್ಲು ನಲ್ಲಿ 19.80 ಕೋ.ರೂ. ವೆಚ್ಚದಲ್ಲಿ  3 ಸೇತುವೆಗಳ ನಿರ್ಮಾಣ 

– ಬಿ.ಸಿ.ರೋಡು-ಪೊಳಲಿ-ಕಟೀಲು-ಮೂಲ್ಕಿ, ಮೆಲ್ಕಾರ್‌- ಮುಡಿಪು-ತೊಕ್ಕೊಟ್ಟು, ಬಿ.ಸಿ.ರೋಡ್‌- ಸಿದ್ಧಕಟ್ಟೆ-ಮೂಡಬಿದಿರೆ, ಕುಲಶೇಖರ- ಮೂಡಬಿದಿರೆ-ಕಾರ್ಕಳ ಸೇರಿ ಒಟ್ಟು 4 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ 1138 ಕೋ.ರೂ.

– 370 ಕೋ.ರೂ. ವೆಚ್ಚದ ಬಿ.ಸಿ.ರೋಡು-ಚಾರ್ಮಾಡಿ ರಾ.ಹೆದ್ದಾರಿಗೆ ಅಭಿವೃದ್ದಿ 

ಪ್ರಸ್ತಾವನೆಯಲ್ಲಿರುವ ಯೋಜನೆಗಳು
– ಭಾರತಮಾಲಾ ಯೋಜನೆಯಡಿ ಮಂಗಳೂರು-ಬೆಂಗಳೂರು ನಡುವೆ ಹೈಸ್ಪೀಡ್‌  ಹೆದ್ದಾರಿ
– ಪ್ಲಾಸ್ಟಿಕ್‌ ಪಾರ್ಕ್‌
– ಕೊಕನಟ್‌ ಪಾರ್ಕ್‌
– ವಿಶೇಷ ಕೃಷಿ ವಲಯ (ಎಸ್‌.ಎ.ಝಡ್‌.)
– ಐಟಿ ಪಾರ್ಕ್‌
– ಸ್ಮಾರ್ಟ್‌ಪೋರ್ಟ್‌ 
– ಗ್ಯಾಸ್‌ ಪೈಪ್‌ಲೈನ್‌ 

ಮಾಹಿತಿ ಮತ್ತು ಲೇಖನ: ಈಶ, ಕೇಶವ ಕುಂದರ್‌, ಕುಮಾರಸ್ವಾಮಿ
ವಿನ್ಯಾಸ : ಗಣೇಶ್‌ ಕಾಜಿಲ

Advertisement

Udayavani is now on Telegram. Click here to join our channel and stay updated with the latest news.

Next